ಪ್ರಕಾಶ್ ರೈ, ನಿಮಗೆ ತಾಕತ್ತಿದ್ದರೆ ಈ ಪ್ರಶ್ನೆಗಳನ್ನೂ ಕೇಳಿ ನೋಡೋಣ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗುತ್ತಲೇ, ಏನಾಗ್ತಿದೆರೀ ಕರ್ನಾಟಕದಲ್ಲಿ?
ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಗೆಲ್ಲುತ್ತಲೇ, ಮೋದಿ ಅವರೇ ಗೆದ್ದರೂ ನೆಮ್ಮದಿಯಿಂದಿದ್ದೀರಾ?
ಯೋಗಿ ಆದಿತ್ಯನಾಥ ಅವರು ಟಿಪ್ಪು ಜಯಂತಿ ಬೇಡ ಎನ್ನುತ್ತಲೇ, ಆದಿತ್ಯನಾಥರೇ ನಿಮ್ಮ ಅಜೆಂಡಾ ಏನು?
ಪ್ರತಾಪ್ ಸಿಂಹ ರೈ ಎರಡು ಹೆಸರಿನ ಕುರಿತು ಮಾತನಾಡುತ್ತಲೇ, ಪ್ರತಾಪ್ ಸಿಂಹ ಮನುಷ್ಯನೋ, ಪ್ರಾಣಿಯೋ?
ಸ್ವಚ್ಛಂದವಾಗಿ ಉಸಿರಾಡುವ ಕೇರಳದಲ್ಲಿ ಸರ್ವಾಧಿಕಾರಿ ಕಿಮ್ ಉಂಗ್ ಜಾನ್ ನನ್ನು ಆರಾಧನೆ ನಡೆತಿದೆ ಏನಂತೀರಿ?
ಕೇರಳದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ನಡೆಯುತ್ತಿವೆ.. ಪ್ರಶ್ನಿಸಿದ್ದೀರಾ..?
ಕಳೆದ ನಾಲ್ಕೈದು ತಿಂಗಳಿಂದ ಹೀಗೆ ಪ್ರಕಾಶ್ ರೈ (ರಾಜ್ ಓಕೆನಾ, ರೈ ಓಕೆನಾ ಅವರನ್ನೇ ಕೇಳಬೇಕು) ಹೀಗೆ ಬಾಯಿಗೆ ಬಂದ ಹಾಗೆ ಚೀರಾಟ, ಮನಸ್ಸಿಗೆ ಬಂದಹಾಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಖಂಡಿತವಾಗಿಯೂ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ಕಾರ, ವ್ಯವಸ್ಥೆ, ರಾಜಕಾರಣಿಗಳನ್ನು ಪ್ರಶ್ನಿಸುವುದರಲ್ಲಿ ತಪ್ಪಿಲ್ಲ ಹಾಗೂ ಪ್ರಶ್ನಿಸುವುದು ಸಮಂಜಸ ಸಹ.
ಆದರೆ ಹೀಗೆ ಪ್ರಶ್ನಿಸುವಾಗ ಇಬ್ಬಂದಿತನ ಇರಬಾರದಲ್ಲವೇ? ಪ್ರಶ್ನೆಯಲ್ಲಿ ಹುರುಳು, ಸಾಚಾತನ, ಸುಬಗತನ ಇರಬೇಕಲ್ಲವೇ? ಪ್ರಶ್ನೆ ಏಕಾಭಿಮುಖವಾಗಿ, ಯಾರನ್ನೋ ಮೆಚ್ಚಿಸಲು ಕೇಳಬಾರದಲ್ಲವೇ?
ಪ್ರಕಾಶ್ ರೈ ಅವರ ಇತ್ತೀಚಿನ ನಡವಳಿಕೆ, ಪ್ರಶ್ನೆಯ ಧಾಟಿ ನೋಡಿದರೆ ಇದರ ಯಾವುದೇ ಲವಲೇಷವೂ ಇಲ್ಲ ಎಂಬುದು ಢಾಳಾಗುತ್ತದೆ. ಪ್ರಕಾಶ್ ರೈ ಎಂಬ ಇಬ್ಬಂದಿತನದ ವ್ಯಕ್ತಿಯ ಅನಾವರಣವಾಗುತ್ತಿದೆ.
ರೀ ಸ್ವಾಮಿ ಪ್ರಕಾಶ್ ರೈ, ಇಷ್ಟೆಲ್ಲ ಮಾತನಾಡುತ್ತೀರಲ್ಲ ನೀವು, ಪರೇಶ್ ಮೇಸ್ತಾ ಸಾವಿನ ಬಗ್ಗೆ ರಾಜ್ಯ ಸರ್ಕಾರವನ್ನು, ಸಿದ್ದರಾಮಯ್ಯರನ್ನು ಪ್ರಶ್ನಿಸುವ ತಾಕತ್ತಿಲ್ಲವೇ? ದಾನೇಶ್ವರಿಯ ಅತ್ಯಾಚಾರ, ಹತ್ಯೆಯಾಯಿತಲ್ಲ, ಅದರ ಕುರಿತು, ರಾಜ್ಯ ಸರ್ಕಾರದ ಕಾನೂನು ಸುವ್ಯವಸ್ಥೆ ಕುರಿತು ಪ್ರಶ್ನಿಸಲು ನಿಮಗೆ ಗುಂಡಿಗೆಯಿಲ್ಲವೇ? ಕಳೆದ ನಾಲ್ಕೂವರೆ ವರ್ಷದಲ್ಲಿ ರಾಜ್ಯದಲ್ಲಿ ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯಾಯಿತಲ್ಲ, ಅದರ ಕುರಿತು ಮಾತನಾಡಲು, ಸರ್ಕಾರವನ್ನು ಟೀಕಿಸಲು ನಿಮಗೆ ಆಗುವುದಿಲ್ಲವೇ?
ಯಾಕ್ರೀ ಇಂಥಾ ಇಬ್ಬಂದಿತನ ಮಾಡುತ್ತೀರಿ? ಗೌರಿ ಲಂಕೇಶ್ ಹತ್ಯೆಯಾದಾಗ ಏನ್ ನಡೀತಿದೆರೀ ಕರ್ನಾಟಕದಲ್ಲಿ ಎನ್ನುವ ಬದಲು, ಸಿದ್ದರಾಮಯ್ಯನವರೇ ಏನ್ ಮಾಡ್ತಿದೀರಿ ನೀವು ಅಂತ ಕೇಳಬಹುದಿತ್ತಲ್ಲ? ಪರೇಶ್ ಮೇಸ್ತಾ, ದಾನೇಶ್ವರಿ ಹತ್ಯೆಯಾದಾಗ ರಾಜ್ಯ ಸರ್ಕಾರವೇನು ಮಲಗಿದೆಯಾ ಎಂದು ನಿಮ್ಮ ಧಾಟಿಯಲ್ಲೇ ತರಾಟೆಗೆ ತೆಗೆದುಕೊಳ್ಳಬಹುದಿತ್ತಲ್ಲ? ಹೀಗೆ ಪ್ರಶ್ನೆ ಮಾಡಲು ನಿಮಗೆ ಯಾವ ಅಳುಕಿದೆ ಸ್ವಾಮಿ? ನಿಮ್ಮ ನಾಲಗೆಯನ್ನೇನು ಕಟ್ಟಿ ಹಾಕಿದ್ದೀರಾ?
ದೇಶದಲ್ಲಿ ಸಿಂಹ ಎಂದು ಹೆಸರಿನ ಮುಂದೆ ಇರುವುದು ಸಾಮಾನ್ಯ. ಭಗತ್ ಸಿಂಗ್, ರಾಣಾ ಪ್ರತಾಪ್ ಸಿಂಗ್ ಅವರ ಸಿಂಗ್ ಸಿಂಹ ಎಂಬ ಅರ್ಥವನ್ನೇ ನೀಡುತ್ತದೆ. ಅದೇ ರೀತಿ ಸಂಸದ ಪ್ರತಾಪ್ ಅವರ ಹೆಸರಿನ ಮುಂದೆ ಸಿಂಹ ಇದೆ. ಇಷ್ಟಕ್ಕೇ ನೀವು ಪ್ರಾಣಿಯೋ, ಮನುಷ್ಯನೋ ಎಂದು ಪ್ರಶ್ನಿಸಬಹುದೇ? ಹಾಗಾದರೆ ಭಗತ್ ಸಿಂಗ್, ರಾಣಾ ಪ್ರತಾಪ್ ಸಿಂಗರೂ ಪ್ರಾಣಿಗಳೇ? ಇದು ಅವರಿಗೆ ಮಾಡುವ ಅವಮಾನವಲ್ಲವೇ? ಹೀಗೆ ಮಾತನಾಡಲು ನಿಮಗೆ ನಾಚಿಕೆಯೇ ಆಗುವುದಿಲ್ಲವೇ?
ಇನ್ನು ಯೋಗಿ ಆದಿತ್ಯನಾಥರನ್ನ ಪ್ರಶ್ನಿಸಿರುವ ವಿಷಯಕ್ಕೆ ಬರೋಣ. ಅಲ್ಲಾ ಸ್ವಾಮಿ, ಇಂಗ್ಲಿಷಿನಲ್ಲಿ ಮಾತನಾಡುವ ನಿಮಗೆ ಇತಿಹಾಸದ ಕನಿಷ್ಠ ಜ್ಞಾನವೂ ಇಲ್ಲವೇ? ಟಿಪ್ಪು ಎಂಥ ಮತಾಂಧ ಎಂಬುದು ಎಲ್ಲರಿಗೂ ಗೊತ್ತಿದೆ. ಆತ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂಬುದು ಸಹ ಜಗಜ್ಜಾಹೀರು. ಹೀಗಿರುವಾಗ ಯೋಗಿ ಆದಿತ್ಯನಾಥರು ಟಿಪ್ಪು ಜಯಂತಿ ಆಚರಿಸಬೇಡಿ ಎಂದು ಹೇಳಿರುವುದರಲ್ಲಿ ಯಾವ ತಪ್ಪಿದೆ?
ಹೊಟ್ಟೆಗೆ ಅನ್ನ ಹಾಕಿದ ಹಾಗೆ, ಮಿದುಳಿಗೆ ಸಹ ವಿಚಾರಗಳ ಮೇವು ಹಾಕಬೇಕು. ಆದರೆ ಒಂದು ವಿಷಯ ಮುಚ್ಚಿಟ್ಟು, ಇನ್ನೊಂದು ವಿಷಯದ ಬಗ್ಗೆ ರಾಜಾರೋಷವಾಗಿ ಮಾತನಾಡುವ ರೈ ಅವರು ಮಿದುಳಿಗೆ ಬೇರೆಯದ್ದೇ ಹಾಕುತ್ತಿದ್ದಾರೆ ಎಂದು ಕಾಣುತ್ತಿದೆ. ಪ್ರಕಾಶ್ ರೈ, ಮತ್ತೆ ಕೇಳುತ್ತಿದ್ದೇನೆ, ನಿಮಗೆ ನಿಜವಾಗಿಯೂ ತಾಕತ್ತಿದ್ದರೆ, ಈ ಪ್ರಶ್ನೆಗಳನ್ನೂ ಕೇಳಿ.
Leave A Reply