ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ…
ಇದೊಂದು ಬಾಕಿ ಇತ್ತು. ಪರಿಸ್ಥಿತಿ ಹೀಗೆ ಮುಂದುವರೆದರೆ ಇನ್ನು ಅದ್ಯಾವ ಮಟ್ಟಕ್ಕೆ ನಮ್ಮ ದೈವಾರಾಧನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ ರಾಡಿ ಮಾಡಲಾಗುತ್ತದೆಯೋ ಎನ್ನುವ ಆತಂಕ ದೈವರಾಧಕರಲ್ಲಿ ಕಾಣಿಸುತ್ತಿದೆ. ಯಾಕೆಂದರೆ ಕೊರಗಜ್ಜ ಎನ್ನುವ ಸಿನೆಮಾವನ್ನು ಬೆಳ್ಳಿತೆರೆಗೆ ತರಲು ಹೊರಟಿರುವ ಅದರ ನಿರ್ಮಾಪಕರು ಕೊಟ್ಟಿರುವ ಆಫರ್ ಹಾಗೆ ಇದೆ. ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಹಂಚಿಕೊಂಡವರಿಗೆ ಕೋಟಿ ರೂಪಾಯಿ ಬಹುಮಾನದ ಆಫರ್ ಅನ್ನು ಚಿತ್ರತಂಡ ನೀಡಿದೆ. ಚೆನ್ನಾಗಿ ರೀಲ್ಸ್ ಮಾಡಿ, ಹಂಚಿಕೊಂಡು, ಅದರಲ್ಲಿ ಚಿತ್ರತಂಡ ಆಯ್ಕೆ ಮಾಡಿದವರಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಬಂದಿದೆ. ಆದರೆ ಇದಕ್ಕೆ ದೈವ ನರ್ತಕರಿಂದ ಆಕ್ರೋಶ ವ್ಯಕ್ತವಾಗಿದೆ.

ಒಂದು ವೇಳೆ ನೆಗೆಟಿವ್ ಪಬ್ಲಿಸಿಟಿ ಕೂಡ ಜನರನ್ನು ಸಿನೆಮಾದ ಕಡೆ ಆಕರ್ಷಿಸಬಹುದು ಎಂದು ಚಿತ್ರತಂಡ ಅಂದುಕೊಂಡಿದ್ದರೆ ಅದು ಕರಾವಳಿಯಲ್ಲಿ ಸಾಧ್ಯಾನಾ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕು.
ಸುಧೀರ್ ಅತ್ತಾವರ್ ನಿರ್ದೇಶನದ ‘ಕೊರಗಜ್ಜ’ ಸಿನಿಮಾದ ಹಾಡುಗಳು ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾದ ಹಾಡುಗಳಿಗೆ ರೀಲ್ಸ್ (Reels) ಮಾಡಿ ಹಂಚಿಕೊಂಡವರಿಗೆ ಕೋಟಿ ರೂಪಾಯಿ ಬಹುಮಾನದ ಆಫರ್ ಅನ್ನು ಚಿತ್ರತಂಡ ನೀಡಿದೆ.
ʻಕಾಂತಾರʼ ಸಿನಿಮಾದಲ್ಲಿ ದೈವ ವಿಡಂಬನೆ ಕುರಿತು ಸಾಕಷ್ಟು ಜನ ದೈವದ ವೇಷಭೂಷಣ ಹಾಕಿಕೊಂಡು ಸಿಕ್ಕಸಿಕ್ಕಲ್ಲಿ ರೀಲ್ಸ್ ಮಾಡುತ್ತಾ ದೈವಗಳಿಗೆ ಅಪಮಾನ ಮಾಡಿದ್ದರು. ಇದೀಗ ತುಳುನಾಡಿನ ಆರಾಧ್ಯ ದೈವವಾಗಿರುವ ಕೊರಗಜ್ಜನ ಕುರಿತು ರೀಲ್ಸ್ ಮಾಡಿ ಹೆಚ್ಚು ಲೈಕ್ಸ್, ವೀವ್ಸ್ ಗಳಿಸಿದವರಿಗೆ ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಹೇಳಿರುವುದು ಖಂಡನೀಯವಾಗಿದೆ. ಈ ತಪ್ಪು ಮುಂದುವರಿದ್ರೆ, ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ದೈವದ ಮೊರೆ ಹೋಗುವುದಾಗಿ ದೈವ ನರ್ತಕರ ಸಂಘದ ಪ್ರಮುಖರು ಹೇಳಿದ್ದಾರೆ.









