ಪಾಲಿಕೆಯನ್ನು ನಂಬಿ ಮೈಗೆ ಎಣ್ಣೆ ಹಚ್ಚಿ ಸ್ನಾನಕ್ಕೆ ಇಳಿದರೆ ದೇವರೇ ಗತಿ!
ಮಂಗಳವಾರ ಸಂಜೆಯಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಲವೆಡೆ ನೀರಿರಲಿಲ್ಲ. ದೀಪಾವಳಿ ಹಬ್ಬದ ಸಮಯದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದಲ್ಲಿ ನಿನ್ನೆಯ ದಿನ ಗೋಧೂಳಿ ಕಾಲಕ್ಕೆ ಮೈಗೆ ತೈಲ ಹಚ್ಚಿ ನಂತರ ಬಚ್ಚಲು ಮನೆಯನ್ನು ಸಿಂಗರಿಸಿ, ಹಂಡೆಗೆ ನೀರು ತುಂಬಿ, ಸಿಂಗರಿಸಿ, ನಂತರ ನೀರು ಬಿಸಿ ಮಾಡಿ ಮನೆಯ ಎಲ್ಲಾ ಸದಸ್ಯರು ತಲೆಸ್ನಾನ ಮಾಡುವ ಸಂಪ್ರದಾಯವಿದೆ. ಅನೇಕರು ಮೈಗೆ ಎಣ್ಣೆ ಹಚ್ಚಿ ಇನ್ನೇನೂ ಹಂಡೆಯನ್ನು ನೀರಿನಿಂದ ತುಂಬಿಸಬೇಕು. ಪೈಪ್ ಆನ್ ಮಾಡಿದರೆ ಒಂದು ತೊಟ್ಟು ನೀರು ಬರುವುದಿಲ್ಲ. ಅಯ್ಯೋ ದೇವ್ರೆ, ನೀರಿಲ್ಲದೆ ಸ್ನಾನ ಮಾಡುವುದೇಗೆ ಎಂದು ಯೋಚಿಸಿ ಪರಸ್ಪರ ಹಿತೈಷಿಗಳಿಗೆ ಫೋನ್ ಮಾಡಿ ವಿಚಾರಿಸಿದರೆ ಅಲ್ಲಿಯೂ ನೀರಿಲ್ಲ. ಈ ಬಾರಿ ಹೆಚ್ಚೆ ಮಳೆಯಾಗಿರುವುದರಿಂದ ಮತ್ತು ಬೇಸಿಗೆ ಇನ್ನೂ ಕೂಡ ಬಂದಿಲ್ಲದೆ ಇರುವುದರಿಂದ ನೀರ್ಯಾಕೆ ಪೈಪಿನಲ್ಲಿ ಬರುವುದಿಲ್ಲ ಎಂದು ಅನೇಕರು ಯೋಚಿಸಿ ಕೊನೆಗೆ ಬೇರೆ ಉಪಾಯವಿಲ್ಲದೆ ತಮ್ಮ ತಮ್ಮ ವಾರ್ಡಿನ ಪಾಲಿಕೆಯ ಸದಸ್ಯರಿಗೆ ಫೋನ್ ಮಾಡಿ “ಸ್ವಾಮಿ, ನಮಗೆ ಅಭ್ಯಂಗ ಸ್ನಾನ ಮಾಡೋಣ ಎಂದರೆ ಪೈಪಿನಲ್ಲಿ ನೀರೆ ಬರುವುದಿಲ್ಲ, ನಿಮಗೆ ವೋಟ್ ಕೊಟ್ಟದ್ದಕ್ಕೆ ನಮಗೆ ದೀಪಾವಳಿ ಹಬ್ಬಕ್ಕೆನೆ ನೀರು ಇಲ್ಲದ ಹಾಗೆ ಮಾಡುತ್ತೀರಿ, ಒಂದು ವೇಳೆ ಬೇರೆ ಧರ್ಮದ ಹಬ್ಬವಾಗಿದ್ದರೆ ನಮ್ಮ ಶಾಸಕರು ನಿಮ್ಮನ್ನು ಮಧ್ಯರಾತ್ರಿ ಆದರೂ ಕೂಡ ಬಾರಿಸಿ ಎಚ್ಚರಿಸುತ್ತಿದ್ದರು. ಕಮೀಷನರ್ ಅವರು ಬೇರೆ ಧರ್ಮದ ಹಬ್ಬವಾಗಿ ನೀರಿಲ್ಲದೆ ಹೋದರೆ ಮಧ್ಯರಾತ್ರಿ ತನಕ ಕಚೇರಿಯಲ್ಲಿ ಕುಳಿತು ಸರಿ ಮಾಡಿಯೇ ಹೋಗುತ್ತಿದ್ದರು. ಈಗ ದೀಪಾವಳಿಯಾಗಿರುವುದರಿಂದ ನಾವು ಕೇಳುವುದಿಲ್ಲ ಎಂದು ನಿಮಗೆ ಸಸಾರಾ” ಎಂದು ಹೇಳುತ್ತಿದ್ದಂತೆ ಹಾಗೇನಿಲ್ಲ, ನಾವು ಈಗಲೇ ಪಾಲಿಕೆಯ ಕಮೀಷನರ್ ಅವರಿಗೆ ವಿಚಾರಿಸಿ ಸರಿ ಮಾಡುತ್ತೇವೆ ಎಂದು ಮನಪಾ ಸದಸ್ಯರು ಭರವಸೆ ಕೊಟ್ಟು ನೀರಿನ ಉಸ್ತುವಾರಿ ನೋಡಿಕೊಳ್ಳುವ ಜ್ಯೂನಿಯರ್ ಇಂಜಿನಿಯರ್ ಅವರಿಗೆ ಫೋನ್ ಮಾಡಿದ್ದಾರೆ.
ಸಾಮಾನ್ಯವಾಗಿ ನೀರು ಬರುತ್ತಿಲ್ಲ ಎಂದು ಪಾಲಿಕೆಯ ಸದಸ್ಯರು ಜೆಇಗಳಿಗೆ ಫೋನ್ ಮಾಡಿದರೆ ಅಧಿಕಾರಿಗಳ ಬಳಿ ರೆಡಿಮೇಡ್ ಉತ್ತರ ಇರುತ್ತದೆ. ಅದೇನೆಂದರೆ ತುಂಬೆಯಲ್ಲಿ ಕರೆಂಟ್ ಇಲ್ಲ. ಟ್ರಾನ್ಸಫಾರ್ಮರ್ ಪ್ರಾಬ್ಲಂ ಆಗಿದೆ. ರಿಪೇರಿ ಆಗುತ್ತಿದೆ. ಅದು ಸರಿ ಆಗಿ ಕರೆಂಟ್ ಬಂದ ಬಳಿಕ ನೀರು ಪೂರೈಕೆಯಾಗುತ್ತದೆ. ಹಾಗೆ ಜನರಿಗೆ ರಾತ್ರಿ 10.30 ಅಥವಾ 11 ಗಂಟೆ ಒಳಗೆ ನೀರು ಬರುತ್ತದೆ ಎಂದು ಹೇಳಿಬಿಡಿ ಎಂದು ಎಂದಿನಂತೆ ಈ ಬಾರಿಯೂ ಹೇಳಿದ್ದಾರೆ. ಆದರೆ ಜನರ ಒತ್ತಡ ಜಾಸ್ತಿ ಬರುತ್ತಿದ್ದ ಹಾಗೆ ತಮ್ಮ ಕುರ್ಚಿ ಅಲುಗಾಡಿದ ಅನುಭವವಾದ ಆದ ಕಾರ್ಪೋರೇಟರ್ ಗಳಲ್ಲಿ ಕೆಲವರು ನೇರವಾಗಿ ಪಾಲಿಕೆಯ ಕಮೀಷನರ್ ಅವರಿಗೆ ಫೋನ್ ಮಾಡಿದ್ದಾರೆ.
“ಸರ್, ಅರ್ಧ ಮಂಗಳೂರಿನಲ್ಲಿ ನೀರಿಲ್ಲ, ಬೇಗ ಏನಾದರೂ ಮಾಡಿ, ಇಲ್ಲದಿದ್ರೆ ದೀಪಾವಳಿಗೆ ನೀರು ಕೊಟ್ಟಿಲ್ಲ ಎಂದು ಜನರ ಕೋಪ ನಮ್ಮ ಪಾಲಿಕೆ ಮತ್ತು ಶಾಸಕರ ಮೇಲೆ ತಿರುಗಿದರೆ ನಿಮಗೂ ಕಷ್ಟ” ಎಂದು ಹೇಳಿದ ನಂತರ ಕಮೀಷನರ್ ನಜೀರ್ ಸಾಹೇಬ್ರು ತುಂಬೆಯಲ್ಲಿ ಕರೆಂಟ್ ಇಲ್ಲ ಎಂದರೆ ಏನಾಗಿರಬಹುದು ನೋಡಿ ಎಂದು ಮೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಂಜಪ್ಪನವರಿಗೆ ಕಾಲ್ ಮಾಡಿದ್ದಾರೆ. ಮಧ್ಯಾಹ್ನದಿಂದ ಸಂಜೆ ಆರು ಗಂಟೆಯವರೆಗೆ ತುಂಬೆ ಪ್ರದೇಶ ಬರುವ ಬಂಟ್ವಾಳದಲ್ಲಿಯೇ ಇದ್ದ ಮಂಜಪ್ಪನವರಿಗೆ ತುಂಬೆ ವೆಂಟೆಂಡ್ ಡ್ಯಾಂನಲ್ಲಿ ಸಂಜೆ ಕರೆಂಟ್ ಇಲ್ಲದೆ ನೀರು ಪಂಪ್ ಆಗುತ್ತಿಲ್ಲ ಎಂದು ಗೊತ್ತೆ ಇರಲಿಲ್ಲ. ಛೇ, ತುಂಬೆ ವೆಂಟೆಂಡ್ ಡ್ಯಾಂನಲ್ಲಿ ಕರೆಂಟ್ ಹೋಗಿದೆ ಎಂದು ಬಂಟ್ವಾಳ ಮೆಸ್ಕಾಂನಿಂದ ಆಗಲಿ ಅಥವಾ ಮಂಗಳೂರಿನಿಂದ ಆಗಲಿ ತಮಗೆ ಯಾರೂ ಕೂಡ ಹೇಳಲೇ ಇಲ್ಲವಲ್ಲ ಎಂದು ಆಶ್ಚರ್ಯಗೊಂಡ ಮಂಜಪ್ಪನವರು ತುಂಬೆಯ ವೆಂಟೆಂಡ್ ಡ್ಯಾಂನಲ್ಲಿ ಕರೆಂಟ್ ಇದೆಯಾ, ಇಲ್ಲವಾ ಎಂದು ವಿಚಾರಿಸಿದ್ದಾರೆ. ನೋಡಿದರೆ ಅಲ್ಲಿ ಕರೆಂಟಿನ ಸಮಸ್ಯೆ ಇಲ್ಲ. ಹಾಗಾದರೆ ಮಂಗಳೂರಿಗೆ ನೀರು ಇಲ್ಲ ಯಾಕೆ?
ಮಂಗಳೂರಿನಲ್ಲಿ ನೋಡಿದ್ರೆ ನೀರು ಇಲ್ಲದಕ್ಕೆ ಪಾಲಿಕೆ ಮೆಸ್ಕಾಂ ಮೇಲೆ ಆರೋಪ ಹಾಕುತ್ತಿದೆ. ಮೆಸ್ಕಾಂ ಪಾಲಿಕೆಯ ಮೇಲೆ ಆರೋಪ ಹಾಕುತ್ತಿದೆ. ಒಟ್ಟಿನಲ್ಲಿ ನೀರು ಮಾತ್ರ ಬರುತ್ತಾ ಇಲ್ಲ. ಜನ ಮೈಗೆ ಎಣ್ಣೆ ಹಚ್ಚಿ ಅಭ್ಯಂಗ ಸ್ನಾನಕ್ಕೆ ಕಾಯ್ತಾ ಇದ್ದರೆ ಕೊನೆಗೆ ಗೊತ್ತಾಗುತ್ತದೆ ಸಮಸ್ಯೆ ಮೆಸ್ಕಾಂವಿನದ್ದು ಅಲ್ಲ, ಅಲ್ಲಿ ಪಂಪ್ ಆಗಿ ನೀರು ಹೋಗುವ ಎರಡು ಪೈಪ್ ಗಳಲ್ಲಿ ಒಂದರಲ್ಲಿ ಸಮಸ್ಯೆ ಇದೆ. ಆ ಸಮಸ್ಯೆ ಗೊತ್ತಾದ ಬಳಿಕ ಹತ್ತು ನಿಮಿಷಗಳಲ್ಲಿ ಸರಿ ಮಾಡಲಾಯಿತಾದರೂ, ಸರಿ ಆದ ಕೂಡಲೇ ನೀರು ಬರುವುದಿಲ್ಲವಲ್ಲ. ಯಾಕೆಂದರೆ ಬೆಂದೂರ್ ವೆಲ್ ನ ಟಾಂಕಿ ತುಂಬಲು ಕನಿಷ್ಟ ಮೂರುವರೆ ಗಂಟೆ ಬೇಕು.
ಹಾಗಾದರೆ ನಿಜವಾಗಿ ಆದ ಸಮಸ್ಯೆ ಏನು? ಯಾರ ದಿವ್ಯ ನಿರ್ಲಕ್ಷ್ಯದಿಂದ ನೀರು ಬರುತ್ತಿರಲಿಲ್ಲ. ಯಾರು ಹೊದ್ದು ಮಲಗಿದ ಕಾರಣ ಜಿಎಸ್ ಬಿ ಸಮುದಾಯದವರ ಈ ಬಾರಿಯ ದೀಪಾವಳಿ ಸ್ನಾನ ಡಲ್ ಹೊಡೆಯಿತು? ಒಂದು ಸಣ್ಣ ಮಿಸ್ಟೇಕ್ ಪರಿಹರಿಸಲಾಗದವರು ಇರುವ ಪಾಲಿಕೆ ಮತ್ತು ತುಂಬೆಯನ್ನು ನಂಬಿಕೊಂಡು ಪಾಲಿಕೆಯ ಐದು ಲಕ್ಷ ಜನ ಇದ್ದೆವಲ್ಲ, ನಮಗೆ ಏನು ಅನ್ನಬೇಕು? ಇಷ್ಟು ದೊಡ್ಡ ಸಮಸ್ಯೆಯಾದರೂ ತಪ್ಪಿತಸ್ಥರ ಮೇಲೆ ಏನು ಕ್ರಮ ತೆಗೆದುಕೊಳ್ಳದೆ ಮೇಯರ್, ಕಮೀಷನರ್ ಸುಮ್ಮನಿರುವುದು ಯಾಕೆ? ಅದೆಲ್ಲವನ್ನೂ ನಾಳೆ ಹೇಳ್ತೇನೆ. ಬಹುಶ: ನೀವು ನಿನ್ನೆಯ ಸ್ನಾನವನ್ನು ಇವತ್ತು ಬೆಳಿಗ್ಗೆ ಮಾಡಿರಬೇಕು. ಹ್ಯಾಪಿ ದೀಪಾವಳಿ!
Leave A Reply