ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ: ಪರಿಷ್ಕತಗೊಂಡ ಸೇವಾದರಗಳ ಮಾಹಿತಿ ಇಲ್ಲಿದೆ!
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಿವಿಧ ಸೇವೆಗಳ ದರಗಳಲ್ಲಿ ಪರಿಷ್ಕರಣೆ ಮಾಡಲಾಗಿದ್ದು, ಪರಿಷ್ಕತ ದರ ಸೆ.1 ರಿಂದಲೇ ಜಾರಿಗೆ ಬಂದಿದೆ. ದೇವಸ್ಥಾನದ ಆದಾಯ ಹೆಚ್ಚಿಸುವ ದೃಷ್ಟಿಯಿಂದ ದೇವಸ್ಥಾನದಲ್ಲಿ ನಷ್ಟದಲ್ಲಿ ನಡೆಯುವ ಕೆಲವು ಪ್ರಮುಖ ಸೇವೆಗಳ ಸೇವಾದರ ಹೆಚ್ಚಿಸಿ ಪರಿಷ್ಕರಿಸುವ ಅಗತ್ಯವಿರುವುದರಿಂದ, ಸೇವಾದರ ಪರಿಷ್ಕರಣೆಗೆ ಈ ಹಿಂದಿನ ಆಡಳಿತಾಧಿಕಾರಿಗಳು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಇಲಾಖೆಗೆ ಸಲ್ಲಿಸಿದ ವಿವಿಧ ಸೇವೆಗಳ ಪರಿಷ್ಕರಣೆಗಳಲ್ಲಿ ಸುಮಾರು 40 ರಷ್ಟು ಸೇವೆಗಳ ದರ ಹೆಚ್ಚಳಗೊಂಡು ಪರಿಷ್ಕರಣೆ ಆಗಿದೆ.
ಪರಿಷ್ಕರಣೆಯನ್ನು ಮುಂದಿನ ಅವಧಿಗೆ ಜಾರಿಗೊಳಿಸುವಂತೆ ಇಲಾಖೆಯ ಅಯುಕ್ತರು ಆದೇಶಿಸಿದಂತೆ ಪರಿಷ್ಕರಣೆ ದರ ಜಾರಿಗೆ ಬಂದಿದೆ. ಈ ಹಿಂದೆ 2010 ರ ನವೆಂಬರ್ ನಲ್ಲಿ ಕೊನೆಗೆ ಪರಿಷ್ಕರಣೆ ಮಾಡಲಾಗಿತ್ತು. ಇದೀಗ 15 ವರ್ಷಗಳ ಬಳಿಕ ಸೇವೆಗಳ ದರ ಪರಿಷ್ಕರಣೆಗೊಂಡಿದೆ.
ಪರಿಷ್ಕರಣೆಗೊಂಡು ಹೆಚ್ಚಳಗೊಂಡ ಸೇವೆಗಳ ದರ ಈ ರೀತಿ ಇದೆ: ಚಿಕ್ಕರಥೋತ್ಸವ ಪರಿಷ್ಕತ ದರ ರೂ 12000, ಚಂದ್ರಮಂಡಲ ಉತ್ಸವ – 9500, ಹೂವಿನ ತೇರಿನ ಉತ್ಸವ – ರೂ 8700, ರಾಜಾಂಗಣದಲ್ಲಿ ಶೇಷ ವಾಹನಯುಕ್ತ ಭಂಡಿ ಉತ್ಸವ -ರೂ 4500, ದೀಪಾರಾಧನೆಯುಕ್ತ ಪಾಲಕಿ ಉತ್ಸವ – ರೂ 5600, ಪಾಲಕಿ ಉತ್ಸವಯುಕ್ತ ಮಹಾಪೂಜೆ ರೂ4000, ಇಡೀ ದಿನದ ಸಪರಿವಾರ ಸೇವೆ ರೂ4050, ಪವಮಾನಯುಕ್ತ ಪಂಚಾಮೃತ ಅಭಿಷೇಕ ರೂ 160, ಕಲಶ ಪೂಜಾಯುಕ್ತ ಪಂಚಾಮೃತ ಅಭಿಷೇಕ ರೂ 160, ಪಂಚಾಮೃತ ಅಭಿಷೇಕ – ರೂ 100, ರುದ್ರಾಭಿಷೇಕ – ರೂ 100, ಶೇಷ ಸೇವೆ (ಅಷ್ಟೋತ್ತರ ಸಹಿತ) ರೂ 160, ಹರಿವಾಣ ನೈವೇದ್ಯ ರೂ 125, ಕಾರ್ತಿಕ ಪೂಜೆ ರೂ 100, ಚಿತ್ರಾನ್ನ ಸಮರ್ಪಣೆ – ರೂ 200, ಹಾಲು ಪಾಯಸ – ರೂ 160, ಸಹಸ್ರ ನಾಮಾರ್ಚನೆ – ರೂ 25, ಮೃಷ್ಟಾನ್ನ ಸಮರ್ಪಣೆ – ರೂ 925, ರಾತ್ರಿ ಮಹಾಪೂಜೆಯುಕ್ತ ಪಾಲಕಿ ಉತ್ಸವ ರೂ 4600, ಹರಿಕೆಗಳಾದ ನಾಗ ಪ್ರತಿಷ್ಠೆ ರೂ 500, ನಾಮಕರಣ ರೂ 250, ಆಶ್ಲೆಷ ಬಲಿ ರೂ 500, ಆಶ್ಲೇಷ ಬಲಿ ಉದ್ಯಾಪನೆ ರೂ 500, ಷಷ್ಠಿವೃತ ಉದ್ಯಾಪನೆ ರೂ 500, ಮಂಗಳ ಕಾರ್ಯಗಳಾದ ಉಪನಯನ (ಬ್ರಹ್ಮಪತಿಷ್ಠೆ) ರೂ 800, ಸತ್ಯನಾರಾಯಣ ಪೂಜೆ ರೂ 1000, ಶ್ರೀ ಉಮಾಮಹೇಶ್ವರ ದೇವರ ಸನ್ನಿದಿಯಲ್ಲಿ ಏಕದಶಾವತಾರ ರುದ್ರಾಭಿಷೇಕ ರೂ 120, ಪಂಚಾಮೃತಾಭಿಷೇಕ ರೂ 100, ಹರಿವಾಣ ನೈವೇದ್ಯ ರೂ 150, ಕಾರ್ತಿಕ ಪೂಜೆ ರೂ 100, ಶ್ರೀ ಕುಕ್ಕೆಲಿಂಗ ದೇವರ ಸನ್ನಿಧಿಯಲ್ಲಿ ಏಕದಶಾವತಾರ ರುದ್ರಾಭಿಷೇಕ ರೂ 120, ತ್ರಿಮಧುರ ಸಮರ್ಪಣೆ ರೂ 50, ಕಾರ್ತಿಕ ಪೂಜೆ 100 ಹೀಗೆ ವಿವಿಧ ಸೇವೆಗಳ ದರಗಳು ಪರಿಷ್ಕರಣೆಗೊಂಡಿವೆ.
ಪರಿಷ್ಕರಣೆಗೊಂಡ ಸೇವೆಗಳ ದರಗಳಲ್ಲಿ ಕೆಲವು ಸೇವೆಗಳಿಎ ಸ್ವಲ್ಪ ಮಟ್ಟಿನ ಪರಿಷ್ಕರಣೆ ಆಗಿದ್ದು, ಕೆಲ ಸೇವೆಗಳ ದರದಲ್ಲಿ ಅಧಿಕ ದರದ ಹೆಚ್ಚಳಗೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಈ ಬಗ್ಗೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರೀಶ್ ಎಸ್ ಇಂಜಾಡಿ ” ಸೇವೆಗಳಿಗೆ ಬಳಸುವ ಸುವಸ್ತುಗಳ ದರಗಳು ಹೆಚ್ಚಳಗೊಂಡಿವೆ. ಕೆಲವು ಸೇವೆಗಳು ನಷ್ಟದಲ್ಲಿ ನಡೆಯುತ್ತಿದ್ದವು. ನಿರ್ವಹಣಾ ಶುಲ್ಕ ಸರಿದೂಗಿಸಲು ಪರಿಷ್ಕರಣೆ ಪ್ರಸ್ತಾಪನೆ ಸಲ್ಲಿಸಲಾಗಿದ್ದು, ಇದೀಗ ಅನುಮೋದನೆಗಳು ಜಾರಿಯಾಗಿದೆ. ಭಕ್ತರಿಂದ ಯಾವುದೇ ಆಕ್ಷೇಪಣೆ ಬಂದಿಲ್ಲ ಎಂದಿದ್ದಾರೆ.









