ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
ಕೋಲ್ಕತ್ತಾ: ಗಾಯಕಿ ಲಗ್ನಜಿತಾ ಚಕ್ರವರ್ತಿ ಅವರು ಸಂಗೀತ ಕಾರ್ಯಕ್ರಮದ ವೇಳೆ ಅವಮಾನಕ್ಕೊಳಗಾದ ಘಟನೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಾಗೂ ಸಾಮಾಜಿಕ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಶನಿವಾರ ಸಂಜೆ ಪೂರ್ವ ಮೆದಿನಿಪುರ ಜಿಲ್ಲೆಯ ಭಾಗಬಾನಪುರದಲ್ಲಿನ ಸೌತ್ ಪಾಯಿಂಟ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ, ‘ತ್ರಿಣಮೂಲ ಕಾರ್ಯಕರ್ತ’ ಎಂದು ಗುರುತಿಸಲ್ಪಟ್ಟ ವ್ಯಕ್ತಿಯೊಬ್ಬರು ವೇದಿಕೆಗೆ ನುಗ್ಗಿ ಗಾಯಕಿಯನ್ನು ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.
ಲಗ್ನಜಿತಾ ಅವರು ದೇವಿ ಚೌಧುರಾಣಿ ಚಿತ್ರದಲ್ಲಿನ ‘ಜಾಗೋ ಮಾ’ ಹಾಡನ್ನು ಹಾಡಿ ಮುಗಿಸಿದ ತಕ್ಷಣ, ಮೆಹಬೂಬ್ ಮಲ್ಲಿಕ್ ಎಂಬ ವ್ಯಕ್ತಿ ವೇದಿಕೆಗೆ ಏರಿ, “ಇನ್ನು ಧಾರ್ಮಿಕ ಹಾಡು ಸಾಕು, ಸೇಕ್ಯುಲರ್ ಹಾಡು ಹಾಡಿ” ಎಂದು ಕೂಗಿದರೆನ್ನಲಾಗಿದೆ. ಮೈಕ್ ಕಸಿಯಲು ಯತ್ನಿಸಿ, ಹಲ್ಲೆ ಮಾಡುವ ಉದ್ದೇಶವಿದ್ದಂತೆ ವರ್ತಿಸಿದ ಆರೋಪವೂ ಇದೆ. ಸಂಘಟಕರು ಮಧ್ಯಪ್ರವೇಶಿಸಿ ಅವರನ್ನು ವೇದಿಕೆಯಿಂದ ಹೊರಕ್ಕೆಳೆದರು. ಘಟನೆಯಿಂದ ಬೆಚ್ಚಿಬಿದ್ದ ಲಗ್ನಜಿತಾ ಕಾರ್ಯಕ್ರಮವನ್ನು ನಿಲ್ಲಿಸಿ ಪ್ರೇಕ್ಷಕರಿಗೆ ಕ್ಷಮೆಯಾಚಿಸಿ ಸ್ಥಳ ತೊರೆದರು.
ಘಟನೆ ನಡೆದ ರಾತ್ರಿ ಲಗ್ನಜಿತಾ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು. ಅದರ ಆಧಾರದ ಮೇಲೆ ಭಾನುವಾರ ಮೆಹಬೂಬ್ ಮಲ್ಲಿಕ್ ಅವರನ್ನು ಪೊಲೀಸರು ಬಂಧಿಸಿದರು. ಆದರೆ ದೂರು ಸ್ವೀಕರಿಸುವಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಭಾಗಬಾನಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ವಿರುದ್ಧ ಇಲಾಖಾ ತನಿಖೆ ಆರಂಭಿಸಲಾಗಿದೆ.
34 ವರ್ಷದ ಲಗ್ನಜಿತಾ, “ಸಂಗೀತವನ್ನು ಧಾರ್ಮಿಕ ಅಥವಾ ಸೇಕ್ಯುಲರ್ ಎಂದು ಹೇಗೆ ವರ್ಗೀಕರಿಸಬಹುದು? ನನ್ನ 11 ವರ್ಷದ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿ ಇಂತಹ ಅನುಭವ” ಎಂದು ಮಾಧ್ಯಮಗಳಿಗೆ ತಿಳಿಸಿದರು. ಜಾಗೋ ಮಾ ಹಾಡು ದಮನದ ವಿರುದ್ಧ ಪ್ರತಿರೋಧದ ಸಂದೇಶ ಹೊಂದಿದ್ದು, ‘ಮಾ’ ಎಂಬ ಉಲ್ಲೇಖ ತಾಯ್ನಾಡು ಅಥವಾ ದೇವಿಯನ್ನು ಸೂಚಿಸಬಹುದು ಎಂದು ಅವರು ಹೇಳಿದರು.
ಘಟನೆಯು ರಾಜಕೀಯ ಸ್ವರೂಪ ಪಡೆದಿದ್ದು, ಬಿಜೆಪಿ ಈ ವಿಷಯವನ್ನು ಮುಂದಿಟ್ಟುಕೊಂಡು ತೃಣಮೂಲ ಕಾಂಗ್ರೆಸ್ ಮೇಲೆ ಟೀಕೆ ನಡೆಸಿದೆ. ತೃಣಮೂಲವು ಆರೋಪಿಯನ್ನು ತನ್ನ ಪಕ್ಷದ ಅಧಿಕೃತ ಕಾರ್ಯಕರ್ತನಲ್ಲ ಎಂದು ಹೇಳಿ, ಘಟನೆಗೆ ಖಂಡನೆ ವ್ಯಕ್ತಪಡಿಸಿದೆ. ಕಾಂಗ್ರೆಸ್ ಮತ್ತು ಸಿಪಿಎಂ ನಾಯಕರು, ಚುನಾವಣಾ ಲಾಭಕ್ಕಾಗಿ ಎರಡೂ ಪಕ್ಷಗಳು ಸಮುದಾಯದ ವಿಷ ಬೀಜ ಬಿತ್ತುತ್ತಿರುವುದಾಗಿ ಆರೋಪಿಸಿದ್ದಾರೆ.
ಲಗ್ನಜಿತಾ ಅವರು ಯಾವುದೇ ಸಮುದಾಯ ಆಧಾರಿತ ರಾಜಕೀಯಕ್ಕೆ ಒಳಗಾಗಲು ನಿರಾಕರಿಸಿ, “ನಾನು ಮತ್ತೆ ಈ ಹಾಡನ್ನು ಡಿಸೆಂಬರ್ 26ರಂದು ಅರಂಬಾಗ್‌ನಲ್ಲಿ ಹಾಡುತ್ತೇನೆ. ನನಗೆ ಭಯವಿಲ್ಲ. ವಿಭಜನೆಗೆ ವಿರುದ್ಧವಾಗಿ ಧ್ವನಿ ಎತ್ತುವುದೇ ನನ್ನ ನಿರ್ಧಾರ” ಎಂದು ಸ್ಪಷ್ಟಪಡಿಸಿದರು.
ಪೊಲೀಸರು ತನಿಖೆ ಮುಂದುವರಿದಿದ್ದು, ಆರೋಪಿಯ ವಿರುದ್ಧ ಯಾವ ಆರೋಪಗಳು ಅನ್ವಯವಾಗುತ್ತವೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.









