ತ್ರಿವಳಿ ತಲಾಖ್ ವಿಷಯದಲ್ಲಿ ಮುಸ್ಲಿಂ ವೈಯಕ್ತಿಕ ಮಂಡಳಿಗೆ ಮುಸ್ಲಿಂ ಮಹಿಳಾ ವೈಯಕ್ತಿಕ ಮಂಡಳಿ ಟೀಕಿಸಲು ಕಾರಣವೇನು?
ದೆಹಲಿ: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬುಧವಾರ ತ್ರಿವಳಿ ತಲಾಖ್ ವಿರುದ್ಧ ಕೇಂದ್ರ ಸರ್ಕಾರ ಮಸೂದೆ ಮಂಡನೆ ಮಾಡುತ್ತದೆ ಎಂಬ ಮಾತು ಕೇಳುತ್ತಿರುವ ಬೆನ್ನಲ್ಲೇ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ ಬಿ)ಗೆ ಅಖಿಲ ಭಾರತ ಮುಸ್ಲಿಂ ಮಹಿಳಾ ವೈಯಕ್ತಿಕ ಕಾನೂನು ಮಂಡಳಿ (ಎಐಎಂಡಬ್ಲ್ಯೂಪಿಎಲ್ ಬಿ) ತರಾಟೆಗೆ ತೆಗೆದುಕೊಂಡಿದೆ.
ತ್ರಿವಳಿ ತಲಾಖ್ ವಿರುದ್ಧ ಕೇಂದ್ರ ಸರ್ಕಾರ ಕಾನೂನು ಜಾರಿಗೆ ತರುವುದನ್ನು ವಿರೋಧಿಸಿದ್ದ ಎಐಎಂಪಿಎಲ್ ಬಿ ನಿಲುವನ್ನು ಖಂಡಿಸಿರುವ ಮಹಿಳಾ ಮಂಡಳಿ, ಎಐಎಂಪಿಎಲ್ ಬಿ ಇನ್ನಾದರೂ ತ್ರಿವಳಿ ತಲಾಖ್ ವಿಷಯದಲ್ಲಿ ಮೂಗು ತೂರಿಸುವುದನ್ನು ಬಿಟ್ಟು, ಕೇಂದ್ರ ಸರ್ಕಾರವನ್ನು ಬ್ಲ್ಯಾಕ್ ಮೇಲ್ ಮಾಡುವುದನ್ನು ಬಿಡಬೇಕು ಎಂದು ಆಗ್ರಹಿಸಿದೆ.
ಖುರಾನ್ ಹೆಸರಿನಲ್ಲಿ ಇದುವರೆಗೂ ಹಲವು ಮೌಲ್ವಿ, ಖಾಜಿಗಳು ಮುಸ್ಲಿಮರನ್ನು ಹಾದಿ ತಪ್ಪಿಸಿದ್ದಾರೆ. ಖುರಾನ್ ನಲ್ಲಿ ಮಹಿಳೆಯರು ಹಾಗೂ ಪುರುಷರು ಸಮಾನ ಎಂದು ಉಲ್ಲೇಖಿಸಲಾಗಿದೆ. ಆದರೆ ಧರ್ಮಗುರುಗಳು ಮಾತ್ರ ಜನರ ನಡುವೆ ಕಂದಕ ತರುತ್ತಿದ್ದಾರೆ. ಪ್ರಸ್ತುತ ತ್ರಿವಳಿ ತಲಾಖ್ ನಿಷೇಧಿಸುವುದಕ್ಕೆ ಎಐಎಂಪಿಎಲ್ ಬಿ ವಿರೋಧ ವ್ಯಕ್ತಪಡಿಸುತ್ತಿರುವುದೇ ಮಹಿಳಾ ವಿರೋಧಿ ನೀತಿಗೆ ಹಿಡಿದ ಕನ್ನಡಿ ಎಂದು ಮಹಿಳಾ ಮಂಡಳಿ ಅಧ್ಯಕ್ಷ ಶೈಷ್ಟಾ ಅಂಬರ್ ಟೀಕಿಸಿದ್ದಾರೆ.
ಇದುವರೆಗೂ ಮುಸ್ಲಿಂ ಪುರುಷರ ಗುಲಾಮರಂತೆ ಬದುಕಿದ ಮುಸ್ಲಿಂ ಮಹಿಳೆಯರು ಇನ್ನಾದರೂ ನೆಮ್ಮದಿಯಿಂದ ಬದುಕಲು ಸಹಕಾರಿಯಾಗುವ ಹಾಗೂ ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಕಾನೂನಿಗೆ ನಮ್ಮ ಬೆಂಬಲ ಸಹ ಇದೆ ಎಂದು ತಿಳಿಸಿದ್ದಾರೆ.
Leave A Reply