ಜಿಎಸ್ ಬಿ ಸಮಾಜದವರಿಗೆ ಗುರುದ್ರೋಹಿ ಯಾರೆಂದು ಗೊತ್ತಾಗುತ್ತಿದೆ!
ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪ್ರಮುಖ ಮಠವಾಗಿರುವ ಶ್ರೀಕಾಶೀಮಠದ ಉಚ್ಚಾಟಿತ ಸ್ವಾಮಿಯಾಗಿರುವ ಶಿವಾನಂದ ಪೈ ಆಲಿಯಾಸ್ ರಾಘವೇಂದ್ರ ತೀರ್ಥ ಮಂಗಳೂರಿಗೆ ಬರುತ್ತಿದ್ದಾರೆ ಎಂದು ಅವರ ಬೆರಳೆಣಿಕೆಯ ಹಿಂಬಾಲಕರು ಸಾಮಾಜಿಕ ತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಕಾಶೀಮಠದ ಹಣ, ಬಂಗಾರ, ದೇವರ ಅಮೂಲ್ಯ ಒಡವೆ, ಬೆಲೆಬಾಳುವ ಪರಿಕರಗಳನ್ನು ಶ್ರೀಸಂಸ್ಥಾನಕ್ಕೆ ಹಿಂತಿರುಗಿಸದೆ ಬಚ್ಚಿಟ್ಟು ಪೊಲೀಸರ ಕಣ್ತಪ್ಪಿಸಿ ಓಡಾಡಿಕೊಂಡಿದ್ದ ಶಿವಾನಂದ ಪೈಯನ್ನು ಇತ್ತೀಚೆಗೆ ಬೆಂಗಳೂರು ಹೊರವಲಯದಲ್ಲಿ ಬಂಧಿಸಲಾಗಿತ್ತು. ನಂತರ ಕೆಲವು ಕಾಲ ಜೈಲಿನಲ್ಲಿದ್ದ ಸ್ವಾಮಿ ಈಗ ಏನೂ ಆಗಿಲ್ಲ ಎಂಬಂತೆ ಸುತ್ತಾಡುತ್ತಿದ್ದಾರೆ. ಸರಿಯಾಗಿ ನೋಡಿದರೆ ಮಂಗಳೂರಿನ ಯಾವುದೇ ಗೌಡ ಸಾರಸ್ವತ ಬ್ರಾಹ್ಮಣರು ಆರಾಧಿಸುವ ದೇವಸ್ಥಾನದಲ್ಲಿ ಈ ಉಚ್ಚಾಟಿತ ಸ್ವಾಮಿಗೆ ಪ್ರವೇಶ ಇಲ್ಲ. ಆದರೆ ಈಗ ಮಣ್ಣಗುಡ್ಡೆಯಲ್ಲಿರುವ ನವದುರ್ಗಾ ದೇವಸ್ಥಾನಕ್ಕೆ ಬರುತ್ತಾರೆ ಎಂದು ಸುದ್ದಿಯಾಗಿದೆ. ಆ ದೇವಸ್ಥಾನವನ್ನು ಗುರುಪುರ ವಿಶ್ವನಾಥ ಭಟ್ ಮತ್ತು ಕುಟುಂಬ ನಡೆಸಿಕೊಂಡು ಬರುತ್ತಿದೆ.
ಶಿವಾನಂದ ಪೈ ಆಲಿಯಾಸ್ ರಾಘವೇಂದ್ರ ತೀರ್ಥನನ್ನು ಉಚ್ಚಾಟಿಸಿದ್ದು ಯಾಕೆ?
”ನನಗೆ ಈ ಸನ್ಯಾಸದಿಂದ ಬಿಡುಗಡೆ ಮಾಡಿ” ಎಂದು ಸ್ವತ: ರಾಘವೇಂದ್ರ ತೀರ್ಥ ಆಗಿನ ಶ್ರೀಕಾಶೀಮಠಾಧೀಪತಿ, ಪರಮಪೂಜ್ಯ ಯತೀವರ್ಯರಾದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರಿಗೆ ಪತ್ರ ಬರೆದು ವಿನಂತಿಸಿಕೊಂಡ ಕಾರಣ ಶಿವಾನಂದ ಪೈಯನ್ನು ಸ್ವಾಮೀಜಿಯವರು ಆತನ ಇಚ್ಚೆಯಂತೆ ಸನ್ಯಾಸತ್ವದಿಂದ ಬಿಡುಗಡೆಗೊಳಿಸಿದ್ದರು. ಆದರೆ ನಂತರ ಶಿವಾನಂದ ಪೈ ಉಲ್ಟಾ ಹೊಡೆದು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಗಳನ್ನು ನ್ಯಾಯಾಲಯದ ಕಟಕಟೆಗೆ ತರುವ ಕೆಲಸ ಮಾಡಿದ್ದ ಕಾರಣ ಮತ್ತು ನಿರಂತರ ಕಾನೂನು ಕಟ್ಟಲೆಗಳ ಕಿರುಕುಳ ಕೊಡುತ್ತಿದ್ದ ಕಾರಣ ರಾಘವೇಂದ್ರ ತೀರ್ಥನನ್ನು ಹಿರಿಯ ಸ್ವಾಮೀಜಿಯವರು ಉಚ್ಚಾಟಿಸಿದ್ದರು. ಶ್ರೀಮದ್ ಸುಧೀಂದ್ರ ತೀರ್ಥರನ್ನು ಹೀಯಾಳಿಸುವುದು ಬಿಡಿ, ಆ ಬಗ್ಗೆ ಯೋಚಿಸುವುದು ಕೂಡ ಗುರುದ್ರೋಹ ಆಗುತ್ತೆ ಎಂದು ಜಿಎಸ್ ಬಿ ಸಮಾಜದ ಪ್ರತಿಯೊಬ್ಬರಿಗೂ ಗೊತ್ತು. ಅವರಿಗೆ ದು:ಖ ತರುವ ಕೆಲಸ ಮಾಡುವುದು ಬಿಡಿ, ಮಾಡಬೇಕು ಎಂದು ಆಲೋಚಿಸಿದರೆ ಅದೇ ಗುರುದ್ರೋಹ. ಆದರೆ ಶಿವಾನಂದ ಪೈ ಉಚ್ಚಾಟಿತನಾದ ನಂತರ ಈಗ ವೃಂದಾವನಸ್ಥರಾಗಿರುವ ಜಿಎಸ್ ಬಿಗಳ ನಡೆದಾಡುವ ದೇವರು ಸುಧೀಂದ್ರ ತೀರ್ಥ ಸ್ವಾಮೀಜಿಗಳನ್ನು ಕ್ಷಣಕ್ಷಣಕ್ಕೂ ಕಾಡಿದ. ಅಂತಹ ಗುರುದ್ರೋಹಿಯನ್ನು ಮಂಗಳೂರಿಗೆ ಕರೆತರುವುದೇ ಮತ್ತೊಂದು ಗುರುದ್ರೋಹ. ಹಾಗಿರುವಾಗ ಮೊಕ್ಕಾಂ ಮಾಡಿಸಿ ಕಾರ್ಯಕ್ರಮ ಮಾಡುವುದೆಂದರೆ ಗುರುದ್ರೋಹದ ಪರಮಾವಧಿ ಎಂದು ಹೇಳುವವರಿದ್ದಾರೆ.
40 ವರ್ಷದ ಹಿಂದೆ ಮಂಗಳೂರು ರಥಬೀದಿಯಲ್ಲಿ ವಿ ರೋಹಿದಾಸ್ ಪೈ ಎನ್ನುವ ವ್ಯಕ್ತಿಯೊಬ್ಬರು ನಾಲ್ಕು ಮಕ್ಕಳಿರುವ ಓರ್ವ ವಿಧವೆಯನ್ನು ಮದುವೆ ಮಾಡಿಕೊಂಡಿದ್ದರು. ಅವರನ್ನು ಅದೇ ರಥಬೀದಿ ನಿವಾಸಿ ರವೀಂದ್ರ ಭಂಡಾರಿ (ಕೊಲೆ ಭಂಡಾರಿ ಎಂದು ಜನರು ಕರೆಯುತ್ತಿದ್ದರು) ಹೊಡೆದಿದ್ದರು. ಈ ಬಗ್ಗೆ ರೋಹಿದಾಸ್ ಪೈ ಪೊಲೀಸ್ ಠಾಣೆಯಲ್ಲಿ ಕೇಸ್ ಮಾಡಿದ್ದರು. ನ್ಯಾಯಾಲಯದಲ್ಲಿ ಹೊಡೆದದ್ದಕ್ಕೆ ಸಾಕ್ಷಿ ಯಾರಿದ್ದಾರೆ ಎಂದು ರೋಹಿದಾಸ್ ಪೈಯವರನ್ನು ಕೇಳಲಾಗಿತ್ತು. ಅದಕ್ಕೆ ರೋಹಿದಾಸ್ ಪೈ “ನನ್ನ ಪರಮ ಗುರು, ದೇವತಾ ಸ್ವರೂಪಿ ಸುಧೀಂದ್ರ ತೀರ್ಥ ಸ್ವಾಮೀಜಿಯವರೇ ಇದಕ್ಕೆ ಸಾಕ್ಷಿ. ನನಗೆ ಬೇರೆ ಯಾರೂ ಸಾಕ್ಷಿ ಇಲ್ಲ” ಎಂದು ನ್ಯಾಯಾಲಯದಲ್ಲಿ ರೋದಿಸಿದ್ದರು. ತನಗೆ ಬೇರೆ ಯಾರೂ ಗತಿ ಇಲ್ಲ ಎನ್ನುವ ಕೊರಗು ಅವರ ಬಾಯಲ್ಲಿ ಸ್ವಾಮೀಜಿಗಳ ಹೆಸರನ್ನು ತಂದಿರಬಹುದು. ಆಗ ಇದೇ ವಿಶ್ವನಾಥ ಭಟ್ ಎಲ್ಲಾ ಕಡೆ ಹೋಗಿ ರೋಹಿದಾಸ್ ಪೈ ಗುರುದ್ರೋಹಿ ಎಂದು ತುತ್ತೂರಿ ಊದಿ ಬಂದು ರೋಹಿದಾಸ್ ಪೈ ಹೆಸರನ್ನು ಕೆಡಿಸಿದ್ದರು. ಆ ಮೂಲಕ ರೋಹಿದಾಸ್ ಪೈಯನ್ನು ಸಮಾಜದ ಕಣ್ಣಲ್ಲಿ ಗುರುದ್ರೋಹಿ ಎಂದು ಬಿಂಬಿಸುವಲ್ಲಿ ವಿಶ್ವನಾಥ್ ಭಟ್ ಯಶಸ್ವಿಯಾಗಿದ್ದರು.
ಆವತ್ತು ಬೇರೆಯವರನ್ನು ಗುರುದ್ರೋಹಿ ಎಂದಿದ್ದ ವಿಶ್ವನಾಥ ಭಟ್ ಈಗ ಗುರುದ್ರೋಹಿಯನ್ನು ಕರೆಸಿ ಮೊಕ್ಕಾಂ ಮಾಡಿಸುತ್ತಿದ್ದಾರೆ!
ತನಗೆ ದೀಕ್ಷೆ ಕೊಟ್ಟು ಸಲಹಿದ ಗುರುವಿಗೆ ಅನ್ಯಾಯ ಮಾಡಿದ, ಕಿರುಕುಳ ಕೊಟ್ಟ, ಸುಳ್ಳು ಹೇಳಿ ತಿರುಗಾಡಿದ, ಸಂಸ್ಥಾನದ ಆಸ್ತಿಪಾಸ್ತಿ ಒಳಗೆ ಹಾಕಿರುವ ಇಡೀ ಜಿಎಸ್ ಬಿ ಸಮಾಜದ ಕಣ್ಣಲ್ಲಿ ಗುರುದ್ರೋಹಿಯಾಗಿರುವ ರಾಘವೇಂದ್ರ ತೀರ್ಥನನ್ನು ಕರೆದು ಸತ್ಕರಿಸುವವರು ಗುರುದ್ರೋಹಿಗಳಾ ಅಥವಾ ತನ್ನ ಮೇಲೆ ಹಲ್ಲೆಯಾದಾಗ ಗುರುವಿನ ಹೆಸರು ಹೇಳಿ ರಕ್ಷಣೆಗೆ ಮೊರೆ ಹಾಕಿದ ರೋಹಿದಾಸ್ ಪೈ ಗುರುದ್ರೋಹಿಯಾ ಎನ್ನುವುದನ್ನು ಸಮಾಜ ತೀರ್ಮಾನಿಸಲಿದೆ!
Leave A Reply