ಬಿಲ್ಡರ್ ಗಳ ಅಕ್ರಮಕ್ಕೆ ಬ್ಯಾಂಕ್ ಮ್ಯಾನೇಜರ್ ಗಳಿಂದ ಪ್ರೋತ್ಸಾಹ;ವೈಟ್ ಕಾಲರ್ ಹಿಂದಿನ ಬ್ಲ್ಯಾಕ್ ಸತ್ಯ!
ನೀವು ಒಂದು ಚಿಕ್ಕ ವ್ಯಾಪಾರ ಮಾಡಲು ಯೋಚಿಸುತ್ತೀರಿ, ಸಾಲ ಬೇಕು ಎಂದು ಬ್ಯಾಂಕಿಗೆ ಹೋಗಿ ಮ್ಯಾನೇಜರ್ ಅವರನ್ನು ಮಾತನಾಡಿಸುತ್ತೀರಿ. ನೀವು ಸಾಮಾನ್ಯ ಶರ್ಟ್, ಪಂಚೆ, ಕಾಲಿಗೆ ಹವಾಯಿ ಚಪ್ಪಲಿ, ಕುರುಚಲು ಗಡ್ಡ, ಕೆದರಿದ ಕೂದಲು, ಹಳೆಕನ್ನಡಕ ಮತ್ತು ಯಾವುದೋ ಫಂಕ್ಷನ್ ಗೆ ಸಿಕ್ಕಿದ ಚೀಲ ಹಿಡಿದುಕೊಂಡು ಮ್ಯಾನೇಜರ್ ಚೇಂಬರ್ ಪ್ರವೇಶಿಸಿದಿರಾ, ಹಾಗಾದರೆ ನಿಮಗೆ ಲೋನ್ ಸಿಗುವುದಿಲ್ಲ ಎಂದು ಹೇಳಬೇಕಾದರೆ ಯಾವುದೇ ಬ್ರಹ್ಮಾಂಡ ಜ್ಯೋತಿಷಿ ಬೇಕಾಗಿಲ್ಲ. ನೀವು ಅವರ ಎದುರಿನಲ್ಲಿ ಕುಳಿತುಕೊಂಡ ಕೂಡಲೇ ಅವರು ಕೇಳುವ ಮೊದಲ ಪ್ರಶ್ನೆ ” ಯಾಕೆ ಬಂದಿದ್ದೀರಿ” “ಸರ್, ಮುದ್ರಾ ಯೋಜನೆಯಲ್ಲಿ ಲೋನ್ ಬೇಕಿತ್ತು” “ಇಲ್ಲರೀ, ಸಿಗುವುದಿಲ್ಲ” ನಂತರ ನೀವು ಅಲ್ಲಿಂದ ಹೊರಗೆ ಬಂದು ಬಿಸಿಲಿಗೆ ಬೆವರು ಒರೆಸಿಕೊಳ್ಳುತ್ತಿದ್ದರೆ ಒಳಗೆ ಏರ್ ಕಂಡೀಷನ್ ನಲ್ಲಿ ಕುಳಿತ ಮ್ಯಾನೇಜರ್ ಕಾಫಿ ಹೀರುತ್ತಾ ಯಾರನ್ನೊಂದಿಗೊ ಫೋನಿನಲ್ಲಿ ನಗುತ್ತಾ ಮಾತನಾಡುತ್ತಿರುತ್ತಾರೆ. ಇದು ವಾಸ್ತವವಾಗಿ ನಡೆಯುವ ವಿಷಯ.
ಈಗ ಅದನ್ನು ಇನ್ನೊಂದು ಆಂಗಲ್ ನಲ್ಲಿ ನೋಡೋಣ. ಅದೇ ಬ್ಯಾಂಕು. ಅದೇ ಮ್ಯಾನೇಜರ್. ವಿಜಯ ಮಲ್ಯನ ಲುಕ್ಕಿನಲ್ಲಿ ಒಬ್ಬ ಬಿಲ್ಡರ್ ಬರುತ್ತಾನೆ. ನಾನು ಬಿಲ್ಡಿಂಗ್ ಕಟ್ಟಿಯಾಗಿದೆ. ಅದಕ್ಕೆ ಕಂಪ್ಲೀಷನ್ ಪ್ರಮಾಣ ಪತ್ರ ಸಿಗುವುದಿಲ್ಲ. ಅದು ಸಿಗದೆ ಅದರಲ್ಲಿರುವ 140 ಮನೆಗಳನ್ನು ಯಾರಿಗೂ ಮಾರಲು ಆಗುವುದಿಲ್ಲ. ನಿಮಗೆ ಕಂಪ್ಲೀಷನ್ ಪ್ರಮಾಣ ಪತ್ರ ತೋರಿಸದೇ ನೀವು ಸಾಲ ಕೊಡಬಾರದು ಎನ್ನುವ ನಿಯಮ ಇದೆ ಎನ್ನುವುದು ಗೊತ್ತಿದೆ. ಆದರೆ ಏನೂ ಮಾಡುವುದು, ಕಂಪ್ಲೀಷನ್ ಸರ್ಟಿಫಿಕೇಟ್ ಸಿಗುವ ತನಕ ನನಗೆ ಕಾಯಲು ಆಗುವುದಿಲ್ಲ. ಇನ್ನು ಆ ಸರ್ಟಿಫೀಕೆಟ್ ಸಿಗುತ್ತದೆ ಎನ್ನುವ ಗ್ಯಾರಂಟಿ ಇಲ್ಲ. ಆ ವಾರ್ಡಿನ ಕಾರ್ಪೋರೇಟರ್ ಏನೂ ಟೆನ್ಷನ್ ಮಾಡಬೇಡಿ ಎಂದು ಹೇಳಿದ್ದಾರೆ. ಅದಕ್ಕೆ ಧೈರ್ಯದಿಂದ ಕಟ್ಟಿ ಮುಗಿಸುತ್ತೀದ್ದೇನೆ. ನೀವು ನಮ್ಮ ಫ್ಲಾಟನ್ನು ಖರೀದಿಸುವ ಗ್ರಾಹಕರಿಗೆ ಸಾಲದ ವ್ಯವಸ್ಥೆ ಮಾಡಬೇಕು” ಎಂದು ಬಿಲ್ಡರ್ ಹೇಳಿದ ತಕ್ಷಣ ಹಲ್ಲು ಕಿರಿದು ನಗುವ ಮ್ಯಾನೇಜರ್ ಈ ಕಂಪ್ಲೀಷನ್ ಸರ್ಟಿಫಿಕೇಟ್ ತೆಗೆದುಕೊಂಡು ನಾವು ಏನು ಮಾಡುವುದು, ಅದಕ್ಕೆ ಉಪ್ಪು, ಖಾರ ಹಾಕಿ ನೆಕ್ಕಲು ಆಗುತ್ತದೆಯಾ? ಅದೇನು ಕೊಸಂಬರಿ ತುಂಡಾ? ಅದು ಇದ್ದರೆ ಮಾತ್ರ ಸಾಲ ಕೊಡಬೇಕು ಎಂದು ರೂಲ್ಸ್ ಇದೆ ನಿಜ. ಅದರೆ ರೂಲ್ಸ್ ಎಲ್ಲಾ ನಮ್ಮ ಪುಸ್ತಕ ಬದನೆ ಕಾಯಿ. ನಾನು ಲೋನ್ ಪಾಸ್ ಮಾಡುತ್ತೇನೆ ಎಂದುಬಿಡುತ್ತಾರೆ. ಅಲ್ಲಿಗೆ ಮ್ಯಾನೇಜರ್ ಕಿಸೆ ಭರ್ತಿಯಾಗುತ್ತದೆ. ಮ್ಯಾನೇಜರ್ ಆ ಬಿಲ್ಡರ್ ನೊಂದಿಗೆ ಆತ್ಮೀಯರಾಗುತ್ತಾರೆ. ಒಂದು ನಗರ ಅವೈಜ್ಞಾನಿಕವಾಗಿ ಬೆಳೆಯಲು ತಾವೇ ನೆರವಾಗುತ್ತಾರೆ. ಹೊರಗಿನ ಸಮಾಜದಲ್ಲಿ ಮಾತ್ರ ಶ್ವೇತ ವರ್ಣದ ಬಟ್ಟೆ ಧರಿಸಿ ತಮ್ಮಷ್ಟು ಶುದ್ಧ ಯಾರೂ ಇಲ್ಲ ಎಂದು ಫೋಸ್ ಕೊಡುವ ಬ್ಯಾಂಕ್ ಮ್ಯಾನೇಜರ್ ಗಳಲ್ಲಿ ಹೆಚ್ಚಿನವರು ನಗರವನ್ನು ಹಾಳು ಮಾಡಿದ್ದು ಹೀಗೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಆದೇಶದ ಪ್ರಕಾರ ಕಂಪ್ಲೀಶನ್ ಸರ್ಟಿಫೀಕೇಟ್ ಇಲ್ಲದೆ ಲೋನ್ ಕೊಡಲು ಆಗುತ್ತಾ ಎಂದು ಅದೇ ಮೊದಲಿಗೆ ಬಂದ ಪಾಪದ ಗ್ರಾಹಕ ಕೇಳಲಿ, ಮ್ಯಾನೇಜರ್ ಅವರಿಗೆ ಮುಖಕ್ಕೆ ಹೊಡೆದ ಹಾಗೆ ಆಗಲ್ವಾ. ಆದರೆ ಮಂಗಳೂರಿನಲ್ಲಿ ಆಗುವುದು ಹೀಗೆ. ಎಷ್ಟೋ ವಸತಿ ಸಮುಚ್ಚಯಗಳಿಗೆ ಕಂಪ್ಲೀಶನ್ ಪ್ರಮಾಣ ಪತ್ರ ಇಲ್ಲವೇ ಇಲ್ಲ. ಮುಕ್ಕಾಲು ಫ್ಲಾಟುಗಳು ಭರ್ಥಿಯಾಗಿವೆ. ಈ ಬ್ಯಾಂಕ್ ಮ್ಯಾನೇಜರ್, ಬಿಲ್ಡರ್ ಗಳ ಕೊಡು ಕೊಳ್ಳುವಿಕೆಯಿಂದ ಏನು ಬೇಕಾದರೂ ಆಗುತ್ತದೆ ಎನ್ನುವುದಕ್ಕೆ ಇದೊಂದು ಚಿಕ್ಕ ಮತ್ತು ಅಸಹ್ಯ ಉದಾಹರಣೆ. ವೈಟ್ ಕಾಲರ್ ಹಿಂದಿನ ಬ್ಲ್ಯಾಕ್ ಸತ್ಯ. ಅದು ಆಗುತ್ತೆ ಎಂದು ಗೊತ್ತಿದ್ದೆ ಶಾರದಾ ನಿಕೇತನ ರಸ್ತೆಯ ನಿವಾಸಿಗಳು ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಹಾಕಿದ್ದಾರೆ. ಯಾಕೆಂದರೆ ರಾಜ್ಯ ಉಚ್ಚ ನ್ಯಾಯಾಲಯದಿಂದ ಬಂದಿರುವ ಆದೇಶ ಶಾರದಾನಿಕೇತನ ರಸ್ತೆಯ ನಿವಾಸಿಗಳಿಗೆ ಸಮಾಧಾನ ತಂದಿರಲಿಲ್ಲ. ಕರ್ನಾಟಕ ಹೈಕೋರ್ಟ್ ಏನು ಆದೇಶ ಕೊಟ್ಟಿತ್ತು ಎಂದರೆ ರಸ್ತೆ ಅಗಲೀಕರಣ ಆಗದೇ ಆ ಕಟ್ಟಡಕ್ಕೆ ಕಂಪ್ಲೀಷನ್ ಸರ್ಟೀಪೀಕೇಟ್ ಕೊಡಬಾರದು. ಅದು ಯಾವುದೇ ರೀತಿಯಲ್ಲಿಯೂ ದಾವೆ ಹೂಡಿದವರಿಗೆ ಅನುಕೂಲವಾಗುವುದಿಲ್ಲ ಎಂದು ಈ ಮೇಲೆ ವಿವರವಾಗಿ ವಿವರಿಸಿದ್ದೆನೆ. ಅದರಿಂದ ಅಲ್ಲಿನವರಿಗೆ ಆ ತೀರ್ಪಿನಿಂದ ತೃಪ್ತಿ ಇರಲಿಲ್ಲ. ಕಂಪ್ಲೀಷನ್ ಪ್ರಮಾಣ ಪತ್ರ ಇರದಿದ್ದರೆ ಆಗುವುದು ಏನೂ ಇರಲಿಲ್ಲ. ಆದ್ದರಿಂದ ಆ ರಸ್ತೆಯ ನಿವಾಸಿಗಳಿಗೆ ಸುಪ್ರೀಂ ಕೋರ್ಟಿಗೆ ಹೋಗುವುದು ಅನಿವಾರ್ಯವಾಯಿತು. ಇನ್ನು ಸಿಟಿ ಡೆವಲಪ್ ಮೆಂಟ್ ಪ್ಲಾನ್ ನಲ್ಲಿದ್ದ ರಸ್ತೆ ಅಗಲ ಮಾಡಲು ಆಗುತ್ತಾ? ಇನ್ನೂ ಸುಪ್ರೀಂ ಕೋರ್ಟಿನಲ್ಲಿ ಬಿಲ್ಡರ್ ಪರವಾಗಿ ವಾದಿಸಲು ನಿಂತ ಕಾಂಗ್ರೆಸ್ ನ ರಾಷ್ಟ್ರೀಯ ನಾಯಕ ಯಾರು? ಆ ವಕೀಲನ ಒಂದು ದಿನದ ಫೀಸ್ ಎಷ್ಟು? ಇಷ್ಟು ಶ್ರೀಮಂತ, ಪ್ರಭಾವಿ, ಯಾವುದನ್ನು ಕೂಡ ಕೊಂಡುಕೊಳ್ಳಬಲ್ಲ ಬಿಲ್ಡರ್ ಎದುರು ಹೋರಾಡುವುದು ಅಷ್ಟು ಸುಲಭನಾ? ಎಲ್ಲವನ್ನು ಹೇಳಿ ಶಾರದಾ ನಿಕೇತನ ರಸ್ತೆಯ ನಿವಾಸಿಗಳಿಗೆ ಗುಡ್ ಲಕ್ ಹೇಳಿ ನಾಳೆ ಈ ಸ್ಟೋರಿಗೆ ಇತಿಶ್ರೀ ಹಾಡಲಿದ್ದೇನೆ!
Leave A Reply