ಮಣಿದ ಪಾಕಿಸ್ತಾನ, ಕುಲಭೂಷಣ್ ಜಾಧವ್ ಭೇಟಿಯಾಗಲು ಕುಟುಂಬಕ್ಕೆ ದಿನಾಂಕ ನಿಗದಿ
ಇಸ್ಲಾಮಾಬಾದ್: ಭಾರತ ಸರ್ಕಾರದ ನಿರಂತರ ಒತ್ತಡ, ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ಪ್ರಭಾವಕ್ಕೆ ಮಣಿದ ಪಾಕಿಸ್ತಾನ ಕೊನೆಗೂ ಕುಲಭೂಷಣ್ ಜಾಧವ್ ಭೇಟಿ ಮಾಡಲು ಕುಟುಂಬಕ್ಕೆ ಡಿ.25ರಂದು ಅವಕಾಶ ಮಾಡುವುದಾಗಿ ಸ್ಪಷ್ಟಪಡಿಸಿದೆ.
ಬೇಹುಗಾರಿಕೆ ಆರೋಪದಲ್ಲಿ ಬಂಧಿಸಿಟ್ಟಿರುವ ಭಾರತ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಡಿ.25ರಂದು ಭೇಟಿ ಮಾಡಿಸಲಾಗುವುದು ಎಂದು ಪಾಕಿಸ್ತಾನ ಭಾರತದ ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ನೀಡಿದೆ.
ಕುಲಭೂಷಣ್ ಜಾಧವ್ ಅವರ ಪತ್ನಿ ಹಾಗೂ ತಾಯಿಗೆ ಜಾಧವ್ ಅವರನ್ನು ಪಾಕಿಸ್ತಾನದಲ್ಲಿ ಭೇಟಿ ಮಾಡಿಸಲು ವೀಸಾ ನೀಡುವುದಾಗಿ ಪಾಕಿಸ್ತಾನ ಸರ್ಕಾರ ಒಪ್ಪಿಗೆ ನೀಡಿದೆ. ಈ ಕುರಿತು ಪಾಕಿಸ್ತಾನ ಸರ್ಕಾರ ಹಾಗೂ ಜಾಧವ್ ಅವರ ಹೆಂಡತಿ ಮತ್ತು ತಾಯಿ ಜತೆ ಮಾತನಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಅಲ್ಲದೆ ಪಾಕಿಸ್ತಾನದಲ್ಲಿ ಜಾಧವ್ ಕುಟುಂಬಸ್ಥರಿಗೆ ಸ್ವಾತಂತ್ರ್ಯ ಹಾಗೂ ಭದ್ರತೆ ಒದಗಿಸುವುದಾಗಿಯೂ ಪಾಕಿಸ್ತಾನ ತಿಳಿಸಿದೆ ಎಂದು ಸುಷ್ಮಾ ಸ್ವರಾಜ್ ಮಾಹಿತಿ ನೀಡಿದ್ದಾರೆ.
ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ತಾನ ಜಾಧವ್ ಅವರನ್ನು ಬಂಧಿಸಿ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಆದರೆ ಭಾರತ ಸರ್ಕಾರ ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ತಂದು, ಅಲ್ಲಿ ಸಮರ್ಥ ವಾದ ಮಂಡಿಸಿ, ಗಲ್ಲು ಶಿಕ್ಷೆಗೆ ತಡೆ ತಂದು ಪಾಕಿಸ್ತಾನಕ್ಕೆ ಪೆಟ್ಟು ನೀಡಿತ್ತು ಹಾಗೂ ಜಾಧವ್ ಕುಟುಂಬಸ್ಥರ ಭೇಟಿಗೆ ಅವಕಾಶ ನೀಡುವಂತೆ ಪಾಕಿಸ್ತಾನದ ಮೇಲೆ ಒತ್ತಡ ಹೇರಿತ್ತು. ಇದಕ್ಕೆ ಮಣಿದಿದ್ದ ಪಾಕಿಸ್ತಾನ ಭೇಟಿಗೆ ಅವಕಾಶ ನೀಡುವುದಾಗಿ ಒಪ್ಪಿತ್ತು, ಈಗ ದಿನಾಂಕ ನೀಡಿದೆ.
Leave A Reply