ಅಷ್ಟಕ್ಕೂ ಮಹಿಳಾ ಬಾಕ್ಸರ್ ಗಳಿಗೆ ಹರಿಯಾಣ ಸರ್ಕಾರ ಗೋವು ಬಹುಮಾನ ನೀಡಲು ಕಾರಣವೇನು?
ಛತ್ತೀಸ್ ಗಡ: ಯಾವುದೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಜಯಶಾಲಿಯಾದರೆ, ಪದಕ ಗೆದ್ದರೆ ಸರ್ಕಾರ ಲಕ್ಷ ಲಕ್ಷ ನಗದು ಬಹುಮಾನ, ಜಮೀನು, ಸರ್ಕಾರಿ ನೌಕರಿ ನೀಡುವುದು ಸಾಮಾನ್ಯ.
ಆದರೆ, ಹರಿಯಾಣ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿದ್ದು, ವಿಶ್ವ ಮಹಿಳಾ ಯುವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಪದಕ ಗೆದ್ದ ಆರು ಮಹಿಳಾ ಕ್ರೀಡಾಪಟುಗಳಿಗೆ ಹಸು ನೀಡಲು ಮುಂದಾಗಿದೆ.
ರಾಜ್ಯ ಪಶು ಸಂಗೋಪನೆ ಸಚಿವ ಓಂ ಪ್ರಕಾಶ್ ಡಂಕರ್ ಈ ಕುರಿತು ಘೋಷಿಸಿದ್ದು, ಆಟಗಾರರ ಆರೋಗ್ಯದ ದೃಷ್ಟಿಯಿಂದ ಹಸುವನ್ನು ಉಡುಗೊರೆಯಾಗಿ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಹರಿಯಾಣದಲ್ಲಿ ನೀವು ಶಕ್ತಿವಂತರಾಗಬೇಕಾದರೆ ಎಮ್ಮೆಯ ಹಾಲು ಕುಡಿಯಿರಿ, ಹಾಗೊಂದು ವೇಳೆ ನೀವು ಸೌಂದರ್ಯ ಹಾಗೂ ಬುದ್ಧವಂತರಾಗಲು ಬಯಸಿದರೆ ಹಸುವಿನ ಹಾಲು ಕುಡಿಯಿರಿ ಎಂಬ ಮಾತಿದೆ. ಅಲ್ಲದೆ ಹಸುವಿನ ಹಾಲಿನಲ್ಲಿ ಕೊಬ್ಬು ಕರಗಿಸುವ ಶಕ್ತಿ ಇರುವುದರಿಂದ, ಇದು ಅವರ ಶಕ್ತಿ ಹೆಚ್ಚಿಸುತ್ತದೆ. ಹೆಚ್ಚು ಪದಕ ಗೆಲ್ಲಲು ಸಹಕಾರಿಯಾಗುತ್ತದೆ. ಹಾಗಾಗಿಯೇ ಹಸು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಮಹಿಳಾ ಬಾಕ್ಸರ್ ಗಳಿಗೆ ಸ್ಥಳೀಯ ತಳಿಯ ತಲಾ ಒಂದು ಹಸು ನೀಡಲಾಗುತ್ತದೆ. ಈ ಹಸುಗಳು ಪ್ರತಿದಿನ ಹತ್ತು ಲೀಟರ್ ಹಾಲು ನೀಡುತ್ತವೆ ಎಂದು ವಿವರಿಸಿದ್ದಾರೆ.
ವಿಶ್ವ ಮಹಿಳಾ ಯುವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ರಾಜ್ಯದ ನೀತು, ಜ್ಯೋತಿ ಗುಲಿಯಾ, ಸಾಕ್ಷಿ ಧಂಡ, ಶಶಿ ಚೋಪ್ರಾ ಬಂಗಾರದ ಪದಕ ಗೆದ್ದರೆ, ಅನುಪಮಾ ಹಾಗೂ ನೇಹಾ ಯಾದವ್ ಬೆಳ್ಳಿ ಪದಕ ಪಡೆದಿದ್ದರು.
ರಾಜ್ಯ ಸರ್ಕಾರದ ನಿರ್ಧಾರವನ್ನು ಆಟಗಾರರು ಸ್ವಾಗತಿಸಿದ್ದು, ನನಗೆ ಇದುವರೆಗೂ ಪದಕ ಗೆದ್ದಾಗ ಹಣ, ಪುಸ್ತಕ ಸೇರಿ ಹಲವು ಉಡುಗೊರೆ ನೀಡಲಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಹಸು ಉಡುಗೊರೆ ನೀಡಿದ್ದು ಸಂತಸ ತಂದಿದೆ. ರಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಾಗ ಸಾಕ್ಷಿ ಮಲಿಕ್ ಅವರಿಗೆ ಬೆಳ್ಳಿಯ ಹಸು ನೀಡಿದ್ದ ಕುರಿತು ಪತ್ರಿಕೆಗಳಲ್ಲಿ ಓದಿದ್ದೆ. ಆದರೆ ನಿಜವಾದ ಹಸುವನ್ನೇ ನೀಡಿದ್ದು ಖುಷಿಯಾಗಿದೆ ಎಂದು ಬಂಗಾರದ ಪದಕ ವಿಜೇತೆ ನೀತು ತಿಳಿಸಿದ್ದಾರೆ.
Leave A Reply