ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!

ಭಾರತ ತಂಡ ಏಷ್ಯಾ ಕಪ್ 2025 ಗೆದ್ದು ಬೀಗಿರುವುದು ಪ್ರತಿ ಭಾರತೀಯರಿಗೆ ನಿಜಕ್ಕೂ ಹೆಮ್ಮೆಯ ವಿಷಯ. ಅದರಲ್ಲಿಯೂ ಪಾಕಿಸ್ತಾನವನ್ನು ಮಣಿಸಿ ಗೆದ್ದಿರುವುದು ಒಂದು ಮುಷ್ಠಿ ಹೆಚ್ಚೆ ಖುಷಿಯನ್ನು ನೀಡುತ್ತಿದೆ. ಆದರೆ ಭಾರತ ಫೈನಲ್ ನಲ್ಲಿ ಗೆದ್ದ ಬಳಿಕ ಸಹಜವಾಗಿ ಬೇರೆ ಪಂದ್ಯಾಕೂಟದಲ್ಲಿ ಗೆದ್ದ ಬಳಿಕ ಏನು ಆಗುತ್ತೋ ಹಾಗೆ ಆಗುತ್ತೆ ಎಂದು ನೀವು ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಯಾಕೆಂದರೆ ಭಾರತ ಭಾನುವಾರ ನಡೆದ ಫೈನಲ್ ನಲ್ಲಿ ಗೆದ್ದ ಬಳಿಕವೂ ಟ್ರೋಫಿಯನ್ನು ಸ್ವೀಕರಿಸಿಲ್ಲ. ಅಷ್ಟಕ್ಕೂ ಆದದ್ದು ಏನು? ಭಾರತೀಯ ತಂಡಕ್ಕೆ ಟ್ರೋಫಿ ಕೊಡಲು ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಗಣ್ಯರ ಮಧ್ಯದಲ್ಲಿ ನಿಂತವನ ಹೆಸರು ಮೊಸಿನ್ ನಕ್ವಿ. ಈ ಮನುಷ್ಯ ಪಾಕಿಸ್ತಾನ ಸರಕಾರದ ಸಚಿವ. ಅಲ್ಲಿನ ಪಾಕಿಸ್ತಾನದ ಕ್ರಿಕೆಟ್ ಬೋರ್ಡಿನ ಅಧ್ಯಕ್ಷ ಕೂಡ.
ಈ ವ್ಯಕ್ತಿ ಈ ವರ್ಷದ ಏಪ್ರಿಲ್ ನಲ್ಲಿ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಇದರ ಅಧ್ಯಕ್ಷನಾಗಿದ್ದಾನೆ. ಆದ್ದರಿಂದ ಈತ ವಿಜೇತ ತಂಡಕ್ಕೆ ಕಪ್ ನೀಡಲು ನಿಂತಿದ್ದ. ಆದರೆ ಭಾರತ ಪಾಕಿ ತಂಡದ ಜೊತೆ ಹಸ್ತಲಾಘವನೇ ಮಾಡಲು ತಯಾರಿಲ್ಲದಿರುವಾಗ, ಅವರ ಮುಖವನ್ನು ನೋಡಲು ಮನಸ್ಸಿಲ್ಲದೇ ಇರುವಾಗ, ಹುಸಿ ಮುಗುಳ್ನಗೆ ಬಯಸದೇ ಇರುವಾಗ ಹೋಗಿ ಹೋಗಿ ಅವರದ್ದೇ ಸರಕಾರದ ಸಚಿವನ ಕೈಯಿಂದ ಟ್ರೋಫಿ ತೆಗೆದುಕೊಳ್ಳುವುದು ಎಂದರೆ ಸಾಧ್ಯವಾ? ಬೇಕಾದರೆ ಅದೇ ವೇದಿಕೆಯಲ್ಲಿದ್ದ ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ ನ ಉಪಾಧ್ಯಕ್ಷ ಖಾಲಿದ್ ಆಲ್ ಜರೂನಿ ಅವರಿಂದ ಟ್ರೋಫಿ ಕೊಡಿಸಿ ನಾವು ಸ್ವೀಕರಿಸುತ್ತೇವೆ, ಆದರೆ ಶತ್ರುರಾಷ್ಟ್ರದ ಸಚಿವನ ಕೈಯಿಂದ ತೆಗೆದುಕೊಳ್ಳುವ ಆಸಕ್ತಿ ನಮಗಿಲ್ಲ ಎಂದು ಭಾರತ ತಂಡ ತನ್ನ ನಡೆಯಿಂದ ಸ್ಪಷ್ಟಪಡಿಸಿತ್ತು.
ವೇದಿಕೆಯ ಮೇಲೆ ರನ್ನರ್ ಅಪ್ ತಂಡ ಪಾಕಿಸ್ತಾನ ಸ್ಮರಣಿಕೆ ತೆಗೆದುಕೊಂಡ ಬಳಿಕ ಸರಣಿ ಶ್ರೇಷ್ಟ ಪ್ರಶಸ್ತಿಯನ್ನು ಅಭಿಷೇಕ್ ಶರ್ಮಾ ಹಾಗೂ ಬೇರೆ ಬೇರೆ ವೈಯಕ್ತಿಕ ಪ್ರಶಸ್ತಿಗಳನ್ನು ಕುಲದೀಪ್ ಯಾದವ್ ಹಾಗೂ ತಿಲಕ್ ವರ್ಮಾ ಬೇರೆ ಒಬ್ಬರು ಅತಿಥಿಗಳಿಂದ ಪಡೆದುಕೊಂಡಿದ್ದರು. ಭಾರತಕ್ಕೆ ವಿಜೇತ ಟ್ರೋಫಿ ನೀಡಲು ನಕ್ವಿ ಸುಮಾರು ಹೊತ್ತು ಕಾದರೂ ಭಾರತ ಕ್ಯಾರೇ ಅನ್ನಲಿಲ್ಲ. ಕಾದು ಕಾದು ಸುಸ್ತಾಗಿ, ತೀವ್ರ ಅವಮಾನಕ್ಕೊಳಗಾದ ಮೋಸಿನ್ ನಕ್ವಿ ಏನು ಮಾಡಿದ ಗೊತ್ತೆ?
ಟ್ರೋಫಿ ಹಾಗೂ ವಿಜೇತ ತಂಡಕ್ಕೆ ನೀಡಬೇಕಾದ ಮೆಡಲ್ ಗಳನ್ನೇ ಹಿಡಿದುಕೊಂಡು ಪೆವಿಲಿಯನ್ ನಿಂದ ಹೊರಗೆ ನಡೆದುಬಿಟ್ಟ. ಇದು ಆತ ಅವಮಾನದಿಂದ ಎಷ್ಟು ಕ್ಷುದ್ರನಾಗಿದ್ದ ಎನ್ನುವುದನ್ನು ತೋರಿಸುತ್ತದೆ.
ಭಾರತದ ಕ್ರಿಕೆಟ್ ತಂಡದ ಟಿಟ್ವೆಂಟಿ ಕಪ್ತಾನ ಸೂರ್ಯ ಕುಮಾರ್ ಯಾದವ್ ತಮ್ಮ ವೈಯಕ್ತಿಕ ಮ್ಯಾಚ್ ಫೀಯನ್ನು ಪೆಹಲ್ಗಾಂನಲ್ಲಿ ಮಡಿದ ಸಂತ್ರಸ್ತರ ಕುಟುಂಬಕ್ಕೆ ಹಾಗೂ ಭಾರತದ ವೀರ ಯೋಧರಿಗೆ ನೀಡುವುದಾಗಿ ಮೊದಲೇ ಘೋಷಿಸಿದ್ದಾರೆ. ಸೂರ್ಯ ನಡೆಯನ್ನು ಬೇರೆ ರೀತಿಯಲ್ಲಿ ಅನುಸರಿಸಿರುವ ಪಾಕಿಸ್ತಾನದ ಕಪ್ತಾನ ಸಲ್ಮಾನ್ ಆಲಿ ಆಘಾ ಮ್ಯಾಚ್ ನಂತರ ಸುದ್ದಿಗೋಷ್ಟಿಯಲ್ಲಿ ಪಾಕಿಸ್ತಾನ ತಂಡ ತಮ್ಮ ಬಹುಮಾನದ ಮೊತ್ತವನ್ನು ಆಪರೇಶನ್ ಸಿಂದೂರದಲ್ಲಿ ಹಾನಿಗೊಳಗಾದ ಪಾಕಿಸ್ತಾನಿ ನಾಗರಿಕರಿಗೆ ನೀಡುವುದಾಗಿ ಹೇಳಿದ್ದಾರೆ.
ಇನ್ನು ಭಾರತ ಟ್ರೋಫಿ ಸ್ವೀಕರಿಸದೇ ಇರುವುದಕ್ಕೆ ಪಾಕ್ ಕಪ್ತಾನ ಆಘಾ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಟಿಯಲ್ಲಿ ಸೂರ್ಯ ಕುಮಾರ್ ಯಾದವ್ ಅವರಿಗೆ ಸುದ್ದಿಗಾರರು ” ನೀವು ಟ್ರೋಫಿ ಸ್ವೀಕರಿಸದೇ ಇರಲು ಬಿಸಿಸಿಐ ನಿಂದ ಏನಾದರೂ ಲಿಖಿತ ಸಂದೇಶ ಎಐಸಿಸಿಗೆ ಮೇಲ್ ಮೂಲಕ ಹೋಗಿತ್ತಾ ಅಥವಾ ಇದು ನಿಮ್ಮ ವೈಯಕ್ತಿಕ ನಿರ್ಧಾರವಾ?” ಎಂದು ಕೇಳಿದ್ದಕ್ಕೆ ಇದು ನಾವು ಆ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರವಾಗಿತ್ತೇ ವಿನ: ಈ-ಮೇಲ್ ಬಗ್ಗೆ ಯಾವುದೇ ಮಾಹಿತಿ ಇಲ್ಲ” ಎಂದು ಹೇಳಿದರು. ಇನ್ನು ಪಾಕಿಸ್ತಾನಿ ಪತ್ರಕರ್ತನೊಬ್ಬ ನಿಮ್ಮ ನಡೆ ರಾಜಕೀಯವಾಗಿತ್ತು. ಕ್ರೀಡಾಳು ಸ್ಫೂರ್ತಿಯನ್ನು ನೀವು ಮೆರೆಯಲಿಲ್ಲ ಎಂದದಕ್ಕೆ “ನೀವು ಕೋಪದಿಂದ ಈ ಪ್ರಶ್ನೆಯನ್ನು ಕೇಳಿದ್ದೀರಿ” ಎಂದು ನಕ್ಕಿದ್ದಾರೆ.
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಸೂರ್ಯ “ನಾವು ಗೆದ್ದ ತಂಡವಾಗಿರುವುದರಿಂದ ಟ್ರೋಫಿ ಪಡೆಯಲು ಅರ್ಹತೆಯನ್ನು ಹೊಂದಿದ್ದೇವೆ, ಹೌದಾ ಅಲ್ವಾ” ಎಂದು ಪತ್ರಕರ್ತರಿಗೆ ಮರುಪ್ರಶ್ನೆ ಹಾಕಿದಾಗ ಹೌದು ಎಂಬ ಉತ್ತರ ಬಂದಿದೆ. ಹಾಗಾದರೆ ಅವರು ನಮಗೆ ಟ್ರೋಫಿ ಕೊಡುವುದು ಬಿಟ್ಟು ತೆಗೆದುಕೊಂಡು ಹೋದದ್ದೇ ತಪ್ಪು ಎಂದು ಜನಮಾನಸದಲ್ಲಿ ಅರ್ಥ ಬರುವ ಹಾಗೆ ತಮ್ಮ ಚಾಣಾಕ್ಷ ನಡೆಯಿಂದ ಸೂರ್ಯ ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿದರು.
ಬಿಸಿಸಿಐ ಸೆಕ್ರೆಟರಿ ದೆವಜಿತ್ ಸೈಕಿಯಾ ” ಯುದ್ಧ ರಾಷ್ಟ್ರದ ಪ್ರಮುಖ ರಾಜಕಾರಣಿಯಿಂದ ಟ್ರೋಫಿ, ಮೆಡಲ್ ಪಡೆದುಕೊಳ್ಳಲಿಲ್ಲ ಎಂದ ಕೂಡಲೇ ಅದನ್ನು ಹಿಡಿದುಕೊಂಡು ಓಡಿ ಹೋದ ಮೊಸಿನ್ ನಕ್ವಿಯ ನಡೆಯನ್ನು ಖಂಡಿಸುತ್ತೇವೆ. ನೀವು ಬೇರೆಯವರಿಗೆ ಅದನ್ನು ಕೊಟ್ಟು ಹೋಗಬಹುದಿತ್ತು. ಈ ಬಗ್ಗೆ ಕ್ರಿಕೆಟ್ ಮಂಡಳಿಯ ಮುಂದಿನ ಸಭೆಯಲ್ಲಿ ಖಂಡನೆಯನ್ನು ಇಟ್ಟು ನಮ್ಮ ಟ್ರೋಪಿ, ಮೆಡಲುಗಳನ್ನು ಭಾರತಕ್ಕೆ ತರುವ ವ್ಯವಸ್ಥೆಯನ್ನು ಮಾಡಲಾಗುವುದು” ಎಂದು ಹೇಳಿದರು.