ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
ಮುಂದಿನ ವರ್ಷದ ಏಪ್ರಿಲ್ – ಮೇ ತಿಂಗಳಲ್ಲಿ ಸ್ಥಳೀಯ ಸಂಘ – ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ ಎನ್ನುವ ಸಂಕೇತಗಳು ಕಂಡುಬರುತ್ತಿವೆ. ಈ ನಿಟ್ಟಿನಲ್ಲಿ ಈಗಾಗಲೇ ನೂತನವಾಗಿ ಮೇಲ್ದರ್ಜೆಗೇರಿರುವ ಪಟ್ಟಣ ಪಂಚಾಯತ್ ಗಳಾದ ಬಜ್ಪೆ, ಕಿನ್ನಿಗೋಳಿ, ಮಂಕಿಯಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರ ಹಿಡಿಯುವ ಮೂಲಕ ಆ ಪಕ್ಷದ ಮುಖಂಡರಿಗೆ ಹೊಸ ಹುರುಪನ್ನು ನೀಡಿದೆ. ಇದರಿಂದ ಸಹಜವಾಗಿ ಎರಡೂವರೆ ವರ್ಷಗಳ ಬಳಿಕ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಏರುವ ಆಶಾಭಾವ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಲ್ಲಿ ಮೂಡಿದೆ. ಆ ಉತ್ಸಾಹದಲ್ಲಿ ಸ್ವಂತ ಬಲದಲ್ಲಿ
ರಾಜ್ಯದಲ್ಲಿ ಅಧಿಕಾರಕ್ಕೆ ಏರುವ ಬಗ್ಗೆ ವಿಜಯೇಂದ್ರ ಹೇಳಿಕೆ ಕೊಟ್ಟಿದ್ದಾರೆ. ಇದು ಸಹಜವಾಗಿ ಜಾತ್ಯಾತೀತ ಜನತಾದಳದ ಸರ್ವೋಚ್ಚ ನಾಯಕ ದೇವೆಗೌಡರ ಅಸಮಾಧಾನಕ್ಕೆ ಕಾರಣವಾಗಿರುವಂತಿದೆ. ಬಿಜೆಪಿಯ ರಾಜ್ಯಾಧ್ಯಕ್ಷರ ಹೇಳಿಕೆಗೆ ತಮ್ಮ ವಿರೋಧವಿಲ್ಲ ಎಂದು ಹೇಳಿದರಾದರೂ ಅದರೊಂದಿಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಸೆಂಬ್ಲಿ ಹಾಗೂ ಲೋಕಸಭಾ ಚುನಾವಣೆಗೆ ಮಾತ್ರ ಎನ್ನುವ ಮೂಲಕ ಹೊಸದಾಳವನ್ನು ಉರುಳಿಸಿದ್ದಾರೆ. ದೇವೆಗೌಡರು ಹಾಗೆ ಹೇಳುವ ಮೂಲಕ ವಿಜಯೇಂದ್ರ ಲಕ್ಷ್ಮಣ ರೇಖೆಯನ್ನು ದಾಟಿದ್ದಾರೆ ಎಂದು ಪರೋಕ್ಷವಾಗಿ ಸೂಚಿಸಿರುವಂತಿದೆ. ವಿಜಯೇಂದ್ರ ಯಂಗ್ ಸ್ಟರ್, ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿರುವ ದೊಡ್ಡ ಗೌಡರು ಪರೋಕ್ಷವಾಗಿ ರಾಜಕೀಯದ ಅನುಭವ ಕಡಿಮೆ ಎಂದು ಸೂಚಿಸಿದ್ದಾರೆ.
ಅತ್ತ ಕಾಂಗ್ರೆಸ್ಸಿನಲ್ಲಿ ಉಳಿದ ಎರಡೂವರೆ ವರ್ಷಗಳಿಗೆ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯನವರು ಮುಂದುವರೆಯುತ್ತಾರೋ ಅಥವಾ ಡಿಕೆ ಶಿವಕುಮಾರ್ ಅವರಿಗೆ ಪಟ್ಟ ಬಿಟ್ಟುಕೊಡುತ್ತಾರೋ ಎನ್ನುವ ಗೊಂದಲವೇ ತಾರಕಕ್ಕೆ ಏರಿರುವಾಗ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಬಗ್ಗೆ ಹೇಳಿಕೆ ನೀಡುವ ಮಟ್ಟಿಗೆ ಹೋಗುವುದು ಕಾಂಗ್ರೆಸ್ಸಿಗೆ ಆನೆಬಲ ತಂದಂತೆ ಆಗಿದೆ. ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡದೇ ಹೋದರೆ ಅದು ಮುಂದಿನ ದಿನಗಳಲ್ಲಿ ಆಡಳಿತ ಪಕ್ಷಕ್ಕೆ ಹೇಳಿಕೊಂಡು ತಿರುಗಾಡಲು ಒಂದು ಹೊಸ ಅಸ್ತ್ರ ನೀಡಿದಂತೆ ಆಗುತ್ತದೆ. ಇನ್ನು ಯಾವುದೇ ಮೈತ್ರಿ ನಿರ್ದಿಷ್ಟ ಚುನಾವಣೆಗಳಿಗೆ ಮಾತ್ರ ಎಂದು ಹೇಳುವುದು ಹಾಸ್ಯಾಸ್ಪದ. ಹಳೆ ಮೈಸೂರು ಭಾಗದಲ್ಲಿ ಈಗಲೂ ಜೆಡಿಎಸ್ ಗೆ ಪ್ರಬಲ ಶಕ್ತಿ ಇದೆ. ಒಂದು ಕ್ಷೇತ್ರ ಎಂದ ಮೇಲೆ ಅಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯ ಕಾರ್ಯಕರ್ತರು ಪರಸ್ಪರ ವಿರೋಧಿ ಪಾಳಯದಲ್ಲಿ ಇರುತ್ತಾರೆ. ಅಂತವರನ್ನು ಲೋಕಸಭೆ, ವಿಧಾನಸಭಾ ಚುನಾವಣೆಗೆ ಬಹಳ ಕಷ್ಟಪಟ್ಟು ಒಟ್ಟುಗೂಡಿಸಿದ ಪರಿಣಾಮ ಜೆಡಿಎಸ್ ಹಾಗೂ ಬಿಜೆಪಿ ಲೋಕಸಭೆಯಲ್ಲಿ ಒಂದಿಷ್ಟು ಉಸಿರನ್ನು ತೆಗೆದುಕೊಳ್ಳಲು ಸಾಧ್ಯವಾಗಿತ್ತು. ಈಗ ಮತ್ತೇ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರುವಾಗ ನಾವು ಪರಸ್ಪರ ವಿರೋಧಿ ಎಂದು ಹೇಳಿದರೆ ಅಲ್ಲಿ ಪುನ: ಶತ್ರುತ್ವ ಶುರುವಾಗುತ್ತದೆ. ಅವರನ್ನು ಮತ್ತೇ ಒಂದೂವರೆ ವರ್ಷದಲ್ಲಿ ಪುನ: ಒಟ್ಟು ಮಾಡಬೇಕು. ಅದು ಮತ್ತೇ ಕಷ್ಟಸಾಧ್ಯ. ಆಗ ಏನಾಗುತ್ತೆ ಎಂದರೆ ಈ ನಾಯಕರು ತಮಗೆ ಬೇಕಾದಾಗ ಒಂದಾಗುವುದು, ಬೇಡವಾದಾಗ ದೂರ ಹೋಗುವುದು ಎಂದು ಅಂದುಕೊಳ್ಳುವ ಒಂದಿಷ್ಟು ಜನ ತಟಸ್ಥರಾಗುವ ಸಾಧ್ಯತೆ ಇದೆ. ಕಾಂಗ್ರೆಸ್ಸಿನ ಸಿಂಹಾಸನದ ಗೊಂದಲದ ನಡುವೆ ರಾಜಾಧ್ಯಕ್ಷರ ಅತೀ ಉತ್ಸಾಹದ ಹೇಳಿಕೆ “ಬಿಜೆಪಿ ಸ್ವಂತ ಶಕ್ತಿಯ ಮೇಲೆ 130 ರಿಂದ 140 ಸ್ಥಾನಗಳನ್ನು ಗೆಲ್ಲಲಿದೆ” ಎಂದು ಹೇಳಿರುವುದು ಬಿಜೆಪಿಗೆ ಉಲ್ಟಾ ಹೊಡೆಯುವ ಸಾಧ್ಯತೆ ಇದೆ. ಈಗ ಮತ್ತೇ ದೇವೆಗೌಡರನ್ನು ಒಲಿಸಿ, ಮೈತ್ರಿ ಎಲ್ಲಾ ಕಡೆ ಇದೆ ಎಂದು ತೋರಿಸಿಕೊಡುವ ಅವಶ್ಯಕತೆ ಬಿಜೆಪಿಗೆ ಇದೆ. ಆದರೆ ಒಮ್ಮೆ ಕನ್ನಡಿ ಹೋದರೆ ತೇಪೆ ಹಾಕುವುದು ಕಷ್ಟ.
ಅತ್ತ ಪ್ರಧಾನಿ ಮೋದಿಯವರು ದೇವೆಗೌಡರನ್ನು ಕ್ಷಣಕ್ಷಣಕ್ಕೂ ಖುಷಿಯಾಗಿರುವಂತೆ ನೋಡಿಕೊಳ್ಳುತ್ತಿದ್ದರೆ ಇಂತಹ ವಿಜಯೇಂದ್ರ ಹೇಳಿಕೆ ಹೈಕಮಾಂಡಿಗೆ ಬಿಸಿತುಪ್ಪವಾಗಿದೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ “ಕೇಂದ್ರ ಸರಕಾರದಲ್ಲಿ ಜೆಡಿಎಸ್ ಜೊತೆ ನಮ್ಮ ಹೊಂದಾಣಿಕೆ ಇದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯ ವಿಚಾರದಲ್ಲಿ ಯಾವುದೇ ಗೊಂದಲ ಇರಬಾರದು. ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿ ಸೇರಿದಂತೆ ಎಲ್ಲರ ಜೊತೆ ಸೇರಿ ಚರ್ಚಿಸುತ್ತೇವೆ” ಎಂದು ಹೇಳಿದ್ದಾರೆ.









