ಚೆಂಡು ಈಗ ರಮಾನಾಥ ರೈ ಅವರ ಅಂಗಳದಲ್ಲಿದೆ!
ಒಬ್ಬ ವ್ಯಕ್ತಿಯನ್ನು ವಿರೋಧಿಸುವಾಗ ನಾವು ಅವನನ್ನು ಸಾರಾಸಗಟಾಗಿ ವಿರೋಧಿಸುತ್ತೇವೆಯೋ ಅಥವಾ ಅವನ ಕೆಲವು ನಿಲುವುಗಳನ್ನು ಮಾತ್ರ ವಿರೋಧಿಸುತ್ತೇವೆಯೋ ಎನ್ನುವುದು ಮುಖ್ಯ. ಯುವ ಬ್ರಿಗೇಡಿನ ಮಾರ್ಗದರ್ಶಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರನ್ನು ಕಾಂಗ್ರೆಸ್ ಸಾರಾಸಗಟಾಗಿ ವಿರೋಧಿಸುತ್ತದೆ ಎನ್ನುವುದು ಕಾಂಗ್ರೆಸಿನ ಅನೇಕ ನಾಯಕರು ಅನೇಕ ಸಂದರ್ಭದಲ್ಲಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವುದು ಸಾಕ್ಷಿ. ಬಹುಶ: ಅದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ್ ರೈ ಕೂಡ ಹೊರತಾಗಿಲ್ಲ. ನಾವು ಯಾರನ್ನಾದರೂ ವಿರೋಧಿಸುವ ಮುನ್ನ ಯಾಕೆ ವಿರೋಧಿಸುತ್ತೇವೆ ಎಂದು ಅರಿತುಕೊಳ್ಳುವುದು ಕೂಡ ಮುಖ್ಯ. ಅದನ್ನು ಈಗ ರಮಾನಾಥ ರೈ ಅವರು ಮಾಡಬೇಕಿದೆ. ಅವರು ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ತನ್ನ ಪಕ್ಷದ ಕಾರ್ಯಕರ್ಥರ ಕಾರ್ಯಕ್ರಮವೊಂದರಲ್ಲಿ ಚಕ್ರವರ್ತಿ ಸೂಲಿಬೆಲೆಯವರನ್ನು ಹಂಗಿಸಿದ್ದಾರೆ. ಅವರ ಊರಿನ ಹೆಸರನ್ನು ತೆಗೆದು ಅಸಹ್ಯವಾಗಿ ಕಿಚಾಯಿಸಿದ್ದಾರೆ. ಅವರ ಆ ಮಾತುಗಳು ಚಕ್ರವರ್ತಿಯವರಿಗೆ ಮಾತ್ರವಲ್ಲ, ಆ ಊರಿನಲ್ಲಿ ವಾಸಮಾಡುವ ಪ್ರತಿಯೊಬ್ಬರಿಗೂ ಅವಮಾನ ಮಾಡಿದಂತೆ ಆಗುತ್ತದೆ. ಅದು ಇರಲಿ, ಅದು ರಮಾನಾಥ್ ರೈಯವರ ಲೆವೆಲ್. ಚಕ್ರವರ್ತಿಯವರ ಬಗ್ಗೆ ಏನೂ ಟೀಕಿಸಲು ಆಗದೆ ಅವರ ಊರನ್ನು ಟೀಕಿಸಿದ್ದಾರೆ. ಈಗ ವಿಷಯಕ್ಕೆ ಬರೋಣ, ರೈ ನೆಹರೂ ಅವರನ್ನು ಟೀಕಿಸುವವರು ದೇಶದ್ರೋಹಿಗಳು ಎನ್ನುತ್ತಾರೆ. ಅದೇಗೆ ಸಾಧ್ಯ? ನಮ್ಮ ದೇಶದಲ್ಲಿ ಒಂದು ಪಕ್ಷವನ್ನು ಓಲೈಸಲು ಹುಟ್ಟಿಕೊಂಡ ಇತಿಹಾಸಕಾರರು ಹೇಳಿದ್ದನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳಲು ಹೇಗೆ ಸಾಧ್ಯ? ಪರಾಮರ್ಶಿಸಿ ನೋಡುವುದು ಬೇಡ್ವೆ? ಒಂದನೇ ತರಗತಿಯಿಂದ ಹತ್ತರವರೆಗೆ ನೆಹರೂ, ಇಂದಿರಾ ಗಾಂಧಿಯವರು ನಮ್ಮ ದೇಶಕ್ಕಾಗಿ ಅದು ಮಾಡಿದ್ರು, ಇದು ಮಾಡಿದ್ರು ಎಂದು ಮಕ್ಕಳ ಮನಸ್ಸಿನಲ್ಲಿ ಸ್ವಾತಂತ್ರ್ಯ ಬಂದ ಕಾಲದಿಂದಲೂ ತುಂಬಿಸಲಾಗುತ್ತದೆ. ಅದನ್ನು ಒಂದಿಷ್ಟು ಮಂದಿ ಈಗ ಪ್ರಶ್ನಿಸುತ್ತಿದ್ದಾರೆ. ಹಾಗೆಂದು ಪ್ರಶ್ನಿಸಿದವರನ್ನು ದೇಶದ್ರೋಹಿಗಳು ಎಂದು ಹೇಳಲಾಗುತ್ತದೆಯಾ?
ಒಂದು ವೇಳೆ ಚಕ್ರವರ್ತಿ ಸೂಲಿಬೆಲೆಯವರು ಹೇಳಿದ್ದು ಸುಳ್ಳು ಎಂದಾದಲ್ಲಿ ರಮಾನಾಥ ರೈಯವರು ತಮ್ಮ “ಸತ್ಯ”ಗಳನ್ನು ತೆಗೆದುಕೊಂಡು ವಾದಕ್ಕೆ ಬರಲಿ. ರಮಾನಾಥ್ ರೈಯವರು ಮನಸ್ಸು ಮಾಡಿದರೆ ಬೇಕಾದರೆ ಮಂಗಳೂರಿನ ಪುರಭವನದಲ್ಲಿಯೇ ಕಾರ್ಯಕ್ರಮ ಏರ್ಪಡಿಸಬಹುದು. ಅಲ್ಲಿ ರಮಾನಾಥ್ ರೈಗಳು ನೆಹರೂ ಹೇಗೆ ದೇಶಭಕ್ತರು ಎಂದು ತಮ್ಮ ವಾದ ಮಂಡಿಸಲಿ, ಅದರ ನಂತರ ಚಕ್ರವರ್ತಿ ಸೂಲಿಬೆಲೆಯವರು ತಮ್ಮ ವಾದ ಮಂಡಿಸಲಿ, ಅವರ “ನೆಹರೂ ಪರದೆ ಸರಿಯಿತು” ಏನು ಹೇಳುತ್ತದೆ ಎಂದು ಹೇಳಲಿ.
ಒಂದು ವೇಳೆ ರಮಾನಾಥ ರೈಯವರಿಗೆ ನಾಲಗೆ ತಡವರಿಸಿದರೆ ಅಥವಾ ವಿಷಯದ ಬಗ್ಗೆ ಜ್ಞಾನದ ಕೊರತೆ ಇದ್ದರೆ ಅವರು ತಮ್ಮ ಕಡೆಯಿಂದ ಯಾರನ್ನಾದರೂ ತರಿಸಿಕೊಳ್ಳಲಿ. ರಮಾನಾಥ ರೈ ಅವರ ಕಡೆಯ ವ್ಯಕ್ತಿ ನೆಹರೂ ಬಗ್ಗೆ ತಮ್ಮಲ್ಲಿರುವ ವಾದ ಮಂಡಿಸಲಿ. ಬೇಕಾದರೆ ಅದಕ್ಕೆ ಒಂದು ದಿನಾಂಕ ನಿಗದಿಪಡಿಸಲಿ. ಹಾಗಂತ ರೈಗಳು ತಾವು ಫ್ರೀ ಇರುವ ದಿನದಂದು ಕರೆಯುವುದಲ್ಲ, ಚಕ್ರವರ್ತಿಯವರು ಕೂಡ ಯಾವ ದಿನ ಫ್ರೀ ಇದ್ದಾರೆ ಎನ್ನುವುದು ಕೂಡ ಅವಶ್ಯಕ. ಆ ಮನುಷ್ಯ ಈಗ ಎಲ್ಲಿಯೋ ಧ್ಯಾನಕ್ಕೆ ಕುಳಿತಿರುವ ಸಂಗತಿ ಗೊತ್ತಾಗಿದೆ.
ಈ ಕಾರ್ಯಕ್ರಮ ಯಾಕೆ ಅವಶ್ಯಕ ಎಂದರೆ ಇದನ್ನು ಕೆದಕಿದ್ದು ಸ್ವತ: ಬಿ ರಮಾನಾಥ ರೈ. ಅಷ್ಟೇ ಅಲ್ಲ, ಕಾಂಗ್ರೆಸ್ಸಿನ ಅನೇಕರು ಚಕ್ರವರ್ತಿ ಸೂಲಿಬೆಲೆ ಅಲ್ಲಲ್ಲಿ ನೆಹರೂ, ಗಾಂಧಿ ಕುಟುಂಬದ ಬಗ್ಗೆ ಸುಳ್ಳು ಹೇಳಿ ಬರುತ್ತಾರೆ ಎಂದು ಆಗಾಗ ಆರೋಪಿಸುತ್ತಾ ಇರುತ್ತಾರೆ. ಅದು ನಿಲ್ಲಬೇಕು. ಒಂದೇ ವೇದಿಕೆಯಲ್ಲಿ ವಿಷಯಗಳ ಪ್ರಸ್ತಾಪ ನಡೆದಾಗ ಅಲ್ಲಿ ಈ ನಾಡಿನ ಬುದ್ಧಿಜೀವಿಗಳು, ಚಿಂತಕರು, ಪ್ರಗತಿಪರರು, ಸಾಮಾಜಿಕ ಹೋರಾಟಗಾರರು ಭಾಗವಹಿಸಲಿ. ಅವರು ತಮ್ಮ ಸಂಶಯ ನಿವಾರಿಸಿಕೊಳ್ಳಲಿ. ಆ ಕಾರ್ಯಕ್ರಮ ಬೇಕಾದರೆ ನೇರಪ್ರಸಾರದಲ್ಲಿ ಎಲ್ಲಾ ಕಡೆ ಪ್ರಸಾರವಾಗಲಿ. ಅದರ ನಂತರ ಯಾರು ದೇಶದ್ರೋಹಿಗಳು, ಯಾರು ದೇಶಪ್ರೇಮಿಗಳು ಎನ್ನುವ ಗೊಂದಲ ಪರಿಹಾರವಾಗುತ್ತದೆ.
ಇಲ್ಲದಿದ್ದರೆ ಪ್ರತಿ ಬಾರಿ ಚಕ್ರವರ್ತಿ ಸುಳ್ಳು ಹೇಳುತ್ತಿದ್ದಾರೆ, ಅವರಿಗೆ ಸೂಕ್ತ ಉತ್ತರ ಕೊಡುವವರು ನಮ್ಮಲ್ಲಿ ಯಾರೂ ಇಲ್ವಾ ಎಂದು ಅಳುವ ಕಾಂಗ್ರೆಸ್ಸಿಗರಿಗೆ ಒಂದು ಸೂಕ್ತ ಉತ್ತರ ಸಿಗುತ್ತದೆ. ಒಂದು ವೇಳೆ ಚಕ್ರವರ್ತಿಯವರ ಮಾತುಗಳ ಎದುರು ತಮ್ಮ ನಾಯಕರ ವಾದ ಸಪ್ಪೆ ಎಂದು ಕಂಡರೆ ಯುವ ಕಾಂಗ್ರೆಸ್ಸಿಗರಿಗೆ ತಮ್ಮ ಮುಂದಿನ ದಾರಿ ಯಾವುದು ಎಂದು ನಿರ್ಧರಿಸುವ ಅವಕಾಶ ಕೂಡ ಸಿಗುತ್ತದೆ. ಇನ್ನು ಮಕ್ಕಳು ಟಿವಿಯಲ್ಲಿ ಈ ಕಾರ್ಯಕ್ರಮ ನೋಡಿದ ನಂತರ ಇತಿಹಾಸದ ಸತ್ಯ ಚಕ್ರವರ್ತಿಯವರದ್ದಾ ಅಥವಾ ರಮಾನಾಥ ರೈ ಅವರದ್ದಾ ಎಂದು ಗೊತ್ತಾಗುತ್ತೇ? ಅವರು ಕೂಡ ಶಾಲೆಯಲ್ಲಿ ಟೀಚರ್ ನೀವು ಕಲಿಸುತ್ತಿರುವುದು ಸರಿ ಅಥವಾ ತಪ್ಪು ಎಂದು ಹೇಳುವ ಸಮಯ ಕೂಡ ಬರಬಹುದು. ಎಲ್ಲವೂ ಈಗ ರಮಾನಾಥ ರೈ ಅವರ ಅಂಗಳದಲ್ಲಿದೆ. ಅವರು ತಾನು ವಾದಕ್ಕೆ ರೆಡಿ ಎಂದು ಹೇಳುವುದನ್ನು ಕೇಳಲು ಯುವ ಸಮುದಾಯ ಕಿವಿ ನಿವಾರಿಸಿ ನಿಂತಿದೆ. ಒಂದು ವೇಳೆ ರೈ ಹಿಂಜರಿದರೆ ತಾನು ಕೇವಲ ಸಿಳ್ಳೆ, ಚಪ್ಪಾಳೆಗೋಸ್ಕರ ಹಾಗೆ ಹೇಳಿದ್ದು ಎಂದು ಒಪ್ಪಿಕೊಂಡಂತೆ ಆಗುತ್ತದೆ. ಅವರು ತಾನು ಹೇಳಿದ್ದೇ ಸರಿ ಎಂದು ಅಂದುಕೊಂಡರೆ ಅವರು ವಾದಕ್ಕೆ ರೆಡಿ ಎನ್ನುವ ಸಂದೇಶ ಹೊರಡಿಸುತ್ತಾರೆ. ಒಟ್ಟಿನಲ್ಲಿ ಚೆಂಡು ಈಗ ರೈ ಅಂಗಳದಲ್ಲಿದೆ!
Leave A Reply