ಮೇಯರ್ ನಿಂದ ಪೆಟ್ಟು ತಿಂದ ಕಮಲಾಳಿಗೆ ಫೋನ್ ಮಾಡಿ ಧೈರ್ಯ ತುಂಬಿದ ಬಾಗಲಕೋಟೆ ಸಂಸದ!
ಕಮಲಾ ಹಾಗೂ ಪುಂಡಲೀಕ ದಂಪತಿಗಳು ರಾಜಕೀಯ ವ್ಯಕ್ತಿಗಳಲ್ಲ. ಅವರು ದೂರದ ಬಾಗಲಕೋಟೆಯಿಂದ ಮಂಗಳೂರಿಗೆ ಬಂದದ್ದು ಇಲ್ಲಿ ರಿಯಲ್ ಎಸ್ಟೇಟ್ ವ್ಯಾಪಾರ ಮಾಡೋಣ ಎಂದು ಅಲ್ಲ. ಅವರದ್ದು ಹೊಟ್ಟೆಪಾಡು. ಅಲ್ಲಿ ಕೆಲಸ ಸಿಗಲಿಲ್ಲ ಎಂದು ಊರು ಬಿಟ್ಟು ಬಂದವರು ಅವರು. ಅವರು ಎಷ್ಟೇ ಒತ್ತಡ ಹಾಕಿದರೂ ಓರ್ವ ಮೇಯರ್ ಮೇಲೆ ಸುಳ್ಳು ದೂರು ಕೊಡಲು ಚಾನ್ಸೇ ಇಲ್ಲ. ಇನ್ನು ರಾಜಕೀಯದವರ ಬಗ್ಗೆ ಗೊತ್ತಿದ್ದರಂತೂ ಅವರು ದೂರು ಕೊಡುವ ಸಂಭವವೇ ಇಲ್ಲ. ಅದರಲ್ಲಿಯೂ ವಿಪಕ್ಷದಲ್ಲಿದ್ದ ಪಕ್ಷವನ್ನು ನಂಬಿ ಸುಳ್ಳು ದೂರು ಕೊಟ್ಟು ನಂತರ ಅವರು ಕೈಬಿಟ್ಟರೆ ಅತ್ತ ಬಾಗಲಕೋಟೆಯೂ ಇಲ್ಲ, ಇತ್ತ ಮಂಗಳೂರು ಕೂಡ ಇಲ್ಲ ಎಂದು ಅವರಿಗೆ ಗೊತ್ತಿದ್ದರೆ ಅವರು ಸುಳ್ಳು ದೂರು ಕೊಡಲು ಹೊರಗೆ ಹೋಗಲು ಧೈರ್ಯವೇ ಮಾಡುವುದಿಲ್ಲ. ಆದರೂ ಕಮಲಾ ತನ್ನ ಪುಟ್ಟ ಮಗುವನ್ನು ಕಂಕುಳಲ್ಲಿ ಹಿಡಿದು ಗಂಡನನ್ನು ಕರೆದುಕೊಂಡು ದೂರು ಕೊಡಲು ಮನಸ್ಸು ಮಾಡಿದ್ದಾಳೆ ಎಂದರೆ ಅದರಲ್ಲಿ ಸತ್ಯಾಂಶ ಇರಲೇಬೇಕು. ಒಂದು ವೇಳೆ ಸತ್ಯ ಇಲ್ಲದಿದ್ದರೆ ನಾಳೆ ತಮ್ಮನ್ನು ಇಲ್ಲಿನ ಕಾಂಗ್ರೆಸ್ ನಾಯಕರು ಏನು ಮಾಡುತ್ತಾರೆ ಎನ್ನುವುದು ಅವರಿಗೆ ಗೊತ್ತಿಲ್ಲದೇ ಇರಲು ಸಾಧ್ಯವಿಲ್ಲ.
ಇನ್ನೂ ಮೇಯರ್ ಕವಿತಾ ಸನಿಲ್ ಹೇಳುವ ಹಾಗೆ ಬಿಜೆಪಿಯವರ ಕುಮ್ಮಕ್ಕಿನಿಂದ ಕಮಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ ಎಂದಿದ್ದಾರೆ. ಮೇಡಂ, ಕುಮ್ಮಕ್ಕು ಕೊಟ್ಟರೋ, ಧೈರ್ಯ ಕೊಟ್ಟರೋ ಅದು ನಂತರದ ವಿಷಯ. ಮೊದಲು ನೀವು ಹೊಡೆದದ್ದು ಮತ್ತು ಆಕೆಯ ಮಗುವನ್ನು ಎತ್ತಿ ಬಿಸಾಡಿದ್ದು ನಿಜ ಇದ್ದ ಕಾರಣ ಅವಳ ಮೇಲೆ ಆದ ದೌರ್ಜನ್ಯವನ್ನು ಬೇರೆಯವರಿಂದ ಕೇಳಿ ತಿಳಿದುಕೊಂಡ ರೂಪಾ ಡಿ ಬಂಗೇರ ಹಾಗೂ ಪೂಜಾ ಪೈ ಇಬ್ಬರೂ ಕಮಲಾ ಇದ್ದ ಕಡೆ ಹೋಗಿರಬಹುದು. ಒಂದು ವೇಳೆ ಇವರು ಹೋಗದಿದ್ದರೆ ಏನಾಗುತ್ತಿತ್ತು. ಸತ್ಯ ಹೊರಗೆ ಬರುತ್ತಿರಲಿಲ್ಲ, ಅಷ್ಟೇ. ನೀವು ಕರಾಟೆ ಪ್ರಾಕ್ಟೀಸ್ ಮ್ಯಾಚ್ ಆಯಿತು ಎಂದು ಆರಾಮದಿಂದ ಕರಾಟೆ ಚಾಂಪಿಯನ್ ಉದ್ಘಾಟನೆಗೆ ಹೋಗುತ್ತಿದ್ದಿರಿ. ಈಗ ಸತ್ಯ ಹೊರಗೆ ಬಂದಿರುವುದರಿಂದ ನಿಮಗೆ ಟೆನ್ಷನ್ ಕಾಣಿಸುತ್ತಿದೆ. ಮೇಯರ್ ಅವರೇ ನಿಮಗೆ ಒಂದು ವಿಷಯ ಗೊತ್ತಿದೆಯೋ ಇಲ್ವೋ. ತನ್ನ ಮೇಲೆ ಆದ ದೌರ್ಜನ್ಯವನ್ನು ಕಮಲಾ ಮನಸ್ಸು ಮಾಡಿದ್ದರೆ ನಿಮ್ಮ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಹಾಳು ಮಾಡಬಹುದಿತ್ತು. ಕಮಲಾ ಮತ್ತು ಆಕೆಯ ಮಗುವಿನ ಮೇಲೆ ಹಲ್ಲೆಯಾದ ಮರುದಿನ ಬೆಳಿಗ್ಗೆ ಅವಳ ಮೊಬೈಲಿಗೆ ಒಂದು ಕರೆ ಬಂದಿದೆ. ಕರೆ ಮಾಡಿದ್ದು ಬಾಗಲಕೋಟೆಯ ಸಂಸದ ಪಿಸಿ ಗದ್ದಿಗೌಡರ್. ತನ್ನ ಕ್ಷೇತ್ರದ ನಾಗರಿಕರೊಬ್ಬರ ಮೇಲೆ ಮಂಗಳೂರಿನಲ್ಲಿ ಹಲ್ಲೆಯಾದದ್ದಕ್ಕೆ ಫೋನ್ ಮಾಡಿ ವಿಚಾರಿಸಿದ ಗದ್ದಿಗೌಡರ್ ಏನಾದರೂ ತೊಂದರೆ ಆದ್ರೆ ನನ್ನ ಇದೇ ನಂಬರಿಗೆ ಫೋನ್ ಮಾಡಿ. ಹೊಡೆದವರು ಯಾರೇ ಇರಲಿ ನಾನು ವಿಚಾರಿಸುತ್ತೇನೆ ಎಂದು ಧೈರ್ಯ ತುಂಬಿದ್ದಾರೆ. ಆಗಲೇ ಕಮಲಾ ” ಇಲ್ಲಿ ನಮ್ಮ ರಕ್ಷಣೆಗೆ ಯಾರೂ ಇಲ್ಲ ಅಣ್ಣ, ಏನು ಮಾಡುವುದು ಗೊತ್ತಾಗುತ್ತಿಲ್ಲ” ಎಂದಿದ್ದರೆ ಕಥೆ ಏನಾಗುತ್ತಿತ್ತು ಎಂದು ಮೇಯರ್ ಅವರಿಗೆ ಗೊತ್ತಿದೆ. ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ಚಂಡಿಕೋರಿ ಇರಬಹುದು. ಆದರೆ ಆ ಕಡೆಯ ಎಂಎಲ್ ಎ, ಎಂಪಿಗಳು ಹೇಗಿರುತ್ತಾರೆ ಎಂದರೆ ಏಕ್ ಮಾರೋ ದೋ ತುಕಡಾ.
ಆದರೂ ಕಮಲಾ ” ಇಲ್ಲ ಸಾಹೇಬ್ರೆ, ಇಲ್ಲಿ ಸ್ವಲ್ಪ ಜನ ಒಳ್ಳೆಯವರು ಇದ್ದಾರೆ, ಅವರು ರಕ್ಷಣೆ ಕೊಟ್ಟಿದ್ದಾರೀ” ಎಂದು ಹೇಳಿದ ಕಾರಣ ಗದ್ದಿಗೌಡರ್ ಸೈಲೆಂಟ್ ಆಗಿದ್ದರು. ಮೇಯರ್ ಅವರೇ, ಎಲ್ಲೋ ಕಮಲಾಳ ಒಳ್ಳೆ ಮನಸ್ಸಿನಿಂದ ಅವಳು ನಿಮ್ಮ ಹೆಸರು ದೆಹಲಿ ಮಟ್ಟದಲ್ಲಿ ಹಾಳಾಗುವುದು ತಪ್ಪಿಸಿದ್ದಾಳೆ. ಇಲ್ಲದಿದ್ದರೆ ರಾಹುಲ್ ಗಾಂಧಿ ರಮಾನಾಥ್ ರೈ ಅವರಿಗೆ ಫೋನ್ ಮಾಡಿ ” ರೈಜೀ, ಹಮಾರಾ ಪಕ್ಷಕಾ ಮೇಯರ್ ನೆ ಕಿಸ್ ಕೋ ಮಾರಾ ಕ್ಯಾ?, ಇಸೀ ತರಾ ಹೂವಾ ತೋ ಆಗೆ ವಾಲೆ ಇಲೆಕ್ಷನ್ ಮೇ ಹಮ್ ಕೋ ಕೋಣ್ ವೋಟ್ ದೇಗಾ” ಎಂದು ಕೇಳುತ್ತಿರಲಿಲ್ಲವಾ?
ಇನ್ನು ಕಮಲಾ ನನ್ನ ಮಗಳನ್ನು ಕೊಲ್ಲಲು ಪ್ರಯತ್ನಿಸಿದ್ದಾಳೆ ಎಂದು ಕೇಸ್ ಮಾಡಿದ್ರಿ ಮತ್ತು ನಿಮ್ಮ ಮಗಳನ್ನು ಕುಳ್ಳಿರಿಸಿ ಪ್ರೆಸ್ ಮೀಟ್ ಮಾಡಿದ್ರಿ. ನಿಮ್ಮ ಮಗಳನ್ನು ಯಾಕಮ್ಮ ಹೀಗೆ ಮಾಡಿದೆ ಎಂದು ಸೆಕ್ಯೂರಿಟಿ ಗಾರ್ಡ್ ಪತ್ನಿ ಕೇಳಲು ಬಂದಾಗ ನಿಮ್ಮ ಮಗಳ ಓಡಿ ಹೋದ್ರೆ ಅದು ಕೊಲೆಯತ್ನ. ಅದೇ ನೀವು ಸೆಕ್ಯೂರಿಟಿ ಗಾರ್ಡ್ ನ ಪುಟ್ಟ ಮಗುವನ್ನು ಎತ್ತಿ ಬಿಸಾಡಿದ್ರೆ ಅದು ಪ್ರೀತಿನಾ! ನೀವು ಹೇಗೆ ನನ್ನನ್ನು ತಾಯಿಯಾಗಿ ನೋಡಿ, ಮೇಯರ್ ಆಗಿ ನೋಡಬೇಡಿ ಎನ್ನುತ್ತೀರೋ ಹಾಗೆ ಕಮಲಾ ಕೂಡ ತಾಯಿಯೇ ಅಲ್ಲವೇ. ಅವಳ ಪುಟ್ಟ ಮಗು ಏನು ಆಕಾಶದಿಂದ ಉದುರಿದ್ದಾ. ಇನ್ನು ಕಟೀಲ್ ದುರ್ಗಾಪರಮೇಶ್ವರಿಯ ಎದುರು ಆಣೆ ಎಂದು ಮಾತನಾಡುತ್ತೀರಿ. ಅದನ್ನು ಬಿಜೆಪಿಯ ರೂಪಾ ಬಂಗೇರ ಸ್ವೀಕರಿಸಿದ್ದಾರೆ. ಹೋಗಿ ಇಬ್ಬರೂ ಪ್ರಾರ್ಥಿಸಿ. ಸತ್ಯ ಗೊತ್ತಾಗುತ್ತೆ. ಇನ್ನು ಸಿಸಿಟಿವಿ ಫೂಟೇಜ್. ಕಮಲಾ ನಿಮ್ಮ ಮಗಳ ಹಿಂದೆ ಹೋದದ್ದನ್ನು ನೀವು ತೋರಿಸಿದ್ದಿರಿ. ನೀವು ಸೆಕ್ಯೂರಿಟಿಯವರ ಕೋಣೆಯ ತನಕ ಹೋದದ್ದು ಯಾಕೆ ಬಂದಿಲ್ಲ!
Leave A Reply