ಸೇನೆ ಗಡಿಯಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡರೂ ಕೇಂದ್ರವನ್ನೇ ಟೀಕಿಸಬೇಕೆ ಕಾಂಗ್ರೆಸ್ಸಿಗರೇ?
ಇಷ್ಟೇ ಆಗಿದ್ದು…
ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಮ್ಯಾನ್ಮಾರಿನ ನಾಗಾ ಬಂಡುಕೋರರ ಉಪಟಳ ಜಾಸ್ತಿಯಾಗಿತ್ತು. ನಾಗಾಲೆಂಡ್ ರಾಷ್ಟ್ರೀಯವಾದಿ, ಸಮಾಜವಾದಿ ಸಂಘಟನೆ (ಎನ್ಎಸ್ ಸಿಎನ್) ಬಂಡುಕೋರರ ಚಲನವಲನ ಸಂಶಯಕ್ಕೀಡುಮಾಡಿದ್ದವು. ಇದೇ ಕಾರಣಕ್ಕೆ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿ ಹಲವು ನಾಗಾ ಬಂಡುಕೋರರನ್ನು ಹತ್ಯೆ ಮಾಡಿದೆ.
ಆದರೆ ಇದೇ ಮಹಾ ತಪ್ಪು ಎಂಬಂತೆ ಕಾಂಗ್ರೆಸ್ಸಿಗರು ಬಿಂಬಿಸುತ್ತಿದ್ದಾರೆ. ನೇರವಾಗಿ ಕೇಂದ್ರ ಸರಕಾರವನ್ನೇ ಟೀಕಿಸುತ್ತಿದ್ದಾರೆ.
“ಕೇಂದ್ರ ಸರಕಾರ ಇಕ್ಕಟ್ಟಿನಲ್ಲಿ ಸಿಲುಕಿದರೆ, ಟೀಕೆ ವ್ಯಕ್ತವಾದರೆ ಆ ವಿಷಯ ಮರೆಮಾಚಲು ಸರ್ಜಿಕಲ್ ಸ್ಟ್ರೈಕ್ ಮಾಡುತ್ತಾರೆ” ಎಂದು ಕೇಂದ್ರ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಆರೋಪಿಸಿದ್ದಾರೆ.
ಆಲ್ಲಾ ಸ್ವಾಮಿ, ಭಾರತ ಗಡಿಯಲ್ಲಿ ಸರ್ಜಿಕಲ್ ದಾಳಿ ಮಾಡಿದೆ ಎಂದು ಹೇಳಿದವರು ಯಾರು? ನಾಗಾ ಬಂಡುಕೋರರೇ ನಿಮ್ಮ ಕಿವಿಯಲ್ಲಿ ಬಂದು ಹಿಂಗಿಂಗೆ ಎಂದು ಹೇಳಿದರೆ? ಸರ್ಕಾರ ಘೋಷಣೆ ಮಾಡಿದೆಯೇ? ಅಥವಾ ಸೈನ್ಯವೇ ನಾವು ಸರ್ಜಿಕಲ್ ದಾಳಿ ಮಾಡಿದ್ದೇವೆ ಎಂದು ಹೇಳಿದೆಯೇ? ಯಾರು ಹೇಳಿದ್ದಾರೆ?
ಅಷ್ಟಕ್ಕೂ ಕೇಂದ್ರ ಸರಕಾರ ಯಾವ ಇಕ್ಕಟ್ಟಿನಲ್ಲಿ ಸಿಲುಕಿದೆ? ಯಾವ ಕೆಟ್ಟ ಸಮಯ ಎದುರಿಸುತ್ತಿದೆ? ಯಾವುದೂ ಇಲ್ಲ. ಬದಲಾಗಿ ನೋಟು ನಿಷೇಧ ಹಾಗೂ ಜಿಎಸ್ ಟಿ ಜಾರಿಯ ಯಶಸ್ಸಿನಲ್ಲಿ ತೇಲಾಡುತ್ತಿದೆ. ಹೀಗಿರುವಾಗ ಯಾವ ಕೆಟ್ಟದಿನ ಮರೆಮಾಚಲು ಕೇಂದ್ರ ಸರಕಾರ ಹೀಗೆ ಮಾಡುತ್ತಿದೆ? ನೀವೇ ಹೇಳುವಿರಾ?
ಹೌದು, ನಾಗಾ ಬಂಡುಕೋರರ ವಿರುದ್ಧ ದಾಳಿಯಾದ ಬಳಿಕ, ಇದು ದೇಶದ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಎಂದು ಬಿಂಬಿಸಲಾಯಿತು. ಆದರೆ ಬಳಿಕ ಸೈನ್ಯವೇ ಇದು ನಿರ್ದಿಷ್ಟ ದಾಳಿ ಅಲ್ಲ, ಬಂಡುಕೋರರ ಹತ್ತಿಕ್ಕಲು ಕೈಗೊಂಡ ಕಾರ್ಯಾಚರಣೆ ಎಂದು ಪೂರ್ವ ಕಮಾಂಡ್ ಸ್ಪಷ್ಟಪಡಿಸಿದೆ. ಸೈನ್ಯವೇ ಹೀಗೆ ಹೇಳಿರುವಾಗ ಪಿ.ಚಿದಂಬರಂ ಅವರಿಗೆ ಹೇಗೆ ಇದು ಸರ್ಜಿಕಲ್ ದಾಳಿಯ ಹಾಗೆ ಕಂಡಿತು.
ಇಷ್ಟಕ್ಕೂ ಸರ್ಜಿಕಲ್ ದಾಳಿ ಮಾಡಿದರೂ ತಪ್ಪೇನು?
ಯಾವುದೇ ಒಂದು ದೇಶದ ಸಾರ್ವಭೌಮತೆಗೆ ಧಕ್ಕೆ ಬಂದಾಗ, ಗಡಿಯಲ್ಲಿ ಉಗ್ರರ ದಾಳಿ ಹೆಚ್ಚಾದಾಗ ಅಥವಾ ಮುನ್ಸೂಚನೆ ಸಿಕ್ಕಾಗ ಆ ದೇಶ ಅಂಥ ಉಗ್ರರನ್ನು ಮೆಟ್ಟಿನಿಲ್ಲಲು ನಿರ್ದಿಷ್ಟ ದಾಳಿಯಂಥ ಕಾರ್ಯಾಚಾರಣೆ ಕೈಗೊಳ್ಳಲೇಬೇಕು. ಅದನ್ನು ಪಾಕಿಸ್ತಾನದ ಮೇಲೆ 2016ರಲ್ಲೇ ಮಾಡಲಾಗಿದೆ. ಹಿಂದೆ ಯಾವ ಸರ್ಕಾರದ ಅವಧಿಯಲ್ಲೂ ಇಂಥ ದಾಳಿ ನಡೆದಿಲ್ಲ, ಪಾಕಿಸ್ತಾನಕ್ಕೆ ಪಾಠ ಕಲಿಸಿಲ್ಲ ಎಂಬುದೂ ಗೊತ್ತಾಗಿದೆ. ಇಂಥ ದಾಳಿಗಳಿಂದಲೇ ಅಲ್ಲವೇ, ಜಮ್ಮು-ಕಾಶ್ಮೀರದಲ್ಲಿ ಉಗ್ರರ, ಕಲ್ಲು ತೂರಾಟಗಾರರ ಉಪಟಳ ಕಡಿಮೆಯಾಗಿದ್ದು. ಕಾಶ್ಮೀರದಲ್ಲಿ ಶಾಂತಿ ನೆಲೆಸುತ್ತಿದೆ ಎಂದು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯೇ ಹೇಳಿದ್ದು.
ಹೀಗಿರುವಾಗ ಕಾಂಗ್ರೆಸ್ಸಿಗೇಕೆ ಇಷ್ಟೊಂದು ಉರಿ? ದಾಳಿ ಮಾಡಿದರೂ, ಬಿಟ್ಟರೂ ಇವರಿಗೇನು ನಷ್ಟ? ಯುಪಿಎ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಉಗ್ರರು ದಾಳಿ ಮಾಡಿದಾಗಲೂ ಸುಮ್ಮನಿದ್ದ, ಕಾಶ್ಮೀರದಲ್ಲಿ ಯಾವ ಕ್ರಮವೂ ಕೈಗೊಳ್ಳದೆ “ಮೌನ”ವಾಗಿದ್ದ ನಿಮ್ಮ ಹಕೀಕತ್ತೇನು ಎಂಬುದು ಎಲ್ಲರಿಗೋ ಗೊತ್ತಿದೆ ಬಿಡಿ.
ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಪಿ. ಚಿದಂಬರಂ ಅವರಿಗೆ ಭಾರತೀಯ ಸೇನೆ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡರೂ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವಷ್ಟು ಬುದ್ಧಿಭ್ರಮಣೆಯಾಯಿತೆ ಎಂಬುದೇ ಯಕ್ಷಪ್ರಶ್ನೆ. ಹಾಗಾಗದಿರಲಿ.
-ರಾಜೇಂದ್ರ ಕುಲಕರ್ಣಿ, ಸಾಫ್ಟ್ ವೇರ್ ಉದ್ಯೋಗಿ ಬೆಂಗಳೂರು
Leave A Reply