ದೇವಿ ಕೃಪೆಯಿಂದ ನಿಮ್ಮೆದುರು ನಿಲ್ಲುವ ಅವಕಾಶ ಸಿಕ್ಕಿದೆ – ಮೈಸೂರು ದಸರಾ ಉದ್ಘಾಟಿಸಿ ಬಾನು ಮುಷ್ತಾಕ್!

ಕೊನೆಗೂ ಪರ- ವಿರೋಧ ಚರ್ಚೆಗೆ ಕಾರಣವಾಗಿ, ಬಾನು ಮುಷ್ತಾಕ್ ಉದ್ಘಾಟನೆ ಮಾಡುವ ವಿಷಯದಲ್ಲಿ ನ್ಯಾಯಾಲಯದ ಮೆಟ್ಟಿಲು ಏರಿದ್ದ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಉದ್ಘಾಟಿಸಿದರು. ಈ ವೇಳೆ ಸೌಹಾರ್ದತೆ, ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡಿದ ಅವರು, ಹಿಂದೂ – ಮುಸ್ಲಿಂ ಬಾಂಧವ್ಯವನ್ನು ಸಾರುವ ತಮ್ಮ “ಬಾಗಿನ” ಎಂಬ ಕವನವನ್ನು ವಾಚಿಸಿದರು.
ನಮ್ಮ ಸಂಸ್ಕೃತಿ ನಮ್ಮ ಬೇರು, ಸೌಹಾರ್ಧ ನಮ್ಮ ಶಕ್ತಿ, ಆರ್ಥಿಕತೆಯೇ ನಮ್ಮ ರೆಕ್ಕೆ, ವಿಶ್ವಕ್ಕೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಭಾರತದ ನೆಲೆಯಲ್ಲಿ ನಮ್ಮ ಯುವ ಶಕ್ತಿಯೊಂದಿಗೆ ಸೇರಿ ಮಾನವೀಯ ಮೌಲ್ಯಗಳ ಪ್ರೀತಿಯ ಹೊಸ ಸಮಾಜವನ್ನು ಕಟ್ಟೋಣ. ಅದರಲ್ಲಿ ಎಲ್ಲರಿಗೂ ಸಮಪಾಲು, ಸಮಬಾಳು ಇರಲಿ. ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಒಂದು ಚಿಗುರು ನಮ್ಮ ಎದೆಯಲ್ಲಿ ಒಡೆಯಲಿ ಎಂದು ಮೈಸೂರು ದಸರಾ ಉದ್ಘಾಟನೆ ಮಾಡಿದ ಹಾಗೂ ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಹೇಳಿದರು.
ಮೈಸೂರಿನಲ್ಲಿ ನಡೆದ ಸೋಮವಾರ ನಡೆದ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಂತರ ಮಾತನಾಡಿದ ಅವರು, ಚಾಮುಂಡೇಶ್ವರಿ ಎಂದರೆ ಹೆಣ್ಣಿನಲ್ಲಿರುವ ಅಪಾರ ಶಕ್ತಿ. ಸ್ತ್ರೀತ್ವ ಎಂದರೆ ಕೇವಲ ಮೃದುತ್ವ, ತಾಳ್ಮೆ ಎಂದಲ್ಲ ಅಪಾರ ಗಟ್ಟಿ ಬದುಕಿನ ಹೋರಾಟ ಎಂಬುದನ್ನು ನಾವು ಅರಿಯಬೇಕಿದೆ. ಮೈಸೂರಿನ ಇಡೀ ಒಡೆಯರ್ ಅರಸೊತ್ತಿಗೆಯಲ್ಲಿ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಔದಾರ್ಯಕ್ಕೆ ಮಾದರಿಯಾಗಿದ್ದರು. ಸಂಪತ್ತು ಹಂಚಿಕೊಂಡರೆ ವೃದ್ಧಿಯಾಗುತ್ತದೆ, ಶಕ್ತಿಯನ್ನು ಹಂಚಿಕೊಂಡಾಗ ಮಾತ್ರ ದೀರ್ಘಕಾಲ ಬದುಕುತ್ತದೆ ಎಂದು ಹೇಳಿದ್ದರು. ನಾನು ಒಬ್ಬ ಸಾಹಿತಿ, ಕವಯಿತ್ರಿ ನನ್ನ ಕವನದ ಮೂಲಕ ಒಂದು ಸಂದೇಶ ನಿಮ್ಮ ಮುಂದೆ ಇಡುತ್ತೇನೆ ಎಂದರು.
ನಾನು ಇದುವರೆಗೂ ಸುಮಾರು ಕಾರ್ಯಕ್ರಮ ನಡೆಸಿದ್ದೇನೆ, ಆಹ್ವಾನಿತಳಾಗಿದ್ದೇನೆ ನೂರಾರು ಸಾರಿ ದೀಪಗಳನ್ನು ಬೆಳಗಿಸಿದ್ದೇನೆ, ನೂರಾರು ಸಾರಿ ಪುಷ್ಪಾರ್ಚನೆ ಮಾಡಿದ್ದೇನೆ, ಮಂಗಳಾರತಿ ಕೂಡ ಸ್ವೀಕರಿಸಿದ್ದೇನೆ. ನಾಳೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಬುಕರ್ ಬಾನು ಬದುಕು ಬರಹ ಎಂಬ ಪುಸ್ತಕ ಪ್ರಕಟವಾಗುತ್ತಿದೆ. ಅದರಲ್ಲಿ ನನ್ನ ಆತ್ಮಕಥೆಯ ಒಂದು ಭಾಗ ಪ್ರಕಟವಾಗಲಿದೆ. ಅದರಲ್ಲಿ ನನ್ನ ಮತ್ತು ಹಿಂದು ಧರ್ಮದೊಂದಿಗಿನ ಸಂಬಂಧ, ಬಾಂಧವ್ಯ ಹೇಗಿದೆ ಎಂಬುದನ್ನು ನಾನು ಬರೆದಿದ್ದೇನೆ ಎಂದು ತಿಳಿಸಿದರು.
ಒಬ್ಬ ಮುಸ್ಲಿಂ ಹೆಣ್ಣುಮಗಳು ಬಾಗಿನ ಪಡೆದಾಗ ಅವರ ಮನಸ್ಸಿನಲ್ಲಿ ಉತ್ಪನ್ನವಾಗುವ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಈ ಕವನ ವಾಚನ ಮಾಡಿದರು.
ಎಷ್ಟೇ ಸವಾಲುಗಳು ಬಂದರೂ ಕೂಡ ದಿಟ್ಟವಾಗಿ ನಿಂತು ನನ್ನನ್ನು ಆಹ್ವಾನಿಸಿ, ಈ ಕಾರ್ಯಕ್ರಮದಲ್ಲೊ ನಾನು ಭಾಗವಹಿಸಲಿಕ್ಕೆ ಕರ್ನಾಟಕ ಸರ್ಕಾರದ ಪರವಾಗಿ ನನಗೆ ಆಹ್ವಾನವನ್ನು ನೀಡಿ, ನೈತಿಕವಾದಂತಹ ಬೆಂಬಲವನ್ನು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎನ್ನುವ ಮೂಲಕ ತಮ್ಮ ಭಾಷಣ ಮುಗಿಸಿದರು.