ಭಾರತೀಯ ಮುಸ್ಲಿಮರಿಗೆ ಟಿಪ್ಪು ಸುಲ್ತಾನನಲ್ಲ, ಮಾದರಿಯಾಗಬೇಕಿರುವುದು ಸೈಯದ್ ಅಹ್ಮದ್ ಖಾನ್…
ಅಲಿಗಡ ಮುಸ್ಲಿಂ ವಿವಿಯನ್ನು ನಾವು ತೆಗಳಬಹುದು. ಇದೇ ವಿವಿ ದೇಶ ವಿಭಜನೆಗೆ ಮುನ್ನುಡಿ ಬರೆಯಿತು ಎಂದು ಜರಿಯಬಹುದು. ಹೇಗೆ ಜರಿದರೂ ಅದು ಸಮಂಜಸ ಎನಿಸುತ್ತದೆ. ಒಕೆ ಎನಿಸಿಕೊಳ್ಳುತ್ತದೆ.
ಆದರೆ, ಅಲಿಗಡ ಮುಸ್ಲಿಂ ವಿವಿ ಸ್ಥಾಪಿಸಿದ ಸರ್ ಸೈಯದ್ ಅಹ್ಮದ್ ಖಾನ್ ಬಗ್ಗೆ ಎಲ್ಲ ವಿಷಯಗಳಲ್ಲಿ ನಾವು ತೆಗಳಲು, ಟೀಕಿಸಲು ಸಾಧ್ಯವಿಲ್ಲ ಎಂಬುದೂ ಅಷ್ಟೇ ಸತ್ಯ.
ಪ್ರಸ್ತುತ ಮುಸ್ಲಿಮರು ಟಿಪ್ಪು ಸುಲ್ತಾನನ್ನು ಆದರ್ಶವಾಗಿಟ್ಟುಕೊಳ್ಳುತ್ತಾರೆ. ಆತ ಸ್ವಾತಂತ್ರ್ಯ ಹೋರಾಟಗಾರ ಎಂದು ಸಮರ್ಥನೆ ಮಾಡಿಕೊಳ್ಳಲು ಮುಂದಾಗುತ್ತಾರೆ. ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಸೋತ ಆತನೂ ಶೌರ್ಯವಂತನಾಗಿ ಕಾಣುತ್ತಾರೆ. ಆದರೆ ಅದೆಷ್ಟು ನಿಜ? ಸ್ವಾತಂತ್ರ್ಯ ಚಳವಳಿಯೇ ಗೊತ್ತಿರದ ವೇಳೆ ಅದ್ಹೇಗೆ ಆತ ಸ್ವಾತಂತ್ರ್ಯ ಹೋರಾಗಾರನಾದಾನು? ಹಿಂದೂಗಳನ್ನು ಕೊಲ್ಲಿಸಿದವ ಅದ್ಹೇಗೆ ಧರ್ಮಸಹಿಷ್ಣುನಾದಾನು?
ಹಾಗಾಗಿಯೇ, ಭಾರತೀಯ ಮುಸ್ಲಿಮರಿಗೆ ಟಿಪ್ಪು ಸುಲ್ತಾನನಲ್ಲ, ಸರ್ ಸಯ್ಯದ್ ಅಹ್ಮದ್ ಖಾನ್ ಮಾದರಿಯಾಗಬೇಕಾಗಿದ್ದು…
ಅಷ್ಟಕ್ಕೂ ಸರ್ ಸೈಯದ್ ಅಹ್ಮದ್ ಖಾನ್ ಹೇಗೆ ಭಾರತೀಯ ಮುಸ್ಲಿಮರಿಗೆ ಮಾದರಿಯಾದಾರು? ಅವರಿಗೇಕೆ ಮುಸ್ಲಿಮರು ಋಣಿಯಾಗಿರಬೇಕು? ಅಷ್ಟಕ್ಕೂ ಮುಸ್ಲಿಮರಿಗೆ ಸೈಯದ್ ಅಹ್ಮದ್ ಖಾನ್ ನೀಡಿದ ಕೊಡುಗೆಯೇನು?
ಖಂಡಿತವಾಗಿಯೂ, ಸರ್ ಸೈಯದ್ ಅಹ್ಮದ್ ಖಾನ್ ಬ್ರಿಟಿಷರ ವಿರುದ್ಧ ಹೋರಾಡದಿದ್ದರೂ ಅವರು, ಶಿಕ್ಷಣವೊಂದೇ ಬ್ರಿಟಿಷರಿಗೆ ಅಸ್ತ್ರ ಎಂದು ಭಾವಿಸಿದ್ದರು. ಅದರಲ್ಲೂ ಮುಸ್ಲಿಮರು ಶಿಕ್ಷಣದ ಹೊರತಾಗಿ ಬೇರೇನನ್ನೂ ಸಾಧಿಸಲಾಗುವುದಿಲ್ಲ ಎಂಬುದನ್ನು ಮನಗಂಡಿದ್ದರು. ಇಂತಿಪ್ಪ ಸರ್ ಸೈಯದ್ ಅಹ್ಮದ್ ಖಾನ್, ಎಲ್ಲರೂ ಶಿಕ್ಷಣ ಪಡೆಯಲಿ ಎಂದು ಮೊದಲು ಆರಂಭಿಸಿದ್ದು ಪಾರ್ಸಿಗಳ ಶೈಕ್ಷಣಿಕ ಸಂಸ್ಥೆಯನ್ನು (ಮದರಸಾ) ಬಳಿಕ ಅಲೀಗಡ ವಿವಿ ಸ್ಥಾಪಿಸಿದರು.
ಬರೀ ಮುಸ್ಲಿಮರು ಶಿಕ್ಷಣ ಪಡೆಯಲಿ ಎಂದು ಸಂಸ್ಥೆ ಆರಂಭಿಸಿ ಸುಮ್ಮನಾಗಲಿಲ್ಲ. ಬಳಿಕ 1863ರಲ್ಲಿ ಉತ್ತರ ಪ್ರದೇಶದ ಗಾಝಿಯಾಬಾದ್ ನಲ್ಲಿ ವಿಕ್ಟೋರಿಯಾ ಶಾಲೆ ಆರಂಭಿಸಿದರು. ಅಲ್ಲಿ ಬರೀ ಧರ್ಮಬೋಧನೆ ಮಾಡದೆ, ಅದನ್ನು ಧರ್ಮಕ್ಕೆ ಸೀಮಿತವಾದ ಮದರಸಾದಂತೆ ಮಾಡದೆ, ಇಂಗ್ಲಿಷ್, ಉರ್ದು, ಅರೇಬಿಕ್, ಪರ್ಷಿಯನ್, ಅಷ್ಟೇ ಏಕೆ, ಬ್ರಾಹ್ಮಣರ ಭಾಷೆ ಎಂದೇ ಕುಖ್ಯಾತಿಗೊಳಿಸಿದ ಸಂಸ್ಕೃತವನ್ನೂ ಅಹ್ಮದ್ ಖಾನ್ ಕಲಿಸಿದರು ಎಂದರೆ ನಂಬಲೇಬೇಕು.
ವೈಜ್ಞಾನಿಕ ಹಾಗೂ ವಾಸ್ತವ ಆಧರಿತ ಶಿಕ್ಷಣ ನೀಡಬೇಕು ಎಂಬುದು ಸರ್ ಸೈಯದ್ ಅಹ್ಮದ್ ಖಾನ್ ಅವರ ಪ್ರಮುಖ ಉದ್ದೇಶವಾಗಿತ್ತು. ಅದಕ್ಕಾಗಿಯೇ ಅವರು, 1864ರಲ್ಲಿ ಗಾಝಿಯಾಬಾದ್ ನಲ್ಲೇ ಸೈಂಟಿಫಿಕ್ ಸೊಸೈಟಿ ಎಂಬ ಸಂಸ್ಥೆ ಪ್ರಾರಂಭಿಸಿದರು. ಇಂಗ್ಲಿಷ್, ಪರ್ಷಿಯನ್ ಭಾಷೆಗಳ ಕೃತಿಗಳನ್ನು ಸ್ಥಳೀಯ ಭಾಷೆಗೆ ಅನುವಾದಿಸಿ, ಶಿಕ್ಷಣ ಪ್ರಸಾರ ಮಾಡುವುದು ಅವರ ಉದ್ದೇಶವಾಗಿತ್ತು.
ನನ್ನನ್ನು ಇಸ್ಲಾಂ, ಹಿಂದೂ, ಕ್ರಿಶ್ಚಿಯನ್… ಹೀಗೆ ಯಾವ ಹೆಸರಿನಿಂದ ಬೇಕಾದರೂ ಕರೆಯಿರಿ. ಆದರೆ ದಯಮಾಡಿ ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ. ಪ್ರತಿ ಭಾರತೀಯ ಮುಸ್ಲಿಮನೂ ಪದವಿ ಹೊಂದಿದಾಗ ಮಾತ್ರ ಅವರು ಏಳಿಗೆ ಸಾಧಿಸಲು ಸಾಧ್ಯ ಎನ್ನುತ್ತಿದ್ದ ಸರ್ ಸೈಯದ್ ಅಹ್ಮದ್ ಖಾನ್ ನಿಜವಾದ ಮುಸ್ಲಿಮರ ಪ್ರಗತಿಪರ. ಬರೀ ಗ್ಯಾರೇಜು ಕೆಲಸಕ್ಕೆ ಹಚ್ಚಿ, ನಮ್ಮದು ಅಲ್ಪಸಂಖ್ಯಾತರ ಪರ ಸರ್ಕಾರ ಎಂದು ಕಾಂಗ್ರೆಸ್ ನಂತೆ ಪೋಸು ಕೊಡುವುದಲ್ಲ.
ಪ್ರಸ್ತುತ ಉತ್ತರ ಪ್ರದೇಶ ಸರ್ಕಾರ ಮದರಸಾಗಳಲ್ಲೂ ಗಣಿತ ಹಾಗೂ ವಿಜ್ಞಾನ ಬೋಧಿಸಲು ತೀರ್ಮಾನಿಸಿದಂತೆ 1875ರಲ್ಲಿ ಸರ್ ಸೈಯದ್ ಅಹ್ಮದ್ ಖಾನ್ ಮದರಸಾಗಳ ಬದಲಿಗೆ ನೈತಿಕ ಶಿಕ್ಷಣ ನೀಡಲು ಮೊಹಮ್ಮದನ್ ಆಂಗ್ಲೋ ಓರಿಯಂಟಲ್ ಸ್ಕೂಲ್ ಎಂಬ ಶೈಕ್ಷಣಿಕ ಸಂಸ್ಥೆ ಪ್ರಾರಂಭಿಸಿದರು.
ಬರೀ ಶೈಕ್ಷಣಿಕವಾಗಿ ಅಷ್ಟೇ ಅಲ್ಲ, ಧಾರ್ಮಿಕವಾಗಿಯೂ ಸರ್ ಸೈಯದ್ ಅಹ್ಮದ್ ಖಾನ್ ಉತ್ತಮ ವಿಚಾರಗಳನ್ನು ಹೊಂದಿದ್ದರು. ಸೌಹಾರ್ದಯುತ ವಾತಾವರಣ ನಿರ್ಮಾಣ ಅವರ ಕನಸಾಗಿತ್ತು. ಹಿಂದೂಗಳು ಹಾಗೂ ಮುಸ್ಲಿಮರು ದೇಶದ ಕಣ್ಣಾಗಿ ಇರಬೇಕು ಎಂದು ಸರ್ ಸೈಯದ್ ಅಹ್ಮದ್ ಖಾನ್ ಹೇಳುತ್ತಿದ್ದರಂತೆ.
ಓ ನನ್ನ ಹಿಂದೂಗಳೇ ಹಾಗೂ ಮುಸ್ಲಿಮರೇ? ನಿಮಗೆ ಭಾರತಕ್ಕಿಂತ ಉತ್ತಮ ರಾಷ್ಟ್ರ ಮತ್ತೊಂದಿದೆಯಾ? ನೀವು ಹಿಂದೂ ಮುಸ್ಲಿಮರ ಸಮಾಧಿಗಳ ಮೇಲೆ ಮನೆ ಕಟ್ಟಿ ನೆಮ್ಮದಿಯಿಂದ ಇರುವಿರಾ? ನೀವು ಇದೇ ಮಣ್ಣಿನಲ್ಲಿ ಹುಟ್ಟಿರಿ, ಉಸಿರು ನಿಂತಾಗ ಸಾಯಿರಿ. ಆದರೆ “ಹಿಂದೂಗಳು, ಮುಸ್ಲಿಮರು ಹಾಗೂ ಕ್ರೈಸ್ತರು ಒಂದೇ ದೇಶಕ್ಕಾಗಿ ಬದುಕಿ. ಅದು ಭಾರತಕ್ಕೇ ಆಗಿರಲಿ” ಎಂದಿದ್ದರು ಸರ್ ಸೈಯದ್ ಅಹ್ಮದ್ ಖಾನ್.
ಆದರೆ ಪ್ರಸ್ತುತ ಎಂಥ ವಾತಾವರಣವಿದೆ? ಹಿಂದೂ ವಿರೋಧಿ ಟಿಪ್ಪು ಇವರಿಗೆ ಆದರ್ಶವಾಗುತ್ತಿದ್ದಾನೆ. ಕಾಂಗ್ರೆಸ್ ಸರ್ಕಾರವೂ, ಅಬ್ದುಲ್ ಕಲಾಂ, ಅಶ್ಫಾಕುಲ್ಲಾ ಖಾನ್ ಅವರಂಥ ಮಹನೀಯರನ್ನು ಬಿಟ್ಟು, ಹೇಡಿ ಟಿಪ್ಪು ಜಯಂತಿ ಆಚರಿಸಿ ಮುಸ್ಲಿಮರಿಗೇ ದ್ರೋಹ ಬಗೆಯುತ್ತಿದೆ. ದೇಶದ ಜನಸಂಖ್ಯೆಯಲ್ಲಿ ಕೇವಲ ಶೇ.4.4ರಷ್ಟು ಮುಸ್ಲಿಮರು ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಉಳಿದವರೆಲ್ಲ ಗ್ಯಾರೇಜು ಸೇರಿ ಹಲವು ಉದ್ಯಮಗಳಲ್ಲಿ ನಿರತರಾಗಿದ್ದಾರೆ.
ಅಷ್ಟಕ್ಕೂ “ಎಲ್ಲ ವಿಚಾರ ಬದಿಗೊತ್ತಿ. ಆಧುನಿಕ ಶಿಕ್ಷಣ ಪಡೆಯಿರಿ. ಹಳೆಯ ಹಾಗೂ ಮೌಲ್ಯವಿಲ್ಲದ ಪಠ್ಯ ಓದುತ್ತ ಕುಳಿತುಕೊಳ್ಳಬೇಡಿ. ಅದರಿಂದ ಯಾವುದೇ ಲಾಭವಿಲ್ಲ. ಬೌದ್ಧಿಕ ವಿಕಸನದ ಹೊರತು ಮಾನವನ ಏಳಿಗೆ ಸಾಧ್ಯವಿಲ್ಲ” ಎಂದು ಶೈಕ್ಷಣಿಕ ಹಾಗೂ ಸೌಹಾರ್ದ ಕ್ರಾಂತಿ ಮಾಡಿದ ಸರ್ ಸೈಯದ್ ಅಹ್ಮದ್ ಖಾನ್ ಭಾರತೀಯ ಮುಸ್ಲಿಮರಿಗೆ ಮಾದರಿಯಾಗಬೇಕೇ ಹೊರತು ಧರ್ಮಾಂಧ ಟಿಪ್ಪು ಸುಲ್ತಾನನಲ್ಲ. ಇನ್ನಾದರೂ ಎಚ್ಚೆತ್ತುಕೊಳ್ಳಿ ಮುಸ್ಲಿಮರೇ.
ಸ್ನೇಹ ಸೇತು
ದಿ ಇಂಡಿಯನ್ ಎಕ್ಸ್ ಪ್ರೆಸ್
Leave A Reply