ಕೂಲಿ ಕಾರ್ಮಿಕರ ಸಂಬಳ 548, ಪಾಲಿಕೆ ಕೊಡುವುದು 190!
ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟ್ ಪರವಾಗಿ ಮಾತನಾಡುತ್ತಿದ್ದೇನೆ, ಅಲ್ಲ. ಆದರೆ ವಿಷಯ ಏನೆಂದರೆ ಅದರಲ್ಲಿ ಕೆಲಸ ಮಾಡುವವರು ಅಂದರೆ ನಮ್ಮ ತ್ಯಾಜ್ಯ ಎತ್ತಿ ಗಾಡಿಗೆ ತುಂಬಿಸುವವರು, ಲಾರಿ ಚಾಲಕರು, ಕ್ಲೀನರ್ಸ್ ಎಲ್ಲರೂ ನಮ್ಮ ನಿಮ್ಮ ಹಾಗೆ ಮನುಷ್ಯರೇ ತಾನೆ. ಅವರು ಕೂಡ ತಮ್ಮ ಹೊಟ್ಟೆಪಾಡಿಗೆ ದುಡಿಯುವುದು. ಯಾರೂ ಕೂಡ ದೊಡ್ಡವನಾದ ಮೇಲೆ ಮನೆಮನೆಯಿಂದ ತ್ಯಾಜ್ಯ ಒಟ್ಟು ಮಾಡುವ ಕೆಲಸಕ್ಕೆ ಸೇರುತ್ತೇನೆ ಎಂದು ಹೇಳುವುದಿಲ್ಲ. ಏನೋ ದೇವರು ಯಾರ ನಸೀಬಲ್ಲಿ ಏನು ಕೆಲಸ ಬರೆದಿದೆಯೋ ಅದನ್ನೇ ಮಾಡಬೇಕಾಗುತ್ತದೆ. ಹಾಗಂತ ಮನೆಮನೆಯಿಂದ, ಅಂಗಡಿ, ಮಳಿಗೆಗಳು, ಮಾಲ್ ಗಳಿಂದ ಕಸ, ತ್ಯಾಜ್ಯ ಒಟ್ಟು ಮಾಡಿ ತೆಗೆದುಕೊಂಡು ಹೋಗುವವರ ಕೆಲಸ ಚಿಕ್ಕದು ಎಂದು ಹೇಳುತ್ತಿಲ್ಲ. ಹಾಗಂತ ಅವರಿಗೆ ಸಿಗುವ ಸಂಬಳ ಮಾತ್ರ ನಿಜಕ್ಕೂ ಚಿಕ್ಕದು.
ಇನ್ನು ಇಷ್ಟು ಕೆಲಸಕ್ಕೆ ಇಷ್ಟು ಜನರನ್ನು ಆಂಟೋನಿಯವರು ನೇಮಿಸಬೇಕು ಎಂದು ನಿಯಮ ಇದ್ದರೂ ಅವರು ಹಾಗೆ ಮಾಡುತ್ತಿಲ್ಲ. ಕಡಿಮೆ ಸಂಬಳಕ್ಕೆ ನಿಗದಿ ಪಡಿಸಿದ್ದಕ್ಕಿಂತ ಕಡಿಮೆ ಜನರು ಇಟ್ಟುಕೊಂಡು ಕೆಲಸ ಮಾಡಿಸಿರುವುದು ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟ್. ಅವರು ಮಾಡುತ್ತಿರುವುದು ಖಂಡಿತ ನಿಯಮಬಾಹಿರ. ಅದು ಮತ್ತೇ ಬರೋಣ.
ನಾನೀಗ ಮೊದಲಿಗೆ ಮಂಗಳೂರು ಮಹಾನಗರ ಪಾಲಿಕೆ ಯಾವ ರೀತಿಯಲ್ಲಿ ಈ ಆಂಟೋನಿ ವೇಸ್ಟ್ ಸಿಬ್ಬಂದಿಗಳಿಗೆ ಅನ್ಯಾಯ ಮಾಡುತ್ತಿದೆ ಎನ್ನುವುದನ್ನು ತಿಳಿಸಲು ಇಚ್ಚಿಸುತ್ತೇನೆ. ಮೊದಲನೇಯದಾಗಿ ಅಲ್ಲಿನ ಸಿಬ್ಬಂದಿಗಳಿಗೆ ನಿಗದಿಪಡಿಸಿದ ಸಂಬಳ 190 ರೂಪಾಯಿ. ಎಲ್ಲಾ ಸೌಲಭ್ಯಗಳು ಅದು ಇದು ಸೇರಿ ತಿಂಗಳಿಗೆ 7700 ರೂಪಾಯಿ ಆಗುತ್ತದೆ. ಇದು ಸೂಪರ್ ವೈಸರ್, ಚಾಲಕರು ಹೀಗೆ ವಿವಿಧ ಕ್ಯಾಟಗರಿಯವರಿಗೆ ಬೇರೆ ಬೇರೆಯಾಗುತ್ತಾ ಹೋಗುತ್ತದೆ. ಆದರೆ ನಾನೀಗ ಹೇಳುತ್ತಾ ಇರುವುದು ಕೆಳಮಟ್ಟದ ಸಿಬ್ಬಂದಿಗಳ ಕಷ್ಟ. ಒಪ್ಪಂದದ ಪ್ರಕಾರ 776 ಜನರನ್ನು ಆಂಟೋನಿ ವೇಸ್ಟ್ ನವರು ಕೆಲಸಕ್ಕೆ ಇಟ್ಟುಕೊಳ್ಳಬೇಕು. ಅಷ್ಟು ಇಟ್ಟುಕೊಳ್ಳುವುದಿಲ್ಲ ಅದು ಬೇರೆ ವಿಷಯ. ಆದರೆ ಇದ್ದವರಿಗೆ ನಿಯಮ ಪ್ರಕಾರ ಸಂಬಳ ಕೊಡಲು ಆಗುತ್ತಿಲ್ಲವಲ್ಲ, ಈ ಪಾಲಿಕೆಯ ಧೋರಣೆಯಿಂದ ಎನ್ನುವುದು ಇವತ್ತಿನ ವಿಷಯ.
2016 ರಲ್ಲಿ ಕೇಂದ್ರ ಸರಕಾರ ಕನಿಷ್ಟ ಕೂಲಿ ಯೋಜನೆ ಜಾರಿಗೆ ತಂದ ನಂತರ ಒಬ್ಬ ವ್ಯಕ್ತಿಗೆ ಪ್ರತಿ ನಿತ್ಯ 548 ದಿನಕೂಲಿ ಕೊಡಬೇಕು ಎಂದು ನಿಗದಿಪಡಿಸಿತ್ತು. ಆದರೆ ನಮ್ಮ ಮಂಗಳೂರು ಮಹಾನಗರ ಪಾಲಿಕೆ ಅದನ್ನು ಅನುಷ್ಟಾನಕ್ಕೆ ತರಲು ಹೋಗಿಯೇ ಇಲ್ಲ. ಯಾವಾಗಲಾದರೂ ಆಂಟೋನಿ ವೇಸ್ಟ್ ಸಿಬ್ಬಂದಿಗಳು ಕೆಲಸ ನಿಲ್ಲಿಸಿ ಸಂಬಳ ಪರಿಷ್ಕರಣೆ ಮಾಡಬೇಕು ಎಂದು ಪ್ರತಿಭಟನೆ ಮಾಡಿದರೆ ಆಗ ತಕ್ಷಣ ಪಾಲಿಕೆಯಿಂದ ಉತ್ತರ ಬರುತ್ತದೆ. ನಾವು ಸಂಬಳ ಕೊಡುತ್ತಿದ್ದೇವೆ, ನೀವು ಯಾವುದೇ ಕಾರಣಕ್ಕೂ ಕೆಲಸ ನಿಲ್ಲಿಸಬಾರದು. ಆದರೆ ವಿಷಯ ಏನೆಂದರೆ ಇವರು ಸಂಬಳ ಕೊಡುತ್ತಿರುವುದು ಹಳೆ ಲೆಕ್ಕದಲ್ಲಿ. ಆದರೆ ಸಿಬ್ಬಂದಿಗಳು ಕೇಳುತ್ತಿರುವುದು ಕೇಂದ್ರ ಪರಿಷ್ಕರಣೆ ಮಾಡಿರುವ ಹೊಸ ಲೆಕ್ಕದಲ್ಲಿ. ಆಗಕ್ಕೂ ಈಗಕ್ಕೂ ಕನಿಷ್ಟ 10 ಸಾವಿರ ರೂಪಾಯಿ ವ್ಯತ್ಯಾಸವಿದೆ. 2016 ರಿಂದ ಅಗಸ್ಟ್ ನಿಂದ 2017 ರ ಜುಲೈ ತನಕ ಬಾಕಿ ಮೊತ್ತ ಎಂಟು ಕೋಟಿ 27 ಲಕ್ಷದ 49 ಸಾವಿರದ 48 ರೂಪಾಯಿ. ಇಷ್ಟು ಬಾಕಿ ಮೊತ್ತವನ್ನು ಪಾಲಿಕೆ ಕೊಡಲು ಬಾಕಿ ಇದೆ. ಆದರೆ ಪಾಲಿಕೆ ಕೊಡಲು ಸಿದ್ಧರಿಲ್ಲ. ಅದರ ಅರ್ಥ ಕೊಡಲು ಅಷ್ಟು ಹಣ ಇಲ್ಲ ಎಂದಲ್ಲ. ಇದೆ. 2017-18 ಉದ್ದಿಮೆ ಪರವಾನಿಗೆ ಮತ್ತು ನವೀಕರಣ ಎಂದು ನಾಲ್ಕು ಕೋಟಿ 12 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಹಾಗೆ ಮಧ್ಯಮ ತ್ಯಾಜ್ಯ ಕರ ಶುಲ್ಕ 12 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇನ್ನು ವಿಶೇಷ ಅನುದಾನದಡಿಯಲ್ಲಿ ಕೋಟಿಗಟ್ಟಲೆ ಹಣ ಪಾಲಿಕೆಗೆ ಬರುತ್ತದೆ. ಸುಮಾರು 24 ಕೋಟಿ ರೂಪಾಯಿಗಳು ಈ ಅನುದಾನಡಿಯಲ್ಲಿ ಬಂದಿವೆ. ಅದರಲ್ಲಿ ಇಂತಿಂಷ್ಟು ತ್ಯಾಜ್ಯ ವಿಲೇವಾರಿಗೆಂದೆ ಹಣ ಬಂದಿರುತ್ತದೆ. ಅದರಲ್ಲಿ ಕೊಡಬಹುದು. ಆದರೆ ಇವರು ಕೊಡುತ್ತಿಲ್ಲ. ಹಾಗಾದರೆ ಇಷ್ಟು ಹಣ ಎಲ್ಲಿಗೆ ಹೋಯಿತು? ಇವರು ಯಾವುದಕ್ಕೆ ಎಂದು ನಮೂದಿಸಿದ ಹಣ ಯಾವುದಕ್ಕೆ ಬಳಸುತ್ತಿದ್ದಾರೆ? ಅದರಲ್ಲಿ ಎಷ್ಟು ತಂತ್ರಗಳು ನಡೆದಿವೆ. ಅವೆಲ್ಲ ನಾಳಿನ ಸಂಚಿಕೆಯಲ್ಲಿ.
ನಾನು ಇನ್ನೊಮ್ಮೆ ಹೇಳುತ್ತಿದ್ದೇನೆ. ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರು ಎಲ್ಲವನ್ನು ನಿಯಮ ಪ್ರಕಾರ ಕೆಲಸ ಮಾಡುತ್ತಿದ್ದಾರೆ ಎಂದಲ್ಲ. ಅದು ಬೇರೆನೆ ಕಥೆ. ಆದರೆ ಸಿಬ್ಬಂದಿಗಳಿಗೆ ಯೋಗ್ಯವಾಗಿ ಸರಕಾರ ನಿಗದಿಪಡಿಸಿದ್ದಷ್ಟು ಕೊಡಬೇಕಾಗಿರುವುದು ಪಾಲಿಕೆಯ ಜವಾಬ್ದಾರಿ. ಅದು ಹಣ ಬೇಕಾದಷ್ಟು ಇದ್ದು ಕೂಡ. ಅದನ್ನು ತಮ್ಮ ಲಾಭಕ್ಕೆ ಬಳಸಿಕೊಂಡಿರುವ ಪಾಲಿಕೆಯ ಮೇಯರ್, ಕಮೀಷನರ್, ಅಧಿಕಾರಿಗಳ ಬಗ್ಗೆ ನಾಳೆ ಬರೆಯುತ್ತೇನೆ!
Leave A Reply