ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?

ಈಗ ಎಲ್ಲೆಡೆ ದೀಪಾವಳಿ ಸಂಭ್ರಮ. ದೀಪಾವಳಿ ಎಂದ ಕೂಡಲೇ ಸಿಬ್ಬಂದಿಗಳಿಗೆ ಬೋನಸ್ ನೀಡುವ ಪರಿಪಾಠ ಹೆಚ್ಚಿನ ಖಾಸಗಿ ಕಂಪೆನಿಗಳಲ್ಲಿ ಇದೆ. ಕೆಲವು ಕಂಪೆನಿಗಳಲ್ಲಿ ಬೋನಸ್ ರೂಪದಲ್ಲಿ ಹೊಚ್ಚ ಹೊಸ ಕಾರು ನೀಡಿದರೆ ಕೆಲವೆಡೆ ಸಣ್ಣ ಮಟ್ಟಿಗಿನ ಬೋನಸ್ ನೀಡುವ ಸಂಪ್ರದಾಯ ಇದೆ. ಆದರೆ ಯಾವುದೇ ಕಂಪೆನಿಯಲ್ಲಿ ಹೀಗೆ ಆಗಿರಲಿಕ್ಕಿಲ್ಲ. ಇದು ಉತ್ತರ ಪ್ರದೇಶದ ಫತೇಹಾಬಾದ್ ನಲ್ಲಿರುವ ಆಗ್ರಾ – ಲಕ್ನೋ ಎಕ್ಸಪ್ರೆಸ್ ವೇ. ಅಲ್ಲಿ ಟೋಲ್ ಫ್ಲಾಜಾ ಇದೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅಲ್ಲಿ 21 ಜನ ಟೋಲ್ ಸಹಾಯಕರಾಗಿ ಕೆಲಸ ಮಾಡುತ್ತಾರೆ. ಅವರಿಗೆ ಈ ಬಾರಿ ಬೋನಸ್ ನೀಡುವಾಗ ಕೊಟ್ಟ ಹಣ ಎಷ್ಟು ಗೊತ್ತಾ? ಕೇವಲ 1100 ರೂಪಾಯಿ. ಇದರಿಂದ ಟೋಲ್ ಕಾರ್ಮಿಕರು ಸಿಕ್ಕಾಪಟ್ಟೆ ಆಕ್ರೋಶಗೊಂಡಿದ್ದರು.
ಅವರು ತಮ್ಮ ಕಂಪೆನಿ ಶ್ರೀ ಸೈನ್ ಆಂಡ್ ದಾತಾರ್ ವಿರುದ್ಧ ಪ್ರತಿಭಟನೆಗೆ ಇಳಿದರು. ತಾವು ಟ್ರೋಲ್ ಸಂಗ್ರಹಿಸುವುದಿಲ್ಲವೆಂದು ಹಟಕ್ಕೆ ಕುಳಿತರು. ಇದರಿಂದ ವಾಹನಗಳಿಗೆ ಟೋಲ್ ಕೊಡದೇ ಹೋಗುವ ಅವಕಾಶ ಸಿಕ್ಕಿತು. ಇದು ಆಡಳಿತ ಮಂಡಳಿಗೆ ವಿಷಯ ಗೊತ್ತಾಯಿತು. ಆದರೆ ಈ ಕಂಪೆನಿ ಮಾರ್ಚ್ ನಲ್ಲಷ್ಟೇ ಟೋಲ್ ನಿರ್ವಹಣೆಯನ್ನು ವಹಿಸಿಕೊಂಡಿದ್ದರಿಂದ ಹಬ್ಬಗಳ ಬೋನಸ್ ಗಳ ಲೆಕ್ಕಾಚಾರ ಮತ್ತು ವಿತರಣೆಗೆ ಸಂಬಂಧಿಸಿದ ವಿವಾದಗಳು ಬುಗಿಲೆದ್ದಿದ್ದವು.
ಹೆಚ್ಚು ಮೊತ್ತದ ಬೋನಸ್ ನೀಡುವಂತೆ ಒತ್ತಾಯಿಸಿದ ಕಾರ್ಮಿಕರು, ಸಾಮೂಹಿಕವಾಗಿ ತಮ್ಮ ಕೆಲಸ ಮಾಡದೇ ಇರಲು ನಿರ್ಧರಿಸಿದರು. ಇದರ ಪರಿಣಾಮವಾಗಿ ಎಲ್ಲಾ ಟೋಲ್ ಗೇಟ್ ಗಳನ್ನು ತೆರೆಯಲಾಯಿತು. ಸಾವಿರಾರು ವಾಹನಗಳು ಶುಲ್ಕ ಪಾವತಿಸದೇ ಹಾದು ಹೋದಾಗ, ಟೋಲ್ ಆಡಳಿತ ಮಂಡಳಿಯು ಇತರ ಟೋಲ್ ಪ್ಲಾಜಾಗಳಿಂದ ಸಿಬ್ಬಂದಿಯನ್ನು ಕರೆತಂದು ಕೆಲಸ ಮುಂದುವರೆಸಲು ಪ್ರಯತ್ನಿಸಿತು. ಆದರೆ ಪ್ರತಿಭಟನಾ ನಿರತ ನೌಕರರು ಈ ಬದಲಿಗಳನ್ನು ಕೆಲಸ ಮಾಡದಂತೆ ತಡೆದರು. ಇದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿತು.
ಮಾಹಿತಿ ಪಡೆದ ಪೊಲೀಸ್ ಪಡೆಗಳು ಟೋಲ್ ಪ್ಲಾಜಾಗೆ ಆಗಮಿಸಿ ಕಂಪೆನಿಯ ಅಧಿಕಾರಿಗಳು ಮತ್ತು ಪ್ರತಿಭಟನಾಕಾರ ಕಾರ್ಮಿಕರ ನಡುವೆ ಮತುಕತೆ ನಡೆಸಲು ಮುಂದಾದರು. ಟೋಲ್ ಅಧಿಕಾರಿಗಳು ಸಿಬ್ಬಂದಿಗೆ ಸುಧಾರಿತ ಪರಿಸ್ಥಿತಿಗಳ ಬಗ್ಗೆ ಭರವಸೆ ನೀಡಿ, ನೌಕರರ ಬೇಡಿಕೆಗಳನ್ನು ಪರಿಹರಿಸುವ ಬಗ್ಗೆ ಚರ್ಚೆ ನಡೆಸಿದರು. ಟೋಲ್ ಕಂಪೆನಿಯ ಹಿರಿಯ ಅಧಿಕಾರಿಗಳು ತಕ್ಷಣದ ಪರಿಹಾರವಾಗಿ ಶೇಕಡಾ 10 ರಷ್ಟು ವೇತನ ಹೆಚ್ಚಳವನ್ನು ಭರವಸೆ ನೀಡಿದರು. ಈ ಭರವಸೆಯ ನಂತರ ನೌಕರರು ಕೆಲಸವನ್ನು ಪುನರಾರಂಭಿಸಲು ಒಪ್ಪಿಕೊಂಡರು. ಎರಡು ಗಂಟೆಗಳ ಕಾಲ ವ್ಯತ್ಯಯದ ಪರಿಸ್ಥಿತಿ ಮತ್ತೆ ತಿಳಿಯಾಯಿತು. ಒಟ್ಟಿನಲ್ಲಿ ಬೋನಸ್ ಎನ್ನುವುದು ಕೆಲವು ಸಂಸ್ಥೆಗಳಲ್ಲಿ ಎಷ್ಟರಮಟ್ಟಿಗೆ ಪ್ರಭಾವ ಬೀರುತ್ತದೆ ಎನ್ನುವುದು ಕೂಡ ಈ ಪ್ರಕರಣದಲ್ಲಿ ಗೊತ್ತಾಗುತ್ತದೆ.