ಸಿದ್ದರಾಮಯ್ಯನವರೇ 17 ಜನರಿಗೆ ರಕ್ಷಣೆ ನೀಡಿದರೆ ಸಾಮಾನ್ಯರ ಗತಿಯೇನು?
ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ನೆಪದಲ್ಲಿ ರಾಜ್ಯದಲ್ಲಿ ವಿಚಾರವಾದಿಗಳ ಹತ್ಯೆ ನಿರಂತರವಾಗಿ ನಡೆಯುತ್ತಿದೆ ಎಂದು ಎಂದು ಬೊಬ್ಬೆ ಹಾಕು ರಾಜ್ಯ ಸರಕಾರ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ವಿಫಲವಾಗಿದೆ. ಅದೇ ನೆಪದಲ್ಲಿ ಪ್ರಗತಿಪರ ಚಿಂತಕರು ಎನ್ನುವ ಜ್ಞಾನಪೀಠ ಸಾಹಿತಿ ಗಿರೀಶ್ ಕಾರ್ನಾಡ್, ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿ 17 ಜನರಿಗೆ ಭದ್ರತೆ ಒದಗಿಸಲು ನಿರ್ಧರಿಸಿದೆ. ಹೌದು ಅವರೆಲ್ಲರೂ ವಿಚಾರವಾದಿಗಳು, ಚಿಂತಕರು ಅವರಿಗೆ ರಕ್ಷಣೆ ನೀಡಲೇ ಬೇಕು. ಆದರೆ ರಾಜ್ಯದಲ್ಲಿರುವ ಪ್ರತಿಯೊಬ್ಬರ ಪ್ರಾಣವೂ ಮುಖ್ಯವಲ್ಲವೇ? ಎಂಬ ಪ್ರಶ್ನೆಗೆ ಸರಕಾರ ಉತ್ತರಿಸಲೇ ಬೇಕು.
ರಾಜ್ಯದಲ್ಲಿ ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ನಂತರ 12 ಹಿಂದೂ ಕಾರ್ಯಕರ್ತರ ಹತ್ಯೆಗಳಾಗಿವೆ ಅವರಿಗೆ ರಕ್ಷಣೆಯ ಜವಾಬ್ದಾರಿ ನೀಡುವುದು ಸರಕಾರದ ಕರ್ತವ್ಯವಲ್ಲವೇ. ಹಾಗಂತ ಪ್ರತಿ ವ್ಯಕ್ತಿಗೂ ಒಬ್ಬ ಪೊಲೀಸ್ ಪೇದೆಯನ್ನು ನೇಮಿಸಲು ಆಗಲ್ಲ. ಆದರೆ ಇಡೀ ರಾಜ್ಯದ ಜನರ ರಕ್ಷಣೆಗೆ ರಾಜ್ಯ ಸರಕಾರ ಆದ್ಯತೆ ನೀಡಬೇಕಲ್ಲವೇ. ಕೇವಲ ತಮ್ಮ ಸರಕಾರದ ಪರ ಬಹುಪರಾಕ್ ಹೇಳುವ ಬಟ್ಟಂಗಿಗಳಿಗೆ ರಕ್ಷಣೆ ನೀಡುವುದು ಮಾತ್ರ ಸರಕಾರದ ಗುರಿಯಾಗಿರಬಾರದಲ್ಲವೇ?.
ಇನ್ನು ಪ್ರತ್ಯೇಕ ಧರ್ಮಕ್ಕಾಗಿ ಹೋರಾಡುತ್ತಿರುವ ಸಚಿವ ಎಂ.ಬಿ.ಪಾಟೀಲ್ ಅವರೇ ಹೇಳಿದ್ದಾರೆ ‘ನನಗೆ ರಕ್ಷಣೆ ನೀಡಿ ಎಂದು ಸರಕಾರಕ್ಕೆ ನಾನು ಬೇಡಿಕೊಂಡಿಲ್ಲ’ ಎಂದು. ಹಾಗಾದರೆ ಸರಕಾರ ಯಾವ ಉದ್ದೇಶದಿಂದ ಬರಗೂರು ರಾಮಚಂದ್ರಪ್ಪ, ಪಾಟೀಲ್ ಪುಟ್ಟಪ್ಪ, ಚನ್ನವೀರ ಕಣವಿ, ನಿಡುಮಾಮಿಡಿ ಸ್ವಾಮೀಜಿ, ಭಗವಾನ್, ಬಿ.ಟಿ.ಲಲಿತಾನಾಯಕ್, ಜಾಮದಾರ್ ಅವರಿಗೆ ರಕ್ಷಣೆ ನೀಡುತ್ತಿದೆ.
ಅವರ ಪ್ರಾಣಕ್ಕೆ ಕುತ್ತು ಇದೆ ಎಂದು ಯಾವ ಗುಪ್ತ ಮಾಹಿತಿ ಸರಕಾರಕ್ಕೆ ದೊರೆಯುತೋ ತಿಳಿಯದು. ಇವರೆಲ್ಲರೂ ಚಿಂತಕರು, ಹೋರಾಟಗಾರರು ಎಂದು ಭದ್ರತೆ ಒದಗಿಸಿದ್ದು ಸೂಕ್ತ. ಅದರ ಜತೆಗೆ ರಾಜ್ಯ ಸರಕಾರ ರಾಜ್ಯದ ಪ್ರತಿ ನಾಗರಿಕನ ರಕ್ಷಣೆ ಕುರಿತು ದೂರದೃಷ್ಟಿಯ ಯೋಜನೆಗಳನ್ನು ಕೈಗೊಳ್ಳಬೇಕು. ಅದೆಲ್ಲವನ್ನು ಬಿಟ್ಟು ಕೇವಲ ಹೊಗಳು ಬಟ್ಟರನ್ನು ರಕ್ಷಿಸಿ, ಅದೇನು ಸಾಧಿಸಲು ಹೊರಟಿದ್ದೀರಿ ಎಂಬುದು ತಿಳಿಯದಷ್ಟು ಮುಗ್ದರಲ್ಲ ಜನರು.
ನಿರಂತರವಾಗಿ ಹಿಂದೂ ಕಾರ್ಯಕರ್ತರ ಹೆಣ ಬೀಳುತ್ತಿದ್ದರು, ಹಲವು ಕೊಲೆಗಳಲ್ಲಿ ಮುಸ್ಲಿo ಮೂಲಭೂತ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂದು ತನಿಖೆಯಲ್ಲಿ ತಿಳಿದು ಬಂದರೂ ಮುಗ್ಗುಂಮಾಗಿರುವ ಸಿದ್ದರಾಮಯ್ಯ ಗೌರಿ ಲಂಕೇಶ ಹತ್ಯೆ ಆದ ತಕ್ಷಣ ಉಳಿದ ವಿಚಾರವಾದಿಗಳಿಗೆ ರಕ್ಷಣೆ ನೀಡುವ ಮೂಲಕ ಪರೋಕ್ಷವಾಗಿ ಗೌರಿ ಹತ್ಯೆಯನ್ನು ವಿಚಾರವಾದಿಗಳ ವಿರೋಧಿಗಳೇ ಮಾಡಿದ್ದಾರೆ ಎಂಬಂತೆ ಬಿಂಬಿಸಲು ಹೊರಟಂತಿದೆ. ಇನ್ನು ಕೊಲೆ, ಮರಣ, ಅಂತ್ಯ ಸಂಸ್ಕಾರ ಸೇರಿ ಹಲವು ವಿಷಯಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೋರಿದ ಅತಿ ಕಾಳಜಿ, ಅವರ ತನಿಖೆಯಲ್ಲಿ ಕಾರಣದಿರುವುದು ಇದೇ ವಿಷಯವನ್ನು ಚುನಾವಣೆವರೆಗೆ ಮುಂದುವರಿಸಿಕೊಂಡು ಹೋಗುವ ದೂರಾಲೋಚನೆಯೂ ಇದ್ದಂತೆ ಭಾಸವಾಗುತ್ತಿದೆ.
ಇನ್ನು ಮಂಗಳೂರಿನಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ನಡೆಸುವ ಸೌಹಾರ್ದ ಸಮಾವೇಶಕ್ಕೆ ಸಕಲ ರಕ್ಷಣೆ ಒದಗಿಸುವ ಸರಕಾರ, ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಕೊಲೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಾಗಿಯಾಗಿರುವ ಕೆಎಫ್‌ಡಿ, ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಲು ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಕೈಗೊಂಡ ಹೋರಾಟವನ್ನು ಹತ್ತಿಕ್ಕುವ ದೂರ್ತತನವನ್ನು ಪ್ರದರ್ಶಿಸಿದ್ದೀರಿ. ಇಂತಹ ನಡೆಗಳಲ್ಲವೇ ತಮ್ಮ ರಕ್ಷಣಾ ನೀತಿಯ ‘ಎಡ’ಬಿಡಂಗಿತನಕ್ಕೆ ಸಾಕ್ಷಿ.
ತನ್ನ ದೂರಾಲೋಚನೆ, ದುಷ್ಟಾಲೋಚನೆಗಳ ಮಧ್ಯೆ ಸರಕಾರ ವಿಚಾರವಾದಿಗಳ ರಕ್ಷಣೆ ಜತೆ ಜತೆಗೆ ರಾಜ್ಯಸರಕಾರ ಸಾಮಾನ್ಯರೂ, ಹಿಂದೂ ಕಾರ್ಯಕರ್ತರನ್ನು ಗಮನದಲಿಟ್ಟುಕೊಂಡು ಆಡಳಿತ ನಡೆಸುವುದು ಒಳಿತು.
ಪ್ರದ್ಯುಮ್ನ
Leave A Reply