ಮಿಸ್ಟರ್ ಪಿ.ಚಿದಂಬರಂ, ಕಾಶ್ಮೀರಕ್ಕೆ ಇನ್ನೂ ಎಷ್ಟು ಸ್ವಾಯತ್ತತೆ ಬೇಕು?
ಕೇಂದ್ರ ಸರ್ಕಾರ ಕಾಶ್ಮೀರದಲ್ಲಿ ಶಾಂತಿ ನೆಲೆಸಲು, ಗತವೈಭವ ಮರುಕಳಿಸಲು ಯತ್ನಿಸುತ್ತಿದೆ. ಅದಕ್ಕಾಗಿ ರಾಜ್ಯ ಸರ್ಕಾರದೊಡನೆ ಕೈ ಜೋಡಿಸಿ ಉಗ್ರರ ಸಂಹಾರಕ್ಕೆ ನಿಂತಿದೆ. ಕಲ್ಲು ತೂರಾಟಗಾರರ ಕೈ ಕಟ್ಟಲು ತೊಡೆತಟ್ಟಿದೆ. ಪ್ರತ್ಯೇಕತವಾದಿಗಳ ಹೆಡೆಮುರಿಕಟ್ಟಲು ಎನ್ಐಎಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಮಾತುಕತೆ ಮೂಲಕವಾದರೂ ಸಮಸ್ಯೆ ಬಗೆಹರಿಸಿದರಾಯಿತು ಎಂದು ದಿನೇಶ್ವರ್ ಶರ್ಮಾ ಎಂಬ ಸಂಧಾನಕಾರರನ್ನೂ ನೇಮಿಸಿದೆ. ಒಂದು ರಾಜ್ಯದ ಸುಭೀಕ್ಷೆಗಾಗಿ ಒಂದು ಸರ್ಕಾರ ಏನೇನು ಮಾಡಬೇಕೋ, ಅದೆಲ್ಲವೂ ಕೇಂದ್ರ ಸರ್ಕಾರ ಮಾಡುತ್ತಿದೆ.
ಆದರೆ, ಕಾಂಗ್ರೆಸ್ ಮುಖಂಡ, ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಮಾತ್ರ ಕಾಶ್ಮೀರಕ್ಕೆ ಸ್ವಾಯತ್ತತೆ ಬೇಕು ಎಂದು ಉವಾಚಿಸಿದ್ದಾರೆ!
ಮಿಸ್ಟರ್ ಚಿದಂಬರಂ, ಕಾಂಗ್ರೆಸ್ಸಿನಿಂದ, ನಿಮ್ಮಿಂದ ಇಂಥಾ ಹೇಳಿಕೆಯನ್ನು ನಿರೀಕ್ಷಿಸಬಹುದು ಬಿಡಿ. 1947ರಲ್ಲಿ ದೇಶದ ಮೊದಲ “ಜೀಪ್ ಹಗರಣ” ಸೃಷ್ಟಿಸಿದ ನಿಮ್ಮ ಸರ್ಕಾರ, 1.25 ಲಕ್ಷ ಕಿ.ಮೀ.ಭಾರತದ ಪ್ರದೇಶವನ್ನು ಶತ್ರುಗಳಿಗೆ ಒಪ್ಪಿಸಿದ ನಿಮ್ಮಿಂದ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ?
ಚಿದಂಬರಂ ನೆನಪಿದೆಯಾ? ನಿಮ್ಮ ಕಾಂಗ್ರೆಸ್ಸಿನ ಪ್ರಧಾನಿ ಜವಾಹರ್ ಲಾಲ್ ನೆಹರೂ, ನಮ್ಮದೇ ಅಕ್ಷಯ್ ಚಿನ್ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಾಗ, ಲೋಕಸಭೆಯಲ್ಲಿ ನೆಹರು, “ಆ ಪ್ರದೇಶದಲ್ಲಿ ಒಂದು ಹುಲ್ಲೂ ಹುಟ್ಟುವುದಿಲ್ಲ, ಹೋದರೆ ಹೋಯಿತು” ಎಂದು ಲೋಕಸಭೆಯಲ್ಲಿ ಲಜ್ಜೆಗೆಟ್ಟು ಮಾತನಾಡಿದರಲ್ಲ? ಅಂದೇ ತಿಳಿಯಿತು, ದೇಶದ ಪ್ರದೇಶಗಳ ಮೇಲೆ ನಿಮಗೆಷ್ಟು ಸ್ವಾಯತ್ತತೆ ಇದೆ ಎಂದು.
ಚಿದಂಬರಂ ಅವರೇ, ಅನುಭವಿ ರಾಜಕಾರಣಿಯಾದ ನೀವು, ತಿರುವಳ್ಳುವರ್ ಅವರ “ತಿರುಕುರುಲ್” ಕೃತಿ ಓದಿದ್ದೀರಿ ಎಂದುಕೊಂಡಿದ್ದೇನೆ. ಅದರಲ್ಲಿ ದೇಶದ ರಕ್ಷಣೆ ಬಗ್ಗೆ ತಿರುವಳ್ಳುವರ್ ಬರೆದ ಅಂಶಗಳನ್ನು, ಸಂದೇಶವನ್ನು, ರಕ್ಷಣೆ ಹಾಗೂ ಭದ್ರತೆಯ ಮಹತ್ವವನ್ನು ಎಂದಾದರೂ ಓದಿದ್ದೀರಾ? ಓದಿದ್ದರೆ ನೀವು ಹೀಗೆ ಮಾತನಾಡುತ್ತಿರಲಿಲ್ಲ.
ನೀವೇನೋ ಕಾಶ್ಮೀರಕ್ಕೆ ಸ್ವಾಯತ್ತತೆ ಬೇಕು ಎಂದು ಪ್ರತ್ಯೇಕವಾದಿಗಳ ಆಜಾದಿ ಘೋಷಣೆಗೆ ನೀರೆರೆದಿರಿ? ಆದರೆ ನಿಮ್ಮ ಮಾತು ಎಂಥಾದ್ದು, ಅದರ ಮೌಲ್ಯ ಎಂಥಾದ್ದು ಎಂಬುದನ್ನು ಅರಿತಿದ್ದೀರಾ? ವೈರಿಗಳ ವಿರುದ್ಧ ಬಡಿದಾಡುವ, ರಕ್ತ ಕೊಟ್ಟಾದರೂ ಕಾಶ್ಮೀರ ಉಳಿಸಿಕೊಳ್ಳುತ್ತೇನೆ ಎಂದು ಚಳಿಯಲ್ಲೂ ಬೆವರು ಬರುವಂತೆ ಹೋರಾಡುವ ಸೈನಿಕನಿಗೆ ನಿಮ್ಮ ಮಾತಿನಿಂದ ಎಂಥ ಪೆಟ್ಟು ಬೀಳುತ್ತದೆ ಎಂಬುದನ್ನು ಮರೆತಿದ್ದೀರಾ? ಸ್ವಲ್ಪ ಪಕ್ಷ, ಸಿದ್ಧಾಂತವನ್ನು ಮನೆಯಲ್ಲಿಟ್ಟು ಮಾತನಾಡಿ. ಏಕೆಂದರೆ, ಪಕ್ಷ, ಸಿದ್ಧಾಂತಕ್ಕಿಂತ ದೊಡ್ಡದು ದೇಶ. ಕನಿಷ್ಠ ಪಕ್ಷ, ಮುಖಂಡರಾದ ನಿಮ್ಮ ಹೇಳಿಕೆ ಪರಿಣಾಮ ಬೀರುತ್ತದೆ ಎಂಬ ಅರಿವಾದರೂ ನಿಮಗಿರಲಿ.
ಕಾಶ್ಮೀರವನ್ನು ನೀವು ಯಾವ ದೇಶದ ಭಾಗ ಎಂದು ಭಾವಿಸಿದ್ದೀರಿ? ಯೋಧರು ಕಾರಣವಿಲ್ಲದೆಯೇ ವೈರಿಗಳ ವಿರುದ್ಧ ಬಡಿದಾಡುತ್ತಿದ್ದಾರೆಯೇ? ಅವರೇನು ಮೂರ್ಖ ಯುದ್ಧ ಮಾಡುತ್ತಿದ್ದಾರೆಯೇ? ನಿಮ್ಮ ಮಾತಿನ ಉದ್ದೇಶ, ಕಾಶ್ಮೀರ ಕಣಿವೆ, ಬರೀ ಸುನ್ನಿ ಮುಸ್ಲಿಮರ ಕಣಿವೆಯಾಗಬೇಕು ಎಂಬುದೇ? ಅಥವಾ ಅವರಿಗೆ ಸ್ವಾಯತ್ತತೆ ನೀಡುವುದಾಗಿ ಯಾರಾದರೂ ವಾಗ್ದಾನ ಮಾಡಿದ್ದಾರೆಯೇ? ಸಂವಿಧಾನದಲ್ಲಿ ಉಲ್ಲೇಖವಿದೆಯೇ ಅಥವಾ ಅದೇನು ಪಿತ್ರಾರ್ಜಿತ ಆಸ್ತಿಯೇ?
ನಿಮಗೆ ನೆನಪಿರಲಿ, ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದರೂ, ದೇಶದ ಹಲವು ರಾಜ್ಯಗಳಿಗೆ ಹೋಲಿಸಿದರೆ ಅಲ್ಲಿ ಹಲವು ಕ್ಷೇತ್ರಗಳಲ್ಲಿ ಸ್ವಾಯತ್ತತೆ ನೀಡಲಾಗಿದೆ. ಬೇರೆ ರಾಜ್ಯಗಳಿಗಿಲ್ಲದ ಪ್ರತ್ಯೇಕ ಧ್ವಜ, ಕಾಶ್ಮೀರಕ್ಕಿದೆ. ದೇಶಕ್ಕೊಂದೇ ಸಂವಿಧಾನವಾದರೆ, ಕಾಶ್ಮೀರಕ್ಕೇ ಪ್ರತ್ಯೇಕ ಸಂವಿಧಾನ ಇದೆ. ಹಲವು ವಿಶೇಷ ಅನುದಾನ, ಸೌಲಭ್ಯ ನೀಡಲಾಗಿದೆ. ಸಂಸತ್ತು ಅಂಗೀಕರಿಸಿದರೂ, ಕಾಶ್ಮೀರ ವಿಧಾನಸಭೆ ಒಪ್ಪಿಗೆ ಸೂಚಿಸದ ಹೊರತು ಯಾವ ಕಾನೂನು, ಮಸೂದೆ ಜಾರಿಯಾಗಲ್ಲ. ಇಂಥ ಸ್ವಾಯತ್ತತೆ ಬೇರೆ ಯಾವ ರಾಜ್ಯಗಳಿಗೂ ನೀಡಿಲ್ಲ. ಹೀಗಿರುವಾಗ ಕಾಶ್ಮೀರಕ್ಕೆ ಮತ್ತಾವ ಸ್ವಾಯತ್ತತೆ ಬೇಕು ಹೇಳಿ.
ಅಷ್ಟೇ ಅಲ್ಲ, ದೇಶದ ಎಲ್ಲ ರಾಜ್ಯಗಳ ಪಠ್ಯಪುಸ್ತಕದ ಮೊದಲ ಹಾಗೂ ಕೊನೆಯ ಪುಟದಲ್ಲಿ ದೇಶದ ರಾಷ್ಟ್ರಗೀತೆ ಅಚ್ಚೊತ್ತಲಾಗಿದೆ. ಆದರೆ ಕಾಶ್ಮೀರದಲ್ಲಿ ಹೀಗೆ ಮಾಡುವುದಿಲ್ಲ. ದೇಶದಲ್ಲಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಿಗಿಂತ, ಕಾಶ್ಮೀರದಲ್ಲಿ ಹೆಚ್ಚಿನ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಅಲ್ಲಿ ದೇಶದ ಯಾವ ಪ್ರಜೆ, ಬಲಿಷ್ಠನೂ ಒಂದು ಅಂಗುಲ ಜಾಗ ಖರೀದಿಸುವಂತಿಲ್ಲ. ಎಷ್ಟೋ ಬಾರಿ, ಜಿಹಾದಿ ತಂಡ, ಪ್ರತ್ಯೇಕತಾವಾದಿಗಳು ನಮ್ಮ ಸೈನಿಕರನ್ನು, ಪ್ಯಾರಾ ಮಿಲಿಟರಿ ಪಡೆಯನ್ನು ಅವಮಾನಿಸಿದ್ದಾರೆ. ಕಾಂಗ್ರೆಸ್ಸಿನ ಒಬ್ಬೇ ಒಬ್ಬ ಮುಖಂಡ ಇದನ್ನು ಖಂಡಿಸಿದ್ದಾರಾ?
ಹಾಗಾಗಿ ನೀವು ಕಾಶ್ಮೀರದಲ್ಲಿ ಸ್ವಾಯತ್ತತೆ ವಿಸ್ತರಣೆ ನೀಡುವ ಕುರಿತ ಹೇಳಿಕೆ ತರವಲ್ಲ. ಯಾರು ಆಜಾದಿ ಎಂದು ಘೋಷಿಸಿ ದೇಶವಿರೋಧಿ ಹೇಳಿಕೆ ನೀಡುತ್ತಿದ್ದಾರೋ, ಎಲ್ಲರನ್ನೂ ಸೇನೆ ವಿಚಾರಿಸಿಕೊಳ್ಳುತ್ತಿದೆ. ನಮಗೆ 1953ಕ್ಕೂ ಮೊದಲು ಇದ್ದ ಪರಿಸ್ಥಿತಿ ಬೇಕಾಗಿಲ್ಲ. ಈಗಾಗಲೇ ಅವಶ್ಯಕತೆಗೂ ಮೀರಿ ಕಾಶ್ಮೀರಕ್ಕೆ ಸ್ವಾಯತ್ತತೆ ನೀಡಲಾಗಿದೆ. ನೀವು ಇನ್ನಾದರೂ ಸ್ವಾಯತ್ತತೆ ಬೇಕು ಎಂದು ಪ್ರತ್ಯೇಕತಾವಾದಿಗಳು ಹೇಳುವಂತೆ, ಅವರ ಮುಖವಾಣಿಯಂತೆ ಮಾತನಾಡುವುದನ್ನು ಬಿಡಬೇಕು.
ಸ್ನೇಹಸೇತು-ಎನ್ ಡಿಟಿವಿ
Leave A Reply