ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ – ಸರಕಾರಕ್ಕೆ ಶಾಸಕ ಆಗ್ರಹ!
ಎಲ್ಲಾ ಹೆಣ್ಣುಮಕ್ಕಳು ಸರಕಾರಿ ಉದ್ಯೋಗದಲ್ಲಿರುವ ಯುವಕರನ್ನು ಮಾತ್ರ ಮದುವೆಯಾಗುತ್ತೇನೆ ಎಂದು ನಿರ್ಧರಿಸಿದರೆ ಉಳಿದವರನ್ನು ಯಾರು ಮದುವೆಯಾಗುತ್ತಾರೆ ಎನ್ನುವ ಪ್ರಶ್ನೆ ಸಹಜ. ಸರಕಾರಿ ಉದ್ಯೋಗ ಬಿಟ್ಟರೆ ಐಟಿ, ಬಿಟಿ, ಎಂಜಿನಿಯರ್, ಡಾಕ್ಟರ್, ಸಿಎ, ದೊಡ್ಡ ಉದ್ಯಮಿಗಳನ್ನು ಮಾತ್ರ ವರಿಸುತ್ತೇವೆ ಎಂದು ಯೋಚಿಸಿ ಹಾಗೆ ಮುಂದುವರೆದರೆ ಉಳಿದವರಿಗೆ ಮದುವೆ ಎನ್ನುವುದು ಮರೀಚಿಕೆಯಾಗಲ್ವ? ಅದರಲ್ಲಿಯೂ ರೈತ ಎಂದ ಕೂಡಲೇ ಮದುವೆಯಾಗುವ ಹೆಣ್ಣುಮಕ್ಕಳು ಮೂಗು ಮುರಿಯಲು ಮುಂದಾದರೆ ಅವರ ಪಾಡೇನು? ಇಂತಹ ಸಮಸ್ಯೆ ಇದು ನಿನ್ನೆಯದ್ದಲ್ಲ. ಈಗ ಇದಕ್ಕೆ ಪರಿಹಾರ ಸೂಚಿಸಲು ವಿಧಾನ ಪರಿಷತ್ ನಲ್ಲಿ ಚರ್ಚೆ ನಡೆಯಿತು.
ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ಠೇವಣಿ ಇಡುವ ಯೋಜನೆಯನ್ನು ಸರಕಾರ ಜಾರಿಗೊಳಿಸಬೇಕು ಎಂದು ವಿಧಾನ್ ಪರಿಷತ್ ಸದಸ್ಯ ಪುಟ್ಟಣ್ಣ ಆಗ್ರಹಿಸಿದ್ದಾರೆ. ಬುಧವಾರ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಹಳ್ಳಿಗಳಲ್ಲಿ ರೈತರು, ಕೃಷಿ ಕಾರ್ಮಿಕರು, ಕೂಲಿ ಕಾರ್ಮಿಕರ ಮಕ್ಕಳನ್ನು ಯಾವ ಹೆಣ್ಮಕ್ಕಳು ಮದುವೆ ಆಗಲು ಒಪ್ಪುತ್ತಿಲ್ಲ. ಹೆಣ್ಮಕ್ಕಳೆಲ್ಲರೂ ಸರಕಾರಿ ನೌಕರರು, ಸಿಟಿಗಳಲ್ಲಿರುವ ಗಂಡು ಮಕ್ಕಳನ್ನೇ ಮದುವೆಯಾಗಲು ಬಯಸುತ್ತಿದ್ದಾರೆ. ಹೀಗಾಗಿ ಗಂಡು ಮಕ್ಕಳ ಮದುವೆಯೇ ಆಗುತ್ತಿಲ್ಲ. ಹೆಣ್ಣು ಸಿಗಲೆಂದು ಗಂಡು ಮಕ್ಕಳೆಲ್ಲ ಮಲೆ ಮಾದೇಶ್ವರ ಬೆಟ್ಟ, ಧರ್ಮಸ್ಥಳ ಹೀಗೆ ಬೇರೆ ಬೇರೆ ಧಾರ್ಮಿಕ ಕ್ಷೇತ್ರಗಳಿಗೆ ಹರಕೆ ಹೊರುತ್ತಿದ್ದಾರೆ. ಪಾದಯಾತ್ರೆ ನಡೆಸುತ್ತಿದ್ದಾರೆ. ಆದರೂ ಮದುವೆಯಾಗುತ್ತಿಲ್ಲ. ಹೀಗಾಗಿ ಅವರ ಅನುಕೂಲಕ್ಕೆ ಸರಕಾರ ಯೋಜನೆ ತರಬೇಕು ಎಂದರು. ಅವರ ಕಳಕಳಿ ಒಪ್ಪುವಂತದ್ದು. ಆದರೆ ಇದು ಎಷ್ಟರಮಟ್ಟಿಗೆ ಪರಿಹಾರ ನೀಡುತ್ತದೆ ಎಂದು ಯೋಚಿಸಬೇಕಾಗಿದೆ.
ಇಲ್ಲಿ ಮದುವೆ ಎನ್ನುವುದು ಹಣಕ್ಕಾಗಿಯೇ ನಡೆಯುವುದಾ ಎನ್ನುವುದನ್ನು ನಾವು ನೋಡಬೇಕು. ಇಲ್ಲದಿದ್ದರೆ ಹಣ ಇಲ್ಲ ಎನ್ನುವ ಕಾರಣಕ್ಕೆ ರೈತರ ಮಕ್ಕಳನ್ನು ಮದುವೆಯಾಗಲು ಯಾರೂ ಮುಂದೆ ಬರುತ್ತಿಲ್ಲ ಎಂದಾದರೆ ಪ್ರಗತಿ ಹೊಂದಿದ ಕೃಷಿ ಮನೆತನದವರು ಇದ್ದಾರಲ್ಲ. ಇನ್ನು ಇವತ್ತಿನ ಆಧುನಿಕ ಜೀವನಕ್ಕೆ ರೈತರು ಒಗ್ಗಿಕೊಳ್ಳುವುದಿಲ್ಲ ಎಂದು ಹೆಣ್ಣುಮಕ್ಕಳು ಹಿಂದೇಟು ಹಾಕುತ್ತಿದ್ದಾರೆ ಎಂದಾದರೆ ಇದು ಭವಿಷ್ಯದ ದುರಂತಕ್ಕೆ ಮುನ್ನುಡಿ ಎನ್ನಬಹುದು. ಯಾಕೆಂದರೆ ರೈತನಾಗಿಯೇ ಇದ್ದರೆ ತನಗೆ ಮದುವೆಯಾಗುವುದಿಲ್ಲ ಎನ್ನುವ ಕಾರಣಕ್ಕೆ ಮುಂದಿನ ರೈತರ ಪೀಳಿಗೆ ಕೃಷಿ ಬಿಟ್ಟರೆ ನಮ್ಮೆಲ್ಲರ ಹೊಟ್ಟೆಪಾಡಿನ ಗತಿ ಏನು?









