ಉಗ್ರರ ಸಂಹಾರದಿಂದ ಬದಲಾಗುತ್ತಿದೆ ಕಾಶ್ಮೀರ ಪರಿಸ್ಥಿತಿ
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿ ಉಗ್ರರ ವಿರುದ್ಧ ಕೈಗೊಂಡ ಕಾರ್ಯಾಚರಣೆ ಫಲ ನೀಡಿದ್ದು, ಕಾಶ್ಮೀರದಲ್ಲಿ ಭಾರಿ ಬದಲಾವಣೆಯಾಗಿದೆ ಎಂದು 15 ಕಾರ್ಪ್ಸ್ ಲೆಫ್ಟಿನೆಂಟ್ ಜನರಲ್ ಜೆ.ಎಸ್.ಸಿಂಧು ತಿಳಿಸಿದ್ದಾರೆ.
ಶನಿವಾರ ಆರು ಉಗ್ರರನ್ನು ಹತ್ಯೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ವರ್ಷದಲ್ಲಿ ಭದ್ರತಾ ಸಿಬ್ಬಂದಿ ಬರೋಬ್ಬರಿ 190 ಉಗ್ರರನ್ನು ಹತ್ಯೆ ಮಾಡಿದೆ. ಇದು ಕಾಶ್ಮೀರದಲ್ಲಿ ಭಾರಿ ಬದಲಾವಣೆಗೆ ಕಾರಣವಾಗಿದೆ ಎಂದಿದ್ದಾರೆ.
ಈ 190 ಉಗ್ರರಲ್ಲಿ 80 ಉಗ್ರರು ಸ್ಥಳೀಯರಾಗಿದ್ದು, 110 ಉಗ್ರರು ವಿದೇಶಿಯರಾಗಿದ್ದಾರೆ. ಈ ವಿದೇಶಿ ಉಗ್ರರಲ್ಲಿ 66 ಉಗ್ರರನ್ನು ಒಳನುಸುಳುವ ವೇಳೆಯಲ್ಲೇ ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಹತ್ಯೆ ಹಿನ್ನೆಲೆಯಲ್ಲಿ ಸ್ಥಳೀಯರು ಉಗ್ರ ಸಂಘಟನೆ ಸೇರುವುದು ಕಡಿಮೆಯಾಗಿದ್ದು, ಹತ್ಯೆಗೂ ಮುನ್ನ ನೀವು ಪಾಕಿಸ್ತಾನದವರಾ? ಅಥವಾ ಸ್ಥಳೀಯರಾ ಎಂದು ಪ್ರಶ್ನಿಸಲಾಗುತ್ತದೆ. ಪಾಕಿಸ್ತಾನದವರಾದರೆ ಗುಂಡಿಕ್ಕಿ ಹತ್ಯೆ ಮಾಡಲಾಗುತ್ತದೆ. ಸ್ಥಳೀಯರು ಪರಿವರ್ತನೆಯಾಗಿ ಸಾಮಾನ್ಯರಂತೆ ಜೀವನ ಸಾಗಿಸುವುದಾದರೆ ನಾವು ಅವರನ್ನು ಸ್ವಾಗತಿಸುತ್ತೇವೆ ಎಂದು ತಿಳಿಸಿದ್ದಾರೆ.
ಮಜಿದ್ ಅರ್ಷಿದ್ ಖಾನ್ ನಂತೆ ಯುವಕರು ಮನಪರಿವರ್ತನೆ ಹೊಂದಬೇಕು. ಎಲ್ಲರಂತೆ ಗೌರವಯುತವಾದ ಜೀವನ ನಡೆಸಬೇಕು. ಉಗ್ರ ಸಂಘಟನೆ ಸೇರಿದರೂ ಶರಣಾಗಿ, ಮತ್ತೆ ಸಾಮಾನ್ಯ ಜೀವನ ನಡೆಸುವುದಾದರೆ ನಾವು ಅಂಥವರನ್ನು ಗೌರವದಿಂದಲೇ ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.
190 ಉಗ್ರರನ್ನು ಹತ್ಯೆ ಮಾಡಲು ಸಹಕರಿಸಿದ ಭದ್ರತಾ ಸಿಬ್ಬಂದಿ, ಜಮ್ಮು-ಕಾಶ್ಮೀರ ಪೊಲೀಸ್, ರಾಷ್ಟ್ರೀಯ ರೈಫಲ್ಸ್ ಪಡೆಗೆ ಧನ್ಯವಾದ ಸಹ ತಿಳಿಸಿದ್ದಾರೆ.
Leave A Reply