ನಾಲ್ಕೂವರೆ ಕೋಟಿ ರಜಪೂತರ ಭಾವನೆಗಳಿಗಿಂತ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನ ದೊಂಬರಾಟವೇ ಮುಖ್ಯವೇ?
ಅಭಿವ್ಯಕ್ತಿ ಸ್ವಾತಂತ್ರ್ಯ…
ನಮ್ಮ ದೇಶದಲ್ಲಿ ಕೂಳು-ನೀರು ಇರದಿದ್ದರೂ ಪರವಾಗಿಲ್ಲ, ರಸ್ತೆ ಡಾಂಬರು, ಮನೆಗೆ ವಿದ್ಯುತ್, ಚರಂಡಿ ವ್ಯವಸ್ಥೆ, ಉದ್ಯೋಗ… ಹೂಂ ಹೂಂ. ಇದಾವುದೂ ಇರದಿದ್ದರೂ ನಡೆಯುತ್ತೆ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಬೇಕು. ಅದಾದರೂ ಎಂಥಾದ್ದು, ಹಿಂದೂಗಳನ್ನು ಬೈಯುತ್ತಿರಬೇಕು, ಸುಖಾಸುಮ್ಮನೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಹೇಳನ ಮಾಡಬೇಕು, ಹಿಂದೂ ದೇವತೆಗಳನ್ನು ಬೆತ್ತಲಾಗಿ ಚಿತ್ರಿಸಬೇಕು, ಸಿನಿಮಾ, ಸಾಹಿತ್ಯ, ಮೈಕು… ಹೀಗೆ ಎಲ್ಲಿ ಸಿಕ್ಕರೂ ಹಿಂದೂಗಳನ್ನು ತೆಗಳಬೇಕು. ಆಗ ಮಾತ್ರ ಅದು ಅಭಿವ್ಯಕ್ತಿ ಸ್ವಾತಂತ್ರ್ಯವಾಗುತ್ತದೆ. ಅದೇ ಮುಸ್ಲಿಮರ ಬಗ್ಗೆ ಒಂದು ಸಣ್ಣ ಮಾತಾಡಲಿ, ಅದು ಕೋಮುವಾದಿ ಎನಿಸುತ್ತದೆ. ಎಂಥ ವಿಪರ್ಯಾಸ ಅಲ್ಲವಾ?
ಬಾಲಿವುಡ್ ನ ಆ ಚಿತ್ರದ ಹೆಸರು “ಪದ್ಮಾವತಿ”
ಈ ಪದ್ಮಾವತಿ ಚಿತ್ರದ ಹೆಸರಿನ ವಿವಾದದಲ್ಲೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರು ನುಸುಳುತ್ತಿದೆ. ಚಿತ್ರ ನಿಷೇಧಿಸಬೇಕು ಎಂದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಎಂದು ಬೊಬ್ಬೆ ಹಾಕಲಾಗುತ್ತಿದೆ. ಅಂದರೆ ಯಾರನ್ನಾದರೂ ಬೈದು, ಅಶ್ಲೀಲವಾಗಿ ಚಿತ್ರಿಸಿ ಕೋಟಿ ಕೋಟಿ ಹಣ ಮಾಡುವ ನಿರ್ದೇಶಕ, ನಟರಿಗಿಂತ ದೇಶದಲ್ಲಿ ನಾಲ್ಕೂವರೆ ಕೋಟಿ ಇರುವ ರಜಪೂತರ ಭಾವನೆಗಳಿಗಿಂತ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನ ದೊಂಬರಾಟವೇ ಮುಖ್ಯವೇ?
ಅಷ್ಟಕ್ಕೂ, ರಜಪೂತರ ರಾಣಿ ಪದ್ಮಾವತಿ, ರಜಪೂತರ ಏಳಿಗೆಗೆ ಶ್ರಮಿಸಿದವರು. ಮಾನಕ್ಕಾಗಿ ಚಿತೆಗೆ ಹಾರಿ ಪ್ರಾಣವನ್ನೇ ಕಳೆದುಕೊಂಡವರು. ಹಾಗಾಗಿ ರಜಪೂತರು ಪದ್ಮಾವತಿಯನ್ನು ಇತಿಹಾಸದ ದೇವತೆಯನ್ನಾಗಿ ಕಾಣುತ್ತಾರೆ. ಪೂಜ್ಯನೀಯ ಭಾವನೆ ಇದೆ.
ಆದರೆ, ಸಿನಿಮಾ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಇತಿಹಾಸ ತಿರುಚಿ, ಅಲ್ಲಾವುದ್ದೀನ್ ಖಿಲ್ಜಿ ಜತೆ ಆತ್ಮೀಯವಾಗಿ ಚಿತ್ರೀಕರಣ ನಡೆಸುವ ದರ್ದು ಏನಿತ್ತು? ಚಿತ್ರದ ಟ್ರೇಲರ್ರೇ ಹೇಳುತ್ತೆ, ಒಳಗಡೆ ಏನಿದೆ ಅಂತ. ಹೀಗಿರುವಾಗ ಒಂದು ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಹಕ್ಕು ಅಭಿವ್ಯಕ್ತಿ ಸ್ವಾತಂತ್ರ್ಯವೇ?
ಇದೇ ಕಾರಣಕ್ಕೆ ಮಧ್ಯಪ್ರದೇಶದಲ್ಲಿ ಪದ್ಮಾವತಿ ಚಿತ್ರ ನಿಷೇಧಿಸಲಾಗಿದೆ. ಕಾಂಗ್ರೆಸ್ ಆಡಳಿತವಿರುವ ಪಂಜಾಬಿನಲ್ಲೂ ಜನರ ಭಾವನೆಗೆ ಧಕ್ಕೆ ತರುವ ಚಿತ್ರ ಪ್ರದರ್ಶನಕ್ಕೆ ಅನುಮತಿ ಇಲ್ಲ ಎಂದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ. ಚಿತ್ರ ನಿಷೇಧಿಸಿದ್ದಾರೆ.
ಆದರೆ, ಧರ್ಮ, ಜಾತಿಯ ವಿಷಯದಲ್ಲಿ ಎಂದಿಗೂ ತಾರತಮ್ಯ ಮಾಡುವ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಾವುದನ್ನು ಪ್ರಶ್ನಿಸಬೇಕು ಎಂಬುದರ ಕನಿಷ್ಠ ಜ್ಞಾನವೂ ಇಲ್ಲದ ನಟ ಪ್ರಕಾಶ್ ರೈ, ಹಿಂದೂ ಭಯೋತ್ಪಾದನೆ ಇದೆ ಎಂದು ಉಗಿಸಿಕೊಂಡ ಕಮಲ್ ಹಾಸನ್, ಐಟಿ ದಾಳಿಯಿಂದ ಹೊರಬರಲಾಗದೆ ಒದ್ದಾಡುತ್ತಿರುವ ಸಚಿವ ಡಿ.ಕೆ.ಶಿವಕುಮಾರ್, ಎಂಥ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಪಾದಿಸುತ್ತಿದ್ದಾರೆ. ಇವರು ಸಿನಿಮಾ ಬಿಡಿ, ನಾಯಿಗಳು ಬೊಗಳಿ, ಕಿರಿಕಿರಿಯಾಯಿತು ಎಂದು ಕಲ್ಲಿನಿಂದ ಹೊಡೆದರೂ, ಇವರು ನಾಯಿಯ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಬೊಬ್ಬೆಯಿಡುತ್ತಾರಿವರು. ನಾಯಿಯ ನಾಲಗೆಗೂ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ, ಬಾಯಿಗೆ ಬಂದ ಹಾಗೆ ಬೊಗಳುವುದಕ್ಕೂ ವ್ಯತ್ಯಾಸವೇ ಗೊತ್ತಿರದ ಇವರಿಂದ ನಾವು ಅಭಿವ್ಯಕ್ತಿ ಸ್ವಾತಂತ್ರ್ಯದ ಪಾಠ ಕಲಿಯಬೇಕಾಗಿರುವುದೇ ದುರಂತ.
ಇನ್ನೂ ಒಂದು ಮಾತು. 2015ರಲ್ಲಿ ಇರಾನಿನಲ್ಲಿ ಇಸ್ಲಾಂ ಧರ್ಮದ ಕುರಿತ, “ಮೊಹಮ್ಮದ್- ದಿ ಮೆಸೆಂಜರ್ ಆಫ್ ಗಾಡ್” ಎಂಬ ಚಿತ್ರ ಬಿಡುಗಡೆಯಾಯಿತು. ಈ ಚಿತ್ರಕ್ಕೆ ಮುಸ್ಲಿಮರೇ ಆದ (ಮತಾಂತರಗೊಂಡ) ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಸಂಗೀತ ನಿರ್ದೇಶನ ಮಾಡಿದರು.
ಈಗ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಎಂದು ಘೀಳಿಡುವವರು, ಅಂದು ಇದೇ ಚಿತ್ರ ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತರುತ್ತದೆ. ನಿಷೇಧಿಸಬೇಕು ಎಂದು ಬೊಂಬಡ ಬಾರಿಸಿದರು. ಕೆಲವು ಮುಸ್ಲಿಂ ಮೂಲಭೂತವಾದಿಗಳು ಎ.ಆರ್.ರೆಹಮಾನ್ ವಿರುದ್ಧ ಫತ್ವಾ ಹೊರಡಿಸಿದರು. ಆಗ ಯಾವ ಪ್ರಗತಿಪರರು, ಪ್ರಕಾಶ್ ರೈ, ಕಮಲ್ ಹಾಸನ್, ಸಿದ್ದರಾಮಯ್ಯ, ಶಿವಕುಮಾರ್… ಯಾರೂ ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬಂದ ಕುತ್ತು ಎನ್ನಲಿಲ್ಲ. ಬಾಯಿಯೊಳಗೆ ಕಡುಬು ತುರುಕಿಕೊಂಡವರಂತೆ ಸುಮ್ಮನಿದ್ದರು ಇವರು. ಆದರೆ ಈಗ, ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯದ ಪಾಠ ಹೇಳುತ್ತಿದ್ದಾರೆ.
ರಜಪೂತರ ಭಾವನೆಗಳಿಗೆ ಧಕ್ಕೆ ಬರುತ್ತದೆ ಎಂಬುದು ಮೇಲ್ನೋಟಕ್ಕೆ ಸಾಬೀತಾದರೂ, ದೇಶಾದ್ಯಂತ ವಿರೋಧ ವ್ಯಕ್ತವಾದರೂ, ಆ ಚಿತ್ರವನ್ನು ಬೆಂಬಲಿಸುವ ಇವರು, ಮೊಹಮ್ಮದ್ ಪೈಗಂಬರರನ್ನೇ ಅಶ್ಲೀಲವಾಗಿ ಚಿತ್ರಿಸಿದರೆ ಸುಮ್ಮನಿರುತ್ತಾರೆಯೇ? ಅದನ್ನೂ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಕರೆಯುತ್ತಾರೆಯೇ? ಆ ತಾಕತ್ತು ಇವರಿಗಿದೆಯಾ?
ಸ್ಲಂ ಡಾಗ್ ಮಿಲೇನಿಯರ್ ನಲ್ಲಿ ಹಿಂದೂಗಳನ್ನು ಕೆಟ್ಟದಾಗಿ ಚಿತ್ರಿಸಲಾಯಿತು, ಆಮೀರ್ ಖಾನನ ಪಿಕೆ ಚಿತ್ರದಲ್ಲಿ ಬರೀ ಹಿಂದೂಗಳ ಮೌಢ್ಯ ಎತ್ತಿರುವ ಕೆಟ್ಟ ಪ್ರಯತ್ನ ಮಾಡಲಾಯಿತು, ಇದೇ ಸಂಜಯ್ ಲೀಲಾ ಬನ್ಸಾಲಿಯ ಬಾಜೀರಾವ್ ಮಸ್ತಾನಿಯಲ್ಲಿ ಬಾಜೀರಾವ್ ಮಹಾರಾಜನನ್ನು ಸ್ತ್ರೀಲೋಲ ಎಂಬಂತೆ ಚಿತ್ರಿಸಲಾಯಿತು. ಹೀಗೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಬರೀ ಹಿಂದೂಗಳನ್ನೇ ಟಾರ್ಗೆಟ್ ಮಾಡಲಾಗಿದೆ. ಈಗ ಅದು ರಜಪೂತರ ಸರದಿಯಾಗಿದೆ. ಪುಣ್ಯವಶಾತ್, ಸೆನ್ಸಾರ್ ಮಂಡಳಿಯೂ ಚಿತ್ರತಂಡಕ್ಕೆ ಛೀಮಾರಿ ಹಾಕಿದೆ. ರಜಪೂತರೆಲ್ಲರೂ ಹೋರಾಟಕ್ಕೆ ನಿಂತಿದ್ದಾರೆ. ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವುದು ಅಪರಾಧ ಎಂದಾದರೆ, ಪದ್ಮಾವತಿ ಚಿತ್ರದಿಂದ ರಜಪೂತರ ಭಾವನೆಗಳಿಗೆ ಧಕ್ಕೆ ಬರುತ್ತದೆ ಎಂದಾದರೆ, ಮಧ್ಯಪ್ರದೇಶ, ಪಂಜಾಬ್, ಮಹಾರಾಷ್ಟ್ರ, ಉತ್ತರಪ್ರದೇಶ ಸರ್ಕಾರಗಳಂತೆ ದೇಶಾದ್ಯಂತ ಚಿತ್ರ ನಿಷೇಧಿಸಲಿ.
Leave A Reply