ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಹೀದ್ ಅಫ್ರಿದಿ ಏನಾದರೂ ಹೇಳಿಕೆಯಿಂದ ಅಥವಾ ನಡೆಯಿಂದ ಆಗಾಗ ಚರ್ಚೆಯಲ್ಲಿರುತ್ತಾರೆ. ಅವರಿಗೆ ತಮ್ಮ ಹೇಳಿಕೆ ವಿವಾದವಾಗುತ್ತದೆ ಎಂದು ಗೊತ್ತಿರುವುದರಿಂದ ಅವರು ಬೇಕಂತಲೇ ಹಾಗೆ ಹೇಳುತ್ತಾರೋ ಅಥವಾ ಅವರು ಮನಸ್ಸಿಗೆ ಅನಿಸಿದ್ದನ್ನು ಯಾವುದೇ ಪಿಲ್ಟರ್ ಇಲ್ಲದೇ ಹೇಳುತ್ತಾರೋ ಎನ್ನುವುದು ಅವರಿಗೆ ಬಿಟ್ಟಿದ್ದು. ಆದರೆ ಈಗ ಅವರು ಕೊಟ್ಟಿರುವ ಹೇಳಿಕೆ ಮಾತ್ರ ಭಾರತದಲ್ಲಿ ಒಂದಿಷ್ಟು ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಇದನ್ನು ಸ್ವಾಗತಿಸಲೂ ಆಗದೇ, ನಿರಾಕರಿಸಲೂ ಆಗದೇ ಅಡಕತ್ತರಿಗೆ ಸಿಲುಕುವ ಪ್ರಸಂಗ ಸೃಷ್ಟಿಯಾಗಿದೆ.
ಅವರು ಮಾತನಾಡುತ್ತಾ ” ರಾಹುಲ್ ಗಾಂಧಿ ಸಕರಾತ್ಮಕ ವ್ಯಕ್ತಿ” ಎಂದು ಶ್ಲಾಘಿಸಿದ್ದಾರೆ. ಏಷ್ಯಾ ಕಪ್ ನಲ್ಲಿ ಭಾರತ ಹಾಗೂ ಪಾಕ್ ಪಂದ್ಯದ ಬಗ್ಗೆ ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಫ್ರಿದಿ ” ಭಾರತದಲ್ಲಿರುವ ಕೇಂದ್ರ ಸರಕಾರ ಯಾವಾಗಲೂ ಅಧಿಕಾರದಲ್ಲಿ ಉಳಿಯಲು ಧರ್ಮ, ಹಿಂದೂ – ಮುಸ್ಲಿಂ ಅಸ್ತ್ರ ಪ್ರಯೋಗಿಸುತ್ತದೆ. ಇದು ತುಂಬಾ ಕೆಟ್ಟ ಮನಸ್ಥಿತಿ. ರಾಹುಲ್ ಗಾಂಧಿ ಅವರದ್ದು ಸಕರಾತ್ಮಕ ಮನೋಭಾವ. ಅವರು ಮಾತಿನ ಮೇಲೆ ನಂಬಿಕೆ ಇಡುತ್ತಾರೆ” ಎಂದು ಹೊಗಳಿದ್ದಾರೆ. ಅಫ್ರಿದಿ ಯಾವ ಆಧಾರದ ಮೇಲೆ ರಾಹುಲ್ ಅವರನ್ನು ಹೊಗಳಿದ್ದಾರೋ ಅವರ ವಿವೇಚನೆಗೆ ಬಿಟ್ಟಿದ್ದು, ಆದರೆ ಈ ಹೇಳಿಕೆಯನ್ನು ಕಾಂಗ್ರೆಸ್ ಸ್ವಾಗತಿಸಲಾಗದೇ ಹಾಗೆ ಬಿಡಲೂ ಆಗದೇ ಗೊಂದಲದಲ್ಲಿ ಇರಬೇಕಾದ ಪರಿಸ್ಥಿತಿಯಲ್ಲಿರುವುದು ನಿಜ. ಶತ್ರು ರಾಷ್ಟ್ರದ ವಿಐಪಿಯೊಬ್ಬರು ಭಾರತದ ವಿಪಕ್ಷದ ಉನ್ನತ ನಾಯಕನನ್ನು ಹೊಗಳುವುದು ಎಂದರೆ ಅದು ನಿಜಕ್ಕೂ ಅ ಪಕ್ಷಕ್ಕೆ ಕಸಿವಿಸಿ ತಂದೊಡ್ಡುತ್ತದೆ.
ಶಹೀದ್ ಆಫ್ರಿದಿ ಅವರ ಹೇಳಿಕೆಗಳು ಬಿಜೆಪಿ ವಲಯದಲ್ಲಿ ತೀವ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲಾ ಅವರು ಆಫ್ರಿದಿ ಹೇಳಿಕೆಗಳು ಕಾಂಗ್ರೆಸ್ ಮತ್ತು ಪಾಕಿಸ್ತಾನದ ನ್ಯಾರೆಟಿವ್ ನಡುವಿನ “ಹಳೆಯ ಹೊಂದಾಣಿಕೆ”ಯನ್ನು ಬಯಲಿಗೆಳೆದಿವೆ ಎಂದು ಟೀಕಿಸಿದರು.
“ಹಫೀಜ್ ಸಯೀದ್ ನಂತರ ಈಗ ಶಹೀದ್ ಆಫ್ರಿದಿ ರಾಹುಲ್ ಗಾಂಧಿಯನ್ನು ಹೊಗಳಿದ್ದಾರೆ… ಆಶ್ಚರ್ಯವಿಲ್ಲ! ಭಾರತವನ್ನು ದ್ವೇಷಿಸುವ ಪ್ರತಿಯೊಬ್ಬರೂ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ನಲ್ಲಿ ಮಿತ್ರರನ್ನು ಕಂಡುಕೊಳ್ಳುತ್ತಾರೆ,” ಎಂದು ಶಹಜಾದ್ ಪೂನಾವಾಲಾ “ಎಕ್ಸ್” (ಹಳೆಯ ಟ್ವಿಟ್ಟರ್) ನಲ್ಲಿ ಬರೆದಿದ್ದಾರೆ.
ಇದರೊಂದಿಗೆ ಅವರು, ಕಾಶ್ಮೀರದ ಕಲಂ 370 ಇಂದ ಹಿಡಿದು ಮುಂಬೈ ಭಯೋತ್ಪಾದನಾ ದಾಳಿವರೆಗೂ, ಕಾಂಗ್ರೆಸ್ ಯಾವಾಗಲೂ ಪಾಕಿಸ್ತಾನದ ನಿಲುವಿಗೆ ಬೆನ್ನು ತಟ್ಟಿದೆಯೆಂದು ಆರೋಪಿಸಿದ್ದಾರೆ.