ರಾಜ್ಯ ಗೃಹ ಇಲಾಖೆ ಮೇಲೆ ನಂಬಿಕೆ ಇಲ್ಲ, ಗೌರಿ ಹತ್ಯೆ ತನಿಖೆ ಸಿಬಿಐಗೆ ವಹಿಸಿ: ಇಂದ್ರಜಿತ್ ಲಂಕೇಶ
ಬೆಂಗಳೂರು: ರಾಜ್ಯದ ಗೃಹ ಇಲಾಖೆ ಮತ್ತು ಗೃಹ ಇಲಾಖೆ ಮುಖ್ಯಸ್ಥರ ಮೇಲೆ ನಂಬಿಕೆ ಇಲ್ಲ ಆದ್ದರಿಂದ ಗೌರಿ ಲಂಕೇಶ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಗೌರಿ ಲಂಕೇಶ ಸಹೋದರ ಇಂದ್ರಜಿತ್ ಲಂಕೇಶ್, ಸಹೋದರಿ ಕವಿತಾ ಲಂಕೇಶ ರಾಜ್ಯ ಸರಕಾರಕ್ಕೆ ಆಗ್ರಹಿಸಿದ್ದಾರೆ.
ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಗೃಹ ಇಲಾಖೆ ಮೇಲೆ ನಂಬಿಕೆ ಇಲ್ಲ. ಎಸ್‌ಐಟಿ ತನಿಖೆಗೆಗಿಂತ ಸಿಬಿಐ ತನಿಖೆ ಸೂಕ್ತ. ಆದ್ದರಿಂದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಅಕ್ಕ ಗೌರಿ ಸಾವಿಗೆ ನ್ಯಾಯ ದೊರೆಯಬೇಕು. ರಾಜ್ಯ ಸರಕಾರ ಎಂ.ಎಂ.ಕಲಬುರ್ಗಿ ಹತ್ಯೆ ಸಂಚನ್ನು ಬಯಲು ಮಾಡುವಲ್ಲಿ ವಿಫಲವಾಗಿದೆ. ಕಲಬುರ್ಗಿ ಕುಟುಂಬದವರಂತೆ ನಮಗೆ ನೋವು ಅನುಭವಿಸಲು ಆಗುವುದಿಲ್ಲ ಎಂದು ಹೇಳಿದರು.
ವಿಚಾರವಾದಿಗಳಿಂದಲೇ ಗೌರಿ ಹತ್ಯೆ ನಡೆದಿರುವ ಅನುಮಾನವಿದೆ. ನಕ್ಸಲರು ಮತ್ತು ಬಲಪಂಥೀಯರಿಂದಲೇ ಹತ್ಯೆ ನಡೆದಿರಬಹುದು ಎಂಬ ಶಂಕೆ ಇದೆ. ಸೋಷಿಯಲ್ ಮೀಡಿಯಾದಲ್ಲಿ ಬೈಗುಳವಿತ್ತು, ಬೆದರಿಕೆ ಇರಲಿಲ್ಲ. ರಾಜಕೀಯದಲ್ಲಿ ಅವಳಿಗೆ ಶತ್ರುಗಳಿರಲಿಲ್ಲ. ಪ್ರಕರಣಕ್ಕೆ ರಾಜಕೀಯ ಬಣ್ಣ ನೀಡುವುದು ಬೇಡ. ನನ್ನಕ್ಕ ಹೇಡಿ ಆಗಿರಲಿಲ್ಲ. ಅಭಿಪ್ರಾಯ ಬೇಧ ಕೊಲೆಯ ಮಟ್ಟಕ್ಕೆ ಇಳಿಯಬಾರದು. ಇಂತಹ ಘಟನೆಗಳು ಇನ್ನೊಮ್ಮೆ ನಡೆಯಬಾರದು. ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಆದ್ದರಿಂದ ತನಿಖೆಗೆ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
Leave A Reply