ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಕೊಲ್ಕತ್ತಾ: ಭಾರತ ಒಂದು ‘ಹಿಂದೂ ರಾಷ್ಟ್ರ’ ಎಂಬುದು ಸತ್ಯವಾಗಿದ್ದು, ಅದಕ್ಕೆ ಸಂವಿಧಾನದ ಅನುಮೋದನೆ ಅಗತ್ಯವಿಲ್ಲ ಎಂದು ರಾಷ್ಟ್ರಿಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಆರ್‌ಎಸ್‌ಎಸ್ ಸ್ಥಾಪನೆಯ 100ನೇ ವರ್ಷದ ಅಂಗವಾಗಿ ಕೊಲ್ಕತ್ತಾದಲ್ಲಿ ನಡೆದ ‘100 ವ್ಯಾಖ್ಯಾನ ಮಾಲಾ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆ. ಅದಕ್ಕೂ ಸಂವಿಧಾನಿಕ ಮಾನ್ಯತೆ ಬೇಕೇ? ಅದೇ ರೀತಿ ಹಿಂದೂಸ್ತಾನ್ ಒಂದು ಹಿಂದೂ ರಾಷ್ಟ್ರ. ಇದು ಸತ್ಯ,” ಎಂದು ಹೇಳಿದರು.
“ಭಾರತವನ್ನು ತಾಯ್ನಾಡಾಗಿ ಒಪ್ಪಿಕೊಂಡು, ಭಾರತೀಯ ಸಂಸ್ಕೃತಿಯನ್ನು ಗೌರವಿಸುವ ಪ್ರತಿಯೊಬ್ಬರೂ ಈ ರಾಷ್ಟ್ರದ ಭಾಗವೇ. ಹಿಂದೂಸ್ತಾನ ಭೂಮಿಯಲ್ಲಿ ಭಾರತೀಯ ಪೂರ್ವಜರ ವೈಭವವನ್ನು ನಂಬಿ ಗೌರವಿಸುವ ಒಬ್ಬರೂ ಇದ್ದರೂ, ಭಾರತ ಹಿಂದೂ ರಾಷ್ಟ್ರವಾಗಿಯೇ ಇರುತ್ತದೆ. ಇದು ಸಂಘದ ಚಿಂತನೆ,” ಎಂದು ಭಾಗವತ್ ಹೇಳಿದರು.
ಭವಿಷ್ಯದಲ್ಲಿ ಸಂಸತ್ತು ಸಂವಿಧಾನದಲ್ಲಿ ‘ಹಿಂದೂ ರಾಷ್ಟ್ರ’ ಎಂಬ ಪದವನ್ನು ಸೇರಿಸಿದರೂ ಸೇರಿಸದಿದ್ದರೂ ಅದರಿಂದ ಏನೂ ವ್ಯತ್ಯಾಸವಿಲ್ಲ ಎಂದು ತಿಳಿಸಿದ ಅವರು, “ನಾವು ಹಿಂದೂಗಳು, ನಮ್ಮ ದೇಶ ಹಿಂದೂ ರಾಷ್ಟ್ರ – ಇದು ವಾಸ್ತವ. ಜನ್ಮಾಧಾರಿತ ಜಾತಿ ವ್ಯವಸ್ಥೆ ಹಿಂದೂತ್ವದ ಲಕ್ಷಣವಲ್ಲ,” ಎಂದು ಸ್ಪಷ್ಟಪಡಿಸಿದರು.
ಭಾರತದ ಸಂವಿಧಾನ ಪ್ರಸ್ತಾವನೆಯಲ್ಲಿ ‘ಸೇಕ್ಯುಲರ್’ ಪದವು ಮೂಲತಃ ಇರಲಿಲ್ಲ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ, 1976ರಲ್ಲಿ ಇಂದಿರಾ ಗಾಂಧಿ ನೇತೃತ್ವದ ಸರ್ಕಾರ 42ನೇ ಸಂವಿಧಾನ ತಿದ್ದುಪಡಿಯ ಮೂಲಕ ‘ಸಾಮ್ಯವಾದಿ’ ಮತ್ತು ‘ಸೇಕ್ಯುಲರ್’ ಪದಗಳನ್ನು ಸೇರಿಸಿತ್ತು ಎಂದು ಭಾಗವತ್ ನೆನಪಿಸಿದರು.
ಇದೇ ವೇಳೆ ಆರ್‌ಎಸ್‌ಎಸ್‌ನ್ನು ‘ಮುಸ್ಲಿಂ ವಿರೋಧಿ’ ಎಂಬ ತಪ್ಪು ಕಲ್ಪನೆ ಇದೆ ಎಂದು ಹೇಳಿದ ಅವರು, ಸಂಘದ ಕಚೇರಿಗಳು ಮತ್ತು ಶಾಖೆಗಳಿಗೆ ಜನರು ಭೇಟಿ ನೀಡಿ ಸಂಘದ ಕಾರ್ಯವೈಖರಿಯನ್ನು ನೇರವಾಗಿ ನೋಡಬೇಕು ಎಂದು ಕರೆ ನೀಡಿದರು.
“ನಾವು ಹಿಂದೂಗಳ ರಕ್ಷಣೆಯ ಪರವಾಗಿ ನಿಲ್ಲುತ್ತೇವೆ, ರಾಷ್ಟ್ರಭಕ್ತರಾಗಿದ್ದೇವೆ. ಆದರೆ ನಾವು ಮುಸ್ಲಿಂ ವಿರೋಧಿಗಳಲ್ಲ. ಯಾರಿಗಾದರೂ ಸಂಶಯವಿದ್ದರೆ, ಸಂಘದ ಕೆಲಸ ಪಾರದರ್ಶಕವಾಗಿದೆ. ಬಂದು ನೋಡಿ. ಅಂಥದ್ದು ಕಂಡರೆ ನಿಮ್ಮ ಅಭಿಪ್ರಾಯ ಇಟ್ಟುಕೊಳ್ಳಿ, ಇಲ್ಲದಿದ್ದರೆ ಬದಲಾಯಿಸಿ,” ಎಂದು ಭಾಗವತ್ ಹೇಳಿದರು.
ಅರ್ಥಮಾಡಿಕೊಳ್ಳಲು ಇಚ್ಛೆಯಿಲ್ಲದವರಿಗೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದ ಅವರು, “ನೋಡಿ ತಿಳಿದ ಬಳಿಕ ಅನೇಕರು ಆರ್‌ಎಸ್‌ಎಸ್ ಹಿಂದೂಗಳನ್ನು ಸಂಘಟಿಸುತ್ತದೆ, ರಾಷ್ಟ್ರಭಕ್ತಿಯ ಪರವಾಗಿದೆ, ಆದರೆ ಮುಸ್ಲಿಂ ವಿರೋಧಿಯಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ತಿಳಿಯಬೇಕೆಂದಿರುವವರು ಬಂದು ನೋಡಬೇಕು,” ಎಂದು ಹೇಳಿದರು.









