ಸಿದ್ದರಾಮಯ್ಯನವರೇ ನೀವು ಹಿಂದೂ ನಿಜ, ಆದರೆ ಸಿಎಂ ಆಗಿ ನೀವು ಹಾಗೆ ನಡೆದುಕೊಂಡ್ರಾ?
ನಾವೇನು ಹಿಂದೂಗಳಲ್ಲವಾ?
ನನ್ನ ಹೆಸರು ಸಿದ್ದರಾಮಯ್ಯ, ಹೆಸರಲ್ಲೇ ರಾಮ ಇದ್ದಾನೆ. ನಾನೂ ಹಿಂದೂವೇ?
ನಾನು ಹುಟ್ಟಿನಿಂದಲೇ ಹಿಂದೂ, ಉಳಿದೆಲ್ಲವರಿಗೇ ನಾನು ಬಂಧು
ನಾನು ಹಿಂದೂ, ನಾನು ರಾಮ, ಭಗವಾನ್ ಹುನುಮನ ಭಕ್ತ.
ಕರ್ನಾಟಕದಲ್ಲಿ ಇನ್ನೇನು ವಿಧಾನಸಭೆಗೆ ಚುನಾವಣೆ ಆರಂಭವಾಗಲು ದಿನಗಣನೆ ಆರಂಭವಾಗಿದೆ. ಕಾರವಾರಕ್ಕೆ ಎರಡು ದಿನ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಆಣಿಮುತ್ತುಗಳನ್ನು ಉದುರಿಸಿದ್ದಾರೆ. ಅತ್ತ ಗುಜರಾತಿನಲ್ಲಿ ಚುನಾವಣೆ ಆರಂಭವಾಗುತ್ತಲೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಿಲಕ ಇಟ್ಟು, ದೇವಾಲಯಕ್ಕೆ ತೆರಳಿದ್ದಾರೆ. ಮುಖ್ಯಮಂತ್ರಿಯವರೂ ಚುನಾವಣೆಗೆ ಸಿದ್ಧರಾದಂತೆ ಕಾಣುತ್ತಿದ್ದು, ಹಿಂದೂ ಮಂತ್ರ ಪಠಿಸುತ್ತಿದ್ದಾರೆ.
ಹಾಗಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದೂ ಎಂದು ಹೇಳುತ್ತಿರುವುದರ ಹಿಂದೆ ಚುನಾವಣೆ ಹುನ್ನಾರ ಇದೆಯಾ? ಮತಬ್ಯಾಂಕ್ ನ ತಂತ್ರವಿದೆಯಾ? ಇವೆರಡೂ ಇಲ್ಲದಿದ್ದರೆ, ನಾಲ್ಕೂವರೆ ವರ್ಷ ಆಡಳಿತ ಮಾಡಿದ ಸಿದ್ದರಾಮಯ್ಯನವರು ಹಿಂದೂಪರವಾಗಿ ನಡೆದುಕೊಂಡಿದ್ದಾರೆಯೇ? ಅಷ್ಟಕ್ಕೂ ಇದುವರೆಗೂ ಅಹಿಂದ ಎನ್ನುತ್ತಿದ್ದ ಅವರು ಈಗ ಏಕೆ ಹಿಂದೂ ಎನ್ನುತ್ತಿದ್ದಾರೆ?
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬರುತ್ತಲೇ ಕೇಂದ್ರ ಸರ್ಕಾರದ ಹಣದಲ್ಲೇ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿರಿ. ಬಡವರಿಗೊಂದಿಷ್ಟು ಅಕ್ಕಿ ಸಿಕ್ಕರೆ, ಕಡಿಮೆ ಹಣಕ್ಕೆ ಊಟ ಮಾಡುವ ಹಾಗಾದರೆ ಸಾಕು ಎಂದು ನಾವೂ ಸುಮ್ಮನಾದೆವು. ಕೇಂದ್ರದ ಹಣ ಪಡೆದು ಅಕ್ಕಿ ಖರೀದಿಸಿಯೂ ಇದು ನಮ್ಮ ಯೋಜನೆ, ನಮ್ಮ ಸರ್ಕಾರದ ಯೋಜನೆ ಎಂದೂ ಪ್ರಚಾರ ಪಡೆದಿರಿ. ಹೋಗ್ಲಿ ಬಿಡು, ಯಾರ ಯೋಜನೆಯಾದರೇನು? ಬಡವರಿಗೆ ಅಕ್ಕಿಸಿಕ್ಕಿತಲ್ಲ ಎಂದು ಜನ ಸುಮ್ಮನಾದರು.
ಆದರೆ, ಬಡವರಿಗೆ ಅಕ್ಕಿ ಕೊಡಿಸಿದ ಇದೇ ಸಿದ್ದರಾಮಯ್ಯನವರು ಬೇರೆ ವರಸೆ ಆರಂಭಿಸಿದರು. “ಶಾದಿ ಭಾಗ್ಯ” ಯೋಜನೆ ಜಾರಿಗೆ ತಂದು, ಅಲ್ಪಸಂಖ್ಯಾತ ಯುವತಿಯರು ಮದುವೆಯಾದರೆ, ಅವರಿಗೆ 50 ಸಾವಿರ ರೂಪಾಯಿ ಸಹಾಯಧನ ನೀಡಲು ಮುಂದಾದರು. ಹೌದು, ಅಲ್ಪಸಂಖ್ಯಾತ ಬಡವರು ಮದುವೆಯಾದರೆ 50 ಸಾವಿರ ರೂಪಾಯಿ ನೀಡುವುದು ಸ್ವಾಗತಾರ್ಹವೇ. ಆದರೆ ಅಲ್ಪಸಂಖ್ಯಾತರನ್ನು ಮೆಚ್ಚಿಸಲು ಸಿಎಂ ಯೋಜನೆ ಜಾರಿಗೊಳಿಸಿದರು. ಹಾಗಾದರೆ ಹಿಂದೂಗಳಲ್ಲಿ ಬಡವರೇ ಇರಲಿಲ್ಲವೇ ಮುಖ್ಯಮಂತ್ರಿಯವರೇ? ಆಗ ನಿಮ್ಮೊಳಗಿನ ಹಿಂದೂ ಜಾಗೃತವಾಗಿರಲಿಲ್ಲವೇ? ಚುನಾವಣೆ ಬರುತ್ತಲೇ ಹಿಂದೂ ಎನ್ನುವ ನಿಮಗೆ, ಯೋಜನೆ ಜಾರಿಯಾಗುವ ನೆನಪಾಗಲಿಲ್ಲವೇ?
ಇದು ಶಾದಿ ಭಾಗ್ಯದ ಉದಾಹರಣೆಯಾದರೆ, ಇನ್ನೂ ಒಂದು ಮುಂದೆ ಹೋಗಿ ಪ್ರವಾಸ ಭಾಗ್ಯ ಯೋಜನೆ ತಂದರು. ಅಂದರೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಉಚಿತವಾಗಿ ಪ್ರವಾಸ ಮಾಡಲು ಅನುಕೂಲ ಮಾಡಿದರು. ಆ ಮೂಲಕ ಶಾಲೆ ವಿದ್ಯಾರ್ಥಿಗಳಲ್ಲೇ, ನಾನು ಎಸ್ಸಿ, ನೀನು ಎಸ್ಟಿ ಎಂಬ ಜಾತಿ ಮನೋಭಾವನೆ ಬಿತ್ತಿದರು. ಅಹಿಂದ ವರ್ಗದವರ ಏಳಿಗೆ ಹೆಸರಲ್ಲಿ ಸರ್ಕಾರಿ ಯೋಜನೆ ಸೀಮಿತಗೊಳಿಸಿದರು. ಅಷ್ಟಕ್ಕೂ ಮೇಲ್ವರ್ಗದ ಹಿಂದೂಗಳಲ್ಲಿ ಬಡವರಿದ್ದಾರೆ. ಅವರೂ ಪ್ರವಾಸ ಹೋಗಲಿ, ಎಲ್ಲ ವಿದ್ಯಾರ್ಥಿಗಳೂ ಪ್ರವಾಸ ಹೋಗಲಿ ಎಂದು ಎಲ್ಲರಿಗೂ ಅನ್ವಯವಾಗುವಂತೆ ಯೋಜನೆ ಜಾರಿಗೊಳಿಸಬಹುದಿತ್ತು. ಆಗಲೂ ಮತಬೇಟೆ ಬೇಟೆಗಾರ ಸಿದ್ದರಾಮಯ್ಯ ಅವರಲ್ಲಿ ಜಾಗೃತನಾಗಿದ್ದರಿಂದ ಯೋಜನೆ ಸೀಮಿತಗೊಳಿಸಿದರು. ಈಗ ಹಿಂದೂ ಎನ್ನುವ ಸಿದ್ದರಾಮಯ್ಯನವರಿಗೆ ಆಗ ಹಿಂದೂಗಳು ಎಂಬ ಭಾವನೆ ಬರಬೇಕಿತ್ತಲ್ಲವೇ?
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಷ್ಟು ಜಾಣರು ನೋಡಿ? ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದಾಗ, ಅದಕ್ಕೆಲ್ಲ ಸೈದ್ಧಾಂತಿಕ ಹಿನ್ನೆಲೆ ನೀಡಿದರು, ಪರೋಕ್ಷವಾಗಿ ಕೇಂದ್ರ ಸರ್ಕಾರದತ್ತ ಬೆರಳು ಮಾಡಿದರು. ಆದರೆ ಮೈಸೂರು, ಮಂಗಳೂರು, ಬೆಂಗಳೂರಿನ ಶಿವಾಜಿ ನಗರ ಸೇರಿ ಹಲವೆಡೆ ಹತ್ತಕ್ಕೂ ಹೆಚ್ಚು ಆರೆಸ್ಸೆಸ್ ಕಾರ್ಯಕರ್ತರ ಕೊಲೆಯಾಯಿತು. ಆದರೆ ಸಿದ್ದರಾಮಯ್ಯನವರು ಈ ಕುರಿತು ತನಿಖೆ ನಡೆಸುವುದು ಬಿಡಿ, ಕನಿಷ್ಠ ಖಂಡನೆಯನ್ನಾದರೂ ವ್ಯಕ್ತಪಡಿಸಿದರೆ? ಆರೆಸ್ಸೆಸ್ ಕಾರ್ಯಕರ್ತರೆಲ್ಲರೂ ಹಿಂದೂಗಳು, ಅವರನ್ನು ಕೊಲೆ ಮಾಡಿದವರನ್ನು ಶಿಕ್ಷಿಸಬೇಕು ಎಂದು ಮುಖ್ಯಮಂತ್ರಿಯವರು ಯಾವ ಕ್ರಮ ಕೈಗೊಂಡಿದ್ದಾರೆ ಹೇಳಿ? ಅವರು ಯಾವ ಸಂಘಟನೆಯವರಾದರೇನು, ಅವರೂ ಹಿಂದೂಗಳೇ ಎಂದು ಸಿಎಂ ಅವರಿಗೇಕೆ ಅನಿಸಲಿಲ್ಲ? ಹಿಂದೂ ಮುಖ್ಯಮಂತ್ರಿಯೊಬ್ಬರು ಹಿಂದೂಗಳನ್ನೇ ರಕ್ಷಿಸಲಾರದಷ್ಟು ಬ್ಯುಸಿಯಿದ್ದರೆ? ಅಥವಾ ಆಗ ಅವರ ಹಿಂದೂ ಮನಸ್ಥಿತಿ ಸತ್ತುಹೋಗಿತ್ತೆ?
ಇನ್ನು ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ವಿಸರ್ಜನೆ ಮಾಡುವಾಗ ನಿಯಮ ರೂಪಿಸಿದರಲ್ಲ, ಮೌಢ್ಯ ನಿಷೇಧದ ಹೆಸರಲ್ಲಿ ಬರೀ ಹಿಂದೂಗಳನ್ನೇ ಟಾರ್ಗೆಟ್ ಮಾಡಿ ನಿಯಮ ರೂಪಿಸಲು ಹೊರಟಿರಲ್ಲ, ಹಿಂದೂಗಳನ್ನೇ ಕೊಂದ, ಬಲವಂತವಾಗಿ ಮತಾಂತರಗೊಳಿಸಿದ, ಬಹುತೇಕ ಹಿಂದೂಗಳುವಿರೋಧಿಸಿದರೂ ಟಿಪ್ಪು ಸುಲ್ತಾನನ ಜಯಂತಿ ಆಚರಿಸಿದಿರಲ್ಲ, ಆಗೆಲ್ಲ ನೀವೊಬ್ಬ ಹಿಂದೂ ಎಂಬುದು ಮರೆತಿತ್ತೇ? ನಾನು ರಾಮನ ಭಕ್ತ ಎನ್ನುತ್ತೀದಿರಲ್ಲ, ಇದೇ ಕೆ.ಎಸ್.ಭಗವಾನ್ ರಾಮನ ವಿರುದ್ಧ ಕೀಳಾಗಿ, ಇಲ್ಲಸಲ್ಲದ್ದೆಲ್ಲ ಹೇಳಿದಾಗ, ಭಗವಾನವರ ವಿರುದ್ಧ ನೀವು ಒಂದಾದರೂ ಹೇಳಿಕೆ ನೀಡಿದಿರೇ? ಇದೆಂಥ ರಾಮಭಕ್ತಿ ಸಿದ್ದರಾಮಯ್ಯನವರೇ ನಿಮ್ಮದು? ನಿಮ್ಮ ಹೆಸರಲ್ಲೇ ರಾಮನನ್ನು ಇಟ್ಟುಕೊಂಡು ಆಗ ನೀವೇಕೆ ಸುಮ್ಮನೆ ಇದ್ರೀ? ಆಗೆಲ್ಲ ನಿಮ್ಮೊಳಗಿನ ಹಿಂದೂ ಸತ್ತು ಹೋಗಿದ್ದನೇ? ಈಗ ಚುನಾವಣೆ ಆಗಮಿಸುತ್ತಲೇ ಆತ ಧುತ್ತನೆ ಎದ್ದು ಬಂದಿದ್ದಾನೆಯೇ? ಇದಕ್ಕೆಲ್ಲ ಉತ್ತರಿಸುವ ಸಂಯಮ ನಿಮಗಿದೆಯೇ ಮುಖ್ಯಮಂತ್ರಿಯವರೇ?
Leave A Reply