ಖಲಿಸ್ತಾನ ಹೋರಾಟಕ್ಕೆ ಮರುಜೀವ ನೀಡಲು ಪಾಕ್ ಐಎಸ್ಐ ಕುತಂತ್ರ
ಚಂಡಿಗಡ್: ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ಕೇವಲ ಪಾಕಿಸ್ತಾನದಲ್ಲಷ್ಟೇ ಅಲ್ಲ, ಭಾರತದ ನೆಮ್ಮದಿ ಹಾಳು ಮಾಡಲು ಪ್ರಯತ್ನಿಸುತ್ತಿದೆ. ಕೆನಡಾ, ಯುಕೆ ಮತ್ತು ಇಟಲಿ ಮೂಲಕ ತನ್ನ ಗುಪ್ತಚರ ಕಾರ್ಯವನ್ನು ಮಾಡುತ್ತಿದ್ದು, ಭಾರತದಲ್ಲಿ ಖಲಿಸ್ತಾನದ ಹೋರಾಟಕ್ಕೆ ಮರುಜೀವ ನೀಡಲು ಸಂಚು ಹೂಡುತ್ತಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾ.ಅಮರಿಂದರ್ ಸಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ.
ಖಲಿಸ್ತಾನ ಪ್ರತ್ಯೇಕ ಹೋರಾಟ ನಿಯಂತ್ರಣಕ್ಕೆ ಪಂಜಾಬ್ ಸರಕಾರ ಪಂಜಾಬ್ ಕಂಟ್ರೋಲ್ ಆಫ್ ಆರ್ಗನೈಸಡ್ ಕ್ರೈಮ್ ಆ್ಯಕ್ಟ್ ಜಾರಿಗೆ ತಂದಿದ್ದು, ಯಾವುದೇ ಕಾರಣಕ್ಕೂ ಪಾಕ್ ಕುತಂತ್ರಕ್ಕೆ ಬಲಿಯಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಖಲಿಸ್ತಾನ ಹೋರಾಟಗಾರರಿಗೆ ಬೆಂಬಲ ನೀಡುವುದು, ಪೂರಕ ಸಾಮಾಗ್ರಿ ಪೂರೈಸುವುದನ್ನು ನಾನಾ ಮೂಲಗಳಿಂದ ಮಾಡುತ್ತಿದೆ. ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಹಾಳುಗೆಡವಲು ನಿರ್ಧರಿಸಿದೆ. ಅದಕ್ಕಾಗಿ ಸ್ಥಳೀಯ ರೌಡಿ ಗುಂಪುಗಳ ಮುಖಂಡರನ್ನು ಬಳಸಿಕೊಳ್ಳುತ್ತಿದೆ ಎಂಬ ಮಾಹಿತಿ ಇತ್ತೀಚೆಗೆ ಬಂಧಿಸಿದ ಆರೋಪಿಗಳಿಂದ ಹೊರ ಬಂದಿದೆ ಎಂದು ತಿಳಿಸಿದ್ದಾರೆ.
ಪಂಜಾಬ್ ನಲ್ಲಿ ಭಯೋತ್ಪಾದನೆ ಸೃಷ್ಟಿಸುವುದನ್ನು ತಡೆಯಲು ಪಂಜಾಬ್ ಗುಪ್ತಚರ ಸಂಸ್ಥೆಗಳು ಕೇಂದ್ರ ಸರಕಾರದ ತನಿಖಾ ಸಂಸ್ಥೆಗಳ ಸಹಕಾರದೊಂದಿಗೆ ಸೂಕ್ತ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪಂಜಾಬ್ ನಲ್ಲಿ ನಡೆದ ಹಿಂದೂ ಮುಖಂಡರ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಆರು ಆರೋಪಿಗಳನ್ನು ಪಂಜಾಬ್ ಪೊಲೀಸರು ಬಂಧಿಸಿದ್ದರು. ಆ ಆರೋಪಿಗಳು ಪಾಕ್ ಗುಪ್ತಚರ ಇಲಾಖೆ ಕೆನಡಾ, ಯುಕೆ, ಇಟಲಿ ಮೂಲಕ ಭಾರತದಲ್ಲಿ ಕೋಮು ಗಲಭೆ ಸೃಷ್ಟಿಸಲು ಸಂಚು ಹೂಡಿದೆ ಎಂಬ ಮಾಹಿತಿ ಹೊರ ಬಿದ್ದಿತ್ತು.
Leave A Reply