ಬರೀ ಹಣಕ್ಕಾಗಿಯೇ ಆಡುವ ಶ್ರೀಶಾಂತ್ ಯಾವ ದೇಶದ ಪರ ಆಡಿದರೇನು ಬಿಡಿ!
ಶಾಂತಕುಮಾರನ್ ಶ್ರೀಶಾಂತ್…
ಕೇರಳದ ಈ ಹುಡುಗ 2007ರ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಮ್ಯಾಥ್ಯೂ ಹೇಡನ್ ನನ್ನು ಕ್ಲೀನ್ ಬೋಲ್ಡ್ ಮಾಡಿ ಕುಣಿದಾಡಿದಾಗ, ಬೇರೆ ಪಂದ್ಯಗಳಲ್ಲಿ ಆ ಆ್ಯಂಡ್ರ್ಯೂ ಸೈಮಂಡ್ಸ್ ಗೇ ಕೆಣಕಿದಾಗ, ಪ್ರತಿ ವಿಕೆಟ್ ಪಡೆದಾಗಲೂ ಸ್ವಲ್ಪ ಅತಿಯಾಗಿಯೇ ವರ್ತಿಸಿದಾಗ, ಶ್ರೀಶಾಂತ್ ದೇಶಕ್ಕಾಗಿಯೇ, ತಂಡದ ಒಳಿತಿಗಾಗಿಯೇ ಮಾಡುತ್ತಾನಲ್ಲ ಬಿಡಿ ಎಂದು ನಮಗೆ ನಾವೇ ಸಮಜಾಯಿಷಿ ಕೊಟ್ಟುಕೊಂಡೆವು. ಶ್ರೀಶಾಂತ್ ನ ಎಲ್ಲ ಪುಂಡಾಟ ಸಹಿಸಿಕೊಂಡು ಬೆಂಬಲಿಸಿದೆವು. ಅದರಲ್ಲೂ 2007ರ ಟಿ-20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಮಿಸ್ಬಾ ಉಲ್ ಹಕ್ ಆಕಾಶಕ್ಕೆ ಚಿಮ್ಮಿದ ಚೆಂಡನ್ನು ಹಿಡಿದು ಭಾರತಕ್ಕೆ ಗೆಲುವು ತಂದಾಗಂತೂ ಶ್ರೀಶಾಂತ್ ನೆಚ್ಚಿನವನಾಗಿಬಿಟ್ಟಿದ್ದ.
ಆದರೆ, ಶ್ರೀಶಾಂತ್ ಗೆ ಯಾವಾಗ ಖ್ಯಾತಿಯ ಮದ ತಲೆಗೇರಲು ಆರಂಭವಾಯಿತೋ? ಹಣದ ಹಪಾಹಪಿ ಹೆಚ್ಚಾಯಿತೋ ವರ್ತನೆ ಅತಿಯಾಗುವ ಜತೆಗೆ ಮ್ಯಾಚ್ ಫಿಕ್ಸಿಂಗ್ ಭೂತ ಬೆನ್ನತ್ತಿತು. ಇದೇ ಶ್ರೀಶಾಂತ್ ಐಪಿಎಲ್ ಮ್ಯಾಚ್ ಫಿಕ್ಸಿಂಗ್ನಲ್ಲಿ ಭಾಗಿಯಾದ ಆರೋಪದಲ್ಲಿ ಕ್ರಿಕೆಟ್ ನಿಂದಲೇ ನಿಷೇಧಕ್ಕೊಳಗಾಗುವ ಸನ್ನಿವೇಶ ಸೃಷ್ಟಿಯಾದಾಗ, ನಾವು ಅವನ ಮೇಲಿಟ್ಟಿದ್ದ ನಂಬಿಕೆಯೇ ಹೋಯಿತು. ಅವನನ್ನು ಚುನಾವಣೆಯಲ್ಲೂ ಸೋಲಿಸಬೇಕಾಗಿ ಬಂತು.
ಈಗ ಮತ್ತೊಮ್ಮೆ ಇದೇ ಶ್ರೀಶಾಂತ್ ಸುದ್ದಿಯಾಗಿದ್ದು, ತನ್ನ ಮನದಾಳ ಬಿಚ್ಚಿಟ್ಟಿದ್ದಾನೆ…“ನಾನು ಬೇರೆ ದೇಶದ ಪರ ಆಡಲು ಸಿದ್ಧ” ಎಂದಿದ್ದಾನೆ ಶ್ರೀಶಾಂತ್.
ಆಗಿದ್ದಿಷ್ಟೇ, ಬಿಸಿಸಿಐ ಶ್ರೀಶಾಂತ್ನನ್ನು ಆಜೀವ ನಿಷೇಧ ಹೇರಿದ್ದ ನಿರ್ಧಾರವನ್ನು ಕೇರಳ ಹೈಕೋರ್ಟ್ ಎತ್ತಿ ಹಿಡಿದಿದೆ. ಇದರಿಂದ ಹಿನ್ನಡೆಗೊಳಗಾದ ಶ್ರೀಶಾಂತ್ ಬೇರೆ ದೇಶದ ಪರ ಆಡುವುದಾಗಿ ತಿಳಿಸಿದ್ದಾನೆ.
ಅಲ್ಲ, ದೇಶದಲ್ಲಿ ರಾಷ್ಟ್ರಪ್ರೇಮಕ್ಕೆ ಹೆಸರಾಗಿರುವ ಕ್ರಿಕೆಟ್ ಆಟಗಾರನೊಬ್ಬ, ತಾನು ದೋಷಿ ಎಂಬ ಕಾರಣಕ್ಕಾಗಿ ನಿಷೇಧಕ್ಕೊಳಗಾದೆ ಎಂದು ಬೇರೆ ದೇಶದ ಪರ ಆಡುತ್ತೇನೆ ಎನ್ನುತ್ತಾನಲ್ಲ, ಏನೆನ್ನಬೇಕು ಇವನಿಗೆ? ಮೊದಲೂ ಈತ ಬರೀ ಹಣಕ್ಕಾಗಿಯೇ ಕ್ರಿಕೆಟ್ ಆಡಿದ ಎಂಬುದು ಇದರಿಂದಲೇ ಸಾಬೀತಾಯಿತಲ್ಲವೇ? ಹಣಕ್ಕಾಗಿ ಈತ ಮ್ಯಾಚ್ ಫಿಕ್ಸಿಂಗ್ ನಲ್ಲಿ ತೊಡಗಿದರೂ ತೊಡಗಿರಬಹುದು ಎಂಬಂತಾಯಿತಲ್ಲವೇ?
ಹೌದು, ದಕ್ಷಿಣ ಆಫ್ರಿಕಾದ ಆಂಡ್ರ್ಯೂ ಪೀಟರ್ ಸನ್ ಇಂಗ್ಲೆಂಡ್ ಪರ ಆಡುವಂತಾಯಿತು. ಆದರೆ ಪೀಟರ್ ಸನ್ ವಿಚಾರದಲ್ಲಿ ಚರ್ಮದ ಬಣ್ಣದ ಲೆಕ್ಕಾಚಾರವಿತ್ತೇ ಹೊರತು, ಫಿಕ್ಸಿಂಗ್ ಅಲ್ಲ. ಆದರೆ ಶ್ರೀಶಾಂತ್ ವಿಚಾರದಲ್ಲಿ ಆದದ್ದೇನು? ಹಣದಾಟವಲ್ಲವೇ?
ಇನ್ನು, ನನ್ನ ವಿರುದ್ಧದ ಆರೋಪ ಸಾಬೀತಾಗುವ ಮೊದಲೇ ನಿಷೇಧಕ್ಕೊಳಪಡಿಸಿದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಶ್ರೀಶಾಂತ್ ಹೇಳಿದ್ದಾರೆ. ಹಾಗೊಂದು ವೇಳೆ ಶ್ರೀಶಾಂತ್ ಅಪ್ಪಟ ದೇಶಪ್ರೇಮಿಯಾಗಿದ್ದರೆ, ತಾನು ಮ್ಯಾಚ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿರದಿದ್ದರೆ, ಶುದ್ಧನಾಗಿದ್ದರೆ, ಸುಪ್ರೀಂ ಕೋರ್ಟ್ ಮೆಟ್ಟಿಲೇರುವೆ ಎನ್ನಬಹುದಿತ್ತು. ಆರೋಪ ಸುಳ್ಳಾಗುವ ತನ ಕಾಯುವೆ ಎನ್ನಬಹುದಿತ್ತು. ಅದು ಬಿಟ್ಟು ಬೇರೆ ದೇಶದ ಪರ ಆಡುವೆ ಎನ್ನುವೆ ಎಂದರೆ? ಅದೂ ಭಾರತದ ಪರ 53 ಏಕದಿನ, 27 ಟೆಸ್ಟ್ ಆಡಿದ ಮೇಲೆ!
ವಿನೋದ್ ಕಾಂಬ್ಳೆ, ಮೊಹಮ್ಮದ್ ಅಜರುದ್ದೀನ್ ಆಡುವಾಗಲೂ ಇದೇ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದ್ದಾಗಲೂ ನಾವು ಕ್ಷಮಿಸಿದ್ದೇವೆ. ಅವರೂ ಬೇರೆ ದೇಶದ ಪರ ಆಡುವೆ ಎನ್ನದೆ ಮರ್ಯಾದೆ ಉಳಿಸಿಕೊಂಡಿದ್ದರು. ಆದರೆ ಶ್ರೀಶಾಂತ್ ಮಾತ್ರ ಹಣದ ಹಿಂದೆ ನಿಂತು ಅವರೆಂಥವರು ಎಂಬುದನ್ನು ತೋರಿಸಿದ್ದಾರೆ. ಹಾಗಾದರೆ ಶ್ರೀಶಾಂತ್ ಪಾಕಿಸ್ತಾನದ ಪರ ಆಡಲು ಸಿದ್ಧರೆ? ನಮ್ಮ ವಿರಾಟ್ ಕೊಹ್ಲಿ ವಿಕೆಟ್ ತೆಗೆದು ಮೈದಾನದ ತುಂಬ ಓಡಾಡಲು ಮನಸ್ಸು ಬರುತ್ತದೆಯೇ? ಅಷ್ಟಕ್ಕೂ ಬಿಸಿಸಿಐ ನಿಯಮದ ಪ್ರಕಾರ ಶ್ರೀಶಾಂತ್ ಬೇರೆ ದೇಶದ ಪರ ಆಡುವಂತಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
“ನಾನು ಪ್ರತಿ ಬಾರಿ ಮೈದಾನಕ್ಕಿಳಿಯಬೇಕಾದಾಗ ದೇವಾಲಯಕ್ಕೆ ತೆರಳುತ್ತಿದ್ದೆನೇನೋ ಎಂಬ ಅನುಭವವಾಗುತ್ತಿತ್ತು’ ಎಂದು ಸಚಿನ್ ತಮ್ಮ ಕುರಿತ ಸಿನಿಮಾದಲ್ಲಿ ಹೇಳಿದ್ದಾರೆ. ಭಾರತ ವಿಶ್ವಕಪ್ ಗೆದ್ದಾಗ ಬಿಕ್ಕಿ ಬಿಕ್ಕಿ ಅತ್ತ ಹರ್ಭಜನ್ ಸಿಂಗ್, ಕ್ಯಾನ್ಸರ್ ಗಡ್ಡೆ ಒಡಲೊಳಗಿಟ್ಟುಕೊಂಡೂ, ದೇಶಕ್ಕಾಗಿ ಆಡಿ ವಿಶ್ವಕಪ್ ತಂದು ಕೊಟ್ಟ ಯುವರಾಜ್ ಸಿಂಗ್ ನಂತ ಆಟಗಾರರನ್ನು ನಾವು ತಲೆ ಮೇಲೆ ಇಟ್ಟುಕೊಂಡು ತಿರುಗಾಡಿದ್ದೇವೆ. ಇಂದಿಗೂ ಸಚಿನ್ ನಮ್ಮ ಆರಾಧ್ಯ ದೈವವೇ. ಅಷ್ಟೇ ಏಕೆ, ಶ್ರೀಶಾಂತ್ನಂತೆಯೇ ಹಾರಾಡಿದರೂ, ವಿರಾಟ್ ಕೊಹ್ಲಿಯನ್ನು ಇಷ್ಟಪಡುತ್ತೇವೆ, ಐಪಿಎಲ್ ನಲ್ಲಷ್ಟೇ ಮಿಂಚುವ ಸುರೇಶ್ ರೈನಾ, ದೇಶದಪರ ಉತ್ತ ಪ್ರದರ್ಶನ ನೀಡಿದಾಗಲೆಲ್ಲ ಹೊಗಳಿದ್ದೇವೆ. ದೇಶದ ವಿಚಾರ ಬಂದಾಗ, ತಲೆಗೆ ಗಾಯವಾದಾಗಲೂ ಬೌಲಿಂಗ್ ಮಾಡಿದ ಅನಿಲ್ ಕುಂಬ್ಳೆ ಇನ್ನೂ ನಮ್ಮ ಮನದಲ್ಲಿದ್ದಾರೆ.
ಆದರೆ, ಇವರೆಲ್ಲರ ಸಾಲಿಗೆ ಶ್ರೀಶಾಂತ್ ನಿಲ್ಲಲಿಲ್ಲ ಎಂಬುದೇ ಬೇಸರ ಹಾಗೂ ಇಂಥವರು ನಮ್ಮ ತಂಡದ ಪರ ಆಡಿದರಾ ಎಂಬ ವಿಷಾದ ಕಾಡುತ್ತಿದೆ. ಅಷ್ಟೆ.
Leave A Reply