ಮೂರ್ಖನ ಸೂತ್ರಕ್ಕೆ ಮತ್ತೊಬ್ಬ ಮೂರ್ಖ ಒಪ್ಪಿಗೆ, ಕಾಂಗ್ರೆಸ್-ಹಾರ್ದಿಕ್ ಒಪ್ಪಂದಕ್ಕೆ ನಿತಿನ್ ಪಟೇಲ್ ವ್ಯಂಗ್ಯ
ಗಾಂಧಿನಗರ: ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡಲು ಕಾಂಗ್ರೆಸ್ ಒಪ್ಪಿದಕ್ಕೆ, ಆ ಪಕ್ಷವನ್ನು ಬೆಂಬಲಿಸಿರುವ ಪಾಟೀದಾರ್ ಅನಾಮನ್ ಆಂದೋಲನ್ ಸಮಿತಿ (ಪಿಎಎಎಸ್) ಮುಖ್ಯಸ್ಥ ಹಾರ್ದಿಕ್ ಪಟೇಲ್ ನಡೆಯನ್ನು ಗುಜರಾತ್ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಟೀಕಿಸಿದ್ದಾರೆ.
ಇದು ಒಬ್ಬ ಮೂರ್ಖನ ಸೂತ್ರಕ್ಕೆ ಮತ್ತೊಬ್ಬ ಮೂರ್ಖ ಒಪ್ಪಿದ ಹಾಗೆ ಎಂದು ಪಟೇಲ್ ವ್ಯಂಗ್ಯವಾಡಿದ್ದು, ಒಂದೇ ಹೇಳಿಕೆಯಿಂದ ಇಬ್ಬರಿಗೂ ಟಾಂಗ್ ನೀಡಿದಂತಾಗಿದೆ.
ನಾನು ಹಾರ್ದಿಕ್ ಪಟೇಲ್ ಅವರಂಥ ಮೂರ್ಖರನ್ನು ನೋಡಿಲ್ಲ. ಈ ಯುವಕ ಪಟೇಲ್ ಸಮುದಾಯದವರಿಂದ ಪ್ರೀತಿ, ಮಮಕಾರ ಪಡೆಯಬಹುದಿತ್ತು. ಆದರೆ ತನ್ನ ನಡೆಯಿಂದ ಶೀಘ್ರದಲ್ಲೇ ಸಮುದಾಯದವರಿಂದಲೇ ನಾಶವಾಗುತ್ತಾರೆ ಎಂದಿದ್ದಾರೆ.
ಪಟೇಲ್ ಸಮುದಾಯಕ್ಕೆ ಕಾಂಗ್ರೆಸ್ ಶೇ.50ರಷ್ಟು ಮೀಸಲಾತಿ ನೀಡುತ್ತೇನೆ ಎಂದು ನೀಡಿದ ಭರವಸೆಯೇ ದೊಡ್ಡ ಜೋಕ್. ವಾಸ್ತವದಲ್ಲಿ, ಪಟೇಲ್ ಸಮುದಾಯಕ್ಕೆ ಶೇ.50ರಷ್ಟು ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂಬುದನ್ನು ಅರಿಯಬೇಕು. ಕಾಂಗ್ರೆಸ್ ಹಾರ್ದಿಕ್ ಪಟೇಲ್ ಗೆ ಮೀಸಲಾತಿ ಬದಲು ಲಾಲಿಪಾಪ್ ಕೊಡಿಸುತ್ತದೆ ಅಷ್ಟೇ ಎಂದು ವ್ಯಂಗವಾಡಿದ್ದಾರೆ.
ಪಟೇಲ್ ಸಮುದಾಯಕ್ಕೆ ಶೇ.50ರಷ್ಟು ಮೀಸಲಾತಿ ನೀಡಿದರೆ ಮಾತ್ರ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಬೆಂಬಲಿಸುವೆ ಎಂದು ಹಾರ್ದಿಕ್ ಪಟೇಲ್ ಇಟ್ಟಿದ್ದ ಬೇಡಿಕೆಗೆ ಕಾಂಗ್ರೆಸ್ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ನಿತಿನ್ ಪಟೇಲ್ ಟೀಕೆ ಮಾಡಿದ್ದಾರೆ. ಅಲ್ಲದೆ, ಈಗಾಗಲೇ ಟಿಕೆಟ್ ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್ ಹಾಗೂ ಪಿಎಎಎಸ್ ಕಾರ್ಯಕರ್ತರ ನಡುವೆ ಒಂದು ಸುತ್ತಿನ ಜಗಳವಾಗಿದ್ದು, ಈ ಮೈತ್ರಿ ಬಹಳ ದಿನ ಬದುಕುವುದಿಲ್ಲ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.
Leave A Reply