ಹಾವು-ಏಣಿ ಆಟ ಆಡುವುದರಿಂದಲೂ ಸಭ್ಯ ನಾಗರಿಕರಾಗಬಹುದು!
Special Coverage from Belgavi:
ನೀನು ಎಷ್ಟು ಹಣ ಗಳಿಸಿದ್ದಿ ಎನ್ನುವುದರ ಮೇಲೆ ನಿನ್ನನ್ನು ಪ್ರಪಂಚ ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ. ನೀನು ಎಷ್ಟು ತ್ಯಾಗ ಮಾಡಿದ್ದಿ ಎನ್ನುವುದರ ಮೇಲೆ ನಿನ್ನ ಹೆಸರು ನಿನ್ನ ನಂತರವೂ ಉಳಿಯುತ್ತದೆ. ಅದಕ್ಕೆ ಕೌಶಿಕ ಮಹಾರಾಜ ತನ್ನ ಬದುಕಿನ ಅಷ್ಟು ಸುಖ ಸಾಮ್ರಾಜ್ಯವನ್ನು ಬಿಟ್ಟು ಬ್ರಹ್ಮಜ್ಞಾನ ಪಡೆಯಲು ಹೊರಟನಲ್ಲ ಅದು ಮುಖ್ಯ. ಶ್ರೀರಾಮಚಂದ್ರ ಪಟ್ಟಾಭಿಷೇಕನಾಗುವ ಹಿಂದಿನ ತಂದೆಯ ಮಾತಿಗೆ ಗೌರವ ಕೊಟ್ಟು ಕಾಡಿಗೆ ಹೋದನಲ್ಲ ಅದು ಶ್ರೇಷ್ಟ, ಎಲ್ಲಕ್ಕಿಂತ ತನ್ನ ಗಂಡನನ್ನು ಶ್ರೀರಾಮನೊಂದಿಗೆ ಕಳುಹಿಸಿಕೊಟ್ಟು ಅದರ ಮೇಲೆ ನಿದ್ರಾದೇವಿಯ ಷರತ್ತಿನಂತೆ ಗಂಡನ ನಿದ್ರೆಯನ್ನು ಕೂಡ ಹೊಂದಲು ಒಪ್ಪಿ 14 ವರ್ಷ ಕಳೆದಳಲ್ಲ, ಅದು ಎಲ್ಲಕ್ಕಿಂತ ಮಿಗಿಲು. ಅದು ತ್ಯಾಗ, ಅದು ಭಾರತ, ಹೀಗೆ ಹೇಳುತ್ತಾ ಹೋಗುತ್ತಾರೆ ಚಕ್ರವರ್ತಿ ಸೂಲಿಬೆಲೆ.
ಪ್ರತಿ ಐದಾರು ನಿಮಿಷಕ್ಕೊಮ್ಮೆ ಮೈ ಜುಂ ಆಗುವಂತೆ ಹೋಗುವುದೇ ನರೇಂದ್ರ ಭಾರತ. ಅದು ಚಕ್ರವರ್ತಿ ಸೂಲಿಬೆಲೆಯವರಿಗೆ ಮಾತ್ರ ಒಲಿದಿದೆ. ಇವತ್ತು ನಾವು ಮರಾಠ ಸಾಮ್ರಾಜ್ಯದ ಹೆಸರು ಕೇಳಿದ ತಕ್ಷಣ ಅದನ್ನು ಕಟ್ಟಿದ್ದು ಶಿವಾಜಿ ಮಹಾರಾಜ್ ಎನ್ನುತ್ತೇವೆ. ಆದರೆ ವಾಸ್ತಾವಂಶದಲ್ಲಿ ಮರಾಠ ಸಾಮ್ರಾಜ್ಯ ಕಟ್ಟಿದ್ದು ಸಮರ್ಥ ರಾಮದಾಸರು. ಅದನ್ನು ಮುಂದೊಂದು ದಿನ ಶಿವಾಜಿ ತನಗೆ ಯಾವುದೂ ಬೇಡವೆಂದು ನಿರ್ಧರಿಸಿ ಅವರ ಜೋಳಿಗೆಗೆ ದಾನಪತ್ರವಾಗಿ ಹಾಕಿದ. ಅದನ್ನು ವಿನಮ್ರತೆಯಿಂದ ಸ್ವೀಕರಿಸಿದ ಸಮರ್ಥ ರಾಮದಾಸರು ಸರಿ, ಇವತ್ತಿನಿಂದ ನೀನು ಈ ಸಾಮ್ರಾಜ್ಯವನ್ನು ಮುನ್ನಡೆಸಬೇಕು ಎಂದು ಆದೇಶಿಸಿ ನಿನಗೆ ಇದನ್ನು ಒಪ್ಪಿಸುತ್ತೇನೆ ಎಂದು ಹೇಳಿ ಹಾಗೆ ಹಿಂದಿರುಗಿಸಿದರಲ್ಲ, ಇದಲ್ವಾ ನಮ್ಮ ರಾಷ್ಟ್ರ ಕಂಡ ತ್ಯಾಗ. ಹಾಗೆ ಚಂದ್ರಗುಪ್ತ ಮೌರ್ಯ, ವಿದ್ಯಾರಣ್ಯ, ಕೃಷ್ಣದೇವರಾಯ, ಚಾಣಕ್ಯ ಹೀಗೆ ಇತಿಹಾಸ ಕಂಡ ತ್ಯಾಗಗಳಿಗೆ ಉದಾಹರಣೆ ಕೊಡುತ್ತಾ ಹೋಗುತ್ತಾರೆ.
ಹಾಗೆ ನಡುನಡುವೆ ಬದುಕಿನಲ್ಲಿ ತಮ್ಮ ತ್ಯಾಗ, ನಿಸ್ವಾರ್ಥ ಸೇವೆಯಿಂದ ಸಮಾಜಕ್ಕೆ ಉದಾತ್ತ ಕೊಡುಗೆ ನೀಡುತ್ತಿರುವ ಪುರುಷರನ್ನು, ಮಹಿಳೆಯರನ್ನು ಪರಿಚಯಿಸುತ್ತಾ ಹೋಗುತ್ತಾರೆ ಚಕ್ರವರ್ತಿ. ಈ ನಡುವೆ 4 ನಿಮಿಷ 47 ಸೆಕೆಂಡ್ ಗಳಲ್ಲಿ 108 ಬಾರಿ ಗರಡಿಮನೆ ಶೈಲಿಯಲ್ಲಿ ಸೂರ್ಯ ನಮಸ್ಕಾರ ಹಾಕುವ ಮೂಲಕ ನಿರಂಜನ್ ಮಾಡಿದ ಸಾಧನೆಯನ್ನು ಗೆಜೆಟೆಡ್ ಆಫೀಸರ್ಸ್ ಎದುರು ಪ್ರದರ್ಶಿಸಿ ನೆರೆದ ಜನ ಎದ್ದು ಜಯಕಾರ ಹಾಕುವಂತೆ ಮಾಡಿತು. ಕುಬ್ಜರಾಗಿದ್ದರೂ ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಕುಬ್ಜರ ಒಲಿಂಪಿಕ್ ನಲ್ಲಿ ಅತ್ಯಧಿಕ ಚಿನ್ನದ ಪದಕಗಳನ್ನು ಗಳಿಸಿದ ಕುಬ್ಜ ಸಾಧಕರು, ಚೇತನ್ ಹಾಡಿರುವ ಮೇರೆ ವತನ್ ಹಾಡಿಗೆ ಜನ ಕುಣಿದರು. ದಿವ್ಯಾಂಗ ಅಂಧ ಮಕ್ಕಳು ವಂದೇ ಮಾತರಂ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದ್ದು, ಒಳ್ಳೆಯ ಉದ್ಯೋಗದಲ್ಲಿ ಇದ್ದಾಗ ಅದನ್ನು ಬಿಟ್ಟು ಮಕ್ಕಳಿಗೆ ದೇಶದ ಸಂಸ್ಕೃತಿಯ ಪರಿಚಯ ಪಡುವ ಆಟಿಕೆ ತಯಾರಿಸುವ ಪವಿತ್ರ-ರುದ್ರೇಶ್ ದಂಪತಿಗಳ ಸಾಧನೆ, ಎಚ್ ಐವಿ ಎನ್ನುವ ಕಾಯಿಲೆ ವಿರುದ್ಧ ಹೋರಾಡಿ 30 ಅನಾಥ ಮಕ್ಕಳಿಗೆ ಬದುಕಿಗೆ ಆಶಾದೀಪವಾಗಿರುವ ನಾಗರತ್ನ, ಸಾವು ಬದುಕಿನ ಹೋರಾಟದಲ್ಲಿ ಸಾವಿನತ್ತ ಮುಖ ಮಾಡುತ್ತಿರುವ ಮಕ್ಕಳಿಗೆ ಕೃಷ್ಣ ರಾಧೆಯ ವೇಷ ಹಾಕಿ ಸಂಭ್ರಮಿಸುವ ಯುವಕರು, ಬುದ್ಧಿಮಾಂದ್ಯ ಮಕ್ಕಳಿಗೆ ಭರತನಾಟ್ಯ ಕಲಿಸಿ ವೇದಿಕೆಯಲ್ಲಿ ಪ್ರದರ್ಶಿಸಲು ತಯಾರು ಮಾಡಿಕೊಟ್ಟ ಹಾಗೆ ನಿಸ್ವಾರ್ಥಕ್ಕಾಗಿ ಈ ಕಾರ್ಯಕ್ರಮದಲ್ಲಿ ಶ್ರಮಿಸುತ್ತಿರುವ ಹರ್ಶಿತಾ, ಯುವಕ, ಯುವತಿಯರನ್ನು ಚಕ್ರವರ್ತಿ ಪರಿಚಯಿಸುತ್ತಾ ಹಾಗೆ ಹಾಗೆ ತರುಣ, ತರುಣಿಯರು ಬರೆದ ದೇಶಭಕ್ತರ ಪುಸ್ತಕಗಳನ್ನು ಅನಾವರಣ ಮಾಡುತ್ತಾರೆ. ಇಂಜಿನಿಯರ್ ದಂಪತಿಗಳಿಬ್ಬರು ಎರಡು ಆಟಗಳನ್ನು ತಯಾರು ಮಾಡಿದ್ದಾರೆ. ಹ್ಯಾರಿಪಾಟರ್ ಆಟದ ನಡುವೆ ದೇಶದ ಸಂಸ್ಕೃತಿಯನ್ನು ಮರೆಯುತ್ತಿದ್ದ ಮಕ್ಕಳಿಗೆ ರಾಮಾಯಣ, ಮಹಾಭಾರತವನ್ನು ಆಟದ ಮೂಲಕ ಹಾಗೆ ಹಾವು ಏಣಿ ಆಟದ ಮೂಲಕ ನಾವು ಸಮಾಜವನ್ನು ಸುಧಾರಿಸಬಹುದು. ಇದನ್ನು ಚಕ್ರವರ್ತಿ ರುದ್ರೇಶ್-ಪವಿತ್ರ ದಂಪತಿಗಳನ್ನು ಕರೆಸಿ ವಿವರಿಸಿದ್ದು ನಿಜಕ್ಕೂ ತಂತ್ರಜ್ಞಾನ ಅಥವಾ ಸಿಂಪಲ್ ಆಟದಿಂದಲೂ ಕಲಿಯುವುದು ತುಂಬಾ ಇದೆ ಎಂದು ತೋರಿಸಿದಂತಾಯಿತು.
ಒಟ್ಟಿನಲ್ಲಿ ತ್ಯಾಗ, ಬಲಿದಾನ ಮತ್ತು ನಿಸ್ವಾರ್ಥ ಜೀವನ ಭಾರತದ ಹಿನ್ನಲೆ ಎಂದು ವಿವರಿಸುತ್ತಾ ಪ್ರತಿ ಐದು ನಿಮಿಷಗಳಿಗೊಮ್ಮೆ ಮೈರೋಮಾಂಚನ ಮಾಡುತ್ತಾ ಚಕ್ರವರ್ತಿ ಸೂಲಿಬಲೆ ನರೇಂದ್ರ ಭಾರತದ ವೈಭವವನ್ನು ತೆರೆಯುತ್ತಾ ಹೋದದ್ದು ಬೆಳಗಾವಿಯ ಜನ ಮಾತ್ರವಲ್ಲ ರಾಜ್ಯದ ಬೇರೆ ಬೇರೆ ಕಡೆಯಿಂದ ಬಂದ ಜನರನ್ನು ಮಂತ್ರಮುಗ್ಧರನ್ನಾಗಿಸಿದಕ್ಕೆ ಬೆಳಗಾವಿಯ ಕೆಎಲ್ ಇ ಸಭಾಂಗಣ ಸಾಕ್ಷಿಯಾಯಿತು. ಸೆಪ್ಟೆಂಬರ್ 10 ರಂದು ಕುಂದನಗರಿಯಲ್ಲಿ ಸೂರ್ಯ ಮುಳುಗುತ್ತಿದ್ದಂತೆ ಪ್ರಾರಂಭವಾದ ನರೇಂದ್ರ ಭಾರತ ಮುಗಿದಾಗ ಸಮಯ ಹೋದದ್ದೇ ಗೊತ್ತಾಗಲಿಲ್ಲ!
Leave A Reply