ಓಡಿ ಹೋಗುವ ಮೊದಲು ಒಮ್ಮೆ ತಂದೆಯ ಪ್ರೀತಿಯನ್ನು ನೆನಪಿಸಿಕೊಳ್ಳಿ!
ಮಗ ಅಥವಾ ಮಗಳನ್ನು ಅತೀ ಹೆಚ್ಚು ಪ್ರೀತಿಸುವುದು ತಂದೆ. ಆದರೆ ಯಾವತ್ತೂ ಆತ ಅದನ್ನು ಹೇಳಲಾರ. ತಾಯಿ ದಿನಕ್ಕೆ ನೂರು ಸಲ ಹೇಳಬಲ್ಲಳು. ಅದಕ್ಕೆ ಸಮಾಜ ತಾಯಿ ವಾತ್ಸಲ್ಯವೇ ದೊಡ್ಡದು ಎಂದು ಅಂದುಕೊಂಡಿದೆ ಎನ್ನುವ ಅರ್ಥದ ಮಾತುಗಳು ಎನ್ನುವ ಅರ್ಥದ ಮಾತುಗಳನ್ನು ದಾರ್ಶನಿಕರು ಹೇಳಿದ್ದಾರೆ. ಇದು ನೂರಕ್ಕೆ ನೂರರಷ್ಟು ನಿಜ. ತಂದೆಯ ಪ್ರೀತಿ ವ್ಯಕ್ತವಾಗುವುದು ಅವನ ಕ್ರಿಯೆಗಳಿಂದ. ಆತ ಯಾವತ್ತೂ ಅದನ್ನು ಶಬ್ದಗಳ ಮೂಲಕ ವ್ಯಕ್ತಪಡಿಸಲಾರ. ಆತ ಮಗುವನ್ನು ಜಾತ್ರೆಗೆ ಕರೆದುಕೊಂಡು ಹೋಗಿ ಸಂತೆಯಲ್ಲಿ ಹೆಗಲ ಮೇಲೆ ಕುಳ್ಳಿರಿಸಬಲ್ಲ, ತಾನು ಕುದುರೆಯಂತೆ ಬಗ್ಗಿ ಮಗುವನ್ನು ಬೆನ್ನ ಮೇಲೆ ಕೂರಿಸಿ ಮನೆಯನ್ನು ಸುತ್ತು ಹಾಕಬಲ್ಲ. ರಾತ್ರಿ ಕೆಲಸ ಮುಗಿಸಿ ಲೇಟ್ ಆಗಿ ಬಂದರೂ ನೆನಪಿನಿಂದ ದಾರಿಯಲ್ಲಿ ಸಿಗುವ ಬೇಕರಿಯಿಂದ ತಿಂಡಿ ತರಬಲ್ಲ, ಬೆಳಿಗ್ಗೆ ಮಗುವನ್ನು ಎಬ್ಬಿಸಿ ಸ್ನಾನ ಮಾಡಿಸಿ ಶಾಲೆಗೆ ಬಿಟ್ಟು ಬರಬಲ್ಲ, ಮಗುವಿಗೆ ಜ್ವರ ಬಂದಿದೆ ಎಂದರೆ ಹೇಳಲಾಗದೆ ಜಡಪಡಿಸುವ ಜೀವ ಒಂದಿದ್ದರೆ ಅದು ತಂದೆ ಮಾತ್ರ. ತನ್ನ ಮಗ, ಮಗಳನ್ನು ಬೈಕಿನಲ್ಲಿ ಕುಳ್ಳಿರಿಸಿ ಅವರಿಗೆ ಮುಂದೆ ವಾಹನ ಬಿಡುವ ಧೈರ್ಯ ಕೊಡುವ ತಂದೆ, ಅದೇ ಮಗ ಅಥವಾ ಮಗಳು ಹದಿನೆಂಟು ತುಂಬುತ್ತಿದ್ದಂತೆ ಸಾಲ ಮಾಡಿ ಸ್ಕೂಟರ್ ತೆಗೆಸಿ ಅದನ್ನು ಆತ/ಆಕೆ ಬಿಡುವುದನ್ನೇ ಖುಷಿಯಿಂದ ನೋಡುತ್ತಾನೆ. ಹೆಣ್ಣುಮಗುವಿಗೆ ತಂದೆಯೊಂದಿಗೆ ಅಟ್ಯಾಚ್ ಮೆಂಟ್ ಜಾಸ್ತಿ ಎನ್ನುತ್ತಾರೆ. ಅದು ನಿಜ ಕೂಡ.
ತಂದೆಯಾದವನು ರಾತ್ರಿ, ಹಗಲು ದುಡಿದು ಒಂದೊಂದು ಪೈಸೆ ಕೂಡಿ ಇಟ್ಟು ಮಗಳಿಗಾಗಿ ಒಂದೊಂದೇ ಬಂಗಾರದ ಆಭರಣ ಮಾಡಿಸಿ ಅದನ್ನು ಕಪಾಟಿನಲ್ಲಿ ಇಟ್ಟು ಕಣ್ಣಿನಲ್ಲಿ ಒಂದು ತಣ್ಣನೆಯ ತೃಪ್ತಿ ಪಡುತ್ತಾನಲ್ಲ, ಅದಕ್ಕೆ ಬೆಲೆ ಕಟ್ಟಲು ಆಗುತ್ತಾ, ಮಗಳು ಡಾಕ್ಟರೋ, ಇಂಜಿನಿಯರೋ ಆಗಲಿ ಎಂದು ಹೊರಗೆ ಹೆಚ್ಚುವರಿ ದುಡಿದು ದಣಿದು ಬಂದು ಮಗಳು ತನ್ನ ಕೋಣೆಯಲ್ಲಿ ಓದುತ್ತಾ ಕುಳಿತಿದ್ದಾಳಲ್ಲ ಎಂದು ವಿಶ್ವಾಸದಿಂದ ಇಣುಕಿ ಸಂತೃಪ್ತಿ ಪಡುತ್ತಾನಲ್ಲ, ಅದನ್ನು ತುಲನೆ ಮಾಡಲು ಅಗುತ್ತಾ, ಮಗಳು ಶಾಲೆಯಲ್ಲಿ ಫ್ಯಾನ್ಸಿ ಡ್ರೆಸ್ ನಲ್ಲಿ ಭಾಗವಹಿಸಬೇಕು, ಸ್ಕೂಲ್ ಟ್ರಿಪ್ಪಿಗೆ ಹೋಗಬೇಕು ಹಣ ಬೇಕು ಎಂದು ಹೇಳುವಾಗ ತನ್ನ ಸಂಜೆಗಳ ಚಾ ತಿಂಡಿಗೆ ಇಟ್ಟ ಹಣವನ್ನು ಅದಕ್ಕೆ ಕೊಟ್ಟು ತಾನು ನೀರು ಕುಡಿದು ಸಾಕು ಅಂದುಕೊಳ್ಳುತ್ತಾನಲ್ಲ ಅದಕ್ಕೆ ಸಮ ಬೇರೆ ಉಂಟೆ. ಇನ್ನೇನೂ ಮಗಳಿಗೆ ಮದುವೆಯ ವಯಸ್ಸು ಹತ್ತಿರ ಬಂದಾಗ ಆಕೆಗೆ ಒಳ್ಳೆಯ ಗಂಡ ಸಿಗುವ ತನಕ ಅದೇ ಗುಂಗಿನಲ್ಲಿ ತನ್ನ ರಾತ್ರಿಗಳ ನಿದ್ರೆಯನ್ನು ಕನವರಿಕೆಯಲ್ಲಿ ಕಳೆದು ಬೆಳಿಗ್ಗೆ ಎಳುವಾಗ ತಲೆ ಭಾರ ಆದರೂ ಕೆಲಸಕ್ಕೆ ಹೊರಡುತ್ತಾನಲ್ಲ, ಅದಕ್ಕೆ ಏನೇನ್ನುವುದು. ತಾಯಿಯ ಪ್ರೀತಿ ಕಾಣುತ್ತದೆ, ತಂದೆಯ ಪ್ರೀತಿ ತೋರುತ್ತದೆ ಎನ್ನುವ ನಡುವೆ ಹೆಣ್ಣುಮಗಳೊಂದು ಒಂದು ಸರಿ ರಾತ್ರಿಯಲ್ಲಿ ಅಂತಹ ತಂದೆಯ ವಾತ್ಸಲ್ಯವನ್ನು ಕೂಡ ದಿಕ್ಕರಿಸಿ ನಿನ್ನೆ ಮೊನ್ನೆ ತನ್ನ ಕೈ ಹಿಡಿದು ಐ ಲವ್ ಯೂ ಎಂದವನ ಹಿಂದೆ ಹೋದರೆ ಆ ತಂದೆಗೆ ಹೇಗಾಗಬೇಡಾ. ತಾಯಿಯಾದರೆ ರಂಪಾಟ ಮಾಡಿ ಅತ್ತು ಕರಗಿ ದು:ಖವನ್ನು ತೋರಿಸಬಲ್ಲಳು. ಆದರೆ ತಂದೆ ಅಷ್ಟೂ ನೋವನ್ನು ಎದೆಯಲ್ಲಿ ಇಟ್ಟು ಕೊರಗುತ್ತಾನೆ. ತಾಯಿಯಾದರೂ ಮಗಳು ನ್ಯಾಯಾಲಯದಲ್ಲಿಯೋ, ಸ್ಟೇಶನ್ನಿನಲ್ಲಿಯೋ ಮುಂದೆ ಸಿಕ್ಕಿದರೆ ಅವಳ ಕೈಕಾಲು ಹಿಡಿದು ಒತ್ತಾಯಿಸಬಲ್ಲಳು. ಆದರೆ ತಂದೆ ದೂರದಲ್ಲಿ ನಿಂತು ನಾನು ಮೂರು ವರ್ಷದ ಮಗುವನ್ನು ದೇವಸ್ಥಾನಕ್ಕೆ ಕರೆದುಕೊಂಡು ಅಕ್ಕಿಯಲ್ಲಿ ಅಕ್ಷರಾಭ್ಯಾಸ ಮಾಡಿಸಿದ್ದು ಇವಳಿಗೆನಾ ಎಂದು ಕಣ್ಣರೆಪ್ಪೆಯ ನಡುವೆನೆ ನೀರಾಗುತ್ತಾನೆ. ಶ್ರುತಿ, ಆದಿಶಾ ನಂತಹ ಹೆಣ್ಣುಮಕ್ಕಳಿಗೆ ಅದೆಲ್ಲ ಅರ್ಥವಾಗುತ್ತದಾ? ನಂತರ ತಾವು ಪ್ರೀತಿಸಿದ ಹುಡುಗ ಗಾಂಜಾ ಕೇಸಿನಲ್ಲಿ ಒಳಗೆ ಬಿದ್ದವ, ಕಳ್ಳತನದ ಕೇಸಿನಲ್ಲಿ ಶಿಕ್ಷೆ ಆದವ ಎಂದು ಗೊತ್ತಾದಾಗ ಮತ್ತೆ ತಾಯಿ ಮನೆಗೆ ಹಿಂತಿರುಗುವ ಹುಡುಗಿಯನ್ನು ತಾಯಿ ಪೊರಕೆಯಲ್ಲಿ ಪೂಜೆ ಮಾಡಿ ಕೋಪ ತೀರಿಸಿಕೊಳ್ಲಬಹುದು. ಆದರೆ ತಂದೆ ಅದನ್ನು ಕೂಡ ಮಾಡುವುದು ಕೂಡ ಕಡಿಮೆ. ಅದರರ್ಥ ತಂದೆಗೆ ಮಗಳು ಓಡಿ ಹೋದದ್ದು ಬೇಸರ ಮೂಡಿಸಿಲ್ಲ ಅಂತ ಅರ್ಥವಲ್ಲ. ತಂದೆ ತನ್ನ ಎದೆಗೂಡಿನಲ್ಲಿ ನೋವನ್ನು ಬಚ್ಚಿಡುತ್ತಾನೆ. ವೈದ್ಯಕೀಯ ಶಾಸ್ತ್ರದ ಪ್ರಕಾರ ನೋವನ್ನು ಹೊರಗೆ ಹಾಕದೇ ಒಳಗೆನೆ ಅನುಭವಿಸುವವರಿಗೆ ಹೆಚ್ಚು ಹೃದಯಾಘಾತ ಆಗುತ್ತದೆ ಎನ್ನಲಾಗುತ್ತದೆ. ತುಲನೆ ಮಾಡಿದರೆ ಹೃದಯಾಘಾತದಿಂದ ಸಾವನ್ನಪ್ಪುವುದರಲ್ಲಿ ಗಂಡಸರ ಸಂಖ್ಯೆ ಜಾಸ್ತಿ. ಆದ್ದರಿಂದ ಮೊನ್ನೆ ನೋಡಿದ ನಿನ್ನೆ ಸಿಕ್ಕಿದ ಇವತ್ತು ಬೆಳಿಗ್ಗೆ ನಕ್ಕಿದ ಹುಡುಗನೊಂದಿಗೆ ನಾಳೆ ಓಡಿ ಹೋಗುವ ಪ್ಲಾನ್ ಮಾಡುವ ಹುಡುಗಿಯರೇ ಒಂದು ವಿಷಯ ನೆನಪಿಡಿ. ನೀವು ಆಗಸದಿಂದ ನೇರವಾಗಿ ಭೂಮಿಗೆ ಬಿದ್ದವರಲ್ಲ. ನಿಮ್ಮನ್ನು ಚಳಿ ಆದಾಗ ಕಂಬಳಿ ಹೊದ್ದು ಮಲಗಿಸಿದ, ಸೆಕೆ ಆದಾಗ ಗಾಳಿ ಹಾಕಿದ, ಕೆಮ್ಮಿದಾಗ ವಿಕ್ಸ್ ಹಚ್ಚಿದ, ವಾಂತಿ ಬಂದಾಗ ಕೈ ಹಿಡಿದ, ಹಸಿದಾಗ ಬಡಿಸಿದ, ಕಾಲಿಗೆ ಶೂ ಹಾಕಿದ, ನಿಮ್ಮ ಬ್ಯಾಗ್ ಹಿಡಿದು ಶಾಲೆ ತನಕ ನಡೆದುಬಂದ, ನಿಮಗೆ ಪೆನ್ಸಿಲ್ ನಿಂದ ಹಿಡಿದು ಸ್ಕೂಟರ್ ತನಕ ತೆಗೆಸಿಕೊಟ್ಟ ಎರಡು ಜೀವಗಳು ನಿಮಗಾಗಿ ಕಾಯುತ್ತಿರುತ್ತವೆ ಎಂದು ನಿಮಗೆ ಗೊತ್ತಿರಲಿ. ಒಂದು ಖಾಲಿ ಜಾಗ ಇದ್ದರೆ ಅದು ಎಲ್ಲಿ ಕೂಡ ಓಡಿ ಹೋಗುವುದಿಲ್ಲ ಎಂದು ಗೊತ್ತಿದ್ದರೂ ಅದರ ಮಾಲೀಕರು ಅದಕ್ಕೆ ಬೇಲಿ ಹಾಕಿ ಇಡುತ್ತಾರೆ. ಆದರೆ ನಿಮಗೆ ಬೇಲಿ ಹಾಕಿಲ್ಲ ಯಾಕೆಂದರೆ ಅದು ವಿಶ್ವಾಸ, ಅದಕ್ಕೆ ದ್ರೋಹ ಮಾಡದಿರಿ.
ಓಡಿ ಹೋಗಿ ನಂತರ ಪಶ್ಚಾತ್ತಾಪ ಪಡುತ್ತಿರುವ ಹುಡುಗಿಯರ ಸಂಖ್ಯೆ ಒಂದು ಎಟೆಂಡೆನ್ಸ್ ಬುಕ್ಕಿಗೆ ಆಗುವಷ್ಟು ಇದೆ. ಒಬ್ಬಿಬ್ಬರ ಬಗ್ಗೆ ಬರೆದರೆ ಅದು ಸರಿಯಾಗುವುದಿಲ್ಲ. ಹೆಚ್ಚಿನವರದ್ದು ಒಂದೇ ರೀತಿಯ ಕಥೆ ಮತ್ತು ಕೊನೆಗೆ ಒಂದೇ ರೀತಿಯ ವ್ಯಥೆ!
Leave A Reply