“ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ…” ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?

“ಅಂತು ಇಂತು ಅವರಿವರ ಕೈ ಕಾಲು ಹಿಡಿದು ಮಂಗಳೂರಿನ ಬಿಗ್ ಸಿನೆಮಾಸ್ ನಲ್ಲಿ ನಾಳೆಯಿಂದ ಸಂಜೆ 7 ಪಿಎಂ ಶೋ ಸಿಕ್ತು. ನೋಡಲು ಇಚ್ಚಿಸುವವರು…” ಇಂತಹ ಒಂದು ವಾಕ್ಯವನ್ನು ಯಾರು ಬರೆದಿರಬಹುದು ಎಂದು ಊಹಿಸಬಹುದು. ಇದನ್ನು ತಮ್ಮ ಟ್ವಿಟರ್ (ಈಗ ಎಕ್ಸ್) ನಲ್ಲಿ ಬರೆದಿದ್ದವರು ಯಾರೂ ಅಲ್ಲ. ಅದು ರಿಷಬ್ ಶೆಟ್ಟಿ. ರಿಷಬ್ ಶೆಟ್ಟಿ ಯಾರಾದಾದರೂ ಕೈ ಕಾಲು ಹಿಡಿದು ತಮ್ಮ ಸಿನೆಮಾಗೆ ಒಂದು ಶೋ ಕೊಡಿ ಎಂದು ಕೇಳಬೇಕಾ ಎಂದು ನಿಮಗೆ ಅನಿಸಬಹುದು. ಆದರೆ ಈ ಪರಿಸ್ಥಿತಿಯನ್ನು ರಿಷಬ್ ಅನುಭವಿಸಿದ್ದಾರೆ. ಆದರೆ ಈಗ ಅಲ್ಲ. ಅದು 2016 ನೇ ಫೆಬ್ರವರಿಯಲ್ಲಿ.
ಆಗ ರಿಷಬ್ ಶೆಟ್ಟಿಯವರ ರಿಕ್ಕಿ ಸಿನೆಮಾ ಬಿಡುಗಡೆಯಾಗಿತ್ತು. ಅದು ಅವರ ಮೊದಲ ನಿರ್ದೇಶನದ ಸಿನೆಮಾ. ಅದರಲ್ಲಿ ರಕ್ಷಿತ್ ಶೆಟ್ಟಿ, ಹರಿಪ್ರಿಯಾ ಮುಖ್ಯಪಾತ್ರಗಳಲ್ಲಿ ಅಭಿನಯಿಸಿದ್ದರು. ಎಸ್ ವಿ ಬಾಬು ನಿರ್ಮಾಣ ಮಾಡಿದ್ದರು. ಆ ಸಿನೆಮಾ ಗೆದ್ದರೆ ರಿಷಬ್ ಶೆಟ್ಟಿಯವರ ಸಿನೆಮಾ ಪಯಣಕ್ಕೆ ವೇಗ ಸಿಗುತ್ತಿತ್ತು. ಆದರೆ ಸಿನೆಮಾ ಗೆಲ್ಲಬೇಕಾದರೆ ಅದಕ್ಕೆ ಶೋ ಸಿಗಬೇಕಲ್ಲ. ಶೋ ಸಿಗುವುದೇ ಕಷ್ಟವಿತ್ತು. ಯಾಕೆಂದರೆ ಆಗ ರಕ್ಷಿತ್ ಆಗಲಿ, ರಿಷಬ್ ಆಗಲಿ ಸ್ಟಾರ್ ಆಗಿರಲಿಲ್ಲ. ಕಿರಿಕ್ ಪಾರ್ಟಿ ಸಿನೆಮಾ ಆಗಿರಲಿಲ್ಲ. ಆದ್ದರಿಂದ ಇವರ ಸಿನೆಮಾವನ್ನು ತೋರಿಸಲು ಪ್ರದರ್ಶಕರು ಮುಂದೆ ಬಂದಿರಲಿಲ್ಲ. ರಕ್ಷಿತ್ ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಮಾಡಿ ಯಶಸ್ಸು ಕಂಡಿದ್ದರಾದರೂ ರಿಕ್ಕಿಗೆ ಥಿಯೇಟರ್ ಸಿಗುವುದೇ ಕಷ್ಟವಾಗಿತ್ತು. ಆಗ ರಿಷಬ್ ಇದ್ದಬದ್ದವರನ್ನು ವಿನಂತಿಸಿ ಒಂದು ಶೋ ದಕ್ಕಿಸಿಕೊಂಡಿದ್ದು ಅದನ್ನೇ ತಮ್ಮ ಸಾಮಾಜಿಕ ತಾಣದಲ್ಲಿ ಬರೆದು ವಾಸ್ತವ ಹೇಳಿಕೊಂಡಿದ್ದರು.
ಈಗ ಅದನ್ನೇ ರೀ ಟ್ವೀಟ್ ಮಾಡಿರುವ ರಿಷಬ್ ಆ ದಿನಗಳನ್ನು ಮೆಲುಕು ಹಾಕಿದ್ದಾರೆ. “2016 ರಲ್ಲಿ ಒಂದು ಪ್ರದರ್ಶನಕ್ಕಾಗಿ ಒದ್ದಾಡಿದ ದಿನದಿಂದ, 5000 ಕ್ಕೂ ಹೆಚ್ಚು ಹೌಸ್ ಫುಲ್ ಶೋಗಳ ಈ ಅದ್ಭುತ ಪಯಣ. ಇದು ಸಾಧ್ಯವಾಗಿದ್ದು ನಿಮ್ಮ ಪ್ರೀತಿ ಮತ್ತು ಬೆಂಬಲದಿಂದ ಮಾತ್ರ. ಇದಕ್ಕಾಗಿ ನಾನು ನಿಮಗೆ ಸದಾ ಋಣಿ” ಎಂದು ಕನ್ನಡ ಮತ್ತು ಅದರ ಭಾವಾರ್ಥವನ್ನು ಇಂಗ್ಲೀಷ್ ಎರಡರಲ್ಲಿಯೂ ಬರೆದಿದ್ದಾರೆ.
ಇದು ಕರಾವಳಿಯ ಸಾಧಕನೊಬ್ಬನ ನಿಜವಾದ ಯಶಸ್ಸು ಎನ್ನಬಹುದು. ಈಗ ರಿಷಬ್ ಶೆಟ್ಟಿಯವರ ಕಾಂತಾರಾ ಚಾಪ್ಟರ್ 1 ಯಾವ ರೀತಿಯ ಸದ್ದು ಮಾಡುತ್ತಿದೆ ಎಂದರೆ ಗಂಟೆಗೆ 60000 ಟಿಕೆಟ್ ಮಾರಾಟವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಕೇವಲ ಮೂರ್ನಾಕು ದಿನಗಳ ಒಳಗೆ ಇಡೀ ವಿಶ್ವದ ಎಲ್ಲಾ ಲೆಕ್ಕಾಚಾರಗಳನ್ನು ಒಟ್ಟು ಮಾಡಿದರೆ ನೂರು ಕೋಟಿ ರೂ ಕ್ಲಬ್ ಸೇರುವ ಎಲ್ಲಾ ಸಾಧ್ಯತೆಗಳು ಇವೆ. ಸಿನೆಮಾ ನಿರ್ಮಾಪಕರ ಒಟ್ಟು ಗುರಿ ಒಂದು ಸಾವಿರ ಕೋಟಿ ಆಗಿದ್ದರೂ ಆಶ್ಚರ್ಯವಿಲ್ಲ. ಐದು ಸಾವಿರ ಶೋಗಳು ಎಂದರೆ ಅದು ಹುಡುಗಾಟದ ಮಾತಲ್ಲ. ಈಗ ರಿಷಬ್ ಶೆಟ್ಟಿಯವರ ಬೆನ್ನಿಗೆ ಅನೇಕ ಸ್ಟಾರ್ ಗಳು ನಿಂತು ಬೆನ್ನು ತಟ್ಟುತ್ತಿದ್ದಾರೆ. ಆದರೆ ಅಂದು ಅವರೊಂದಿಗೆ ಇದ್ದದ್ದು ಅವರ ಪರಿಶ್ರಮ ಮತ್ತು ಸಾಧಿಸಲೇಬೇಕೆಂಬ ತುಡಿತ.
ಹಾಗಾದರೆ ಈ ಮಟ್ಟಿಗಿನ ಯಶಸ್ಸು ಹೇಗೆ ಸಾಧ್ಯ. ಅವರು ಅದಕ್ಕೆ ಜನರ ಪ್ರೀತಿ ಮತ್ತು ಬೆಂಬಲದಿಂದ ಮಾತ್ರ ಸಾಧ್ಯವಾಯಿತು ಎಂದು ರಿಷಬ್ ಬರೆದುಕೊಂಡಿದ್ದಾರೆ. ಸತತ ಪರಿಶ್ರಮ, ನಿರಂತರ ಧ್ಯಾನ ಮತ್ತು ಪೂರ್ಣಪ್ರಮಾಣದಲ್ಲಿ ದೈವದೇವರ ಆರ್ಶೀವಾದ ಮತ್ತು ನಂಬುವವರಿಗೆ ಒಂದಿಷ್ಟು ಅದೃಷ್ಟ. ಇದು ಒಟ್ಟು ಸೇರಿದಾಗ ನೆಲದಿಂದ ಆಗಸದೆಡೆಗೆ ಹಾರಲು ಸಾಧ್ಯವಾಗುತ್ತದೆ. ಅದು ರಿಷಬ್ ಶೆಟ್ಟಿಯವರ ಪಾಲಿಗೆ ಸಿಕ್ಕಿದೆ. ರಾಷ್ಟ್ರಪ್ರಶಸ್ತಿಯಿಂದ ಹಿಡಿದು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಅವರನ್ನು ಎತ್ತಿಕೊಂಡು ಹಾರಾಡಿಸುವ ಜನರು ಇದ್ದಾರೆ. ಅದು ಅವರ ಪಾಲಿಗೆ ಯಾವತ್ತೂ ಇರಲಿ. ಇನ್ನು ಕೂಡ ಉತ್ತಮ ಸಿನೆಮಾಗಳನ್ನು ಜನರಿಗೆ ನೀಡಿ ರಂಜಿಸಲಿ ಎನ್ನುವುದು ತುಳುನಾಡು ನ್ಯೂಸ್ ಆಶಯ.