100 ಸಿಸಿಗಿಂತ ಕಡಿಮೆ ಇದ್ದರೆ ಸಹಸವಾರ ಕೂರುವಂತಿಲ್ಲ!
ಹೊಸ ವರ್ಷಕ್ಕೆ ಹೊಸ ಸ್ಕೂಟರ್ ಅಥವಾ ಬೈಕ್ ಖರೀದಿಸಲು ಯೋಚಿಸುತ್ತಿದ್ದಿರಾ? ಕಾಲೇಜಿನಲ್ಲಿ ಕಲಿಯುತ್ತಿರುವ ಮಗನಿಗೋ, ಮಗಳಿಗೋ ಹೊಸ ಸ್ಕೂಟಿ ತರಹದ್ದು ಖರೀದಿಸಿ ಕೊಡಲು ಪ್ಲಾನ್ ಹಾಕುತ್ತಿದ್ದೀರಾ? ಹೌದಾದರೆ ನಿಮ್ಮ ಯೋಚನೆಗಳಿಗೆ ಬ್ರೇಕ್ ಹಾಕಿ.
ಯಾಕೆಂದರೆ ಕರ್ನಾಟಕ ರಾಜ್ಯ ಮೋಟಾರು ವಾಹನ ಕಾಯ್ದೆಯಲ್ಲಿರುವ ಕಾನೂನನ್ನು ಎತ್ತಿ ಹಿಡಿದ ರಾಜ್ಯ ಉಚ್ಚ ನ್ಯಾಯಾಲಯ ಆ ಪ್ರಕಾರ 100 ಸಿಸಿ ಮೋಟಾರು ಇಂಜಿನ್ ಗಿಂತ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳಲ್ಲಿ ಸಹಸವಾರ ಪ್ರಯಾಣಿಸುವುದರ ಕುರಿತು ಆಕ್ಷೇಪ ಎತ್ತಿ ಹಿಡಿದಿತ್ತು. ಅಂತಹ ವಾಹನಗಳಲ್ಲಿ ಅಪಘಾತಗಳು ಹೆಚ್ಚು ಸಂಭವಿಸುತ್ತಿರುವುದು ಬೆಳಕಿಗೆ ಬಂದ ಕಾರಣ ಆ ಕಳಕಳಿ ವ್ಯಕ್ತವಾಗಿತ್ತು. ಅದರಂತೆ ರಾಜ್ಯ ಸಾರಿಗೆ ಇಲಾಖೆ 100 ಸಿಸಿಗಿಂತ ಕಡಿಮೆ ಸಾಮರ್ತ್ಯದ ಇಂಜಿನ್ ಇರುವ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರನ್ನು ಒಳಗೊಂಡ ವಾಹನಗಳನ್ನು ನೋಂದಾವಣೆ ಮಾಡುವುದನ್ನು ನಿಷೇಧಿಸಿದೆ. ಈ ಮೂಲಕ ನೀವು ಖರೀದಿಸುವ ಹೊಸ ದ್ವಿಚಕ್ರ ವಾಹನಗಳು 100 ಸಿಸಿಗಿಂತ ಕಡಿಮೆ ಇದ್ದರೆ ಅದರಲ್ಲಿ ಹಿಂಬದಿ ಸೀಟನ್ನೇ ರದ್ದು ಮಾಡಬೇಕು, ಅಂತಹ ಹಿಂಬದಿ ಸೀಟು ಇರುವ ವಾಹನಗಳನ್ನು ನೋಂದಾವಣೆ ಮಾಡಬಾರದು ಎಂದು ಸಾರಿಗೆ ಇಲಾಖೆಯಿಂದ ಎಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಸುತ್ತೋಲೆ ಕಳುಹಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಈ ಸುತ್ತೋಲೆ ಈಗಾಗಲೇ ರಸ್ತೆಯಲ್ಲಿ ಇರುವ ವಾಹನಗಳಿಗೆ ಅನ್ವಯಿಸುವುದಿಲ್ಲ.
ಇದರ ಮುಖ್ಯ ಉದ್ದೇಶ ಇತ್ತೀಚೆಗೆ ಹೆಚ್ಚುತ್ತಿರುವ ಅಪಘಾತಗಳನ್ನು ಕಡಿಮೆ ಮಾಡುವುದು. ಯುವ ಜನಾಂಗ 100 ಸಿಸಿ ಕಡಿಮೆ ಇರುವ ದ್ವಿಚಕ್ರ ವಾಹನಗಳನ್ನು ಖರೀದಿಸಿ ನಿರ್ಲಕ್ಷ್ಯ ಚಾಲನೆ ಮಾಡಿದ ಕಾರಣ ಸಾವು ನೋವು ಹೆಚ್ಚು ಸಂಭವಿಸುತ್ತಿರುವುದರಿಂದ ಇಂತಹ ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಉಚ್ಚ ನ್ಯಾಯಾಲಯ ಕೂಡ ಇದನ್ನು ಇತ್ತೀಚೆಗೆ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿರುವುದನ್ನು ನಾವು ಸ್ಮರಿಸಬಹುದು.
Leave A Reply