ರವಿ ಬೆಳಗೆರೆ ಅವರಿಗೆ ಸಿಗರೇಟ್ ಪೂರೈಸಿದ್ದು ಪೊಲೀಸರ ವೈಫಲ್ಯವೋ, ಗೃಹ ಸಚಿವರ ದೌರ್ಬಲ್ಯವೋ?
ನೀವೊಬ್ಬ ಸಿಗರೇಟ್ ಪ್ರೇಮಿಯಾಗಿದ್ದರೆ, ರಸ್ತೆ ಬದಿಯ ಗೂಡಂಗಡಿ ಬಳಿ ನಿಂತು ಧಂ ಎಳೆಯುವವರಾಗಿದ್ದರೆ ಗೊತ್ತಿರುತ್ತದೆ. ಪೊಲೀಸರು ಹೇಗೆ ಬಂದು ದಂಡ ವಿಧಿಸುತ್ತಾರೆ ಎಂಬುದು ಅನುಭವಕ್ಕೂ ಬಂದಿರುತ್ತದೆ. ಅಲ್ಲದೆ, ಇತ್ತೀಚೆಗೆ ಬಿಡಿ ಬಿಡಿಯಾಗಿ ಸಿಗರೇಟು ಮಾರುವ ಹಾಗಿಲ್ಲ. ಮಾರಿದರೆ ಪ್ಯಾಕ್ ಮಾರಾಟ ಮಾಡಬೇಕು ಎಂದು ನಿಯಮ ಜಾರಿಗೆ ತರಲಾಗಿದೆ. ರಸ್ತೆ ಬದಿ ನಿಂತು ಸಿಗರೇಟು ಸೇದುವುದು ಹಾಗೂ ಬಿಡಿಯಾಗಿ ಮಾರುವುದು ನಿಷೇಧಗೊಳಿಸುವುದು ಸರಿಯಾಗಿಯೇ ಇದೆ.
ಆದರೆ ಸಹೋದ್ಯೋಗಿ ಪತ್ರಕರ್ತರನ ಕೊಲೆಗೆ ಸುಪಾರಿ ಕೊಟ್ಟು ನ್ಯಾಯಾಂಗ ಬಂಧನದಲ್ಲಿರುವ ರವಿ ಬೆಳಗೆರೆ ಅವರ ವಿಷಯದಲ್ಲಿ ಆಗಿದ್ದೇನು?
ಮೂರ್ನಾಲ್ಕು ದಿನಗಳಿಂದ ಟಿವಿ ನೋಡಿರಬೇಕು. ರವಿ ಬೆಳಗೆರೆ ಅವರ ಬಂಧನವಾಗುತ್ತಲೇ, ಸಿಸಿಬಿ ಪೊಲೀಸರ ಜೀಪಿನಲ್ಲಿಯೇ ಬೆಳಗೆರೆ ಅವರು ಸಿಗರೇಟ್ ಸೇದಿದ ಚಿತ್ರಗಳು ಮಾಧ್ಯಮದಲ್ಲಿ ಪ್ರಸಾರವಾದವು. ಬಳಿಕ ವಿಚಾರಣೆಗೆಂದು ಜೀಪಿನಲ್ಲಿ ಕರೆದುಕೊಂಡು ಹೋಗುವಾಗಲೂ ಪೊಲೀಸರ ಎದುರೇ ಹೊಗೆ ಬಿಟ್ಟರು. ಒಮ್ಮೆಯಂತೂ, ಸಿಗರೇಟು ನೀಡದಿದ್ದರೆ ಜೀಪಿನ ಬಾಗಿಲು ಹಾಕಲು ಬಿಡುವುದಿಲ್ಲ ಎಂದು ಹುಚ್ಚಾಟ ಮೆರೆದರು. ಕೊನೆಗೆ ಪೊಲೀಸರು ಸಿಗರೇಟ್ ಕೊಟ್ಟು ಸಮಾಧಾನಪಡಿಸಿದರು ಪೊಲೀಸರು!
ಹೇಳಿ, ಒಬ್ಬ ಸಾಮಾನ್ಯ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದಿದರೆ ದಂಡ ಹಾಕುವ, ಮೂರು ಕಾಸಿನ ಲಾಭಕ್ಕಾಗಿ ಬಿಡಿಯಾಗಿ ಸಿಗರೇಟ್ ಮಾರುವ ಗೂಡಂಗಡಿ ಮಾಲೀಕರಿಗೆ ದಂಡ ವಿಧಿಸುವ ಪೊಲೀಸರೇ ಆರೋಪಿಯೊಬ್ಬರಿಗೆ ಸಿಗರೇಟ್ ನೀಡುವುದು ಎಷ್ಟು ಸರಿ? ಇದಾವ ಸೀಮೆಯ ಕಾನೂನು ಪಾಲನೆ? ಇದಾವ ರೀತಿಯ ನ್ಯಾಯ? ಅಷ್ಟಕ್ಕೂ ಇದು ಪೊಲೀಸರ ವೈಫಲ್ಯವೇ? ಅಷ್ಟೇ ಅಲ್ಲ, ರವಿ ಬೆಳಗೆರೆ ಅವರು ಕಸ್ಟಡಿಯಲ್ಲಿರುವಾಗಲೇ ಸುನೀಲ್ ಹೆಗ್ಗರವಳ್ಳಿ ಅವರಿಗೆ ಕರೆ ಮಾತನಾಡುತ್ತಾರೆ ಎಂದರೆ ಎಷ್ಟರಮಟ್ಟಿಗೆ ಬೆಳಗೆರೆ ಅವರಿಗೆ ಪೊಲೀಸರು ಸಹಕರಿಸಿರಬಹುದು?
ಇನ್ನು ಸುನೀಲ್ ಹೆಗ್ಗರವಳ್ಳಿಗೆ ಕರೆ ಮಾಡಿದ್ದು ಹಾಗೂ ಸಿಗರೇಟ್ ನೀಡಿರುವ ಕುರಿತು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಕೇಳಿದರೆ, ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹಾರಿಕೆಯ ಉತ್ತರ ನೀಡುತ್ತಾರೆ.
ಮಾನ್ಯ ಗೃಹ ಸಚಿವರೇ ಹಾಗೂ ಪೊಲೀಸರೇ, ನಿಮಗೆ ಕೋಟ್ಪಾ ಕಾಯಿದೆಯ ಬಗ್ಗೆ ಗೊತ್ತೇ ಇಲ್ಲವೇ? ಧೂಮಪಾನ ಹಾಗೂ ತಂಬಾಕು ಉತ್ಪನ್ನಗಳ ಸೇವನೆ ತಡೆ ಕಾಯಿದೆ (ಕೋಟ್ಪಾ-2003) ಪ್ರಕಾರ ಯಾವುದೇ ವ್ಯಕ್ತಿ ಸಾರ್ವಜನಿಕವಾಗಿ ಧೂಮಪಾನ ಸೇರಿ ತಂಬಾಕು ಉತ್ಪನ್ನ ಸೇವಿಸುವಂತಿಲ್ಲ. ಹಾಗೊಂದು ವೇಳೆ ಸೇವಿಸಿದರೆ ದಂಡ ವಿಧಿಸಲಾಗುತ್ತದೆ. ಅದನ್ನು ಪೂರೈಸಿದವರಿಗೂ ದಂಡ ಹಾಕಬೇಕು ಎಂಬುದು ನಿಯಮ.
ಹೀಗಿರುವಾಗ, ಕೊಲೆಗೆ ಸುಪಾರಿ ನೀಡಿದ ಆರೋಪಿಯೊಬ್ಬ ಪೊಲೀಸರ ಸಮ್ಮುಖದಲ್ಲೇ, ಪೊಲೀಸರ ಜೀಪಿನಲ್ಲಿಯೇ ಸಿಗರೇಟು ಸೇದುತ್ತಾರೆ. ಪೊಲೀಸರಿಗೇ ಧಮ್ಕಿ ಹಾಕುತ್ತಾರೆ ಎಂದರೆ ಪೊಲೀಸರು ಹಾಗೂ ರಾಜ್ಯ ಸರ್ಕಾರ ಎಂಥ ಕಾನೂನು ಪಾಲನೆ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ.
ಟಿವಿಯಲ್ಲಿ ಪ್ರಸಾರವಾದ ವರದಿಯಂತೆ ಸಿಗರೇಟು ಸೇದುವುದು ನನ್ನ ಹಕ್ಕು ಎಂದು ರವಿ ಬೆಳಗೆರೆ ವಾದಿಸಿದ್ದಾರೆ. ಯಾವುದೇ ಒಬ್ಬ ಆರೋಪಿಗೆ ಅನ್ನ, ನೀರು ಒದಗಿಸುವುದು ಪೊಲೀಸರ ಕರ್ತವ್ಯ. ಆದರೆ ಆರೋಪಿ ಬಯಸಿದ ಎಂದು ಸಿಗರೇಟು ನೀಡುವುದು ಯಾವ ಕಾನೂನಿನಲ್ಲಿದೆ ಎಂದು ತಿಳಿಸುವಿರಾ? ನಾಳೆ ರವಿ ಬೆಳಗೆರೆಯವರು ಸೆಕ್ಸ್ ನನ್ನ ಹಕ್ಕು ಎಂದರೆ, ಅದಕ್ಕೂ ವ್ಯವಸ್ಥೆ ಮಾಡುವಿರಾ? ಸಾರ್ವಜನಿಕರಿಗೊಂದು ನ್ಯಾಯ, ಪ್ರಭಾವಿಗಳಿಗೊಂದು ನ್ಯಾಯವೇ ಗೃಹಮಂತ್ರಿಯವರೇ? ಪೊಲೀಸರೂ ಇದಕ್ಕೆ ಉತ್ತರಿಸಲಿ.
Leave A Reply