ನಕಲಿ ಕಂಪನಿಗಳ ಗುರುತಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ
ದೆಹಲಿ: ನೋಟು ನಿಷೇಧದ ಬಳಿಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬೇನಾಮಿ ಆಸ್ತಿ ಹಾಗೂ ಕಪ್ಪು ಹಣದ ವಿರುದ್ಧದ ಕಾರ್ಯಾಚರಣೆ ಮುಂದುವರಿಸಿದ್ದು, ನಕಲಿ ಕಂಪನಿಗಳನ್ನು ಗುರುತಿಸುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ನೋಟು ನಿಷೇಧದ ಬಳಿಕ ಆದಾಯ ತೆರಿಗೆ ಇಲಾಖೆ ಅಕ್ರಮವಾಗಿ ವಹಿವಾಟು ನಡೆಸಿದ 2.1 ಲಕ್ಷ ಕಂಪನಿಗಳನ್ನು ಗುರುತಿಸಿದ್ದು, ಈಗ ಆ ಕಂಪನಿಗಳ ವಹಿವಾಟು, ಆಸ್ತಿ, ಉತ್ಪಾದನೆ ಸೇರಿ ನಾನಾ ಅಂಶ ಶೋಧಿಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.
ಈಗಾಗಲೇ ರಾಜ್ಯ ಸರ್ಕಾರಗಳು ನಕಲಿ ಕಂಪನಿಗಳ ಪತ್ತೆ ಹಚ್ಚುವಿಕೆ ಕಾರ್ಯದಲ್ಲಿ ನಿರತವಾಗಿದ್ದರೂ, ಪ್ರಕ್ರಿಯೆ ತಾರ್ಕಿಕ ಅಂತ್ಯ ಕಂಡಿಲ್ಲ. ಹಾಗಾಗಿ ಕೂಡಲೇ ಕಂಪನಿಗಳ ಪತ್ತೆ ಹಚ್ಚಿ ಸರ್ಕಾರಕ್ಕೆ ವರದಿ ನೀಡಬೇಕು ಎಂದು ಕೇಂದ್ರ ಕಾನೂನು ಹಾಗೂ ಕಾರ್ಪೋರೇಟ್ ವ್ಯವಹಾರ ಖಾತೆ ರಾಜ್ಯ ಸಚಿವ ಪಿ.ಪಿ.ಚೌಧರಿ ಸೂಚನೆ ನೀಡಿದ್ದಾರೆ.
ಆದಾಗ್ಯೂ ಜಿಲ್ಲಾಡಳಿತಕ್ಕೆ ಇಂಥ ವಹಿವಾಟು ನಡೆಸುವ ಕಂಪನಿಗಳ ಮೇಲೆ ಕಣ್ಣಿಡಲು ತಿಳಿಸಿದ್ದರೂ, ರಾಜ್ಯ ಸರ್ಕಾರಗಳು ಬೇನಾಮಿ ಆಸ್ತಿ, ಕಂಪನಿಯ ಒಡೆತನ, ವಹಿವಾಟು, ಆಸ್ತಿ ಗಳಿಕೆ ಪ್ರಮಾಣದಲ್ಲಿನ ಏರಿಕೆ ಕುರಿತು ತನಿಖೆ ನಡೆಸಬೇಕು ಎಂದಿದ್ದಾರೆ.
ಕೇಂದ್ರ ಸರ್ಕಾರ 2016ರ ನ.8ರಂದು ನೋಟು ನಿಷೇಧದ ಬಳಿಕ ಬೇನಾಮಿ ಆಸ್ತಿ ಮೇಲೂ ಕಣ್ಣಿಟ್ಟಿದ್ದು, ಹಲವು ಕಂಪನಿಗಳ ನೋಂದಣಿ ಸಹ ರದ್ದುಗೊಳಿಸಿದೆ. ಆ ಮೂಲಕ ಕಪ್ಪು ಹಣದ ವಿರುದ್ಧ ಸಮರ ಸಾರಿ ನಿಂತಿದೆ.
Leave A Reply