ವಿಝನ್ 2025 ಬಗ್ಗೆ ಮಂಗಳೂರಿನಲ್ಲಿ ಕಾಂಗ್ರೆಸ್ಸಿಗರೇ ನಿರ್ಲಕ್ಷ್ಯ ವಹಿಸಿದ್ದಾರೆ ಸಿಎಂ!
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಭಾರತೀಯ ಜನತಾ ಪಾರ್ಟಿಯವರನ್ನು ಟೀಕಿಸುತ್ತಾ ಅವರದ್ದು ಮಿಷನ್ 150, ನಮ್ಮದು ವಿಝನ್ 2025 ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ. ಆದರೆ ಅವರದ್ದೇ ಪಕ್ಷದ ಕಾರ್ಪೋರೇಟರ್ ಗಳು, ಶಾಸಕರು, ಸಚಿವರು ವಿಝನ್ 2025 ಸಂಬಂಧ ನಡೆಯುತ್ತಿರುವ ಸಭೆಗಳಲ್ಲಿ ಭಾಗವಹಿಸಲು ನಿರ್ಲಕ್ಷ್ಯ ವಹಿಸುತ್ತಾ ಮುಖ್ಯಮಂತ್ರಿಯವರನ್ನೇ ಪರೋಕ್ಷವಾಗಿ ಅಣಕಿಸುತ್ತಿದ್ದಾರೆ. ಅದಕ್ಕೆ ಮೊನ್ನೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿಝನ್ 2025 ಸಭೆಯಲ್ಲಿ ಕಾರ್ಪೋರೇಟರ್ಸ್, ಮೇಯರ್, ಶಾಸಕರು, ಸಚಿವರು ವರ್ತಿಸಿದ್ದೇ ಸಾಕ್ಷಿ.
ನಾನು ನಿನ್ನೆ ಬರೆದ ಹಾಗೆ ಒಟ್ಟು ಐದು ವಿಭಾಗಗಳಲ್ಲಿ ನನ್ನ ನೆಚ್ಚಿನ ಸಬ್ಜೆಕ್ಟ್ ಆಡಳಿತ ಮತ್ತು ಕಾನೂನುವಿಷಯದ ಮೇಲೆ ನಮ್ಮ 20 ಜನರ ತಂಡ ಭವಿಷ್ಯದಲ್ಲಿ ಆಗಬೇಕಾದ ಬದಲಾವಣೆ, ಸುಧಾರಣೆಗಳ ಬಗ್ಗೆ ಚರ್ಚಿಸುತ್ತಿತ್ತು. ನಮ್ಮ ತಂಡದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸದಸ್ಯ, ವಕೀಲ ಮತ್ತು ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾನೂನು ಮತ್ತು ಮಾನವ ಹಕ್ಕು ಘಟಕದ ಅಧ್ಯಕ್ಷರಾಗಿರುವ ಎಸಿ ವಿನಯರಾಜ್ ಅವರು ಇರಬೇಕಿತ್ತು. ಅವರಿಗೆ ಆಹ್ವಾನ ಕೂಡ ಹೋಗಿತ್ತು. ಆದರೆ ಎಸಿ ವಿನಯರಾಜ್ ಬೆಳಿಗ್ಗೆಯಿಂದ ಸಂಜೆವರೆಗೆ ನಡೆದ ಆ ಮಹತ್ವಪೂರ್ಣ ಸಭೆಯಲ್ಲಿ ಒಂದು ನಿಮಿಷವೂ ಕುಳಿತು ಹೋಗಿಲ್ಲ. ಅವರು ಕೇವಲ ವಕೀಲರಾಗಿದ್ದರೆ ಅಂತಹ ಸಭೆಯಲ್ಲಿ ಭಾಗವಹಿಸುವುದು ಅವರ ವೈಯಕ್ತಿಕ ಇಷ್ಟಕ್ಕೆ ಬಿಟ್ಟಿದ್ದು ಎಂದು ಹೇಳಬಹುದಿತ್ತು. ಆದರೆ ಅವರು ಪಾಲಿಕೆಯ ಸದಸ್ಯರು. ಅದರೊಂದಿಗೆ ಕಾಂಗ್ರೆಸ್ ಪಕ್ಷದ ಪದಾಧಿಕಾರಿ. ಈ ಯೋಜನೆ ಸ್ವತ: ಸಿಎಂ ಕನಸಿನ ಕೂಸು. ವಿನಯರಾಜ್ ಬಂದು ಭಾಗವಹಿಸಿ ಆಡಳಿತ ಮತ್ತು ಕಾನೂನಿನ ಬಗ್ಗೆ ತಮ್ಮ ಅನುಭವವನ್ನು ಹೇಳಬೇಕಿತ್ತು. ಆದರೆ ಅವರು ಬರಲೇ ಇಲ್ಲ. ಅವರು ಮಾತ್ರವಲ್ಲ, ಕೆಲವು ಬೇರೆ ಕಾರ್ಪೋರೇಟರ್ ಗಳಿಗೂ ಆಹ್ವಾನ ಹೋಗಿತ್ತು. ಅವರು ಕೂಡ ಉಳಿದ ನಾಲ್ಕು ವಿಭಾಗಗಳಲ್ಲಿ ಕುಳಿತು ಸಾರ್ವಜನಿಕರೊಂದಿಗೆ ಚರ್ಚಿಸಬೇಕಿತ್ತು. ಆದರೆ ಅವರ್ಯಾರು ಬರಲೇ ಇಲ್ಲ. ಇದು ಪಾಲಿಕೆಯ ಸದಸ್ಯರಿಗೆ ತಮ್ಮ ಊರಿನ ಅಭಿವೃದ್ಧಿಯ ಬಗ್ಗೆ ಎಷ್ಟು ಕಾಳಜಿ ಇದೆ ಎಂದು ಗೊತ್ತಾಗುತ್ತದೆ. ಇವರು ಸಿದ್ಧರಾಮಯ್ಯ ಅವರದ್ದೇ ಯೋಜನೆಗೆ ಸಹಕಾರ ಕೊಡಲು ಸಿದ್ಧರಿಲ್ಲ ಎಂದಾದರೆ ಇವರಿಗೆ ನಮ್ಮ ಊರಿನ ಬಗ್ಗೆ ಎಷ್ಟು ಪ್ರೀತಿ ಇದೆ ಎಂದು ಗೊತ್ತಾಗುವುದಿಲ್ಲವೇ.
ಕೇವಲ ಟಿವಿಗಳಲ್ಲಿ ಕುಳಿತು ಮಾತನಾಡುವುದು, ಕ್ಯಾಮೆರಾಗಳಿಗೆ ಬೈಟ್ ಕೊಡುವುದು ಮತ್ತು ಸರಕಾರಿ ಕಚೇರಿಗಳ ಆಸ್ತಿಪಾಸ್ತಿಗೆ ಹಾನಿ ಮಾಡುವುದು ಮಾತ್ರ ಕಾಂಗ್ರೆಸ್ ಪಕ್ಷದ ಸೇವೆ ಅಲ್ಲ. ನೀವು ಆದಾಯ ಕಚೇರಿಗೆ ಕಲ್ಲು ಹೊಡೆದದ್ದನ್ನು ಉಸ್ತುವಾರಿ ಸಚಿವರೇ ಖಂಡಿಸಿದ್ದಾರೆ, ಹಾಗಿರುವಾಗ ಆವತ್ತು ತಟ್ಟಿರುವ ಕಳಂಕವನ್ನು ಹೊಗಲಾಡಿಸಲು ಎಸಿ ವಿನಯರಾಜ್ ಅವರೇ ನೀವು ಗಂಭೀರ ಚರ್ಚೆಯಲ್ಲಿ ಭಾಗವಹಿಸಬೇಕಿತ್ತು. ಆದರೆ ನೀವು ಊರಿನ ವಿಷಯದಲ್ಲಿ ಗಂಭೀರವಾಗಿಲ್ಲ ಎನ್ನುವುದನ್ನು ಇದು ಸೂಚಿಸುವುದಿಲ್ಲವೇ? ಇದನ್ನು ಕೆಪಿಸಿಸಿ ಅಧ್ಯಕ್ಷರು ಗಮನಿಸುತ್ತಿದ್ದಿರಾ?
ಇನ್ನು ಮೇಯರ್ ಕವಿತಾ ಸನಿಲ್. ಅವರು ಪ್ರಾರಂಭದಲ್ಲಿ ಕಾರ್ಯಕ್ರಮ ಉದ್ಘಾಟನೆ ಆಗುವಾಗ ಇದ್ದರು. ಫೋಟೋಗೆ ಜಿಲ್ಲಾ ಉಸ್ತುವಾರಿ ಸಚಿವರ ಹತ್ತಿರ ವೇದಿಕೆಯಲ್ಲಿ ಕುಳಿತುಕೊಂಡರು. ಹೂಗುಚ್ಛ ಸ್ವೀಕರಿಸಿದರು. ಅದು ಆದ ಕೂಡಲೇ ವೇದಿಕೆ ಇಳಿದು ಸೀದಾ ಹೊರಟು ಹೋದರು. ಹಾಗಾದರೆ ಸಭೆ ಯಾರಿಗೆ ನಮಗೆ ಮಾತ್ರವಾ?
ಇನ್ನು ಶಾಸಕ ಲೋಬೋ ಅವರು. ಉದ್ಘಾಟನೆ ಆದ ನಂತರ ತಮ್ಮ ಪಾಲಿನ ಭಾಷಣವನ್ನು ಮಾಡಿದರು. ಅದಾದ ಕೂಡಲೇ ತಮಗೆ ಅಲ್ಲೇನೂ ಕೆಲಸ ಇಲ್ಲ ಎನ್ನುವಂತೆ ವೇದಿಕೆ ಇಳಿದು ಹೋದರು. ಒಂದು ವಿಧಾನಸಭಾ ಕ್ಷೇತ್ರದ ಶಾಸಕ. ತಮ್ಮ ಊರಿನ, ನಾಡಿನ ಅಭಿವೃದ್ಧಿಯ ಬಗ್ಗೆ ಚರ್ಚೆಯಾಗುವ ಸಭೆ. ತಾವು ಒಂದು ಕಾಲದಲ್ಲಿ ಇದೇ ನಗರದ ಪಾಲಿಕೆ ಆಯುಕ್ತರಾಗಿದ್ದವರು. ತಮಗೆ ಈ ಸಭೆ ಹೆಚ್ಚು ಆಪ್ತವಾಗಬೇಕಿತ್ತು. ಆದರೆ ಶಾಸಕರಿಗೆ ಇದಕ್ಕಿಂತ ವೋಟಿನ ಬಗ್ಗೆ ಹೆಚ್ಚು ಚಿಂತೆ ಇದ್ದಂತೆ ಎದ್ದು ಸೀದಾ ಹೋದದ್ದು ಮಾತ್ರ ವಿಝನ್ 2025 ಬಗ್ಗೆ ಅವರಿಗಿದ್ದ ಧೋರಣೆ.
ಇನ್ನು ಬಿ ರಮಾನಾಥ ರೈಯವರು. ಉದ್ಘಾಟನೆಯಾದ ನಂತರ ಅವರು ಕೂಡ ತಮ್ಮ ಪಾಲಿನ ಭಾಷಣ ಮಾಡಿದರು. ನಂತರ ಸೀದಾ ಹೋದರು. ಕೊನೆಗೆ ಉಳಿದದ್ದು ಜಿಲ್ಲಾಧಿಕಾರಿ, ಇತರ ಅಧಿಕಾರಿಗಳು ಮತ್ತು ಜನಸಾಮಾನ್ಯರು ಮಾತ್ರ. ಮಂಗಳೂರು ಉತ್ತರದ ಶಾಸಕ ಮೊಯ್ದೀನ್ ಬಾವ ಮತ್ತು ಇತರ ಶಾಸಕರು ಬಿಡಿ, ಅವರೀಗೆ ಪುರುಸೋತ್ತೇ ಇಲ್ಲ ಪಾಪ.
ನಾನು ಸಿದ್ಧರಾಮಯ್ಯ ಅವರಿಗೆ ಏನು ಹೇಳುವುದು ಎಂದರೆ ನಿಮ್ಮ ಈ ವಿಝನ್ 2025 ಒಳ್ಳೆಯ ಹೆಸರು ಹೌದು. ಆದರೆ ನಿಮ್ಮ ಪಕ್ಷದ ಪದಾಧಿಕಾರಿಗಳು, ನಿಮ್ಮ ಸರಕಾರದ ಸಚಿವರು, ಶಾಸಕರು, ಮನಪಾ ಸದಸ್ಯರು ಇದರಲ್ಲಿ ಕಾಟಾಚಾರಕ್ಕೆ ಬಂದು ಹೋದರೆ ಅದರಿಂದ ಆಗುವಂತದ್ದು ಏನೂ ಇಲ್ಲ. ಕೆಲವರು ಸಭೆ ಆಗುತ್ತಿದ್ದ ಕಡೆ ತಲೆ ಹಾಕಿ ಕೂಡ ಮಲಗುತ್ತಿಲ್ಲ. ಇದರಿಂದ ಏನು ಸಾಬೀತಾಗುತ್ತದೆ ಎಂದರೆ ಒಂದೋ ಇದು ಚುನಾವಣಾ ಗಿಮಿಕ್ ಎಂದು ನಿಮ್ಮವರೇ ಒಪ್ಪಿಕೊಂಡಂತೇ ಆಗಿದೆ. ಎರಡನೇಯದ್ದು ಅವರಿಗೆ ತಾವು ಮುಂದಿನ ಬಾರಿ ಬರುತ್ತೇವಾ ಇಲ್ಲವಾ ಎನ್ನುವ ಟೆನ್ಷನೇ ಈ ಅಭಿವೃದ್ಧಿ ಸಭೆಗಿಂತ ದೊಡ್ಡದಾಗಿ ಹೋಗಿದೆ. ಇದ್ದದರಲ್ಲಿ ಮನಪಾ ಸದಸ್ಯೆ ಪ್ರತಿಭಾ ಕುಳಾಯಿ ಅವರೇ ಪರವಾಗಿಲ್ಲ. ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಆಸಕ್ತಿಯಿಂದ ಓಡಾಡುತ್ತಿದ್ದರು!
Leave A Reply