ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆಯ ವಿಷಯದಲ್ಲಿ ಬಂದಿರುವ ಪತ್ರಕ್ಕೆ ಉತ್ತರ.
ನನಗೆ ಬಂದಿರುವ ಬಹಿರಂಗ ಪತ್ರವನ್ನು ಸಂಪೂರ್ಣ ಓದಿದ ನಂತರ ಅದರಲ್ಲಿ ಕೇಳಲಾಗಿರುವ ಅಷ್ಟೂ ಪ್ರಶ್ನೆಗಳಿಗೆ ಇವತ್ತು ಉತ್ತರ ನೀಡುತ್ತಿದ್ದೇನೆ. ನನಗೆ ಬಹಿರಂಗ ಪತ್ರ ಬರೆದಿರುವ ಸುಮಿತ್ ಎಸ್ ರಾವ್ ಅವರ ಮೊದಲ ಪ್ಯಾರಾಗ್ರಾಫ್ ನಲ್ಲಿ ಹೇಳಲಾಗಿರುವ ಅಂಶಗಳು:
1880 ರಲ್ಲಿ ಜೇಸ್ಯೂಟ್ ಪ್ರೀಸ್ಟ್ ಮಂಗಳೂರಿನಲ್ಲಿ ಸಂತ ಎಲೋಶಿಯಸ್ ಕಾಲೇಜನ್ನು ಸ್ಥಾಪಿಸಿದರು ಮತ್ತು ಅಲ್ಲಿ ಕಲಿಯುವ 70% ಮಂದಿ ಹಿಂದೂಗಳು ಹಾಗೂ ಉಳಿದವರು ಕ್ರೈಸ್ತರು, ಮುಸಲ್ಮಾನರು.
ಉತ್ತರ: ಎಲೋಶಿಯಸ್ ಕಾಲೇಜನ್ನು ಯಾವಾಗ ಮತ್ತು ಯಾರು ಸ್ಥಾಪಿಸಿದರು ಎನ್ನುವ ಬಗ್ಗೆ ನನ್ನ ಆಕ್ಷೇಪ ಇಲ್ಲ. ಅಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಧರ್ಮದ ವಿಷಯವನ್ನು ನಾನು ಎತ್ತಿಯೇ ಇಲ್ಲ.
ನಿಮ್ಮ ಎರಡನೇ ಪಾಯಿಂಟ್: ಎಲೋಶಿಯಸ್ ಯಾವತ್ತಿಗೂ ಧರ್ಮ ಧರ್ಮಗಳ ನಡುವೆ ದ್ವೇಷ ತಂದಿಡುವ ಬೋಧನೆ ಮಾಡಿಲ್ಲ.
ಉತ್ತರ: ನಾನು ಎಲೋಶಿಯಸ್ ಕಾಲೇಜ್ ನಲ್ಲಿ ಧರ್ಮಗಳ ನಡುವೆ ದ್ವೇಷ ತರುವ ಕೆಲಸ ಆಗುತ್ತೆ ಎಂದು ಎಲ್ಲಿಯೂ ಬರೆದಿಲ್ಲ ಮತ್ತು ಹೇಳಿಲ್ಲ. ಅಷ್ಟಕ್ಕೂ ನಾನು ಬಗ್ಗೆ ಯೋಚಿಸಿಯೇ ಇಲ್ಲ.
ನಿಮ್ಮ ಪಾಯಿಂಟ್: ನಮಗೆ ಚಿಕ್ಕದಿರುವಾಗ ಜಾತಿ, ಧರ್ಮವನ್ನು ದ್ವೇಷಿಸಲು ಕಲಿಸಿಲ್ಲ, ಪ್ರೀತಿಸಲು ಕಲಿಸಲಾಗಿದೆ.
ಉತ್ತರ: ತುಂಬಾ ಸಂತೋಷ. ಅದಕ್ಕೂ ರಸ್ತೆಯ ಹೆಸರಿನ ವಿವಾದಕ್ಕೂ ಸಂಬಂಧ ಇಲ್ಲ.
ನಿಮ್ಮ ಪಾಯಿಂಟ್: ಮೂಲ್ಕಿ ಸುಂದರರಾಮ ಶೆಟ್ಟಿಯವರನ್ನು ಸೇರಿ ಅನೇಕ ಖ್ಯಾತನಾಮರು ಕಲಿತ ಜಾಗ ಅದು ಹೇಳಿದ್ದಿರಿ.
ಉತ್ತರ: ಮಂಗಳೂರಿನ ಅನೇಕ ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಇವತ್ತು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.
ನಿಮ್ಮ ಪಾಯಿಂಟ್: ಆ ರಸ್ತೆಗೆ ಎಲೋಶಿಯಸ್ ಕಾಲೇಜು ರಸ್ತೆ ಎಂದು ಹೆಸರಿಡುವ ಹೋರಾಟ ಪ್ರಾರಂಭಿಸಿದ್ದು ಅಲ್ಲಿನ ವಿದ್ಯಾರ್ಥಿಗಳೇ ಹೊರತಾಗಿ ಜೆ ಆರ್ ಲೋಬೋ, ಐವನ್ ಡಿಸೋಜಾ, ರಮಾನಾಥ ರೈ, ಯುಟಿ ಖಾದರ್ ಅಲ್ಲ ಎಂದು ಹೇಳಿದ್ದಿರಿ.
ಉತ್ತರ: ಯಾವುದೇ ರಸ್ತೆಗೆ ಹೆಸರಿಡುವ ಪ್ರಕ್ರಿಯೆ ಪ್ರಾರಂಭವಾಗುವುದು ಹೋರಾಟದಿಂದ ಅಲ್ಲ ಎನ್ನುವುದು ಗೊತ್ತಿರಲಿ. ಅದಕ್ಕೆ ಒಂದು ಪ್ರಕ್ರಿಯೆ ಇದೆ. ಅದನ್ನು ಅನುಸರಿಸಿಯೇ ವಿಜಯಾ ಬ್ಯಾಂಕ್ ನೌಕರರ ಸಂಘದವರು ಹೊರಟಿದ್ದು. ಒಂದೂವರೆ ವರ್ಷಗಳ ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಅದಕ್ಕೆ ಸರಕಾರ ಒಪ್ಪಿಗೆ ನೀಡಿದ್ದು. ಸರಕಾರಕ್ಕೆ ಇವತ್ತು ಕೊಟ್ಟು ಅದು ನಾಳೆ ಮಾಡಿದ್ದಲ್ಲ ಎಂದು ಹೇಳಲು ಬಯಸುತ್ತೇನೆ. ಅಷ್ಟೆಲ್ಲ ಮುಗಿದು ಇನ್ನೆನೂ ನಾಮಫಲಕ ಅನಾವರಣ ಮಾಡುವ ಹಿಂದಿನ ದಿನ ಶಾಸಕ ಜೆ ಆರ್ ಲೋಬೊ ಅವರು ಇದಕ್ಕೆ ತಡೆಯಾಜ್ಞೆ ತಂದದ್ದು ಸರಿಯಲ್ಲ ಎನ್ನುವುದು ಮಾತ್ರ ನನ್ನ ಆಕ್ಷೇಪ.
ನಿಮ್ಮ ಪಾಯಿಂಟ್: ನಲ್ವತ್ತು ವರ್ಷಗಳಿಂದ ಅಲ್ಲಿ ಎಲೋಶಿಯಸ್ ಕಾಲೇಜು ರಸ್ತೆ ಎಂದು ಬೋರ್ಡ ಇದೆ ಎಂದು ಬರೆದಿದ್ದಿರಿ.
ಉತ್ತರ: ಬೋರ್ಡ ಇದೆ ಎಂದು ನನ್ನ ಗಮನಕ್ಕೂ ಬಂದಿದೆ. ಅದು ಸುಳ್ಳು ಎಂದು ನಾನು ಹೇಳಲ್ಲ. ಆದರೆ ಅಂತಹ ಬೋರ್ಡ ನ್ನು ಯಾರೂ ಕೂಡ ಹಾಕಬಹುದು. ಉದಾಹರಣೆಗೆ ನನ್ನ ಮನೆಗೆ ಹೋಗುವ ರಸ್ತೆಗೆ ನಾನು ಹನುಮಂತ ಕಾಮತ್ ರಸ್ತೆ ಎಂದು ಬರೆಯಿಸಿ ಬೋರ್ಡ ಹಾಕಿದರೆ ಅದು ನನ್ನ ಹೆಸರಿನ ರಸ್ತೆ ಆಗಲ್ಲ. ನಿಮಗೆ ಹೆಸರಿಡುವ ಪ್ರಕ್ರಿಯೆ ಹೇಗೆ ಇರುತ್ತೆ ಎಂದು ತಿಳಿದಿಲ್ಲ ಎಂದು ನನ್ನ ಭಾವನೆ. ಒಂದು ವೇಳೆ ಎಲೋಶಿಯಸ್ ಕಾಲೇಜು ರಸ್ತೆ ಎಂದು ಪಾಲಿಕೆಯಿಂದ, ನಗರಾಭಿವೃದ್ಧಿ ಇಲಾಖೆಯಿಂದ, ಪೌರಾಡಳಿತ ಇಲಾಖೆಯಿಂದ ಸಿಕ್ಕಿರುವ ದಾಖಲೆ ಇದ್ದರೆ ಅದನ್ನು ನೀವು ತೋರಿಸಬಹುದು. ಇಲ್ಲದಿದ್ದರೆ ಅಲ್ಲೊಂದು ಬೋರ್ಡ ಇದೆ ಎನ್ನುವುದು ದಾಖಲೆ ಆಗಲ್ಲ.
ನಿಮ್ಮ ಪಾಯಿಂಟ್: ಬ್ಯಾಂಕಿಗೆ ಸಂಬಂಧಪಟ್ಟವರು ಆ ರಸ್ತೆಗೆ ಜ್ಯೋತಿ ಸರ್ಕಲ್ ನಿಂದ ಕ್ಯಾಥೋಲಿಕ್ ಕ್ಲಬ್ ಗೆ ಹೋಗುವ ರಸ್ತೆಗೆ ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆ ಎಂದು ಹೆಸರಿಡಲು ಮನವಿ ಮಾಡಿದ್ದರು. ಅದಕ್ಕೆ ಈಗಾಗಲೇ ಶಿವರಾಮ್ ಕಾರಂತ್ ರಸ್ತೆ ಎಂದು ಇದೆ ಎಂದು ಹೇಳಿದ್ದಿರಿ.
ಉತ್ತರ: ನನ್ನ ಬಳಿ ಈ ಹೆಸರಿಡುವ ಪ್ರಕ್ರಿಯೆ ಪ್ರಾರಂಭದ ನಂತರದ ಮೊದಲ ಪತ್ರ ವ್ಯವಹಾರದಿಂದ ಕೊನೆಯ ತನಕದ ಪ್ರತಿಯೊಂದು ದಾಖಲೆ ಇದೆ. ಅದರಲ್ಲಿ ಅವರು ಕ್ಯಾಥೋಲಿಕ್ ಕ್ಲಬ್ ನಿಂದ ಬಾವುಟಗುಡ್ಡೆಯಾಗಿ ಜ್ಯೋತಿ ಸರ್ಕಲ್ ತನಕದ ರಸ್ತೆಯನ್ನೇ ಮೂಲ್ಕಿ ಸುಂದರರಾಮ್ ಶೆಟ್ಟಿ ರಸ್ತೆ ಎಂದು ಹೆಸರಿಡಲು ಮನವಿ ಮಾಡಿದ್ದರು. ಅದಕ್ಕೆ ಅನುಮತಿ ಸಿಕ್ಕಿರುವುದು ಮತ್ತು ಅದಕ್ಕೆನೆ ನೋಟಿಫಿಕೇಶನ್ ಆಗಿರುವುದು. ಎಲ್ಲ ದಾಖಲೆಗಳಲ್ಲಿ ಕ್ಯಾಥೋಲಿಕ್ ಕ್ಲಬ್ ನಿಂದ ಬಾವುಟಗುಡ್ಡೆಯಾಗಿ ಜ್ಯೋತಿ ಸರ್ಕಲ್ ಎಂದೇ ಇರುವುದು. ನೀವು ತಪ್ಪು ಬರೆದಿದ್ದಿರಿ ಎನ್ನುವುದಕ್ಕೆ ಯಾವ ಸಂಶಯವೂ ಇಲ್ಲ.
ಇನ್ನು ನಿಮ್ಮ ಒಂದಿಷ್ಟು ಅನುಮಾನಗಳಿಗೆ ಉತ್ತರ ಹೇಳುವುದು ಬಾಕಿ ಇದೆ. ನಾನು ಇಲ್ಲಿಯತನಕ ಯಾರದ್ದೂ ಕೂಡ ಬಹಿರಂಗ ಪತ್ರಕ್ಕೆ ರಿಪ್ಲೈ ಬರೆದಿಲ್ಲ. ಆದರೂ ನೀವು ಧರ್ಮದ ವಿಷಯ ಎತ್ತಿದ್ದಿರಿ, ಅನುಮತಿ ಕೇಳಿದ ರಸ್ತೆಯೇ ಬೇರೆ ಎಂದಿದ್ದಿರಿ. ಆದ್ದರಿಂದ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಬಾರದು ಎನ್ನುವ ಕಾರಣಕ್ಕೆ ವಿವರವಾಗಿ ಉತ್ತರ ಕೊಡುತ್ತಿದ್ದೇನೆ.
Leave A Reply