ಹಲಸಿನ ಹಣ್ಣನ್ನು South Kannara ಜಿಲ್ಲೆಯ ಬ್ರಾಂಡ್ ಮಾಡಿದರೆ ಅದಕ್ಕೂ ಬೆಲೆ ಬರುತ್ತದೆ!
ಸುಮಾರು ಹತ್ತು ತಿಂಗಳ ಹಿಂದೆ ನಾನು ಮಂಗಳೂರಿನ ಬಾಯ್ಲರ್ ಮತ್ತು ಫ್ಯಾಕ್ಟರಿಸ್ ಇದರ ಡೆಪ್ಯೂಟಿ ಡೈರೆಕ್ಟರ್ ವಿರುದ್ಧ ಎಸಿಬಿಗೆ ದೂರು ನೀಡಿದ್ದೆ. ನನ್ನ ದೂರಿನ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳ ಭ್ರಷ್ಟ ಅಧಿಕಾರಿಯ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿತು. ಮನೆಯಲ್ಲಿ ಮತ್ತು ಕಚೇರಿಯಲ್ಲಿ ಅಕ್ರಮವಾಗಿ ತೆಗೆದಿಟ್ಟಿದ್ದ ತಲಾ ಒಂದೂವರೆ ಲಕ್ಷದಂತೆ ಒಟ್ಟು ಮೂರು ಲಕ್ಷ ನಗದು ಹಣವನ್ನು ಎಸಿಬಿ ವಶಪಡಿಸಿಕೊಂಡಿತ್ತು. ಅದರ ನಂತರ ಆ ಅಧಿಕಾರಿಯ ಬಂಧನವಾಗಿತ್ತು. ಅವನನ್ನು ಮಂಗಳೂರಿನ ಸಬ್ ಜೈಲಿಗೆ ಹಾಕಲಾಗಿತ್ತು. ನಿವೃತ್ತನಾಗಲು ಕೆಲವೇ ಗಂಟೆಗಳಿರುವಾಗ ನಡೆದ ಈ ದಾಳಿಯಿಂದ ಭ್ರಷ್ಟ ತೀವ್ರ ಮುಜುಗರಕ್ಕೆ ಒಳಗಾಗಿದ್ದ. ಇನ್ನೇನೂ ಕೊನೆಯ ದಿನ ಸಿಕ್ಕಿದ್ದೆಲ್ಲವನ್ನು ಬಾಚಿ ಬೆಂಗಳೂರಿಗೆ ಹಿಂತಿರುಗಲು ಸಿದ್ಧತೆಯಲ್ಲಿದ್ದವನಿಗೆ ನಮ್ಮ ಧೀಡಿರ್ ದಾಳಿ ಶಾಕ್ ತಂದಿತ್ತು. ತಿಮಿಂಗಲವಲ್ಲವಾದರೂ ಮಂಗಳೂರಿನ ಅನೇಕ ಕಾಖರ್ಾನೆಗಳಿಂದ ಲಂಚ ತಿಂದು ಕೊಬ್ಬಿದ ಭ್ರಷ್ಟನನ್ನು ಹಿಡಿದ ಸಮಾಧಾನ ನನಗೆ ಆಗಿತ್ತು.
ಆದರೆ ಕೆಲವು ಸಮಯದ ಬಳಿಕ ಆತ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದ. ಅದರಲ್ಲಿ ಎಸಿಬಿ ಮತ್ತು ನನ್ನನ್ನು ಕೂಡ ಪ್ರತಿವಾದಿಯನ್ನಾಗಿಸಿದ್ದ. ಅದರ ನಂತರ ಹೊಸ ಕಿರಿಕಿರಿ ಶುರುವಾಗಿತ್ತು. ಹೈಕೋರ್ಟ್ ನನಗೆ ನ್ಯಾಯಾಲಯಕ್ಕೆ ಹಾಜರಾಗಲು ಸೂಚನೆ ಕೊಟ್ಟಾಗಲೆಲ್ಲ ನಾನು ಬೆಂಗಳೂರಿನ ಬಸ್ ಹತ್ತಬೇಕಾಗಿತ್ತು. ನಾವು ಸರಕಾರೇತರ ಸಂಘ ಸಂಸ್ಥೆಯಾಗಿ ದೇಶದ ನಾಗರಿಕರಿಗೆ ಲಂಚಕ್ಕಾಗಿ ಪೀಡಿಸುತ್ತಿದ್ದ ಭ್ರಷ್ಟರನ್ನು ಎಸಿಬಿಗೆ ದೂರು ಕೊಟ್ಟು ಹಿಡಿಸಿದರೆ ನಂತರ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದದ್ದು ಅವರು. ಒಂದು ವೇಳೆ ನನ್ನ ಮೇಲೆ ಕೋಪದಿಂದ ಅಥವಾ ದ್ವೇಷದಿಂದ ಆ ಭ್ರಷ್ಟ ಕೇಸ್ ಮಾಡಿದರೆ ನನಗೆ ಹೈಕೋರ್ಟ್ ನಲ್ಲಿ ಹಾಜರಾಗುವಾಗ ತಗಲುವ ಪ್ರಯಾಣ ಭತ್ಯೆ ಸಹಿತ ಇತರ ವ್ಯವಸ್ಥೆ ಮಾಡಬೇಕಾಗಿರುವುದು ನಾನು ವಾಸಿಸುವ ಪ್ರದೇಶದ ಜಿಲ್ಲಾಡಳಿತ. ಆದರೆ ನಮ್ಮಲ್ಲಿ ಏನಾಗುತ್ತಿದೆ ಎಂದರೆ ಯಾರು ದೂರು ಕೊಡುತ್ತಾರೋ ಅವರು ಬೆಂಗಳೂರಿನ ಉಚ್ಚ ನ್ಯಾಯಾಲಯ ಅಥವಾ ಲೋಕಾಯುಕ್ತ ನ್ಯಾಯಾಲಯದಲ್ಲಿ ವಿಚಾರಣೆ ಇದ್ದರೆ ತಮ್ಮದೇ ಸಂಪೂರ್ಣ ಖರ್ಚಿನಲ್ಲಿ ಹೋಗಿ ಬರಬೇಕು. ಬೆಂಗಳೂರೆಂದರೆ ಅದೇನು ಮಂಗಳೂರಿನಿಂದ ಮೂಲ್ಕಿ ಅಥವಾ ಕಿನ್ನಿಗೋಳಿಗೆ ಹೋದದ್ದು ಹತ್ತಿರದಲ್ಲಿಲ್ಲ. ಹೋಗುವ ಖರ್ಚು, ತಂಗುವ ವ್ಯವಸ್ಥೆ, ಅಲ್ಲಿಂದ ಕಚೇರಿಗೆ ಅಲೆದಾಡುವ ವ್ಯವಸ್ಥೆ ಎಲ್ಲವನ್ನು ನಾವೇ ಮಾಡಬೇಕಾಗುತ್ತದೆ. ಆದರೆ ಭ್ರಷ್ಟರಿಗೆ ಅವರು ಕೆಲಸದಲ್ಲಿ ಇರಲಿ, ನಿವೃತ್ತಿಯಾಗಿರಲಿ ಸರಕಾರ ಟಿಎ, ಡಿಎ ಕೊಡುತ್ತದೆ. ಇದು ಒಂದು ರೀತಿಯಲ್ಲಿ ಭ್ರಷ್ಟರನ್ನು ಹಿಡಿದುಕೊಟ್ಟವರಿಗೆ ಸಜೆ, ಸಿಕ್ಕಿಬಿದ್ದ ಭ್ರಷ್ಟರಿಗೆ ಪೂಜೆ. ಇದು ನಿಲ್ಲಬೇಕು ಎಂದೆ.
ಭವಿಷ್ಯದಲ್ಲಿ ಹೆಚ್ಚೆಚ್ಚು ಭ್ರಷ್ಟರನ್ನು ನನ್ನಂತವರು ಎಸಿಬಿ ಅಥವಾ ಲೋಕಾಯುಕ್ತಕ್ಕೆ ಹಿಡಿದು ಕೊಡುವ ಧೈರ್ಯ ಮಾಡಬೇಕಾದರೆ ಯಾವ ಟಿಎ, ಡಿಎಯನ್ನು ಭ್ರಷ್ಟರಿಗೆ ಕೊಡುತ್ತಿರೋ ಅದನ್ನು ನಮಗೆ ಕೊಡಿ. ಅವರೇನೋ ಸರಕಾರಿ ನೌಕರರು. ಮೊದಲೇ ತಿಂದು ಕೊಬ್ಬಿರುತ್ತಾರೆ. ಅದರೊಂದಿಗೆ ಭ್ರಷ್ಟಾಚಾರ ಮಾಡಿ ಎಲ್ಲೆಲ್ಲಿ ಜಾಗ ಇದೆಯೊ ಅಲ್ಲೆಲ್ಲ ಶೇಖರಿಸಿ ಇಟ್ಟಿರುತ್ತಾರೆ. ಅವರಿಗೆ ಶಿಕ್ಷೆಯ ಸ್ವರೂಪದಲ್ಲಾದರೂ ಸ್ವಲ್ಪ ಖರ್ಚಾಗಲಿ. ಆದ್ದರಿಂದ ಈಗ ಆಗುತ್ತಿರುವ ಈ ಉಲ್ಟಾ ಪ್ರಕ್ರಿಯೆಯನ್ನು ಸರಕಾರ ಸರಿಪಡಿಸಬೇಕು ಎಂದು ನನ್ನ ಮಾತನ್ನು ಹೇಳಿದೆ. ಇಲ್ಲದೇ ಹೋದರೆ ಹೀಗೆ ಭ್ರಷ್ಟರಿಗೆ ಟಿಎ, ಡಿಎ, ನಮಗೆ ಬರೆ ಎಳೆಯುತ್ತಿದ್ದರೆ ಯಾವ ವ್ಯಕ್ತಿ ಕೂಡ ಭ್ರಷ್ಟರನ್ನು ಹಿಡಿಯಲು ಮುಂದೆ ಬರಲ್ಲ ಎಂದೆ. ಬಹುಶ: ವಿಝನ್ 2025 ರಲ್ಲಿ ಈ ಅಂಶವನ್ನು ಸರಕಾರ ಸೇರಿಸಬಹುದು.
ನಂತರ ಕೃಷಿಯ ವಿಷಯದಲ್ಲಿಯೂ ಚೆಂದನೆಯ ಚರ್ಚೆಯಾಯಿತು. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲಸಿನ ಹಣ್ಣು ಸಿಕ್ಕಾಪಟ್ಟೆ ಸಿಗುತ್ತದೆ. ಆದರೆ ಅದಕ್ಕೆ ಅಷ್ಟು ಮಾರ್ಕೆಟಿಂಗ್ ಆಗುತ್ತಿಲ್ಲ. ನಮಗೆ ಅದನ್ನು ನೋಡಿ ನೋಡಿ, ತಿಂದು ತಿಂದು ಬೇಸರವಾಗಿರುವುದರಿಂದ ಅದರ ಬಗ್ಗೆ ತಾತ್ಸಾರ. ಎಷ್ಟೋ ಹಲಸಿನ ಹಣ್ಣುಗಳು ಬಿದ್ದು ಹಾಳಾಗಿ ಹೋಗಿರುತ್ತವೆ. ಆದ್ದರಿಂದ ಭವಿಷ್ಯದಲ್ಲಿ ಹಲಸಿನ ಹಣ್ಣು ನಮ್ಮ ಜಿಲ್ಲೆಯಿಂದ ಹೆಚ್ಚೆಚ್ಚು ರಫ್ತು ಆಗುವಂತೆ ಸರಕಾರ ನೋಡಿಕೊಳ್ಳಬೇಕು ಎಂದು ಹೇಳಲಾಯಿತು. ನಿಜ, ಹಿತ್ತಲಗಿಡ ಮದ್ದಲ್ಲ ಎನ್ನುವುದು ನಮ್ಮ ಅಪನಂಬಿಕೆ. ಆದರೆ ಅದನ್ನು ಹಾಗೆ ಬಿಟ್ಟರೆ ರೈತರಿಗೂ ಪುಡಿಗಾಸು ಸಿಗುವುದಿಲ್ಲ. ಅದರ ಬದಲು ಹಲಸಿನ ಹಣ್ಣನ್ನು ನಮ್ಮ ಜಿಲ್ಲೆಯ ಬ್ರಾಂಡ್ ಅನ್ನಾಗಿ ಮಾಡಿದರೆ ದಕ್ಷಿಣ ಕನ್ನಡ ಎಂದ ಕೂಡಲೇ ಹಲಸಿನ ಹಣ್ಣು ಎದುರಿಗೆ ಬರಬೇಕು ಎಂದು ವಿಝನ್ 2025 ರಲ್ಲಿ ಒತ್ತುಕೊಡಲಾಯಿತು. ಹಲಸಿನ ಹಣ್ಣಿನಿಂದ ಬೇರೆ ಬೇರೆ ಉತ್ಪನ್ನಗಳನ್ನು ತಯಾರಿಸಿದರೆ ಅದರಿಂದ ಲಾಭ ಆಗುವುದು ಕೃಷಿಕನಿಗೆ. ಆಗ ಆತ ಅದನ್ನು ವೇಸ್ಟ್ ಮಾಡುವುದಾಗಲೀ, ಚಿಲ್ಲರೆ ಹಣಕ್ಕೆ ಕೊಡುವುದಾಗಲೀ ಮಾಡುವ ಅವಶ್ಯಕತೆ ಇರುವುದಿಲ್ಲ. ಹೀಗೆ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಸಾಕಷ್ಟು ಚಿಂತನೆ ಆಯಿತು. ಆದರೆ ನಾನು ನಿನ್ನೆ ಹೇಳಿದ ಹಾಗೆ ಜನಪ್ರತಿನಿಧಿಗಳ ಗೈರು ಹಾಜರಿ ಅವರ ಆಸಕ್ತಿಯನ್ನು ಪ್ರಶ್ನಿಸುತ್ತಿತ್ತು!
Leave A Reply