ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
ಬಾಲಿವುಡ್ ನಟಿ ನುಶ್ರತ್ ಭರುಚ್ಚಾ ಅವರು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಪ್ರಸಿದ್ಧ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಭಾರೀ ವಿವಾದಕ್ಕೆ ಗುರಿಯಾಗಿದ್ದಾರೆ. ಉತ್ತರ ಪ್ರದೇಶದ ಬರೇಲಿ ಮೂಲದ ಮೌಲಾನಾ ಶಹಾಬುದ್ದೀನ್ ರಜ್ವಿ ಅವರು, ನುಶ್ರತ್ ಅವರ ದೇವಾಲಯದ ಪೂಜೆ ಹಾಗೂ ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಂಡಿರುವುದನ್ನು ‘ಹರಾಂ’ ಹಾಗೂ ಇಸ್ಲಾಮಿಕ್ ಶರೀಯತ್ ಪ್ರಕಾರ ‘ಮಹಾ ಪಾಪ (ಗುನಾ-ಎ-ಅಜೀಮ್)’ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ನಟಿಯ ವಿರುದ್ಧ ಫತ್ವಾವನ್ನೂ ಹೊರಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಫೋಟೋ ಹಾಗೂ ವೀಡಿಯೋಗಳಲ್ಲಿ, ನುಶ್ರತ್ ಭರುಚ್ಚಾ ಅವರು ಭಸ್ಮಾರತಿ ಪೂಜೆಯಲ್ಲಿ ಭಾಗವಹಿಸಿ, ಜಲಾಭಿಷೇಕ ಸಲ್ಲಿಸಿ, ದೇವಾಲಯದ ಚಾದರವನ್ನು ಸ್ವೀಕರಿಸುತ್ತಿರುವುದು ಕಂಡುಬಂದಿದೆ. ಈ ಕ್ಷಣಗಳನ್ನು ನಟಿ “ಅತೀವ ಸುಂದರ ಹಾಗೂ ಆತ್ಮೀಯ ಅನುಭವ” ಎಂದು ವರ್ಣಿಸಿದ್ದಾರೆ. ಅಲ್ಲದೆ, ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ “ಜೈ ಮಹಾಕಾಲ್” ಎಂಬ ಬರಹವನ್ನೂ ಅವರು ಹಂಚಿಕೊಂಡಿದ್ದರು.
ತಮ್ಮ ಎರಡನೇ ಮಹಾಕಾಳೇಶ್ವರ ಭೇಟಿ ಕುರಿತು ಮಾತನಾಡಿದ ನುಶ್ರತ್, “ಭಕ್ತರಿಗೆ ಇಲ್ಲಿ ಸಣ್ಣಸಣ್ಣ ವಿಷಯಗಳಿಗೂ ಹೆಚ್ಚಿನ ಗಮನ ನೀಡಲಾಗುತ್ತದೆ. ಹೊಸ ವರ್ಷಕ್ಕೂ ಮುನ್ನ ಆಶೀರ್ವಾದ ಪಡೆಯಲು ಅನೇಕರು ಬಂದಿದ್ದಾರೆ. ನಾನು ಪ್ರತಿವರ್ಷ ಇಲ್ಲಿಗೆ ಬರುವ ಯೋಜನೆ ಮಾಡಿದ್ದೇನೆ” ಎಂದು ಹೇಳಿದ್ದಾರೆ.
ಆದರೆ, ಆಲ್ ಇಂಡಿಯಾ ಮುಸ್ಲಿಂ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷರಾದ ಮೌಲಾನಾ ಮುಫ್ತಿ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು, “ಇತರೆ ಧರ್ಮಗಳ ಪೂಜಾ ಸ್ಥಳಗಳಿಗೆ ಭೇಟಿ ನೀಡುವುದರಲ್ಲಿ ತಪ್ಪಿಲ್ಲ, ಆದರೆ ಮೂರ್ತಿ ಪೂಜೆ ಹಾಗೂ ಇತರೆ ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸುವುದು ಒಬ್ಬ ಮುಸ್ಲಿಂನಿಗೆ ಶರೀಯತ್ ಪ್ರಕಾರ ಅನುಮತಿಸಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ. ನುಶ್ರತ್ ಅವರು ತಿಲಕ ಧರಿಸಿ ಭಸ್ಮಾರತಿ, ಜಲಾರ್ಪಣೆ ಮಾಡಿದುದು ಧಾರ್ಮಿಕ ಮಿತಿಯನ್ನು ಮೀರಿದೆ ಎಂದು ಅವರು ಹೇಳಿದ್ದಾರೆ.
“ನನಗೆ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರವಿಲ್ಲ. ನಾನು ಕೇವಲ ಧಾರ್ಮಿಕ ಮಾರ್ಗದರ್ಶನ ನೀಡಬಲ್ಲೆ. ಅವರು ತೌಬಾ (ಪಶ್ಚಾತ್ತಾಪ) ಮಾಡಿ ಕಲ್ಮಾ ಪಠಿಸಿ ಅಲ್ಲಾಹನ ಕ್ಷಮೆ ಯಾಚಿಸಬೇಕು” ಎಂದು ರಜ್ವಿ ಹೇಳಿದ್ದಾರೆ. ಈ ಫತ್ವಾ ಕಾನೂನುಬದ್ಧ ಆದೇಶವಲ್ಲ, ಕೇವಲ ಧಾರ್ಮಿಕ ಅಭಿಪ್ರಾಯ ಮಾತ್ರ ಎನ್ನುವುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.
ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಹಲವರು ಇದನ್ನು “ಧರ್ಮದ ಹೆಸರಿನ ನಿಗಾವಹಣೆ” ಹಾಗೂ “ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ದಾಳಿ” ಎಂದು ಟೀಕಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಜ್ವಿ, ಟೀಕೆಗಳಿಂದ ತಮಗೆ ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳಿದ್ದು, ಈ ವಿಚಾರದಲ್ಲಿ ತಾವು ಧಾರ್ಮಿಕ ನಾಯಕನಾಗಿ ಮಾತನಾಡಿದ್ದೇನೆ ಎಂದಿದ್ದಾರೆ. “ನುಶ್ರತ್ ಒಳ್ಳೆಯ ಮುಸ್ಲಿಂ ಆಗಿದ್ದರೆ ನನ್ನ ಮಾತು ಕೇಳುತ್ತಾರೆ; ಇಲ್ಲವೇ ನಿರ್ಲಕ್ಷಿಸಬಹುದು” ಎಂದು ಅವರು ಹೇಳಿದ್ದಾರೆ.

ನುಶ್ರತ್ ಭರುಚ್ಚಾ ಯಾರು?
ನುಶ್ರತ್ ಭರುಚ್ಚಾ ಅವರು 17 ಮೇ 1985 ರಂದು ಮುಂಬೈನಲ್ಲಿ ದಾವೂದಿ ಬೊಹ್ರಾ ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ತಂದೆ ತನ್ವೀರ್ ಭರುಚ್ಚಾ ಹಾಗೂ ತಾಯಿ ತಸ್ನೀಮ್ ಭರುಚ್ಚಾ. 16ನೇ ವಯಸ್ಸಿನಲ್ಲಿ, 2002ರಲ್ಲಿ ಅವರು ಅಭಿನಯ ಜೀವನ ಆರಂಭಿಸಿದರು. 2010ರಲ್ಲಿ ದಿಬಾಕರ್ ಬ್ಯಾನರ್ಜಿ ನಿರ್ದೇಶನದ LSD: Love, Sex Aur Dhokha ಚಿತ್ರದ ಮೂಲಕ ಪ್ರಮುಖ ಬ್ರೇಕ್ ಪಡೆದರು. ಪ್ಯಾರ್ ಕಾ ಪಂಚನಾಮಾ, ಸೋನು ಕೇ ಟಿಟು ಕಿ ಸ್ವೀಟಿ, ಡ್ರೀಮ್ ಗರ್ಲ್ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.









