ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲು ಭಾರತೀಯ ನಾಯಕರು ಮುಕ್ತರು: ಚೀನಾಕ್ಕೆ ಭಾರತ ದಿಟ್ಟ ಸಂದೇಶ
ದೆಹಲಿ: ಇತ್ತೀಚೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಚೀನಾಗೆ ಭಾರತ ಸ್ಪಷ್ಟ ಸಂದೇಶ ರವಾನಿಸಿದ್ದು, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಹಾಗೂ ಭಾರತದ ಯಾವುದೇ ನಾಯಕರೂ ಅಲ್ಲಿಗೆ ಭೇಟಿ ನೀಡಲು ಮುಕ್ತರು ಎಂದು ತಿಳಿಸಿದೆ.
“ಅರುಣಾಚಲ ಪ್ರದೇಶ ದೇಶದ ಅವಿಭಾಜ್ಯ ಅಂಗ. ಭಾರತದ ಯಾವುದೇ ರಾಜ್ಯಗಳಿಗೆ ಭೇಟಿ ನೀಡುವಂತೆ, ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲು ಭಾರತೀಯ ನಾಯಕರು ಸ್ವಾತಂತ್ರ್ಯ ಹೊಂದಿದ್ದಾರೆ” ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.
ದೇಶದ ರಕ್ಷಣಾ ಸಚಿವೆಯಾದ ಮೇಲೆ ನಿರ್ಮಲಾ ಸೀತಾರಾಮನ್ ಕಳೆದ ಶನಿವಾರ ಹಾಗೂ ಭಾನುವಾರ ಮೊದಲ ಬಾರಿಗೆ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದರು. ಸೇನಾ ನೆಲೆಗೂ ಭೇಟಿ ನೀಡಿ ಯೋಧರೊಂದಿಗೆ ಸಮಾಲೋಚನೆ ನಡೆಸಿದ್ದರು.
ಆದರೆ ಸೋಮವಾರ ವಿವಾದಿತ ಪ್ರದೇಶಕ್ಕೆ ನಿರ್ಮಲಾ ಸೀತಾರಾಮನ್ ಏಕೆ ಭೇಟಿ ನೀಡಬೇಕಿತ್ತು ಎಂಬರ್ಥದಲ್ಲಿ ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು. ಈಗ ಚೀನಾ ಆಕ್ಷೇಪಕ್ಕೆ ಭಾರತ ದಿಟ್ಟ ಸಂದೇಶ ರವಾನಿಸಿದೆ.
Leave A Reply