ಹೋರಾಟಕ್ಕೆ ಮಣಿದ ಕಾಂಗ್ರೆಸ್, ಮೇಸ್ತ ಸಾವಿನ ಪ್ರಕರಣ ಸಿಬಿಐಗೆ

ಬೆಂಗಳೂರು: ಹೊನ್ನಾವರದ ಪರೇಶ್ ಮೇಸ್ತ ಅನುಮಾನಾಸ್ಪದ ಸಾವಿನ ಪ್ರಕರಣ ಖಂಡಿಸಿ ಹೊನ್ನಾವರ ಸೇರಿ ಸುತ್ತಲಿನ ತಾಲೂಕುಗಳಲ್ಲಿ ಭಾರಿ ವಿರೋಧ ಹಾಗೂ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೊನೆಗೂ ಸಿಎಂ ಸಿದ್ದರಾಮಯ್ಯನವರ ಸರ್ಕಾರ ಮಣಿದಿದೆ.
ಪರೇಶ್ ಮೇಸ್ತ ಸಾವಿನ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಿದ್ದು, ಜನರ ಹೋರಾಟದ ಎದುರು ಸರ್ಕಾರ ಮಂಡಿಯೂರಿದೆ.
ಪರೇಶ್ ಮೇಸ್ತ ಅವರ ಕುಟುಂಬದವರ ಒತ್ತಡದ ಹಿನ್ನೆಲೆಯಲ್ಲಿ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸುತ್ತಿದ್ದೇವೆ ಎಂದು ಪರಪ್ಪನ ಅಗ್ರಹಾರದ ಬಳಿ ಗೃಹ ಸಚಿವ ರಾಮಲಿಂಗಾರೆಡ್ಡಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಅವರು ಸಹ ಒಪ್ಪಿಗೆ ನೀಡಿದ್ದು, ಸಮರ್ಪಕ ತನಿಖೆಯಾಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಪ್ರಕರಣ ಸಿಬಿಐಗೆ ವಹಿಸಿದ ಕುರಿತು ಮಾತನಾಡುವ ನೆಪದಲ್ಲಿ ಬಿಜೆಪಿಯನ್ನು ಟೀಕಿಸಿದ ರಾಮಲಿಂಗಾರೆಡ್ಡಿ ಅವರು, “ಚುನಾವಣೆ ಹತ್ತಿರವಾಗುತ್ತಿರುವ ಕಾರಣ ಬಿಜೆಪಿಯವರಿಗೆ ಸೋಲಿನ ಭೀತಿ ಕಾಡುತ್ತಿದೆ. ಹಾಗಾಗಿ ಅವರು ಜನರ ಭಾವನೆ ಕೆರಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಹಾಗಾಗಿಯೇ ಹೊನ್ನಾವರ ಹಾಗೂ ಶಿರಸಿಯಲ್ಲಿ ಗಲಾಟೆ ನಡೆಯಲು ಕಾರಣವಾಯಿತು ಎಂದು ಹೇಳಿದ್ದಾರೆ.
ಹೊನ್ನಾವರದಲ್ಲಿ ಡಿ.6ರಂದು ಕಣ್ಮರೆಯಾಗಿ ಬಳಿಕ ಶವವಾಗಿ ಪತ್ತೆಯಾಗಿದ್ದ ಪರೇಶ್ ಸಹಜವಾಗಿ ಮೃತಪಟ್ಟಿಲ್ಲ. ಈ ಕುರಿತು ತನಿಖೆಯಾಗಬೇಕು ಎಂದು ಪರೇಶ್ ತಂದೆ ಕಮಲಾಕರ್ ಆಗ್ರಹಿಸಿದ್ದರು.
Leave A Reply