ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!

ಧರ್ಮಸ್ಥಳದಲ್ಲಿ ಸೌಜನ್ಯ ಪರ(!) ಹೋರಾಟಗಾರರ ನಾಯಕರಾಗಿದ್ದ ಮಹೇಶ್ ಶೆಟ್ಟಿ ತಿಮರೋಡಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರಿನ ಮಾನ್ವಿಗೆ ಗಡಿಪಾರು ಮಾಡಿರುವ ವಿಷಯ ಈಗಾಗಲೇ ಬಹಿರಂಗವಾಗಿದೆ. ಈಗ ಪ್ರಸ್ತುತ ಅದು ಹೊಸ ತಿರುವನ್ನು ಪಡೆದುಕೊಂಡಿದೆ. ತಿಮರೋಡಿಯನ್ನು ರಾಯಚೂರಿಗೆ ಗಡಿಪಾರು ಬೇಡಾ ಎಂದು ಅಲ್ಲಿನವರು ಹೋರಾಟ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕದಡುವ ಪ್ರಯತ್ನದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ತಿಮರೋಡಿಯನ್ನು ಮಾಡುವ ಆದೇಶ ಹೊರಬಿದ್ದಿದೆ. ಆದರೆ ಅವರನ್ನು ನಮ್ಮ ಜಿಲ್ಲೆಗೆ ದಯವಿಟ್ಟು ಹಾಕಬೇಡಿ ಎಂದು ಅಲ್ಲಿ ಕೆಲ ಸಂಘಟನೆಗಳು, ಸಮಾನ ಮನಸ್ಕರು ಹೋರಾಟ ಮಾಡಲು ಮುಂದಾಗಿದ್ದಾರೆ.
ರಾಯಚೂರಿನ ದಲಿತ ಸೇನೆ ಹಾಗೂ ಸಮಾನ ಮನಸ್ಕರ ವೇದಿಕೆಯವರು ಈ ಬಗ್ಗೆ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ನಮ್ಮಲ್ಲಿ ಬೇಡಾ, ಎಲ್ಲಿಯೂ ಆಗದಿದ್ದರೆ ಕಾಡಿಗೆ ಕಳುಹಿಸಿ ಎಂದು ಸರಕಾರಕ್ಕೆ ಮನವಿ ಮಾಡಿದ್ದಾರೆ. ಈ ಬಗ್ಗೆ ಜನಾಭಿಪ್ರಾಯ ಮೂಡಿಸಲು ರಾಯಚೂರಿನ ಅಂಬೇಡ್ಕರ್ ವೃತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸೇನೆ ಮತ್ತು ಸಮಾನ ಮನಸ್ಕರ ವೇದಿಕೆಯ ಪ್ರಮುಖರಾದ ಮಾರುತಿ ಬಡಿಗೇರ್ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿಯ ಮೇಲೆ ಒಟ್ಟು 32 ಕ್ರಿಮಿನಲ್ ಕೇಸುಗಳು ದಾಖಲಾಗಿವೆ. ಇತ್ತೀಚೆಗೆ ಮಹೇಶ್ ಶೆಟ್ಟಿ ತಿಮರೋಡಿಯ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಐದು ಪ್ರಕರಣಗಳು ದಾಖಲಾಗಿವೆ. ಉಜಿರೆ ಬೆನಕ ಆಸ್ಪತ್ರೆಯಲ್ಲಿ ಏಷ್ಯಾನೆಟ್ ಸುವರ್ಣನ್ಯೂಸ್ ವರದಿಗಾರ, ಕ್ಯಾಮೆರಾ ಮ್ಯಾನ್ ಮೇಲೆ ಹಲ್ಲೆ, ಆಸ್ಪತ್ರೆಯಲ್ಲಿ 100 ಕ್ಕೂ ಹೆಚ್ಚು ಮಂದಿ ಸೇರಿಸಿ ಗಲಾಟೆ, ಅಕ್ರಮವಾಗಿ ಶಸ್ತ್ರಾಸ್ತ್ರ ಇಟ್ಟುಕೊಂಡಿರುವುದು ಸೇರಿದಂತೆ ಐದು ಪ್ರಕರಣಗಳು ದಾಖಲಾಗಿವೆ.
ಸಾಮಾನ್ಯವಾಗಿ ಅನೇಕ ಕ್ರಿಮಿನಲ್ ಆರೋಪ ಹೊಂದಿರುವ ವ್ಯಕ್ತಿಯನ್ನು ಆತನ ಜಿಲ್ಲೆಯಿಂದ ಗಡಿಪಾರು ಮಾಡುವ ಆದೇಶದಲ್ಲಿ ಇಂತಹುದೇ ಜಿಲ್ಲೆಯ ಇಂತಹುದೇ ಗ್ರಾಮದಲ್ಲಿ ಎಂದು ಹೇಳುವುದು ಹಿಂದೆ ಅಪರೂಪವಾಗಿತ್ತು. ಆಗ ಏನಾಗುತ್ತಿತ್ತು ಎಂದರೆ ಗಡಿಪಾರಾದ ವ್ಯಕ್ತಿ ತನ್ನ ಜಿಲ್ಲೆಯ ಗಡಿಯಲ್ಲಿರುವ ಪಕ್ಕದ ಜಿಲ್ಲೆಯ ಗ್ರಾಮದಲ್ಲಿ ವಾಸಿಸುತ್ತಿದ್ದ. ಇದರಿಂದ ಅದೊಂದು ಶಿಕ್ಷೆಯ ತರಹ ಅವನಿಗೆ ಭಾವನೆಯೇ ಬರುತ್ತಿರಲಿಲ್ಲ. ಆದರೆ ಮಹೇಶ್ ಶೆಟ್ಟಿಯನ್ನು ದಕ್ಷಿಣ ಕನ್ನಡದಿಂದ ಬಹಳ ದೂರದಲ್ಲಿರುವ ರಾಯಚೂರಿನ ಮಾನ್ವಿಗೆ ಗಡಿಪಾರು ಮಾಡಿ ಈ ಶಿಕ್ಷೆಯ ಗಂಭೀರತೆಯನ್ನು ಅಧಿಕಾರಿಗಳು ತಿಳಿಸಿದ್ದಾರೆ.
ಯಾವಾಗ ಮಹೇಶ್ ಶೆಟ್ಟಿ ತಮ್ಮ ಜಿಲ್ಲೆಗೆ ಗಡಿಪಾರಾಗಿ ಬರುತ್ತಾರೆ ಎಂದು ಅಲ್ಲಿನವರಿಗೆ ಅನಿಸಿತೋ ಆಗ ಈ ಪ್ರತಿಭಟನೆ ಶುರುವಾಗುತ್ತಿದೆ. ಇನ್ನು ಯಾವ ಜಿಲ್ಲೆಗೆ ಗಡಿಪಾರು ಮಾಡಿದರೂ ಅಲ್ಲಿನವರು ಕೂಡ ಪ್ರತಿಭಟನೆ ಮಾಡುವ ಸಾಧ್ಯತೆ ಕಾಣುತ್ತಿದೆ.