ರಿಕ್ಷಾದಲ್ಲಿ 100 ಬಾಡಿಗೆ, ಆನ್ ಲೈನ್ ಗೆ 30 ಯಾವುದು ಬೇಕು!
ಇದನ್ನೇ ಬಳಸಿ, ಇದನ್ನೇ ತಿನ್ನಿ, ಇದನ್ನೇ ಧರಿಸಿ ಎನ್ನುವುದು ಪ್ರಜಾಪ್ರಭುತ್ವದಲ್ಲಿ ಸರಿಯಲ್ಲ ಎಂದು ನಮ್ಮ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಗೊತ್ತಿದೆ. ಹಾಗಿರುವಾಗ ಇದರಲ್ಲಿಯೇ ಪ್ರಯಾಣ ಮಾಡಿ ಮತ್ತು ನಾವು ಹೇಳಿದ್ದಷ್ಟು ಬಾಡಿಗೆ ಕೊಡಿ ಮತ್ತು ಬೇರೆಯದ್ದರಲ್ಲಿ ಹೋಗಲಿಕ್ಕೂ ಯೋಚನೆ ಮಾಡಬೇಡಿ, ಹೋದರೆ ಕರೆದುಕೊಂಡು ಹೋದವನಿಗೆ ಹೊಡೆಯುತ್ತೇವೆ ಮತ್ತು ಇದರಿಂದ ನಿಮಗೂ ಕಿರಿಕಿರಿಯಾಗುತ್ತದೆ ಎಚ್ಚರ ಎಂದು ಯಾರಾದರೂ ಹೇಳಿದರೆ ಅವರದ್ದು ರೌಡಿಸಂ ಎಂದು ಅನಿಸುವುದಿಲ್ಲವಾ? ಹಾಗಿರುವಾಗ ಪೊಲೀಸರು ಏನು ಮಾಡಬೇಕು. ಜಿಲ್ಲಾಡಳಿತ ಏನು ಮಾಡಬೇಕು? ಹೀಗೆ ವರ್ತಿಸಿದವರನ್ನು ಸಮಾಧಾನ ಮಾಡಿ ತಮ್ಮ ಕಚೇರಿಗೆ ಕರೆದು ಕಾಫಿ, ಬಿಸ್ಕಿಟ್ ಕೊಟ್ಟು ನೀವು ಹೇಳಿದ್ದು ಸರಿ ಎಂದು ಬೆನ್ನು ತಟ್ಟಿ ಕಳುಹಿಸಬೇಕಾ?
ನಾನು ಹೇಳುತ್ತಿರುವುದು ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ರೈಲು ನಿಲ್ದಾಣದ ಕಥೆ-ವ್ಯಥೆ. ಯಾರಾದರೂ ಕೇರಳದಿಂದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಬಂದು ಇಳಿದರು ಎಂದು ಇಟ್ಟುಕೊಳ್ಳೋಣ. ಅಲ್ಲಿಂದ ಅವರಿಗೆ ಅತ್ತಾವರ ಕೆಎಂಸಿ ಆಸ್ಪತ್ರೆಗೆ ಹೋಗಲು ಇರುತ್ತದೆ ಎಂದು ಅಂದುಕೊಳ್ಳೋಣ. ಹೆಚ್ಚಾಗಿ ಬೇರೆ ರಾಜ್ಯದಿಂದ ಮಂಗಳೂರಿಗೆ ಕಾಲಿಡುವವರು ಇಲ್ಲಿನ ಆಸ್ಪತ್ರೆ ಅಥವಾ ಶಿಕ್ಷಣ ಸಂಸ್ಥೆಗೆ ಹೋಗಲೆಂದೇ ಬರುತ್ತಾರೆ. ಅವರು ಇಲ್ಲಿ ರಿಕ್ಷಾದಲ್ಲಿ ಕುಳಿತು “ಎತ್ತಾವರ” ಕೆಎಂಸಿ ಎಂದ ಕೂಡಲೇ ಅವನು ಮಲಯಾಳಿ ಎಂದು ಇಲ್ಲಿನವರಿಗೆ ಮತ್ತೆ ಹೇಳಬೇಕಾಗಿಲ್ಲ. ಅವನು ಎತ್ರ ಮನಿ ಎಂದು ಅಂದ ಕೂಡಲೇ ನೂದು ಎಂದು ಇವರು ಹೇಳಿದ್ದು ಅವನಿಗೆ ಅರ್ಥವಾಗುತ್ತೆ. ಅವನು ಅಷ್ಟನ್ನು ಕೊಟ್ಟು ಆಸ್ಪತ್ರೆಯ ಒಳಗೆ ಹೋಗುತ್ತಾನೆ. ಅದೇ ಅನೇಕ ಟ್ರೇನ್ ಗಳು ಜಂಕ್ಷನ್ ಗೆ ಬಂದು ಕೇರಳದ್ದೋ ಅಥವಾ ಬೇರೆ ರಾಜ್ಯದ್ದೋ ಪ್ರಯಾಣಿಕರನ್ನು ಇಳಿಸಿ ಹೋಗುತ್ತವೆ. ಅವರು ಅಲ್ಲಿಂದ ಅತ್ತಾವರ ಕೆಎಂಸಿಗೆ ಹೋಗಬೇಕಾದರೆ ಮುನ್ನೂರು ತೆಗೆದಿಡಬೇಕು. ಅದು ಕೂಡ ಹಗಲಲ್ಲಿ. ಬೆಳಿಗ್ಗೆ ಸೆಂಟ್ರಲ್ ನಿಂದ ಕೆಎಂಸಿ ಆಸ್ಪತ್ರೆಗೆ ಹೆಚ್ಚೆಂದರೆ 25 ಅಥವಾ 30 ಆಗಬಹುದು. ಆದರೆ ನಮ್ಮ ರಿಕ್ಷಾದವರಿಗೆ ನೂರು ಫಿಕ್ಸ್ಡ್ ರೇಟ್.
ಇತ್ತೀಚೆಗೆ ಕೆಲವು ವರ್ಷಗಳಿಂದ ಆಧುನಿಕ ತಂತ್ರಜ್ಞಾನ ಎಷ್ಟು ಬೆಳೆದಿದೆ ಎಂದರೆ ನೀವು ನಿಮ್ಮ ಮೊಬೈಲ್ ನಲ್ಲಿ ಒಂದು ಆಪ್ ಡೌನ್ ಲೋಡ್ ಮಾಡಿ ಅದರ ಮೂಲಕವೇ ನೀವು ನಿಂತಿರುವ ಸ್ಥಳಕ್ಕೆ ಕೆಲವೇ ನಿಮಿಷಗಳಲ್ಲಿ ಟ್ಯಾಕ್ಸಿ ತರಿಸಬಹುದು. ನೀವು ಎಲ್ಲಿಗೆ ಹೋಗಬೇಕು ಎಂದು ಮೊದಲೇ ಮೊಬೈಲಿನಲ್ಲಿ ಮಾಹಿತಿ ಮುಟ್ಟಿರುವುದರಿಂದ ಅವನು ನಂತರ ಅಲ್ಲಿಗೆ ನಾನು ಬರುವುದಿಲ್ಲ ಎಂದು ಹೇಳುವುದಿಲ್ಲ. ಅದರ ಬಳಿಕ ನೀವು ಮೂರ್ನಾಕು ಜನರಿದ್ದರೂ ಅದರಲ್ಲಿ ಆರಾಮವಾಗಿ ಪ್ರಯಾಣಿಸಬಹುದು. ನೀವು ಹೇಳಿದ ಕಡೆ ಅವನು ನಿಮ್ಮನ್ನು ಬಿಡುತ್ತಾನೆ. ಆಗ ಅವನ ಮೊಬೈಲಿನಲ್ಲಿ ಎಷ್ಟು ಬಾಡಿಗೆ ಎನ್ನುವ ಮೇಸೆಜ್ ಬರುತ್ತದೆ. ನೀವು ಅಷ್ಟನ್ನು ಕೊಟ್ಟರೆ ನಿಮ್ಮ ಕೆಲಸ ಮುಗಿಯಿತು.
ಎಲ್ಲವೂ ಜಿಪಿಎಸ್ ಮೂಲಕವೇ ಆಗುವುದರಿಂದ ಮತ್ತು ಪ್ರಯಾಣ ಕೂಡ ಸುಖಕರವಾಗಿರುವುದರಿಂದ ಮತ್ತು ಬಾಡಿಗೆ ಕೂಡ ಸ್ಪರ್ಧಾತ್ಮಕವಾಗಿರುವುದರಿಂದ ನಿಮ್ಮ ಜೇಬು ಅಷ್ಟು ಸುಲಭದಲ್ಲಿ ಚಿಕ್ಕದಾಗುವುದಿಲ್ಲ. ಕೆಲವೊಮ್ಮೆ ಬಾಡಿಗೆ ಇವರ ಸ್ಪರ್ಧೆಯ ನಡುವೆ ಎಷ್ಟು ಕಡಿಮೆ ಇರುತ್ತದೆ ಎಂದರೆ ನಿಮಗೆ ಅಷ್ಟು ಖುಷಿಯಾಗುತ್ತದೆ.
ಇತ್ತೀಚೆಗೆ ಕೇಂದ್ರ ಸರಕಾರ ಮತ್ತು ರೈಲ್ವೆ ಇಲಾಖೆ ಸಂಯೋಜನೆಯಲ್ಲಿ ಇಂತಹ ಆನ್ ಲೈನ್ ಟ್ಯಾಕ್ಸಿ ಸೇವೆಯನ್ನು ರೈಲ್ವೆ ನಿಲ್ದಾಣಗಳಿಂದ ಪ್ರಾರಂಭಿಸಲು ಅವಕಾಶ ನೀಡಿದೆ. ಆ ಮೂಲಕ ಆಯಾ ರೈಲ್ವೆ ನಿಲ್ದಾಣಗಳು ಆನ್ ಲೈನ್ ಟ್ಯಾಕ್ಸಿಗಳನ್ನು ನಿಲ್ಲಿಸಲು ಸೂಕ್ತ ಸ್ಥಳಾವಕಾಶದ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದೆ. ಅದರ ನಂತರ ಮೊನ್ನೆ ಆನ್ ಲೈನ್ ಟ್ಯಾಕ್ಸಿಯವರು ರೈಲ್ವೆ ನಿಲ್ದಾಣಕ್ಕೆ ಬಂದ ಕಾರಣ ಅವರಿಗೂ ಆಟೋ ರಿಕ್ಷಾದವರಿಗೂ ಸಂಘರ್ಷ ಪ್ರಾರಂಭವಾಗಿದೆ.
ಮಂಗಳೂರು ಸೆಂಟ್ರಲ್ ನಲ್ಲಿ ಉಬೆರ್ ಹಾಗೆ ಜಂಕ್ಷನ್ ನಲ್ಲಿ ಓಲಾ ಟ್ಯಾಕ್ಸಿಗಳಿಗೆ ನಿಲ್ಲಲು ಅವಕಾಶ ನೀಡಿದ್ದನ್ನು ವಿರೋಧಿಸಿ ರಿಕ್ಷಾದವರು ಗಲಾಟೆ ಮಾಡಿದಾಗ ಪೊಲೀಸರು ಬಂದು ಅದನ್ನು ನಿಲ್ಲಿಸಿದ್ದಾರೆ. ಮಾತುಕತೆಯ ಮೂಲಕ ಸರಿಪಡಿಸೋಣ ಎಂದಿದ್ದಾರೆ. ಆದ್ದರಿಂದ ಈ ಟ್ಯಾಕ್ಸಿಗಳ ಸೇವೆ ಮತ್ತೆ ನಿಂತಿದೆ. ನಮ್ಮ ಮಂಗಳೂರಿನಲ್ಲಿ ಪ್ರತಿಬಾರಿ ಹೀಗೆ ಆಗುವುದು. ನರ್ಮ್ ಬಸ್ಸು ಶುರುವಾಗುತ್ತೆ ಎಂದಾಗ ಈ ಖಾಸಗಿ ಬಸ್ಸಿನವರು ನ್ಯಾಯಾಲಯಕ್ಕೆ ಹೋದರು. ಅದರಿಂದ ಹೆಚ್ಚುವರಿ 14 ಬಸ್ಸು ಮಂಗಳೂರಿನ ತಮ್ಮ ಡಿಪೋದಲ್ಲಿ ಕೊಳೆಯುತ್ತಿವೆ. ಇಂತಹ ಪರಿಪಾಠವನ್ನು ಮೊದಲು ನಿಲ್ಲಿಸಬೇಕು. ಜನರಿಗೆ ಯಾವುದು ಬೇಕೋ ಅದನ್ನು ಉಪಯೋಗಿಸಲು ಜಿಲ್ಲಾಡಳಿತ ಅವಕಾಶ ಮಾಡಿಕೊಡಬೇಕು. ನ್ಯಾಯಾಲಯ ಕೂಡ ಹಾಗೆ ತಮ್ಮ ಸ್ವಹಿತಾಸಕ್ತಿಗಾಗಿ ಮನವಿ ಸಲ್ಲಿಸುವ ಪ್ರಕರಣಗಳನ್ನು ತಕ್ಷಣ ಇತ್ಯರ್ಥ ಮಾಡಿಬಿಡಬೇಕು
Leave A Reply