ಭಾರತಕ್ಕಿದೆ ಭಯೋತ್ಪಾದನೆ ಎದುರಿಸುವ ತಾಕತ್ತು: ರಾಜನಾಥ್ ಸಿಂಗ್
ಹೈದರಾಬಾದ್: ಭಾರತದ ರಕ್ಷಣಾ ಇಲಾಖೆ ಜಾಗತಿಕ ಭಯೋತ್ಪಾದನೆಯನ್ನು ಎದುರಿಸುವ ತಾಕತ್ತನ್ನು ಹೊಂದಿದೆ. ಐಸಿಸ್ ಸಂಘಟನೆ ಭಾರತ ಪ್ರವೇಶ ತಡೆಯಲು ಮತ್ತು ಮೂಗುದಾರ ಹಾಕಲು ಭಾರತದ ಗುಪ್ತಚರ ಇಲಾಖೆ ಮತ್ತು ರಕ್ಷಣಾ ಇಲಾಖೆ ಕಾರ್ಯ ನಿರ್ವಹಿಸುತ್ತಿವೆ. ವಿಶ್ವಕ್ಕೆ ಮಾರಕವಾಗಿರುವ ಐಸಿಸ್ ನಂತಹ ಸಂಘಟನೆಗಳನ್ನು ಬಗ್ಗುಬಡಿಯುವ ಶಕ್ತಿ ಭಾರತಕ್ಕಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್ ನ ವಲ್ಲಭಬಾಯಿ ಪಟೇಲ್ ನ್ಯಾಷನಲ್ ಪೊಲೀಸ್ ಅಕಾಡೆಮಿಯಲ್ಲಿ ನಡೆದ ಐಪಿಎಸ್ ಪ್ರೊಬೇಷನರಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಮುಂದಿನ ಐದು ವರ್ಷದಲ್ಲಿ ಭಾರತದಲ್ಲಿ ಭಯೋತ್ಪಾದನೆ ಮತ್ತು ಕೋಮುವಾದವನ್ನು ತಡೆಯಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರ, ನಕ್ಸಲಿಸಂ ತಡೆಗಟ್ಟುವ ಗುರಿ ಹೊಂದಬೇಕಿದೆ ಎಂದು ಹೇಳಿದರು.
ಪ್ರಸ್ತುತ ವಿಶ್ವ ಭಯೋತ್ಪಾದನೆಯ ಭೀತಿಯಲ್ಲಿದೆ. ಇನ್ನು ಐಸಿಸ್ ನಂತಹ ಸಂಘಟನೆಗಳು ಅಂತರ್ಜಾಲವನ್ನು ಬಳಸಿ ಉಗ್ರತ್ವವನ್ನು ಹರಡುತ್ತಿವೆ. ಅದು ಭಾರತಕ್ಕೆ ಕಾಲಿಡದಂತೆ ನೋಡಿಕೊಳ್ಳಬೇಕು. ನಮ್ಮ ಗುಪ್ತಚರ ಮತ್ತು ರಕ್ಷಣಾ ಸಂಸ್ಥೆಗಳು ದುಷ್ಟರಿಗೆ ತಕ್ಕ ಪ್ರತಿಕ್ರಿಯೆಯನ್ನು ನೀಡುತ್ತಿವೆ. ಯಾವುದೇ ಆತಂಕ ಪಡುವಂತಿಲ್ಲ. ಆದರೆ ಮುನ್ನಚ್ಚರಿಕೆಯಲ್ಲಿರಬೇಕು ಎಂದು ಎಚ್ಚರಿಕೆ ನೀಡಿದರು.
ಪೊಲೀಸ್ ಇಲಾಖೆ ರಕ್ಷಣೆಗೆ ಭಾರತ ಸರಕಾರ ಸದಾ ಸಿದ್ಧವಾಗಿದೆ. ಪೊಲೀಸ್ ಇಲಾಖೆ ಬಲವರ್ಧನೆಯನ್ನು ಮಾಡಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಗ್ಗಟ್ಟಿನಿಂದ ಕೂಡಿ ಈ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕಿದೆ. ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸೋಣ ಎಂದು ಸಲಹೆ ನೀಡಿದರು.
Leave A Reply