ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.

ಕರ್ನಾಟಕದಲ್ಲಿ ಹೊಂಡ, ಗುಂಡಿಗಳಿಂದ ಆಗುತ್ತಿರುವ ಅಪಘಾತಗಳು, ಸಾವು ನೋವುಗಳು, ಮಕ್ಕಳಿಗೆ, ಹೆಣ್ಣುಮಕ್ಕಳಿಗೆ ಆಗುವ ತೊಂದರೆಗಳ ಬಗ್ಗೆ ಸಾಕಷ್ಟು ವಿಷಯಗಳು ಚರ್ಚೆಯಲ್ಲಿವೆ. ಹೊಂಡಗುಂಡಿಗಳಿಂದ ಆಗುತ್ತಿರುವ ಅನಾಹುತದ ಬಗ್ಗೆ ದೆಹಲಿಯಲ್ಲಿ ಖಾಸಗಿ ಆಂಗ್ಲ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೊಂಡಗಳು ದೆಹಲಿಯಲ್ಲಿ ಇಲ್ವಾ, ಮುಂಬೈಯಲ್ಲಿ ಇಲ್ವಾ? ಹಾಗಿರುವಾಗ ಬೆಂಗಳೂರಿನಲ್ಲಿರುವ ಹೊಂಡಗಳನ್ನು ಯಾಕೆ ಹೈಲೈಟ್ಸ್ ಮಾಡಲಾಗುತ್ತಿದೆ. ಇದು ರಾಜಕೀಯ ಹೊಂಡಗಳು. ಇದನ್ನೆ ಇಟ್ಟುಕೊಂಡು ನಮ್ಮನ್ನು ಹಣಿಯುವ ಕೆಲಸ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ನಾನು ದೆಹಲಿಯಲ್ಲಿದ್ದೇನೆ. ನಿಮ್ಮನ್ನು ಬೇಕಾದರೆ ಕರೆದುಕೊಂಡು ಹೋಗುತ್ತೇನೆ. ಪ್ರತಿ ನೂರು ಮೀಟರ್ ಗಳಿಗೆ ನೂರು ಹೊಂಡಗುಂಡಿಗಳು ಇವೆ ಎನ್ನುವುದನ್ನು ತೋರಿಸುತ್ತೇನೆ. ಮುಂಬೈಯಲ್ಲಿ ಕೂಡ ಇದೇ ಪರಿಸ್ಥಿತಿ ಇದೆ. ನಾವು ಬೆಂಗಳೂರಿನಲ್ಲಿ ಎಂತಹ ವಾತಾವರಣ ನಿರ್ಮಿಸಿದ್ದೇವೆ ಎಂದರೆ ಬೇರೆ ಯಾವ ರಾಜ್ಯದಲ್ಲಿಯೂ ಇಂತಹ ವಾತಾವರಣ ಇಲ್ಲ. ನಮ್ಮ ಆಡಳಿತದಿಂದ ಮತ್ಸರಗೊಳ್ಳಪಟ್ಟಿರುವ ವಿಪಕ್ಷಗಳು ಅದಕ್ಕಾಗಿ ನಮ್ಮ ಮೇಲೆ ಆರೋಪ ಹಾಕಿ ಅಪಪ್ರಚಾರವನ್ನು ಮಾಡುತ್ತಿವೆ ಎಂದು ಡಿಕೆಶಿ ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಕರ್ನಾಟಕ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್, ಬೆಂಗಳೂರಿನ ಗುಂಡಿಗಳ ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಸರ್ಕಾರ ದಿನರಾತ್ರಿ ಶ್ರಮಿಸುತ್ತಿದೆ ಎಂದು ತಿಳಿಸಿದರು.
“ಮಳೆ ಇದ್ದರೂ ನಾವು ಎಲ್ಲಾ ಗುಂಡಿಗಳನ್ನು ತುಂಬುತ್ತಿದ್ದೇವೆ. ಪ್ರತಿದಿನ ಪ್ರತಿ ವಲಯದಲ್ಲಿ 200ರಷ್ಟು ಗುಂಡಿಗಳನ್ನು ತುಂಬಲಾಗುತ್ತಿದೆ. ಬೆಂಗಳೂರಿನಲ್ಲಿ ದಿನಕ್ಕೆ ಸುಮಾರು 1,000 ಗುಂಡಿಗಳನ್ನು ಸರಿಪಡಿಸಲಾಗುತ್ತಿದೆ,” ಎಂದು ಅವರು ಹೇಳಿದರು.
ದೆಹಲಿ ಪ್ರವಾಸದ ಅನುಭವ ಹಂಚಿಕೊಂಡ ಶಿವಕುಮಾರ್, “ನಾನು ದೆಹಲಿಗೆ ಹೋದೆ. ಅಲ್ಲಿ ಕೂಡಾ ಗುಂಡಿಗಳು ಕಂಡವು. ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ. ದೆಹಲಿಯಲ್ಲಿರುವ ನಿಮ್ಮ ವರದಿಗಾರರು ಹೋಗಿ ನೋಡಿ. ಈ ಸಮಸ್ಯೆ ದೇಶದಾದ್ಯಂತವಿದೆ. ಕೇವಲ ಕರ್ನಾಟಕದ ಮೇಲಷ್ಟೇ ಬೆರಳು ತೋರಿಸುವುದು ನ್ಯಾಯವಲ್ಲ,” ಎಂದರು.
ಬಿಜೆಪಿ ಆಡಳಿತಾವಧಿಯಲ್ಲಿಯೂ ಇದೇ ಸಮಸ್ಯೆ ಇತ್ತೆಂದು ಅವರು ಸ್ಮರಿಸಿದರು. “ಬಿಜೆಪಿ ರಸ್ತೆಗಳ ನಿರ್ವಹಣೆಯನ್ನು ಸರಿಯಾಗಿ ಮಾಡಿದ್ದರೆ ಇಂದು ಈ ಪರಿಸ್ಥಿತಿ ಬಾರದಿತ್ತು. ಅವರು ಮಾಡಿಲ್ಲ. ಬಿಟ್ಟುಬಿಡಿ, ನಾವು ನಮ್ಮ ಕೆಲಸ ಮಾಡುತ್ತೇವೆ,” ಎಂದು ಹೇಳಿದರು.
ಇತ್ತೀಚೆಗೆ ಬೆಂಗಳೂರು ರಸ್ತೆ ಹಾಗೂ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಕೈಗಾರಿಕಾ ವಲಯದ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದ್ದು, ದೇಶದ ಐಟಿ ರಾಜಧಾನಿಯ ಗುಂಡಿಗಳು ರಾಷ್ಟ್ರೀಯ ಸುದ್ದಿಯಾಗಿದ್ದವು.
ಬ್ಲಾಕ್‌ಬಕ್ ಕಂಪನಿಯ ಸಿಇಒ ಹಾಗೂ ಸಹ-ಸ್ಥಾಪಕರಾದ ರಾಜೇಶ್ ಯಾಬಜಿ, ಕಳೆದ ಒಂಬತ್ತು ವರ್ಷಗಳಿಂದ ಬೆಳ್ಳಂದೂರಿನಲ್ಲಿ ಕಚೇರಿ ನಡೆಸುತ್ತಿದ್ದರೂ ಇದೀಗ ಅಲ್ಲಿ ಮುಂದುವರಿಸಲು ಸಾಧ್ಯವಿಲ್ಲ ಎಂದು ಘೋಷಿಸಿದ್ದರು. “ಸಿಬ್ಬಂದಿಗೆ ಒಂದು ಕಡೆ ಪ್ರಯಾಣಕ್ಕೆ ಸರಾಸರಿ 1.5+ ಗಂಟೆಗಳ ಕಾಲ ತೆಗೆದುಕೊಳ್ಳುತ್ತಿದೆ. ಗುಂಡಿಗಳಿಂದ ತುಂಬಿದ ರಸ್ತೆ, ಧೂಳು ಹಾಗೂ ಸರಿಪಡಿಸುವ ಉತ್ಸಾಹದ ಕೊರತೆ—ಇದು ಮುಂದಿನ ಐದು ವರ್ಷಗಳಲ್ಲಿ ಬದಲಾಗುವುದಿಲ್ಲವೆಂದು ಕಂಡಿತು,” ಎಂದು ಅವರು ‘ಎಕ್ಸ್’ ನಲ್ಲಿ ಬರೆದಿದ್ದರು.
ಆದರೆ ನಂತರ ಅವರು ಕಚೇರಿ ಬೆಂಗಳೂರಿನೊಳಗೇ ಸ್ಥಳಾಂತರವಾಗಲಿದೆ ಎಂದು ಸ್ಪಷ್ಟಪಡಿಸಿ, ನಗರವನ್ನು ಬಿಟ್ಟು ಹೋಗುವುದಿಲ್ಲ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ, “ಯಾವುದೇ ಕಂಪನಿಯನ್ನು ಇಲ್ಲಿಂದ ಹೋಗುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಆದರೆ, ಬೆಂಗಳೂರಿನಂತೆ ಸೌಲಭ್ಯಗಳನ್ನು ಬೇರೆಡೆ ಯಾರೂ ಒದಗಿಸಲಾರರು. ಅವರು ಬೆಂಗಳೂರಿಗೆ ಬರುವಾಗಲೇ ಇಲ್ಲಿ ಏನು ಸಿಗುತ್ತದೆ ಎಂದು ಕಂಡು ತೀರ್ಮಾನಿಸಿದ್ದರು,” ಎಂದು ಹೇಳಿದರು.