ಎಲ್ಲವನ್ನು ಗುಲಾಬಿ ಕೊಟ್ಟು ಬದಲಾಯಿಸಲಾಗುವುದಿಲ್ಲ, ದಂಡ ಕೂಡ ಹಾಕಬೇಕು!

ಪೊಲೀಸ್ ಕಮೀಷನರ್ ಅವರು ತಮ್ಮ ಕಚೇರಿಯಲ್ಲಿ ಫೋನ್ ಇನ್ ಕಾರ್ಯಕ್ರಮ ಇಟ್ಟಾಗ ಬರುವ ಫೋನ್ ಗಳಲ್ಲಿ ಹೆಚ್ಚಿನವು ಟ್ರಾಫಿಕ್ ಗೆ ಸಂಬಂಧಿಸಿದವು. ಅವರು ವಾರಕ್ಕೊಮ್ಮೆ ಮಾಡುವ ಫೋನ್ ಇನ್ ನಿತ್ಯ ಮಾಡಿದರೂ ಅಷ್ಟೇ ಫೋನ್ ಬರುತ್ತದೆ ಮತ್ತು ಬರುವುದೆಲ್ಲವೂ ಟ್ರಾಫಿಕ್ ಗೆ ಸಂಬಂಧಪಟ್ಟದ್ದೇ ಆಗಿರುತ್ತದೆ ಎಂದು ಬೇರೆ ಹೇಳಬೇಕಿಲ್ಲ. ಆದರೆ ಸಾರಿಗೆ ಅದಾಲತ್ ಎಂದು ಮಾಡುತ್ತೇವೆ, ನೀವು ಬಂದು ನಿಮ್ಮ ಸಮಸ್ಯೆಗಳನ್ನು ಹೇಳಿ ಎಂದರೆ ಬರುವುದು ಬೆರಳೆಣಿಕೆಯ ಜನರಷ್ಟೇ. ಅಂತಹ ಒಂದು ಸಾರಿಗೆ ಅದಾಲತ್ ಮಂಗಳೂರಿನಲ್ಲಿ ಗುರುವಾರ ನಡೆಯಿತು.
ಯಥಾಪ್ರಕಾರ ನಾನು ಹೋಗಿದ್ದೆ. ಒಂದು ವರ್ಷ ಮೊದಲು ಆಗ ಮಂಗಳೂರಿನಲ್ಲಿ ಡಿಸಿಪಿಯಾಗಿದ್ದ ಮತ್ತು ಈಗ ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿಯಾಗಿರುವ ಸಂಜೀವ್ ಪಾಟೀಲ್ ಮಂಗಳೂರಿನ ಟ್ರಾಫಿಕ್ ಜಾಮ್ ಕಡಿಮೆ ಮಾಡುವುದು ಹೇಗೆ ಎಂದು ಸಮಾಲೋಚನೆ ಮಾಡಲು ಮೀಟಿಂಗ್ ಕರೆದಿದ್ದರು. ಅದರಲ್ಲಿ ಅನೇಕ ಬಸ್ ಮಾಲೀಕರು ಕೂಡ ಬಂದಿದ್ದರು. ನಾನು ಆವತ್ತು ಕೂಡ ಒಂದು ಮಾತು ಹೇಳಿದ್ದೆ _ “ಸರ್, ಈ ಬಸ್ಸುಗಳ ಚಾಲಕರು ತಮಗೆ ಎಲ್ಲಿ ಯಾರು ಕೈ ಅಡ್ಡ ಮಾಡುತ್ತಾರೋ ಅಲ್ಲಿ ಬಸ್ ನಿಲ್ಲಿಸುತ್ತಾರೆ, ಯಾರಾದರೂ ದೂರದಿಂದ ಕೈ ಎತ್ತಿ ತಲೆ ತುರಿಸಿಕೊಂಡರೂ ಅದು ತಮ್ಮ ಬಸ್ ಹತ್ತಲು ಕೈ ತೋರಿಸಿದ್ದು ಎಂದುಕೊಂಡು ಬಸ್ಸಿನ ಚಾಲಕ ಬಸ್ಸು ಅಲ್ಲಿ ನಿಲ್ಲಿಸುತ್ತಾರೆ, ಬಸ್ಸು ಬಸ್ ಬೇಯಲ್ಲಿ ನಿಲ್ಲಿಸುವ ಅಭ್ಯಾಸವನ್ನೇ ಇಟ್ಟುಕೊಂಡಿಲ್ಲ” ಎಂದು ಹೇಳಿದ್ದೆ. ಆ ಸಭೆಯಲ್ಲಿದ್ದ ಬಸ್ಸುಗಳ ಮಾಲೀಕರು ನಾವು ಬಸ್ ಸ್ಟಾಪ್ ಬಿಟ್ಟು ಎಲ್ಲಿ ಕೂಡ ಬಸ್ ನಿಲ್ಲಿಸುವುದಿಲ್ಲ ಎಂದು ಹೇಳಿದ್ದರು. ಅದರ ನಂತರ ಬಸ್ಸುಗಳು ಒಂದಿಷ್ಟು ದಿನ ಬಸ್ ಬೇಗಳ ಒಳಗೆ ಹೋಗುತ್ತಿದ್ದವು. ಆದರೆ ಅದು ನಾಲ್ಕು ದಿನ. ಅದರ ನಂತರ ಯಥಾಪ್ರಕಾರ ಬಸ್ ಬೇಗಳು ಕುಡಿದು ಮಲಗುವವರಿಗೆ, ಮಧ್ಯಾಹ್ನದ ಬಿಸಿಲಿಗೆ ಸಣ್ಣ ನಿದ್ರೆ ತೆಗೆಯುವವರಿಗೆ, ಕ್ಲಾಸಿನಲ್ಲಿ ಮಾತನಾಡಲು ಟೀಚರ್ ಬಿಡುವುದಿಲ್ಲ ಎಂದು ಬಸ್ ಸ್ಟಾಪ್ ನಲ್ಲಿ ಕುಳಿತು ಹರಟುವ ಪ್ರೇಮಿಗಳಿಗೆ, ಯಾರೋ ಕಾರು ತೆಗೆದುಕೊಂಡು ಬರುತ್ತಾರೆ ಎಂದು ಕಾದು ಕುಳಿತುಕೊಂಡಿರುವ ಯುವತಿಯರಿಗೆ ಮಾತ್ರ ಬಸ್ ಸ್ಟಾಪ್ ಗಳು ಅಥವಾ ಅದಕ್ಕಾಗಿ ಮಾಡಿರುವ ಬಸ್ ಬೇಗಳು ಸೀಮಿತವಾಗಿದೆ. ಅದರೊಂದಿಗೆ ನಮ್ಮ ಬಸ್ ಪ್ರಯಾಣಿಕರದ್ದು ಕೂಡ ತಪ್ಪಿದೆ. ನಮ್ಮಲ್ಲಿ ಎಲ್ಲರೂ ಬಸ್ ಸ್ಟಾಪಿನಲ್ಲಿ ನಿಂತರೆ ತಾನೆ ಬಸ್ ಚಾಲಕ ಬಸ್ ಬೇಗೆ ಬರುವುದು. ನಾವು ಬಸ್ ಸ್ಟಾಪಿನಿಂದ ದೂರ ನಿಂತರೆ ಚಾಲಕ ಅಲ್ಲಿಯೇ ನಮ್ಮನ್ನು ಹತ್ತಿಸಿಕೊಂಡು ಸೀದಾ ಹೊರಗಿನಿಂದ ಹೊರಟು ಹೋಗುತ್ತಾನೆ. ಆದ್ದರಿಂದ ಇಲ್ಲಿ ಬಸ್ ಚಾಲಕನದ್ದು ತಪ್ಪೋ ಅಥವಾ ಬಸ್ ಪ್ರಯಾಣಿಕರದ್ದು ತಪ್ಪೋ ಎಂದು ಮೊದಲು ನೋಡುವ ಅವಶ್ಯಕತೆ ಇದೆ. ಬಸ್ಸಿನವರು ಬಸ್ ಬೇಯೊಳಗೆ ಬರುವುದಿಲ್ಲ. ಅದಕ್ಕೆ ನಾವು ಅಲ್ಲಿ ನಿಲ್ಲುವುದಿಲ್ಲ. ನಾವು ಅಲ್ಲಿ ಕಾದು ನಿಲ್ಲುವುದು, ಬಸ್ಸಿನವರು ಸಮಯ ಎಡ್ಜೆಸ್ಟ್ ಮಾಡಲು ಕಾಂಪೀಟೇಶನ್ ನಲ್ಲಿ ಹೊರಗಿನಿಂದಲೇ ಓಡಿ ಹೋದರೆ ನಮಗೆ ಬಸ್ ಮಿಸ್ಸಾಗುವುದಿಲ್ಲವಾ, ಅದಕ್ಕಾಗಿ ನಾವು ಅಲ್ಲಿ ನಿಲ್ಲಲ್ಲ ಎನ್ನುವುದು ಜನರ ವಾದ. ಇನ್ನು ಚಾಲಕರು “ಮಾತಾ ಮೂಲೆ ಉನ್ತುಂಡಾ ನಮ ದಾಯೆಗ್ ಉಲಾಯಿ ಪೋಪಿನಿ, ಮೂಲೆ ಉನ್ತಾವುನಿ ಬೊಕ್ಕಾ ಮೂಲ್ಪಾಡ್ದೆ ಪೋಪಿನಿ” ಎಂದು ಹೇಳುತ್ತಾರೆ. ಆದ್ದರಿಂದ ಎರಡೂ ಕಡೆ ಸರಿಯಾಗಬೇಕು. ನಾನು ಬಸ್ಸುಗಳು ಬೇಯೊಳಗೆ ಬರುವುದಿಲ್ಲ ಎಂದದ್ದಕ್ಕೆ ಟ್ರಾಫಿಕ್ ಎಸಿಪಿಯವರು ತಾವು ಈ ಬಗ್ಗೆ ಒಂದು ಸೆಮಿನಾರ್ ಮಾಡಿ ಬಸ್ ಚಾಲಕರಲ್ಲಿ ಈ ಕುರಿತು ಜಾಗೃತಿ ಮೂಡಿಸುತ್ತೇವೆ ಎಂದು ಹೇಳಿದರು.
ಜಾಗೃತಿ ಮೂಡಿಸುವ ಕೆಲಸ ನಡೆಯಬೇಕು, ನಿಜ, ಆದರೆ ಅದನ್ನು ಕೂಡ ಕೇಳದಿದ್ದರೆ ಏನು ಮಾಡುವುದು? ಬಸ್ ಬೇಯೊಳಗೆ ಹೋಗದ ಬಸ್ಸುಗಳಿಗೆ ನೂರು ರೂಪಾಯಿ ಫೈನ್ ಹಾಕಬೇಕು. ಒಮ್ಮೆ ಫೈನ್ ಕೊಟ್ಟ ಬಳಿಕ ಆ ಚಾಲಕ ನಿದ್ರೆಯಲ್ಲಿಯೂ ಬಸ್ ಬೇ ಕನಸಿನಲ್ಲಿ ಬಿದ್ದರೆ ಸ್ಟೇರಿಂಗ್ ಅನ್ನು ಎಡಕ್ಕೆ ತಿರುಗಿಸಿ ಅಲ್ಲಿ ನಿಲ್ಲಿಸಿ ನಂತರ ಮುಂದಕ್ಕೆ ಹೋಗುತ್ತಾನೆ. ನಮ್ಮಲ್ಲಿ ಎಲ್ಲವೂ ಗುಲಾಬಿ ಕೊಟ್ಟು ಮನಸ್ಸು ಪರಿವರ್ತಿಸಲಾಗುವುದಿಲ್ಲ. ಕೆಲವು ಕಡೆ ದಂಡ ಕೂಡ ಹಾಕಬೇಕು.
ಇನ್ನೂ ಮುಖ್ಯವಾಗಿ ಟ್ರಾಫಿಕ್ ಜಾಮ್ ಆಗುವ ಸ್ಥಳ ಬಂಟ್ಸ್ ಹಾಸ್ಟೆಲ್ ನಲ್ಲಿ ಬಸ್ ಬೇಗಳನ್ನು ಸರ್ಕಲ್ ನಿಂದ ನೂರು ಮೀಟರ್ ದೂರ ಆಗಲೇಬೇಕು ಎಂದೆ. ಈ ಮಲ್ಲಿಕಟ್ಟೆಯ ಕಡೆಯಿಂದ ಬರುವ ಬಸ್ಸು ಗಳು ಸಿವಿ ನಾಯಕ್ ಹಾಲ್ ಎದುರಿನ ಮಧುಸಾರ ನರ್ಸರಿಯ ಹತ್ತಿರ ಸಾಕಷ್ಟು ಜಾಗ ಇರುವುದರಿಂದ ಅಲ್ಲಿಯೇ ಬಸ್ ಬೇ ನಿರ್ಮಿಸಬಹುದು. ಇನ್ನು ಪಿವಿಎಸ್ ಕಡೆಗೆ ಹೋಗುವ ಬಸ್ಸುಗಳು ಸಂತ ಎಲೋಶಿಯಸ್ ಹೈಸ್ಕೂಲಿನ ಎದುರಿಗೆ ಒಂದು ಬಸ್ ಬೇ ತರಹದ್ದು ಇದೆ. ಅಲ್ಲಿಯೇ ಕಡ್ಡಾಯವಾಗಿ ನಿಲ್ಲಿಸಬೇಕು ಎಂದು ಮಾಡಿದರೆ ತುಂಬಾ ಉತ್ತಮ. ಇನ್ನು ಬಂಟ್ಸ್ ಹಾಸ್ಟೆಲ್ ಪ್ರದೇಶವನ್ನು ನೋ ಪಾರ್ಕಿಂಗ್ ಝೋನ್ ಮಾಡಿಬಿಡಬೇಕು. ಆಗ ಸಮಸ್ಯೆ ಅರ್ಧದಷ್ಟು ಪರಿಹಾರವಾಗುತ್ತದೆ.
ಕೊನೆಯದಾಗಿ ಡಾ|ಜಗದೀಶ್ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಆರ್ ಟಿಎ ಪದನಿಮಿತ್ತ ಅಧ್ಯಕ್ಷರಾಗಿದ್ದಾಗ ಬಸ್ ಗಳ ಫುಟ್ ಬೋರ್ಡ್ 52 ಸೆಂಟಿಮೀಟರ್ ಗಿಂತ ಎತ್ತರ ಇರಕೂಡದು ಎಂದು ಸೂಚನೆ ನೀಡಿದ್ದರು. ಅವರು ಇಲ್ಲಿಂದ ವರ್ಗಾವಣೆಯಾದ ಬಳಿಕ ಆ ಸೂಚನೆ ಕೂಡ ಇಲ್ಲಿಂದ ವರ್ಗಾವಣೆ ಆಗಿ ಹೋಗಿದೆ. ಅದನ್ನು ಮತ್ತೆ ಸರಿಮಾಡಬೇಕು ಎಂದೆ.
Leave A Reply