ಧರ್ಮಸ್ಥಳದಲ್ಲಿ ಮೋದಿ ಸಮ್ಮುಖ ಬಿಜೆಪಿ ಸೇರುವ 8 ಕಾಂಗ್ರೆಸ್ ಶಾಸಕರ್ಯಾರು?
ಅಕ್ಟೋಬರ್ 29 ರಂದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ದೇವಸ್ಥಾನಕ್ಕೆ ಆಗಮಿಸಲಿದ್ದಾರೆ. ಅಲ್ಲಿ ದೇವರ ದರ್ಶನ ಮಾಡಿದ ಬಳಿಕ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ 50 ನೇ ವರ್ಷದ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅದರ ಬಳಿಕ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ದೆಹಲಿಗೆ ಹಿಂತಿರುಗಲಿದ್ದಾರೆ. ನರೇಂದ್ರ ಮೋದಿಯವರ ಧರ್ಮಸ್ಥಳದ ಕಾರ್ಯಕ್ರಮದಲ್ಲಿ ಅವರ ಸಮ್ಮುಖ ರಾಜ್ಯದ ಎಂಟು ಜನ ಕಾಂಗ್ರೆಸ್ ಪಕ್ಷದ ಶಾಸಕರುಗಳು ಭಾರತೀಯ ಜನತಾ ಪಾರ್ಟಿಗೆ ಸೇರಲಿದ್ದಾರೆ ಎಂದು ದೆಹಲಿಯ ಮೂಲಗಳಿಂದ ತಿಳಿದು ಬಂದಿದೆ.
ಅದರಲ್ಲಿ ಕರಾವಳಿಯ ಇಬ್ಬರು ಶಾಸಕರು ಮತ್ತು ಓರ್ವ ಸಚಿವರು ಕೂಡ ಇರಲಿದ್ದಾರೆ ಎನ್ನುವುದು ಸದ್ಯದ ಮಾಹಿತಿ. ಹಿಂದೆ ಬಿಜೆಪಿಯಿಂದ ಶಾಸಕಿಯಾಗಿ ನಂತರ ಕಾಂಗ್ರೆಸ್ ಗೆ ಹೋಗಿ ಅಲ್ಲಿ ಶಾಸಕಿಯಾಗಿರುವ ಶಕುಂತಳಾ ಶೆಟ್ಟಿಯವರು ಇದೇ ಸಂದರ್ಭದಲ್ಲಿ ಬಿಜೆಪಿಯನ್ನು ಸೇರುತ್ತಾರಾ ಅಥವಾ ಇಲ್ಲವಾ ಎನ್ನುವ ಬಗ್ಗೆ ಪುತ್ತೂರಿನ ಬಿಜೆಪಿ ವಲಯದಲ್ಲಿ ಗುಸುಗುಸು ಪ್ರಾರಂಭವಾಗಿದೆ. ಹಾಗೆ ಬೆಳ್ತಂಗಡಿಯ ಶಾಸಕ ವಸಂತ ಬಂಗೇರ ಅವರು ಕೂಡ ಇದೇ ಸಮಯಕ್ಕೆ ಪ್ರಧಾನ ಮಂತ್ರಿಗಳ ಸಮ್ಮುಖದಲ್ಲಿ ಮತ್ತೆ ತಮ್ಮ ಮಾತೃ ಪಕ್ಷಕ್ಕೆ ಮರಳುತ್ತಾರಾ ಎನ್ನುವುದರ ಕುರಿತು ಮಾತುಕತೆಗಳು ನಡೆಯುತ್ತಿದೆ. ಶಕುಂತಳಾ ಶೆಟ್ಟಿ ಹಾಗೂ ವಸಂತ ಬಂಗೇರ ಇಬ್ಬರಿಗೂ ಬಿಜೆಪಿಗೆ ಬರುವುದೆಂದರೆ ಅದೊಂದು ರೀತಿಯಲ್ಲಿ ಘರ್ ವಾಪಸಿ. ಆದರೆ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಬಿಜೆಪಿಗೆ ಸೇರಿದರೆ ಅದು ಕರಾವಳಿಯ ಮಟ್ಟಿಗೆ ಅತೀ ದೊಡ್ಡ ಸಂಚಲನವನ್ನು ಉಂಟು ಮಾಡಲಿದೆ. ಪ್ರಮೋದ್ ಮಧ್ವರಾಜ್ ಅವರು ಪ್ರಾರಂಭದಿಂದಲೇ ಕಾಂಗ್ರೆಸ್ ಪಕ್ಷದಲ್ಲಿ ಇದ್ದವರು. ಅವರ ತಾಯಿ ಮನೋರಮಾ ಮಧ್ವರಾಜ್ ಅವರು ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬಂದು ನಂತರ ಕೊನೆಯಲ್ಲಿ ಯಾವ ಪಕ್ಷದಲ್ಲಿಯೂ ಇರದೆ ತಟಸ್ಥರಾಗಿಯೇ ಉಳಿದರು. ಆದರೆ ಪ್ರಮೋದ್ ಅವರಿಗೆ ಇನ್ನೂ ಚಿಕ್ಕ ವಯಸ್ಸು. ಮೊದಲ ಬಾರಿಗೆ ಶಾಸಕರಾದ ನಂತರ ಸಚಿವರೂ ಆದವರು. ಆದರೆ ಅವರಿಗೆ ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಕಷ್ಟ ಎಂದು ಅನಿಸಿರುವ ಕಾರಣ ಅವರು ಕೂಡ ಬಿಜೆಪಿಗೆ ಸೇರುತ್ತಾರೆ ಎಂದು ರಾಜಕೀಯ ಪಂಡಿತರು ವಿಶ್ಲೇಷಣೆ ಮಾಡುತ್ತಿದ್ದಾರೆ. ಹೀಗೆ ಈ ಮೂವರು ಬಿಜೆಪಿಗೆ ಬಂದರೆ ಕರಾವಳಿಯಲ್ಲಿ ಬಿಜೆಪಿಯ ಬಲ ಹೆಚ್ಚಾಗಲಿದೆ. ಆದರೆ ಮೂವರು ಕೂಡ ಬಿಜೆಪಿಗೆ ಸೇರಲಿರುವ ವದಂತಿಯನ್ನು ಅಲ್ಲಗಳೆಯುತ್ತಿದ್ದಾರೆ. ಆದ್ದರಿಂದ ಸದ್ಯಕ್ಕೆ ಈ ವಿಷಯ ಕನ್ ಫರ್ಮ್ ಆಗಿಲ್ಲ. ಆದರೆ ನರೇಂದ್ರ ಮೋದಿಯವರ ದಕ್ಷಿಣ ಕನ್ನಡ ಜಿಲ್ಲಾ ಪ್ರಮುಖ ಧಾರ್ಮಿಕ ಕೇಂದ್ರವೊಂದರ ಭೇಟಿ ಹಾಗೆ ಮುಗಿದು ಹೋಗುವುದಿಲ್ಲ. ರಾಜಕೀಯ ಚಾಣಾಕ್ಯ ಮೋದಿ ಹಾಗೆ ಸುಮ್ಮನೆ ಎಲ್ಲಿ ಕೂಡ ಬಂದು ಹೋಗುವುದಿಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಅದೇ ದಿನ ಅವರ ಬೆಂಗಳೂರು ಪ್ರವಾಸ ಮತ್ತು ಬೀದರ್ ಪ್ರವಾಸದಲ್ಲಿಯೂ ರಾಜಕೀಯ ವಿಪ್ಲಲಗಳು ನಡೆಯಲಿದೆ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ಮೋದಿ ಕರ್ನಾಟಕದಲ್ಲಿ ಕಾಲಿಟ್ಟು ಹೋಗುವುದರ ಒಳಗೆ ಒಂದಿಷ್ಟು ರಾಜಕೀಯ ಸುಂಟರಗಾಳಿ ಬೀಸಲಿದೆ. ಕನಿಷ್ಟ 8 ಜನ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬಾಯ್ ಹೇಳಲಿದ್ದಾರೆ ಎನ್ನುವುದು ಆಂತರಿಕ ಸುದ್ದಿ.
Leave A Reply