ತಲಾಖ್ ವಿರುದ್ಧ ಕಾನೂನು ಸನಿಹ, ಇನ್ನು ಬಹುಪತ್ನಿತ್ವ ನಿಷೇಧಕ್ಕೆ ಮುಸ್ಲಿಂ ಮಹಿಳೆಯರ ಒತ್ತಾಯ!
ದೆಹಲಿ: ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ನಿಷೇಧಿಸಿ ಹೊರಡಿಸಿದ ಆದೇಶ ಹಾಗೂ ತಲಾಖ್ ವಿರುದ್ಧ ಕೇಂದ್ರ ಸರ್ಕಾರ ಕಾನೂನು ರಚಿಸಲು ಮುಂದಾಗಿರುವ ಬೆನ್ನಲ್ಲೇ, ಮುಸ್ಲಿಂ ಮಹಿಳೆಯರು ಮತ್ತೊಂದು ಕೂಗೆಬ್ಬಿಸಿದ್ದು, ಹಲಾಲಾ ಹಾಗೂ ಬಹುಪತ್ನಿತ್ವ ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.
ತ್ರಿವಳಿ ತಲಾಖ ವಿರುದ್ಧ ಚಳವಳಿ ನಡೆಸಿದ್ದ ಎನ್ ಜಿಒ ಒಂದು ತ್ರಿವಳಿ ತಲಾಖ್ ವಿರುದ್ಧ ಸರ್ಕಾರ ತಯಾರಿಸಿದ ಕರಡು ಪ್ರತಿ ಸ್ವಾಗತಿಸಿದ್ದು, ಮುಸ್ಲಿಂ ಮಹಿಳೆಯರ ಅಭಿಪ್ರಾಯದ ಮೇರೆಗೆ ಬಹುಪತ್ನಿತ್ವವನ್ನೂ ನಿಷೇಧಿಸಬೇಕು ಎಂದು ಆಗ್ರಹಿಸಲಾಗಿದೆ.
ಸರ್ಕಾರದ ಕರಡನ್ನು ನಾವು ಸ್ವಾಗತಿಸುತ್ತೇವೆ. ಆದರೆ ಕರಡು ಪ್ರತಿಯಲ್ಲಿ ತ್ರಿವಳಿ ತಲಾಖ್ ಅಪರಾಧ ಎಂದು ತಿಳಿಸಿದೆಯಾದರೂ ಪರ್ಯಾಯ ವಿಚ್ಛೇದನದ ಕುರಿತು ತಿಳಿಸಿಲ್ಲ. ಆದಾಗ್ಯೂ ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ಬಹುಪತ್ನಿತ್ವವನ್ನೂ ನಿಷೇಧಿಸಿದರೆ ಒಳ್ಳೆಯದು ಎಂದು ಅಖಿಲ ಭಾರತ ಮುಸ್ಲಿಂ ಮಹಿಳಾ ಆಂದೋಲನ ಹೇಳಿಕೆ ನೀಡಿದೆ.
ಈ ಎನ್ ಜಿಒ ಸಂಸ್ಥೆಯಲ್ಲಿ ಸುಮಾರು 70 ಸಾವಿರ ಮುಸ್ಲಿಂ ಮಹಿಳೆಯರಿದ್ದು, ಇದೇ ಸಂಘಟನೆ ತ್ರಿವಳಿ ತಲಾಖ್ ವಿರುದ್ಧ ಸಹಿ ಸಂಗ್ರಹ, ನಿಷೇಧಿಸುವಂತೆ ಸರ್ಕಾರಕ್ಕೆ ಮನವಿ ಮಾಡಿತ್ತು. ಈಗ ಬಹುಪತ್ನಿತ್ವವನ್ನೂ ನಿಷೇಧಿಸಬೇಕು ಎಂದು ಬೇಡಿಕೆ ಇಟ್ಟಿದೆ.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ವಿರುದ್ಧ ಕರಡು ಪ್ರತಿ ರಚಿಸಿದ್ದು, ಚಳಿಗಾಲದ ಅಧಿವೇನದಲ್ಲಿ ಕಾನೂನು ಜಾರಿಗೊಳಿಸಲಿದೆ ಎಂದೇ ಹೇಳಲಾಗುತ್ತಿದೆ.
Leave A Reply